Wednesday, December 7, 2016

'ಶ್ರೀ' ಪಡ್ರೆಯವರಿಗೆ 'ಕುಸುಮಾಶ್ರೀ' ಪ್ರಶಸ್ತಿ


             ಕುಂದಾಪುರ ನಾಗೂರಿನ ಕುಸುಮಾ ಫೌಂಡೇಶನ್ ಇವರು ಪ್ರಾಯೋಜಿಸುವ 'ಕುಸುಮಾಶ್ರೀ' ಪ್ರಶಸ್ತಿಗೆ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಭಾಜನರಾಗಿದ್ದಾರೆ. ದಶಂಬರ 11ರಂದು ಸಂಜೆ ನಾಗೂರಿನ ಕುಸುಮ ಸಂಸ್ಥೆಯ ವಠಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
               ಶ್ರೀ ಪಡ್ರೆಯವರು ನೆಲಜಲ ಸಂರಕ್ಷಣೆ, ಅಲಕ್ಷಿತ ಬೆಳೆ ಹಲಸು, ಕೃಷಿಕರ ಕೈಗೆ ಲೇಖನಿ ಮೊದಲಾದ ಆಂದೋಳನಗಳಿಗೆ ಶ್ರೀಕಾರ ಬರೆದವರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ. ಕನ್ನಾಡಿನ ವಿವಿಧ ಪತ್ರಿಕೆಗಳ ಅಂಕಣಗಾರರು. ಈಚೆಗೆ ಪುತ್ತೂರಿನಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಜರುಗಿದ 'ವಾಟ್ಆ್ಯಪ್ ಪತ್ರಿಕೋದ್ಯಮ' ಶಿಬಿರದ ರೂವಾರಿ.
            ತಿರುವನಂತಪುರಂನ ಜಾಕ್ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಯು ಈಚೆಗೆ ಶ್ರೀ ಪಡ್ರೆಯವರಿಗೆ 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಎಂದು ಗೌರವಿಸಿತ್ತು. ಇದಕ್ಕೂ ಮೊದಲು ಕೊಚ್ಚಿಯ ದಿಶಾ ಟ್ರಸ್ಟ್ ಅವರಿಗೆ ಇದೇ ಕೆಲಸಕ್ಕಾಗಿ 'ದಿಶಾ ಗ್ರೀನ್ ಗ್ಲೋಬ್ ಪ್ರಶಸ್ತಿ' ನೀಡಿತ್ತು.
              ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಹದಿನೈದು ಕೃತಿಗಳ ರಚಯಿತರು. ಈಚೆಗೆ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ ಪ್ರಕಾಶಿಸಿದ 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ' ಎನ್ನುವ ಕೃತಿಯು ಹದಿನಾರನೆಯದು.
                ರಾಷ್ಟ್ರೀಯ, ರಾಜ್ಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದೆ ಶ್ರೀ ಪಡ್ರೆಯವರಿಗೆ (೦೪೯೯೮-೨೬೬೧೪೮) ಈಗ 'ಕುಸುಮಾಶ್ರೀ' ಪ್ರಶಸ್ತಿಯ ಗೌರವ.


Tuesday, December 6, 2016

ಆಹಾರ ಸರಪಳಿಯಲ್ಲಿ ಹಲಸೀಗ ಹುಮ್ಮಸಿನ ವಿಷಯ

                ಕೊಟ್ಟಾಯಂ ಜಿಲ್ಲೆಯ ಪಾಲಾದ ಕೃಷಿಕ ಥಾಮಸ್ ಕಟ್ಟಕಯಂ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹಲವಾರು ಮಾತ್ರೆಗಳನ್ನು ನುಂಗಿದರೂ ಪ್ರಯೋಜನವಾಗಿಲ್ಲ. ಹಲಸಿನ ಕಾಯಿಸೊಳೆಯ ಪಲ್ಯ (ಚಕ್ಕ ಪುಳುಕ್ಕ್) ಮತ್ತು ಆಹಾರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಲಸನ್ನು ಸುಮಾರು ಆರು ತಿಂಗಳು ಬಳಸುತ್ತಾ ಬಂದರು. ಈಗವರು ರಕ್ತದೊತ್ತಡದಿಂದ ಪಾರಾಗಿದ್ದಾರೆ! ಮಾತ್ರೆಗಳ ಹಂಗಿಲ್ಲ. ಹಲಸಿನ ಔಷಧೀಯ ಮಹತ್ತನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಹಲಸಿನ ಗಿಡಗಳನ್ನು ಅಭಿವೃದ್ಧಿ ಮಾಡುವತ್ತ ನಿರ್ಧಾರ ಮಾಡಿದ್ದಾರೆ. ಒಂದು ಕಾಲಘಟ್ಟದಲ್ಲಿ ಹಲಸಿನ ಮರಗಳನ್ನು ಕಡಿದು ರಬ್ಬರ್ ಹಬ್ಬಿಸಲಾಗಿತ್ತು. ಈಗ ತನ್ನ ಹತ್ತೆಕ್ರೆಯಲ್ಲಿ ಒಂದೆಕ್ರೆಯಷ್ಟು ಹಲಸಿನ ನೂರಕ್ಕೂ ಮಿಕ್ಕಿ ವಿವಿಧ ತಳಿಗಳನ್ನು ಬೆಳೆಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ಇತರರಿಗೂ ಈ ಸಂದೇಶವನ್ನು ರವಾನಿಸುತ್ತಿದ್ದಾರೆ.
              ಇನ್ನೊಂದು ಬ್ರೇಕಿಂಗ್ ನ್ಯೂಸ್! ಕೇರಳದ ಕೃಷಿ ಇಲಾಖೆಯಲ್ಲಿರುವ ಮಧುಮೇಹ ಬಾಧಿತ ಸಿಬ್ಬಂದಿಗಳಿಗೆ ಹೊಸ ಸುದ್ದಿ. ತಮ್ಮ ಊಟದೊಂದಿಗೆ ಹಲಸನ್ನು ಗರಿಷ್ಠವಾಗಿ ಹೇಗೆ ಬಳಸಬಹುದು ಎನ್ನುವ 'ಹೊಸ ಪ್ರಯೋಗ'ದ ಕಡತವು ಕೃಷಿ ಇಲಾಖೆಯ ನಿರ್ದೇಶಕ ಬಿಜು ಪ್ರಭಾಕರ್ ಅವರಲ್ಲಿ ತೆರೆದಿದೆ. ಇಲಾಖೆಯ ಮುಖ್ಯ ಕಚೇರಿಯಲ್ಲಿ ದುಡಿಯುವ ಮಧುಮೇಹ ಅನುಭವಿಸುವ ಸಿಬ್ಬಂದಿಗಳಿಗೆ ಹಲಸನ್ನು ದೈನಂದಿನ ಆಹಾರದಲ್ಲಿ ಸೇರಿಸುವ ಚಿಂತನೆ. 'ಇಲ್ಲಿಂದಲೇ ಪ್ರಯೋಗ ಶುರುವಾಗಲಿ' ಎನ್ನುವ ಆಶಯ. ಇಲಾಖೆಯ ಮಟ್ಟದಲ್ಲಿ ಇದೊಂದು ದೊಡ್ಡ ಬೆಳವಣಿಗೆ. ಮುಂದೆ ರಾಜ್ಯಕ್ಕೆ ಹಬ್ಬುವುದರಲ್ಲಿ ಸಂಶಯವಿಲ್ಲ.
               ಕೇರಳ ರಾಜ್ಯವು ಹಲಸಿನ ಮೌಲ್ಯವರ್ಧನೆ ಮತ್ತು ಬಳಕೆಯಲ್ಲಿ ದೇಶದಲ್ಲೇ ಮುಂದು. ಪಂಚತಾರಾ ಹೋಟೆಲಿನಿಂದ ಶ್ರೀಸಾಮಾನ್ಯನವರೆಗೂ ಇದೊಂದು ವಿಷರಹಿತ ತರಕಾರಿ, ಹಣ್ಣು ಎನ್ನುವ ಅರಿವು ಮೂಡಿದೆ, ಮೂಡುತ್ತಿದೆ. ಹಿತ್ತಿಲಲ್ಲಿ ಒಂದು ಮರವಾದರೂ ಇರಬೇಕೆನ್ನುವ ಮನಃಸ್ಥಿತಿಯ ಗಾಢತೆ ದಟ್ಟವಾಗುತ್ತಿದೆ. ಒಬ್ಬ ಆಟೋ ಡ್ರೈವರ್ ಕೂಡಾ ಹಲಸಿನ ಸುದ್ದಿಯನ್ನು ಮಾತನಾಡುತ್ತಾನೆ ಎಂದಾದರೆ ಕೇರಳ ರಾಜ್ಯವು ಹಲಸನ್ನು ಒಪ್ಪಿಕೊಂಡ, ಅಪ್ಪಿಗೊಂಡ ಬಗೆ ಅರ್ಥವಾಗುತ್ತದೆ. ಇದೊಂದು ಆಹಾರ ಸುರಕ್ಷೆ ಎನ್ನುವ ಭಾವ ದೃಢವಾಗುತ್ತಿದೆ.
                  ತಮಿಳುನಾಡಿನ ಪನ್ರುತ್ತಿಯು ಹಲಸಿನ ಕಾಶಿ. ಹಲಸಿಗೆ ಆರ್ಥಿಕತೆಯನ್ನು ತಂದ ಊರು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಪ್ರವೇಶಿಸಿದರೂ ಕೃಷಿಕನಿಗೆ ಹೆಚ್ಚು ಆದಾಯ ತರುವ ಹಣ್ಣಿದು. ದೇಶಮಟ್ಟದಲ್ಲಿ ಪನ್ರುತ್ತಿಯ ಹಣ್ಣಿಗೆ ಪ್ರತ್ಯೇಕ ಸ್ಥಾನ. ಇಂತಹ ಊರಲ್ಲಿ ಒಂದೇ ಒಂದು ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿಲ್ಲ! ಮೌಲ್ಯವರ್ಧನೆಯ ಸಾಮೂಹಿಕ ಚಿಂತನೆಗಳು ನಡೆದಿಲ್ಲ. ಹಲಸಿನ ಸ್ವರ್ಗಕ್ಕೆ ನೀವೇನಾದರೂ ಹೋದರೆ ಅಲ್ಲಿಂದ ನೆನಪಿಗೆ ತರಬಹುದಾದ ಹಲಸಿನ ಪರಿಮಳಗಳು ಇಲ್ಲವೇ ಇಲ್ಲ. ಈ 'ಇಲ್ಲ'ಗಳು ಈಗ ದೂರವಾಗಿವೆ. ರೈತರ ಆಸಕ್ತಿಯಿಂದ ಎರಡು ಹಬ್ಬಗಳು ನಡೆದಿವೆ. ಕೃಷಿಕ ಚಂದ್ರಶೇಖರ್ ಕಾಯಿಸೊಳೆಯ ಪುಡಿಯನ್ನು ತಯಾರಿಸಿ, ಆಹಾರ ಪೂರಕ ಉತ್ಪನ್ನವಾಗಿ ಪರಿಚಯಿಸಿದ್ದಾರೆ.
               ಚೆನ್ನೈ ಮೂಲದ 'ಶರವಣ ಭವನ್' ದೇಶ, ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದ ಪ್ರಸಿದ್ಧ ಹೋಟೆಲ್ ಸಮೂಹ. ಇದು ಪನ್ರುತ್ತಿಯ ಕೃಷಿಕ ಕರುಣಾಕರ್ ಅವರಿಂದ ಹಲಸಿನ ಹಣ್ಣನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಹಲಸಿನ ಮಿಲ್ಕ್ಶೇಕ್, ಐಸ್ಕ್ರೀಮನ್ನು ಗ್ರಾಹಕರಿಗೆ ಪರಿಚಯಿಸಹತ್ತಿದೆ. ಪನ್ರುತ್ತಿಯ ರಖಂ ಹಣ್ಣಿನ ವ್ಯಾಪಾರಿಯೊಬ್ಬರು ಪಾಂಡಿಚೇರಿಯಲ್ಲಿ ಮಳಿಗೆ ತೆರೆಯುವ ಯೋಚನೆ ಮಾಡಿದ್ದಾರೆ. ವಯನಾಡಿನ ಹಲಸು ವಿಶೇಷಜ್ಞ ಸುನೀಶ್ ಅವರನ್ನು ಕರೆಸಿ ಹಣ್ಣಿನ ಮಂದರಸ ಮಾಡಿಕೊಡಲು ವಿನಂತಿಸಿದ್ದಾರೆ. ಸುನೀಶ್ ಪ್ರಾಯೋಗಿಕವಾಗಿ ಹಲಸಿನ ಹಣ್ಣು ಮುಖ್ಯ ಕಚ್ಚಾವಸ್ತುವಾಗಿರುವ ಹತ್ತೊಂಭತ್ತು ನಮೂನೆಯ ವಿವಿಧ ರುಚಿಗಳನ್ನು ಸೇರಿಸಿದ ಜ್ಯೂಸ್ ಸಿದ್ಧಪಡಿಸಿದ್ದಾರೆ. ಆ ವ್ಯಾಪಾರಿ ತಮ್ಮ ಆಸಕ್ತರಿಗೆ ಕುಡಿಯಲು ನೀಡಿದ್ದಾರೆ. ಹಿಮ್ಮಾಹಿತಿ ಪಡೆದಿದ್ದಾರೆ. ಇನ್ನೇನು, ಪಾಂಡಿಚೇರಿಯಲ್ಲಿ ಪನ್ರುತ್ತಿಯ ಹಲಸಿನ ಹಣ್ಣಿನ ಪರಿಮಳ ಹಬ್ಬಲಿದೆ.
                ಕೇರಳದ ಆಹಾರ ಸರಪಳಿಯಲ್ಲಿ ಹಲಸಿನ ಬಳಕೆ ಹೆಜ್ಜೆಯೂರಿದೆ.  ಮಸಾಲೆದೋಸೆಗೆ ಪಲ್ಯ(ಬಾಜಿ)ವಾಗಿ ಆಲೂಗೆಡ್ಡೆಯ ಬದಲಿಗೆ ಕಾಯಿಸೊಳೆಯನ್ನು ಬಳಸುವ ಯತ್ನವನ್ನು 'ಪ್ರಿಯಾ' ಎನ್ನುವ ಉದ್ದಿಮೆ ಮಾಡಿ ಯಶಸ್ಸಾಗಿದೆ. ಕೊಚ್ಚಿಯ ಆರ್ಗಾಾನಿಕ್ ರೆಸ್ಟೋರೆಂಟಿನಲ್ಲಿ ಈಚೆಗೆ ದಿನಕ್ಕೊಂದು ಹಲಸಿನ ಐಟಂ ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದೆ. 'ವೆಜಿಟೇಬಲ್ ಅಂಡ್ ಫ್ರುಟ್ಸ್ ಪ್ರೊಮೋಶನ್ ಕೌನ್ಸಿಲ್ ಆಫ್ ಕೇರಳ' ಎನ್ನುವ ಖಾಸಗಿ ಸಂಸ್ಥೆಯು ಆದೇಶದ ಮೇರೆಗೆ ಎಳೆಹಲಸನ್ನು 'ಬಳಸಲು ಸಿದ್ಧ' ರೂಪದಲ್ಲಿ ಪೂರೈಸಲು ಶುರು ಮಾಡಿದ್ದಾರೆ.
               ತೋಡುಪುಳದ ರೈತಪರ ಸಂಸ್ಥೆ 'ಕಾಡ್ಸ್' ಹಲಸಿನ ಕಾಯಿಯನ್ನು ತುಂಡರಿಸಿ, ಸೊಳೆ ತೆಗೆದು ಮಾರುಕಟ್ಟೆ ಮಾಡುತ್ತಿದೆ. ಕಾಯಿಯನ್ನು ಹಣ್ಣಾಗಿಸಿ ಮಾರುತ್ತಿದ್ದ ಈ ಸಂಸ್ಥೆಯ ಉತ್ಪನ್ನ ಈಗ ತರಕಾರಿಯಾಗಿ ಅಡುಗೆ ಮನೆ ಸೇರುತ್ತಿದೆ. ಪಾಲಕ್ಕಾಡಿನ ಇನ್ನೊಂದು ಸರಕಾರೇತರ ಸಂಸ್ಥೆಯು ಸುಮಾರು ಎಂಟು ಟನ್ನಿನಷ್ಟು ನಿರ್ಜಲೀಕೃತ ಕಾಯಿಸೊಳೆಯನ್ನು ಉತ್ಪಾದನೆ ಮಾಡಿದೆ. ತನ್ನ ಅರ್ಧ ಡಜನ್ ಘಟಕಗಳ ಮೂಲಕ ಗ್ರಾಹಕರಿಗೆ ವಿತರಿಸುತ್ತಿದೆ.
               ವಯನಾಡಿನ 'ಅಣ್ಣಾ ಫುಡ್ಸ್' ಸಂಸ್ಥೆಯ ಜಾನ್ಸನ್ ಎನ್ನುವವರು ಮೀನಂಗಾಡಿಯಲ್ಲಿ ಮಳಿಗೆ ತೆರೆದಿದ್ದಾರೆ. ಅದರಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ವರ್ಷವಿಡೀ ಸಿಗಬೇಕೆನ್ನುವ ಆಶಯ. ಪಾಲಕ್ಕಾಡಿನಲ್ಲಿ 'ಚಿಕ್ಕೂಸ್ ಐಸ್ಕ್ರೀಂ' ಇದರ ಮೃದುವರ್ಣನ್ ಇದೇ ತರಹದ ಮಳಿಗೆಯನ್ನು ಈಗಾಗಲೇ ತೆರೆದಿದ್ದಾರೆ. ಇದರಲ್ಲಿ ಐಸ್ಕ್ರೀಂ ಮತ್ತು ಇತರ ಉತ್ಪನ್ನಗಳು ಸಿಗುತ್ತಿವೆ. ಎರ್ನಾಕುಳಂನಲ್ಲಿ ಶಾಜಿ ಎನ್ನುವ ಸಾವಯವ ಅಂಗಡಿಯ ಮಾಲಕರು ತಮ್ಮಲ್ಲಿ 'ಜಾಕ್ ಫ್ರುಟ್ ಕಾರ್ನರ್' ಎನ್ನುವ ಪ್ರತ್ಯೇಕ ವಿಭಾಗವನ್ನೇ ತೆರೆದಿದ್ದಾರೆ.
               ವಿದೇಶಿ ಮಲೆಯಾಳಿಗಳ ಬಾಯಿ ರುಚಿಗೆ ಮಾತೃನೆಲದ 'ಅಡುಗೆಗೆ ಸಿದ್ಧ' ಕಾಯಿಸೊಳೆ ರಫ್ತಾಗಿದೆ! ಕೇರಳದ ಪಾಲಾದಲ್ಲಿರುವ ಮಲ್ಟಿಸ್ಟೇಟ್ ಅಗ್ರಿಕಲ್ಚರ್ ಪ್ರೊಡ್ಯೂಸರ್ಸ್  ಪ್ರಾಸೆಸಿಂಗ್ ಅಂಡ್ ಮಾರ್ಕೆಟಿಂಗ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ರೋನಿ ಮ್ಯಾಥ್ಯೂ ಅವರ ಉತ್ಸಾಹದಲ್ಲಿ ಹಲಸು ಕಡಲಾಚೆ ಹಾರಿದೆ. ಹೀಗೆ ಕಳುಹಿಸಿದ ಕಾಯಿಸೊಳೆಯನ್ನು ಪಲ್ಯದಂತಹ ಮುಖ್ಯ ಆಹಾರವಾಗಿ ಬಳಸುತ್ತಾರೆ. ಈ ವರುಷ ಈ ಸೊಸೈಟಿಯು ನೂರಹತ್ತು ಟನ್ ಹಲಸನ್ನು ಸುಲಿದು ಕಾಯಿಸೊಳೆಯಾಗಿ ವಿದೇಶಕ್ಕೆ ಕಳುಹಿಸಿದ್ದು ದೊಡ್ಡ ಸಾಧನೆ.
               ತಿರುವನಂತಪುರದಿಂದ ಹೊರಟ 'ಚಕ್ಕವಂಡಿ'(ಹಲಸಿನ ಉತ್ಪನ್ನಗಳ ಗಾಡಿ)ಯು ದಶಂಬರ  ಐದರಿಂದ ಒಂಭತ್ತರ ತನಕ ಕಾಸರಗೋಡಿನಲ್ಲಿ ಸಂಚರಿಸುತ್ತದೆ. ಇದೇ ಗತಿಯಲ್ಲಿ ಕೇರಳದ ಹಲಸು ಪ್ರೇಮವು ಮುಂದುವರಿದರೆ, 'ತೆಂಗಿನ ನಾಡು' ಎನ್ನುವ ಗರಿಮೆಯನ್ನು ಪಡೆದ ಕೇರಳವು 'ಹಲಸಿನ ನಾಡು' ಎಂದಾಗಲು ಹೆಚ್ಚು ದಿನ ಬೇಕಿಲ್ಲ!  ಹಲಸಿನ ಕುರಿತಾದ ಕೀಳರಿಮೆ ಹೊರಟು ಹೋಗುತ್ತಿದೆ. ಹಲಸಿನ ಕಾಳಜಿ ಎದ್ದು ನಿಂತಿದೆ, ಹೊಸ ಹೊಸ ಸಾಧ್ಯತೆಗಳತ್ತ ನೋಡುತ್ತಿದೆ.
                  ಕೇರಳದ ಸುದ್ದಿ ಹೀಗಾಯಿತು. ದೇಶ, ವಿದೇಶಗಳು ಇನ್ನೂ ಒಂದು ಹೆಜ್ಜೆ ಮುಂದಿರಿಸಿವೆ. ಹಲಸಿನ ಕೆಲಸಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡು ಹಲಸುಪ್ರಿಯರೊಳಗೆ ಸಂವಹನ ಏರ್ಪಟ್ಟಿವೆ. ಬ್ಲಾಗ್ಗಳಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಹಲಸಿನ ಬಳಕೆಯ ವಿವಿಧ ಯತ್ನಗಳು ವೀಡಿಯೋ ಕ್ಲಿಪ್ಗಳ ಮೂಲಕ ಹರಿದಾಡುತ್ತಿವೆ. ಇದರಿಂದಾಗಿ ವಿಶ್ವಮಟ್ಟದಲ್ಲಿ ಹಲಸು ಮಾತಿಗೆ ವಸ್ತುವಾಗಿದೆ. 
              ಹಲಸಿನ ಮೌಲ್ಯವರ್ಧನೆಯ ಯಶೋಗಾಥೆಗಳು ಜಾಲತಾಣಗಳಲ್ಲಿ ಸಿಗುತ್ತವೆ. ವೃತ್ತಿಪರ ಮತ್ತು ಹವ್ಯಾಸಿ ಪತ್ರಕರ್ತರು ಆಸಕ್ತರಾಗಿದ್ದಾರೆ. ಜಾಲತಾಣಗಳ ಸುಳಿವು ಮೂಲಕ ಕಳೆದ ಮೂರ್ನಾಲ್ಕು ತಿಂಗಳಿಂದೀಚೆಗೆ ಹೊರದೇಶಗಳ ಪತ್ರಕರ್ತರು ಸಂಪರ್ಕಿಸಿದ್ದಾರೆ. ಹಲಸಿನ ರಂಗದ ಹೊಸ ಬೆಳವಣಿಗೆಗಳನ್ನು ಇಡೀ ಜಗತ್ತೇ ಬೆರಗು ಕಣ್ಣುಗಳಿಂದ ನೋಡಲಾರಂಭಿಸಿದೆ. ಎನ್ನುತ್ತಾರೆ ಶ್ರೀ ಪಡ್ರೆ. ಇವರು ದಶಕದ ಹಿಂದೆ ಹಲಸಿನ ಆಂದೋಳನಕ್ಕೆ ಶ್ರೀಕಾರ ಬರೆದವರು.
                  ಈ ಆಂದೋಳನಕ್ಕಾಗಿ ಶ್ರೀ ಪಡ್ರೆಯವರು ದೇಶ, ವಿದೇಶಗಳ ಹಲಸು ಪ್ರಿಯರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ಕಲೆಹಾಕಿದ್ದಾರೆ. ಅಡಿಕೆ ಪತ್ರಿಕೆಯೂ ಸೇರಿದಂತೆ ಕನ್ನಾಡಿನ ಮಾಧ್ಯಮಗಳಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೇಶದ ಪ್ರತಿಷ್ಠಿತ ಪತ್ರಿಕೆಯಲ್ಲೂ ಲೇಖನಗಳು ಪ್ರಕಟವಾಗಿದೆ. ಇಂತಹ ಅಪೂರ್ವವಾದ ಆಯ್ದ ಮಾಹಿತಿಗಳ ಸಂಕಲನ 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ' ಪುಸ್ತಕವು ನವೆಂಬರ್ 20ರಂದು ಪುತ್ತೂರಿನಲ್ಲಿ ಅನಾವರಣಗೊಂಡಿದೆ. ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಪುಸ್ತಕವನ್ನು ಪ್ರಕಾಶಿಸಿದೆ.

ಚಿತ್ರ : ಶ್ರೀ ಪಡ್ರೆ

(ಉದಯವಾಣಿ/ನೆಲದ ನಾಡಿ / ೧-೧೨-೨೦೧೬


Tuesday, November 22, 2016

ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರದ ಝಲಕ್ ಗಳು

 ಹಲಸು ಆಂದೋಳನದ ಸಂದೇಶ ಹೊತ್ತ ಕಾರ್ಡ್ ಬಿಡುಗಡೆ
 ಡಾ.ನರೇಂದ್ರ ರೈ ದೇರ್ಲರಿಂದ ಶಿಬಿರದ ಉದ್ಘಾಟನೆ
 ಶ್ರೀ ಪಡ್ರೆಯವರಿಂದ 'ವಾಟ್ಸಪ್ ಉಪಯುಕ್ತ ಸಂವಹನ ಸಾಧನ' ಸೆಶನ್
 ಡಾ.ಮೋಹನ್ ತಲಕಾಲುಕೊಪ್ಪ ಇವರಿಂದ 'ಸ್ಮಾರ್ಟ್ ಫೋನ್ ಬಳಕೆ' ಪಾಠ
ಮಹೇಶ್ ಪುಚ್ಚಪ್ಪಾಡಿಯವರಿಂದ 'ಮಾಧ್ಯಮ ಸ್ನೇಹಿ ಛಾಯಾಗ್ರಾಹಣ' ಮಾಹಿತಿ

ಹಲಸು ಪುಸ್ತಕ ಮತ್ತು ಸಂದೇಶ ಕಾರ್ಡ್

 ಶ್ರೀ ಪಡ್ರೆಯವರ ಪುಸ್ತಕ - 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ
ಹಲಸು ಆಂದೋಳನದ ಸಂದೇಶ ಕಾರ್ಡ್ (ಫ್ಲೈಯಿಂಗ್ ಕಾರ್ಡ್)

ಶ್ರೀ ಪಡ್ರೆಯವರ ಹೊಸ ಪುಸ್ತಕ 'ಹಲಸು' ಬಿಡುಗಡೆಗೊಂಡಿದೆ. ಬೆಲೆ ರೂ. 150-00.
 ಅಡಿಕೆ ಪತ್ರಿಕೆ (08251-231240, 94833 65791) ಕಚೇರಿಯಲ್ಲಿ ಪುಸ್ತಕಗಳು ಲಭ್ಯ.

ದೂರದ ಆಸಕ್ತರು ನೇರ ಪುಸ್ತಕ ಪಡೆದುಕೊಳ್ಳಲು 94483 54177 ಸಂಖ್ಯೆಗೆ ಎಸ್.ಎಂ.ಎಸ್. ಅಥವಾ ವಾಟ್ಸಪ್ ಸಂದೇಶವನ್ನು ಕಳುಹಿಸಿ. 

ಪುತ್ತೂರಿನಲ್ಲಿ ಹಲಸು ಪುಸ್ತಕ ಬಿಡುಗಡೆ; ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಸಮಾರೋಪ "ಅಲಕ್ಷಿತ ಹಲಸಿನ ಕಡೆಗೆ ಲಕ್ಷ್ಯ ವಹಿಸೋಣ" - ಡಾ.ಎಸ್.ವಿ.ಹಿತ್ತಲಮನಿ



 "ನಮ್ಮದೇ ಊರಿನ ಹಲಸಿನ ಬಗ್ಗೆ ದೂರದ ದೇಶದ ಮಂದಿ ಹೇಳುವುದು ಬೇಡ. ಹಲಸಿನ ಬಗ್ಗೆ ನಮ್ಮಲ್ಲಿರುವ ಕೀಳರಿಮೆ ಬಿಡೋಣ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ  ಹಲಸನ್ನು ಅಪರಿಚಿತವಾಗಲು ಬಿಡಬಾರದು" ಎಂದು ಬೆಂಗಳೂರಿನ ಹಿರಿಯ ತೋಟಗಾರಿಕಾ ತಜ್ಞ ಡಾ.ಎಸ್.ವಿ.ಹಿತ್ತಲಮನಿ ಹೇಳಿದರು.

ಅವರು ಭಾನುವಾರ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹಲಸಿನ ಆಯ್ದ ಮಾಹಿತಿಗಳ ಸಂಕಲನ 'ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ರೈತರಿಗೆ ಭವಿಷ್ಯದಲ್ಲಿ ಹಲಸಿನ ಬೆಳೆ ಲಾಭ ತರುವ ಬೆಳೆಯಾಗುವುದರಲ್ಲಿ ಸಂದೇಹವೇ ಇಲ್ಲ. ವಿದೇಶಗಳಲ್ಲಿ  ಈಗಾಗಲೇ ಹಲಸಿನ ಬಗ್ಗೆ ಸಾಕಷ್ಟು ಅಧ್ಯಯನವಾಗುತ್ತಿದೆ. ಆದರೆ ನಮ್ಮಲ್ಲಿ ಮಾತ್ರ ಹಲಸಿನ ಬಗ್ಗೆ ಕೀಳರಿಮೆ ಇದೆ. ಇದು ದೂರವಾಗಬೇಕು, ಜೊತೆಗೆ ಅಲಕ್ಷಿತ ಹಲಸಿನ ಕಡೆಗೆ ಲಕ್ಷ್ಯ ವಹಿಸಬೇಕು ಎಂದರು. ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ (WhatsApp Agricultural Journalism Workshop) ವಿಶಿಷ್ಟ ಪ್ರಯತ್ನವಾಗಿದೆ. ಇಲ್ಲಿ ಸಾಕಷ್ಟು ಅವಕಾಶಗಳು ಇವೆ. ವಾಟ್ಸಪ್ ಬಳಕೆಯಲ್ಲಿ  ಕ್ರಿಯಾತ್ಮಕ ಆಯಾಮವನ್ನು ಈ ಶಿಬಿರ ನೀಡಿದೆ, ಇದರಿಂದ ಕೆಟ್ಟ ಅಂಶಗಳು ದೂರವಾಗುತ್ತವೆ" ಎಂದರು.

ಹಲಸು ಆಂದೋಳನ ಮತ್ತು ಪುಸ್ತಕ ಕುರಿತು ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಮಾತನಾಡಿ, "ಶ್ರೀ ಪಡ್ರೆ ಅವರ ಹಲಸಿನ ಲೇಖನ ಓದಿ  ಕೃಷಿಕನೊಬ್ಬ ಹಲಸು ಕೃಷಿ ಮಾಡಿರುವುದು ಕಂಡುಬಂತು. ಹೀಗಾಗಿ ಈ ಹಲಸು ಪುಸ್ತಕ ಹೊರತರಲು ಪ್ರಯತ್ನ ನಡೆಯಿತು. ಹಲಸು ಸೇರಿದಂತೆ ಇತರ ನಮ್ಮದೇ ಹಣ್ಣುಗಳು ಅಲಕ್ಷಿತವಾಗುತ್ತಿರುವುದು ಸರಿಯಲ್ಲ" ಎಂದರು.
ಹಲಸಿನ ಸಂದೇಶವನ್ನು ಹೊತ್ತ ಕಾರ್ಡನ್ನು ವಿವೇಕಾನಂದ ಶಾಲೆಯ ಅಧ್ಯಕ್ಷ ವೆಂಕಟೇಶ್ವರ ಅಮೈ ಬಿಡುಗಡೆಗೊಳಿಸಿ, "ಅನೇಕ ವಿಷಪೂರಿತ ಹಣ್ಣುಗಳನ್ನು ಖರೀದಿ ಮಾಡುವ ನಾವು ನಮ್ಮ ಮನೆಯ ಪಕ್ಕದ ಹಲಸನ್ನು  ಮರೆತಿರುವುದು  ಸರಿಯಲ್ಲ. ಪುಸ್ತಕದ ಮೂಲಕ ಮತ್ತೆ ಹಲಸಿಗೆ ಜಾಗೃತಿ ಮೂಡಲಿ" ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ,"ಆಂದೋಳನದ ಮೂಲಕ ಹಲಸನ್ನು  ಇಡೀ ರಾಜ್ಯ ಮಾತ್ರವಲ್ಲ ದೇಶಮಟ್ಟದಲ್ಲಿ  ಅಡಿಕೆ ಪತ್ರಿಕೆ ಉತ್ತಮ ಕೆಲಸ ಮಾಡಿದೆ. ಜೊತೆಗೆ ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮೂಲಕ ಹೊಸ ಬರಹಗಾರರಿಗೆ ಅವಕಾಶ ಮಾಡಿಕೊಟ್ಟಿದೆ" ಎಂದರು.

ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಹಾಗೂ ಹಲಸು ಆಂದೋಳನದ ಬಗ್ಗೆ ಮಾತನಾಡಿದ ಪತ್ರಕರ್ತ ಶ್ರೀಪಡ್ರೆ, "ವಾಟ್ಸಪ್ ಬಳಕೆ ಕೃಷಿಗೂ ಬರಬೇಕು ಈ ಮೂಲಮ ಸಂವಹನ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಸವಾಲುಗಳು ಇವೆ ನಿಜ, ಆದರೆ ಇದೆಲ್ಲವನ್ನೂ ದಾಟಿ ಮುಂದೆ ಹೋಗಬೇಕಾಗಿದೆ. ಹಲಸು ಬಗ್ಗೆ ಅನೇಕರಿಗೆ ಇಂದಿಗೂ ಕೀಳರಿಮೆ ಇದೆ. ಆದರೆ ಈ ಬಗ್ಗೆ ಪಾಸಿಟಿವ್ ಯೋಚನೆ ಬರಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಈ ಹಣ್ಣಿಗೆ ನಿಶ್ಚಯವಾಗಿಯೂ ಬೆಲೆ ಬರಲಿದೆ" ಎಂದರು.

ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಮೈಸೂರಿನ ಹರೀಶ್ ಹಾಗೂ ರೇಖಾ ಸಂಪತ್ ಅನಿಸಿಕೆ ವ್ಯಕ್ತಪಡಿಸಿದರು. ಪುಸ್ತಕವನ್ನು ಪ್ರಕಾಶಿಸಿದ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿತ್ತು.

ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ನ ಟ್ರಸ್ಟಿ ಪಡಾರು ರಾಮಕೃಷ್ಣ ಶಾಸ್ತ್ರಿ ಸ್ವಾಗತಿಸಿ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದಶರ್ಿ ಶಂಕರ್ ಸಾರಡ್ಕ ವಂದಿಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಗೇರು ಸಂಶೋಧನಾ ಕೇಂದ್ರ ವಿಜ್ಞಾನಿ ಡಾ.ಮೋಹನ ತಲಕಾಲುಕೊಪ್ಪ ಸಹಕರಿಸಿದರು.

ಪುತ್ತೂರಿನಲ್ಲಿ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ "ಪತ್ರಕರ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ" - ನರೇಂದ್ರ ರೈ ದೇರ್ಲ


 "ಜಗತ್ತಿನಲ್ಲಿ ಪತ್ರಕರ್ತರನ್ನು ಹೆಚ್ಚು ಜನ ನಂಬುತ್ತಾರೆ. ಹೀಗಾಗಿ ಪತ್ರಕರ್ತರು ಸಾಮಾಜಿಕ ಬಳಕೆದಾರರು.ಹೀಗಾಗಿ ಇಂದಿನ ವೇಗದ ಜಾಲತಾಣಗಳೂ ಹೆಚ್ಚು ಮಹತ್ವ ಪಡೆಯುತ್ತಿವೆ. ಇದಕ್ಕಾಗಿ ಪತ್ರಕರ್ತರೂ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ" ಎಂದು ಅಂಕಣಕಾರ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.

ಅವರು ಭಾನುವಾರ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಹಾಗೂ ಅಡಿಕೆ ಪತ್ರಿಕೆ ವತಿಯಿಂದ ನಡೆದ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಉದ್ಘಾಟಿಸಿ ಮಾತನಾಡಿದರು. "ಕೃಷಿ ಉಳಿಯುವಿಕೆಗೆ ಕಲಿಯುವುದು, ಕಲಿಸುವುದು ಅಗತ್ಯವಾಗಿದೆ. ಇಂದು ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ಹೆಚ್ಚು ಮಹತ್ವ ಪಡೆಯುತ್ತಿದೆ. ಹೀಗಾಗಿ ಜಾಲತಾಣಗಳ ಬಗ್ಗೆ ಕೃಷಿಕರೂ ಅರಿವು ಹೊಂದಿರಬೇಕಾಗುತ್ತದೆ. ಹಿಂದೆ ಸಹವಾಸ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿತ್ತು. ಇದರಿಂದ ಅನುಭವ ಹರಿದು ಬರುತ್ತಿತ್ತು. ಆದರೆ ಇಂದು ಸಹವಾಸ ಶಿಕ್ಷಣವು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ. ವೇಗದ ಜಗತ್ತಿನಲ್ಲಿ ಸಹವಾಸದ ಸಂಬಂಧವನ್ನು ಕೈಯಲ್ಲಿರುವ ಸಣ್ಣ ಉಪಕರಣ ಮೊಬೈಲ್ ಮೂಲಕ ಪಡೆದುಕೊಂಡು ಜಗತ್ತು ಮುಟ್ಟಲು ಸಾಧ್ಯವಿದೆ. ಅದರ ಜೊತೆಗೆ ಸಾಧ್ಯತೆಗಳ, ಮಿತಿಗಳ ಬಗ್ಗೆಯೂ ಯೋಚಿಸಬೇಕು" ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, "ತಾಂತ್ರಿಕತೆಯನ್ನು ಉಪಯೋಗಪಡಿಸಿಕೊಳ್ಳಬೇಕು. ನಾಲೇಜ್ಗೂ ಮಾಹಿತಿಗೂ ವ್ಯತ್ಯಾಸ ಇದೆ. ನಮಗೆ ಮಾಹಿತಿ ಮಾತ್ರ ಸಾಲದು. ಜ್ಞಾನ ಸಂಪಾದನೆಯೂ ಅಗತ್ಯ. ಸಾಮಾಜಿಕ ತಾಲತಾಣಗಳ ,ತಂತ್ರಜ್ಞಾನಗಳ ಬಳಕೆ ಸೂಕ್ತ. ಆದರೆ ತಂತ್ರಜ್ಞಾನವನ್ನು  ಹದ್ದುಬಸ್ತಿನಲ್ಲಿಡುವ ಬುದ್ದಿವಂತಿಕೆಯನ್ನು  ಬೆಳೆಸಿಕೊಳ್ಳಬೇಕು" ಎಂದರು.

ವೇದಿಕೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಕೃಷಿ ಮಾಧ್ಯಮ ಕೇಂದ್ರದ  ಶಿವರಾಂ ಪೈಲೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಸ್ಮಾರ್ಟ್ ಫೋನು ಬಳಕೆ ಹಾಗೂ ಜಾಲತಾಣ, ಕಿರುತಂತ್ರಾಂಶಗಳ ಬಗ್ಗೆ ಡಾ.ಮೋಹನ್ ತಲಕಾಲುಕೊಪ್ಪ, ಸುಳಿವು ಹಾಗೂ ಲೇಖನ ತಯಾರಿ ಬಗ್ಗೆ ನಾ.ಕಾರಂತ ಪೆರಾಜೆ, ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮಿತಿಗಳು ಮತ್ತು ಜವಾಬ್ದಾರಿ ಬಗ್ಗೆ ಶ್ರೀ ಪಡ್ರೆ, ಮಾಧ್ಯಮಸ್ನೇಹಿ ಛಾಯಾಗ್ರಹಣದ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಮಾಹಿತಿ ನೀಡಿದರು. ಗೇರು ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕರ್ಕಿ ಸ್ವಾಗತಿಸಿ, ವಂದಿಸಿದರು.


Friday, November 11, 2016

ಶ್ರೀ ಪಡ್ರೆಯವರ ಹಲಸು ಪುಸ್ತಕ ಬಿಡುಗಡೆ


ಸಂಜ್ಞಾರ್ಥ ತತ್ತ್ವಕೋಶದ ಮೂರನೇ ಆವೃತ್ತಿ ಬಿಡುಗಡೆ

ಡಿ.ವಿ.ಹೊಳ್ಳರ ಪ್ರಸಿದ್ಧ ಕೃತಿ 'ಸಂಜ್ಞಾರ್ಥ ತತ್ತ್ವಕೋಶ'ದ ಮೂರನೇ ಆವೃತ್ತಿಯು 11-11-2016ರಂದು ವಿಟ್ಲದಲ್ಲಿ ಬಿಡುಗಡೆಗೊಂಡಿತು. ಯಕ್ಷಗಾನ ಅರ್ಥಧಾರಿಗಳ ಬ್ಯಾಗಿನಲ್ಲಿ ಇರಲೇಬೇಕಾದ ಪುಸ್ತಕ. ಆಸಕ್ತರು ವಿಟ್ಲದ ಶಂಕರ್ ಕುಳಮರ್ವ - 9535623603 - ಇವರನ್ನು ಸಂಪರ್ಕಿಸಿ.

Sunday, November 6, 2016

ಕೆದಿಲಾಯರ ಕಸಿ ಜಾಣ್ಮೆಗೆ ಅರ್ಧ ಶತಮಾನ

ಕಸಿ ತಜ್ಞ ನಾರಾಯಣ ಕೆದಿಲಾಯ

                  "ಹಿರಿಯರು ಶ್ರಮದಿಂದ ಮಾಡಿಟ್ಟ ಒಂದಿಂಚು ಸ್ಥಳವನ್ನೂ ಮಾರಲು ಹೋಗ್ಬೇಡಿ. ಆಸ್ತಿ ಮಾರುವವರ ಹತ್ರ ನನಗೆ ಅಸಹನೆಯಾಗುತ್ತದೆ," ಕಸಿ ತಜ್ಞ ನಾರಾಯಣ ಕೆದಿಲಾಯರು ಹೇಳುತ್ತಿದ್ದ ಮಾತುಗಳು ಕಾಡುತ್ತದೆ, ಪರಿಹಾಸ್ಯ ಮಾಡುವಾಗ ಎಲ್ಲರಿಗೂ ಸಿಟ್ಟು ಬರ್ತದೆ. ನನಗೆ ಉತ್ಸಾಹ ಇಮ್ಮಡಿಯಾಗುತ್ತದೆ. ಕೆಲಸ ಮಾಡಲು ದುಪ್ಪಟ್ಟು ಶಕ್ತಿ ಬರುತ್ತದೆ. ಸಿಟ್ಟು ಆವರಿಸಿದಾಗ ಉತ್ಸಾಹ ನಾಶವಾಗಬಾರದು. ಕ್ರಮೇಣ ಪರಿಹಾಸ್ಯ ಮಾಡಿದವನು ಮಿತ್ರನೇ ಆಗುತ್ತಾನೆ."
                ಪುತ್ತೂರು ತಾಲೂಕು (ದ.ಕ) ಆಲಂಕಾರಿನ ಬೆದ್ರಾಳ ಕುದ್ಕುಳಿಯ ನಾರಾಯಣ ಕೆದಿಲಾಯರ ಕಸಿಕಾಯಕಕ್ಕೆ  ಆರ್ಧ ಶತಮಾನ. ಇವರು ಕೇವಲ ಗಿಡಗಳಿಗೆ ಕಸಿ ಕಟ್ಟುವವರಲ್ಲ, ಬದುಕಿನ ಮೌಲ್ಯಗಳಿಗೂ ಕಸಿ ಕಟ್ಟುವವರು! ಹಣಕ್ಕಿಂತಲೂ ಮೌಲ್ಯಗಳಿಗೆ ಮಾನ ಕೊಟ್ಟವರು. ತಾನು ನಂಬಿದ ಮೌಲ್ಯಗಳನ್ನು ಬದ್ಧತೆಯ ಅಡಿಗಟ್ಟಿನಲ್ಲಿ ಅನುಷ್ಠಾನಿಸಿದವರು. ಸಾಲ ಸೋಲಗಳಿಲ್ಲದೆ ನಮ್ಮ ಕಾಲ ಮೇಲೆ ನಾವು ನಿಲ್ಲಬೇಕೆನ್ನುವ ಜೀವನಕ್ರಮವನ್ನು ಪ್ರತಿನಿಧಿಸಿದ ಕೆದಿಲಾಯರು ೨೦೧೬ ಅಕ್ಟೋಬರ್ 20ರಂದು ವಿಧಿವಶರಾಗುವಾಗ ತೊಂಭತ್ತಮೂರು ವರುಷ. 
                ಅತಿ ಕಡಿಮೆ ಮೂಲ ಬಂಡವಾಳ ಹೂಡಿ ಕೃಷಿಯಲ್ಲಿ ಹಣ ಸಂಪಾದನೆ ಮಾಡಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. ಸಾಲ ಮಾಡಿ ಕೃಷಿ ಮಾಡುವುದಕ್ಕೆ ಬದ್ಧ ವಿರೋಧವಾಗಿದ್ದರು. ಸಾಲ ಮಾಡಿದವ ಏಳಿಗೆಯಾಗಲಾರ. ಅವನ ಲಕ್ಷ್ಯವೆಲ್ಲಾ ಸಾಲವನ್ನು ಮರುಪಾವತಿ ಮಾಡುವುದರಲ್ಲೇ ಕೇಂದ್ರೀಕರಿಸಿರುತ್ತದೆ. ಒಂದು ಸಾಲ ಮುಗಿದಾಗ ಇನ್ನೊಂದು ಸಾಲ. ಹೀಗೆ ಸಾಲದ ಕೂಪದೊಳಗೆ ಸುತ್ತುತ್ತಾ ಆಯುಷ್ಯ ಮುಗಿಸುತ್ತಾನೆ. ಹೀಗಾದರೆ ಏನು ಸಾಧಿಸಿದ ಹಾಗಾಯ್ತು? ಕೆಲವು ವರುಷಗಳ ಹಿಂದೊಮ್ಮೆ ಕಸಿ ತರಬೇತಿ ಕಾರ್ಯಾಗಾರದಲ್ಲಿ ಆಡಿದ ಮಾತು ಮಾರ್ಮಿಕವಾಗಿತ್ತು.
                 ಒಮ್ಮೆ ಮೈತುಂಬ ಸಾಲ ಮಾಡಿಕೊಂಡ ಕೃಷಿಕರೊಬ್ಬರು ಸಾಲ ಮರುಪಾವತಿಗಾಗಿ ತಮ್ಮ ಭೂಮಿಯನ್ನು ಮಾರಲು ನಿರ್ಧರಿಸಿದರು. ಮಾರಿಕೊಡಲು ಕೆದಿಲಾಯರಲ್ಲಿ ವಿನಂತಿಸಿದರು. ಜತೆಗೆ ಕಮಿಶನ್ನಿನ ಆಮಿಷ ಬೇರೆ! ನೀವು ಲಕ್ಷ ರೂಪಾಯಿ ಕೊಟ್ಟರೂ ನಿಮ್ಮ ಜಾಗವನ್ನು ಮಾರಿಸಿ ಕೊಡುವ ಹೊಣೆಯನ್ನು ವಹಿಸಲಾರೆ ಎಂದು ಖಡಕ್ ಆಗಿ ಹೇಳಿದ್ದರು. ನಿಮ್ಮ ಸಾಲಕ್ಕೆ ನೀವು ಹೆದರುವುದು ಬೇಡ, ನಾನು ನೋಡಿ ಕೊಳ್ತೇನೆ ಎಂದು ಹೇಳಿ ಏನೋ ವ್ಯವಸ್ಥೆ ಮಾಡಿದರಂತೆ. ಅವರಿಗೆ ಸ್ವಂತ ದುಡಿಮೆಯಿಂದ ಸಾಲ ತೀರಿಸಿಕೊಳ್ಳುವ 'ಕೆಣಿ'ಗಳನ್ನು ಹೇಳಿದರು. ಕೆದಿಲಾಯರು ಹೇಳಿದಂತೆ ಕೃಷಿ ಮಾಡಿದರು, ಗೆದ್ದರು. ನನ್ನ ಮಾತು ಕೇಳಿ ಅವರು ಜಾಗ ಉಳಿಸಿಕೊಂಡದ್ದೇ ನನಗೆ ಹಣ ಎಂದಿದ್ದರು.
                 ನಿಮ್ಮತ್ರ ಖಾಲಿ ಜಾಗ ಉಂಟೋ? ಎಷ್ಟು ಜಾಗವಿದೆ? ಅದರಲ್ಲಿ ಏನು ನೆಟ್ಟಿದ್ದೀರಿ? - ಈ ಪ್ರಶ್ನೆಗಳಿಲ್ಲದೆ ಮಾತು ಮುಗಿಯುತ್ತಿರಲಿಲ್ಲ. ಬರಡು ನೆಲದಲ್ಲಿ ತೇಗದಂತಹ ಗಿಡಗಳನ್ನು ನೆಡಿ. ಇವೆಲ್ಲಾ ಕೃಷಿಕನ ವಿಮೆ. ಮೊದಲ ನಾಲ್ಕೈದು ವರುಷ ಮಾಡುವ ಆರೈಕೆಯೇ ನಾವು ಕಟ್ಟುವ ಪ್ರೀಮಿಯಂ. ಹದಿನೈದು ಇಪ್ಪತ್ತು ವರುಷಗಳ ಬಳಿಕ ಆ ಪಾಲಿಸಿ ಮೆಚ್ಯುರಿಟಿಯಾಗುತ್ತದೆ. ಕೈತುಂಬಾ ಹಣ ಸಿಗುತ್ತದೆ. ಇದು ಕೆದಿಲಾಯರ ಆರ್ಥಿಕ ಸೂತ್ರ.
                ನಾರಾಯಣ ಕೆದಿಲಾಯರು ಯೌವನದಲ್ಲಿ ವಿಟ್ಲ ಅರಮನೆಯಲ್ಲಿ ಅರ್ಚಕರಾಗಿದ್ದರು. ಒಮ್ಮೆ ಹೂ, ಹಣ್ಣಿನ ಗಿಡಗಳಿಗೆ ಕಸಿ ಕಟ್ಟಲು ಕೇರಳದಿಂದ ತಜ್ಞರು ಆಗಮಿಸಿದ್ದರು.  ಗುಲಾಬಿ, ಮಾವಿನ ಗಿಡಗಳಿಗೆ ಅವರು ಕಸಿ ಮಾಡುವುದನ್ನು ಅವರ ಜತೆಗಿದ್ದು ನೋಡಿದರು, ಕಲಿತರು. ಕಸಿಯ ಸೂಕ್ಷ್ಮಗಳನ್ನು ತಿಳಿದುಕೊಂಡರು. ಪರೀಕ್ಷಾರ್ಥವಾಗಿ ನೋಡಿದ್ದನ್ನು ಮಾಡಿದರು. ಧೈರ್ಯ ಬಂತು. ಕಸಿಯ ಮರ್ಮ ಅಂದು ತಿಳಿದುಕೊಂಡದ್ದರಿಂದ ಅದೇ ನನ್ನ ಮುಂದಿನ ಬದುಕಿಗೆ ದಾರಿಯಾಯಿತು, ಹೆಸರನ್ನು ತಂದು ಕೊಟ್ಟಿತು, ಎಂದಿದ್ದರು.
                 1960ರಿಂದ ಆಲಂಕಾರಿನ ತಮ್ಮ ಕೃಷಿ ಕ್ಷೇತ್ರದಲ್ಲಿ ಕನಸಿನ ಸಾಕಾರಕ್ಕೆ ಶ್ರೀಕಾರ. ಮೊತ್ತಮೊದಲ ಸಾಹಸ - ಉಡುಪಿಯಿಂದ ಎರಡು ಸಾವಿರ 'ಮಟ್ಟುಗುಳ್ಳ' ಸಸಿಗಳನ್ನು ತಂದು ನಾಟಿ ಮಾಡಿದರು. ಉತ್ತಮ ಫಸಲು ದೊರೆಯಿತು.  ಆಗ ಸಾಗಾಟಕ್ಕೆ ವಾಹನಗಳು ತೀರಾ ಕಡಿಮೆ. ಮಂಗಳೂರು ಮಾರುಕಟ್ಟೆಗೆ ಗೂಡ್ಸ್ನಲ್ಲಿ ಗುಳ್ಳವನ್ನು ಕಳುಹಿಸುತ್ತಿದ್ದೆ. ಒಂದು ಬೆಳೆಯಲ್ಲಿ ಹನ್ನೆರಡು ಸಾವಿರ ರೂಪಾಯಿ ಸಿಕ್ಕಿತು. ಆಗದು ದೊಡ್ಡ ಸುದ್ದಿಯಾಯಿತ. ನನ್ನ ಹೆಸರಿನೊಂದಿಗೆ 'ಬದನೆ ಕೆದಿಲಾಯ' ಹೊಸೆಯಿತು ಎಂದು ಬಾಯಿ ತುಂಬಾ ನಕ್ಕ ದಿನಮಾನಗಳು ನೆನಪಾಗುತ್ತದೆ.
                   1980ರಲ್ಲಿ ರಬ್ಬರ್ ಗಿಡಗಳಿಗೆ ಬೇಡಿಕೆ ಶುರು. ಮೂವತ್ತೈದು ಸಾವಿರ ರೂಪಾಯ ಖರ್ಚು ಮಾಡಿ ಜೆಸಿಬಿಯಿಂದ ಜಾಗ ತಟ್ಟು ಮಾಡಿಸಿ ರಬ್ಬರ್ ನರ್ಸರಿ ಶುರು ಮಾಡಿದರು. ಅದರಿಂದ 65000 ರೂಪಾಯಿ ಲಾಭವಾಯಿತು. ನಾವು ಖರ್ಚು ಮಾಡಿದ್ದು ಇದೆಯಲ್ಲಾ, ಅದು ಒಂದು ವರುಷದಲ್ಲಿ ನಮಗೆ ವಾಪಾಸು ಬರಬೇಕು. ಇಂತಹ ಕೆಣಿಗಳನ್ನು ಕೃಷಿಯಲ್ಲಿ ಕಲಿತುಕೊಳ್ಳಬೇಕು. ಆಗ ಮಾತ್ರ ಗೆಲ್ಲುತ್ತೇವೆ ಎನ್ನುವುದು ಕೆದಿಲಾಯರ 'ಕೃಷಿ ಸೂತ್ರ'. 1965ರಿಂದ ಗೇರು ಕಸಿಯತ್ತ ಮನ ಮಾಡಿದ್ದರು.
                  ಆಗಷ್ಟೇ ಕಸಿಯಂತಹ ಹೊಸ ವಿಚಾರಗಳು ಕೃಷಿ ಮೇಳ, ಕೃಷಿ ಕಾರ್ಯಕ್ರಮಗಳಲ್ಲಿ ಸೇರುತ್ತಿದ್ದುವು. ಮಾತುಕತೆಯಲ್ಲೂ ಕಸಿಯದ್ದೇ ವಿಚಾರ. ಒಂದಷ್ಟು ಮಂದಿಗೆ ಕಸಿಯ ಗುಂಗು ಆವರಿಸಿತ್ತು. ಕೆದಿಲಾಯರಿಗೆ ಕಸಿಯ ತರಬೇತಿ ನೀಡಲು ಎಲ್ಲೆಡೆಯಿಂದ ಆಹ್ವಾನ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಸಿಯ ಸೂಕ್ಷ್ಮಗಳ ಪಾಠ ಮಾಡಿದರು. ಕೃಷಿ ಮೇಳ, ಕಾಲೇಜುಗಳಲ್ಲಿ ಉಪನ್ಯಾಸ ಮಾಡಿದರು. ಕಸಿ ಕಟ್ಟುವ ಪ್ರಾಕ್ಟಿಕಲ್ ಕಾರ್ಯಗಾರಗಳಲ್ಲಿ ಭಾಗವಹಿಸಿದರು. ಇದರಿಂದಾಗಿ ಸಾಕಷ್ಟು ಮಂದಿಗೆ ಕಸಿಯ ಒಲವು ಹುಟ್ಟಿತು. ಕೆಲವರು ಸ್ವತಃ ಕಸಿ ಕಟ್ಟಲು ಕಲಿತರು. ನನಗೆ 'ಕಸಿ ಕೆದಿಲಾಯ' ಎನ್ನುವ ಹೆಸರಾಯಿತು, ಖುಷಿಯಿಂದ ಹೇಳುತ್ತಿದ್ದರು.
                    ತಮ್ಮಲ್ಲಿ ಕಸಿ ಮಾವಿನ ಮರ ಫಲ ಬಿಡಲು ಶುರುವಾಗುವಲ್ಲಿಯ ತನಕ ಜನರಿಗೆ ಕಸಿಯ ವಿಚಾರ ಹೇಳಿದರೆ ಏನೋ ಉದಾಸೀನ. ಕಸಿ ಗಿಡ ನೆಡುವವರೂ ಕಡಿಮೆ ಇದ್ದರು. ನರ್ಸರಿಗೆ ಇತರ ಗಿಡಗಳಿಗೆ ಬರುವ ಗಿರಾಕಿಗಳಿಗೆ ಮಾವಿನ ಹಣ್ಣನ್ನು ನೀಡಿ, ಇದು ಕಸಿ ಗಿಡದ ಹಣ್ಣು. ಎಷ್ಟೊಂದು ರುಚಿಯಲ್ವಾ. ನಾಟಿ ತಳಿಗಿಂತ ಕಸಿಯದರಲ್ಲಿ ಫಸಲು ಬಹುಬೇಗ ಬರುತ್ತದೆ. ಒಂದೆರಡು ಗಿಡ ತೆಕ್ಕೊಳ್ಳಿ ಎಂದು ರುಚಿ ತೋರಿಸಿ ಗಿಡ ಮಾರಿದ ಕ್ಷಣಗಳನ್ನು ರೋಚಕವಾಗಿ ಹೇಳುತ್ತಿದ್ದರು.
                       ಕಸಿ ಕಟ್ಟುವ ಜಾಣ್ಮೆ ತಿಳಿಸುವಿರಾ? ಒಮ್ಮೆ ಪ್ರಶ್ನಿಸಿದ್ದೆ. ಒಮ್ಮೆ ಕಸಿ ಕಟ್ಟಲು ನೀವು ಕಲಿತಿರಾ, ಮತ್ತೆಲ್ಲಾ ಗಿಡಗಳಿಗೂ ಮಾಡಬಹುದು. ಒಂದಷ್ಟು ಶ್ರಮ, ಜಾಣ್ಮೆ ಬೇಕಷ್ಟೇ. ಅವೆಲ್ಲಾ ಅನುಭವದಲ್ಲಿ ಬರುವಂಥದ್ದು. ಹಲಸಿಗೆ ಕಸಿ ಕಷ್ಟ. ಅದು ಬಹಳ ಸೂಕ್ಷ್ಮತೆಯನ್ನು ಬೇಡುತ್ತದೆ. ಈ ಭಾಗದಲ್ಲಿ ಮೊದಲು ಹಲಸಿನ ಗಿಡಗಳಿಗೆ ಕಸಿ ಕಟ್ಟಿ ಯಶಸ್ಸಾಗಿದ್ದೇನೆ, ಎಂದು ಉತ್ತರಿಸಿದ್ದರು. ಚಿಕ್ಕು, ರಬ್ಬರ್, ಗುಲಾಬಿ, ಮಾವು, ಹಲಸು.. ಹೀಗೆ ಎಲ್ಲದಕ್ಕೂ ಕಸಿಯ ಟಚ್.
                 ನೆಟ್ಟ ಕಸಿ ಗಿಡ ಸತ್ತುಹೋದರೆ ಅಷ್ಟಕ್ಕೇ ಬಿಡಬಾರದು. ಇನ್ನೊಂದು ಗಿಡ ನೆಟ್ಟು ಪೋಷಿಸಬೇಕು - ಕೆದಿಲಾಯರ ಕಿವಿಮಾತು. ಮಕ್ಕಳೆಲ್ಲಾ ತಂದೆಯವರ ಜತೆಗಿದ್ದು, ಕಲಿತು, ಈಗ ಕಸಿಯ ಎಲ್ಲಾ ಮಗ್ಗುಲುಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ತಜ್ಞತೆ ರೂಢಿಸಿಕೊಂಡಿದ್ದಾರೆ. ತಮ್ಮ ನರ್ಸರಿಯಲ್ಲಿ ಸ್ವತಃ ಕಸಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿದ ನೆನಪನ್ನು ಕೃಷಿಕ ವಸಂತ ಕಜೆ ಜ್ಞಾಪಿಸಿಕೊಂಡರು, ಕೆದಿಲಾಯರದು ಅಡೆತಡೆಯಿಲ್ಲದ, ಅನುಭವಜನ್ಯ ಮಾತುಗಾರಿಕೆ. ಅವರಾಡುವುದರ ಬಗ್ಗೆ ಅವರಿಗೆ ಸಂಶಯವೇ ಇರಲಿಲ್ಲ. ಲಾಭನಷ್ಟಗಳನ್ನು ಅಂಕೆ-ಸಂಖ್ಯೆಗಳ ಸಹಿತ ವಿವರಿಸುತ್ತಿದ್ದರು. ನಂಬಿಕೊಂಡ ಮೌಲ್ಯಗಳ ಜತೆ ರಾಜಿ ಮೋಡಿಕೊಂಡು ದುಡ್ಡ ಸಂಪಾದನೆ ಮಾಡಿದಂತಿಲ್ಲ.
            'ಉತ್ಸಾಹವೇ ಧನ, ಉದಾಸೀನವೇ ದಾರಿದ್ರ್ಯ' ನಾರಾಯಣ ಕೆದಿಲಾಯರ ಅನುಭವ. ತಾನು ಅನುಭವಿಸಿದ ಬದುಕಿನ ಸತ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಖುಷಿ. ಈ ಖುಷಿಯ ಭಾವ ಇನ್ನು ನೆನಪು ಮಾತ್ರ. ಅವರ ಚಿರಂಜೀವಿಗಳು ಕೃಷಿಯನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮಣ್ಣಿನೊಂದಿಗಿರುವುದು ಇದೆಯಲ್ಲಾ, ಅದು ಕೆದಿಲಾಯರು ನಂಬಿದ ಸತ್ಯಗಳಿಗೆ ಸಲ್ಲುವ ಮಾನ-ಸಂಮಾನ.



Addl Information : Vasanthe Kaje
Published in Udayavani/Nelada Nadi Coloum



ಹಕ್ಕುಗಳಿಗೆ ಕಿವಿಯಾಗುವ ನಾವು ಜವಾಬ್ದಾರಿಗಳಿಗೆ ಕಿವುಡಾಗುವುದೇಕೆ?


               ಮಳೆಗಾಲ ಒಣಗಿತು! ಒಂದು ದಿನ ಮಳೆಯು ರಜೆ ಹಾಕಿದರೂ ಬೇಸಿಗೆಯ ಶಾಖದ ಅನುಭವ. ನದಿ, ಕೆರೆ, ಬಾವಿಗಳಲ್ಲಿ ಈಗಲೇ ನೀರಿನ ಮಟ್ಟ ಅತೃಪ್ತಿದಾಯಕ. ಇನ್ನು ಬೇಸಿಗೆಯ ಚಿತ್ರಣ ಹೇಗಿರಬಹುದು? ಊಹಿಸಿದರೆ ಭಯವಾಗುತ್ತದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ನೆರೆಯ ಮಹಾಪೂರಕ್ಕೆ ತುತ್ತಾದರೆ ಮತ್ತೊಂದು ಭಾಗ ಮಳೆಯಿಲ್ಲದೆ ತತ್ತರವಾಗಿದೆ. ಇತ್ತ ಕಾವೇರಿ ಮಾತೆಯ ರೋದನಕ್ಕೆ ಕನ್ನಾಡು ದನಿಸೇರಿಸಿದೆ. ನ್ಯಾಯಾಲಯದ ತೀರ್ಪುು ರೋದನವನ್ನು ಚಿವುಟಿದೆ.
              ಬಹುಶಃ ಕನ್ನಾಡಿನ ನೀರಿನ ಒದ್ದಾಟ, ಗುದ್ದಾಟಗಳಲ್ಲಿ ಕಾವೇರಿ ಹೆಚ್ಚು ಸದ್ದು ಮಾಡಿತು. ಎಲ್ಲಾ ಪಕ್ಷಗಳು ಒಗ್ಗೂಡಿದುವು. ಮಾಜಿ ಪ್ರಧಾನಿಗಳು ಟೊಂಕ ಕಟ್ಟಿದರು. ಸಮಸ್ಯೆಯು ದೇಶದ ರಾಜಧಾನಿ ತಲುಪಿತು. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರೈತರ ದೊಡ್ಡ ದನಿಗೆ ಆಡಳಿತದ ಜಾಣ ಕುರುಡು, ಕಿವುಡನ್ನು ರೈತ ಶಕ್ತಿಯು ಕಿವಿ ಹಿಂಡಿತು. ನ್ಯಾಯಾಲಯದ ಮುಂದೆ ಸಮರ್ಥವಾಗಿ ವಾದ ಮಂಡಿಸುವ ವಕೀಲರು ಆಕಳಿಸಿದ್ದಿರಬಹುದೇ ಎಂದು ಕನ್ನಾಡಿನ ಜನರಾಡಿಕೊಳ್ಳುತ್ತಿದ್ದಾರೆ.
                ಈ ವರುಷ ಬರಗಾಲದಲ್ಲಿ ಕರ್ನಾಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಎಂದು ಜಲ ತಜ್ಞ ರಾಜೇಂದ್ರ ಸಿಂಗ್ ಕೆಂಪು ನಿಶಾನಿ ತೋರುತ್ತಾ ಪ್ರಸ್ತುತ ರಾಜಕೀಯದ ಮೇಲಾಟದತ್ತ ಬೆರಳು ತೋರುತ್ತಾರೆ, ತಮಿಳುನಾಡು ಮತ್ತು ಕರ್ನಾಟಕದ ರಾಜಕಾರಣಿಗಳಿಗೆ ಕಾವೇರಿ ವಿವಾದ ಜೀವಂತ ಇರುವುದೇ ಇಷ್ಟ. ಇದರೊಂದಿಗೆ ಭತ್ತ ಮತ್ತು ಸಕ್ಕರೆಯ ಲಾಬಿ ಸೇರಿದೆ. ಈ ಎರಡೂ ಬೆಳೆಗಳಿಗೆ ನೀರನ್ನು ಒದಗಿಸುವುದು ಕಷ್ಟ ಎಂದು ಎರಡೂ ರಾಜ್ಯಗಳಿಗೆ ಗೊತ್ತಿದೆ. ಸಂಕಷ್ಟ ಗೊತ್ತಿದ್ದೂ ಆ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ವಿವಾದ ಎಬ್ಬಿಸಿ ಅದರ ಲಾಭ ಪಡೆದುಕೊಳ್ಳಲು ರಾಜಕಾರಣಿಗಳಲ್ಲೇ ಪೈಪೋಟಿಯಿದೆ. ಒಟ್ಟೂ ಸಮಸ್ಯೆಯನ್ನು ಮುಂದಿಟ್ಟು ನೋಡುವಾಗ ರಾಜೇಂದ್ರ ಸಿಂಗ್ ಅವರ ಮಾತು ಮರೆತು ಬಿಡುವಂತಹುದಲ್ಲ.
                ಕಾವೇರಿ ಮಾತ್ರ ಏಕೆ? ನಮ್ಮ ನಡುವೆ ಹರಿಯುತ್ತಿರುವ ಚಿಕ್ಕಪುಟ್ಟ ನದಿ, ಹಳ್ಳಗಳನ್ನು ಉಳಿಸಿಕೊಳ್ಳುವುದು ಕೂಡಾ ಕಾಲದ ಆವಶ್ಯಕತೆಯಾಗಿದೆ. ಜನವರಿ ತನಕ ಹರಿಯುವ ನದಿಗಳಲ್ಲಿ ಈಗಲೇ ನೀರು ತಳ ಕಂಡಿವೆ. ಕೆಲವು ಹರಿವು ನಿಲ್ಲಿಸಿದೆ. ಇನ್ನೊಂದಿಷ್ಟು ಕೆಲವು ತಿಂಗಳೊಳಗೆ ಒಣಗುತ್ತವೆ. ಹೀಗಿದ್ದೂ ಬೇಸಿಗೆಯ ಪಾಡು? ಕಾವೇರಿ ನೀರು ವಿವಾದಗಳಿಂದ ರೈತರೊಂದಿಗೆ ಬೆಂಗಳೂರು ನಗರವೂ ಒದ್ದಾಡಬೇಕಾಗಿದೆ. ಸರಕಾರ ಹೇಗಾದರೂ ನೀರು ಕೊಡುತ್ತದೆ. ದುಡ್ಡು ಬಿಸಾಡಿದರಾಯಿತು, ಎನ್ನುವ ಮನಃಸ್ಥಿತಿಯುಳ್ಳವರಿಗೆ ಬಹುಶಃ ಈ ಬೇಸಿಗೆಯು ನೀರಿನ ಬಿಸಿಯನ್ನು ಮುಟ್ಟಿಸಬಹುದು. ಹಾಗಾಗದಿರಲಿ.
                ಕನ್ನಾಡಿನ ಜಲಯೋಧರು ನೆಲ-ಜಲ ಸಂರಕ್ಷಣೆಯ ಪಾಠವನ್ನು ಒಂದೂವರೆ ದಶಕಗಳಿಂದ ಮಾಡುತ್ತಾ ಬಂದಿದ್ದಾರೆ. ಸಂಘಸಂಸ್ಥೆಗಳು ನೀರಿನೆಚ್ಚರ ಮೂಡಿಸುವ ಕೆಲಸ ಮಾಡುತ್ತಿವೆ. ವೈಯಕ್ತಿಕವಾಗಿ ನೀರಿನ ಅರಿವನ್ನು ಮೂಡಿಸುವ, ಯಶೋಗಾಥೆಗಳನ್ನು ದಾಖಲಿಸುವ, ಅವುಗಳನ್ನು ಜನರ ಮನದೊಳಿಗೆ ಹರಿಯಬಿಡುವ ಜಲಯೋಧರ ಸಾಧನೆಗಳು ಅಲಿಖಿತ. ಒಂದು ಕಾಲಘಟ್ಟದಲ್ಲಿ ಜಲಯೋಧರ ಕಾಯಕಗಳಿಗೆ ಗೇಲಿ ಮಾಡುತ್ತಿದ್ದವರು ಇಂದು ಜಲಸಂರಕ್ಷಣೆಯ ಭಾಷಣ ಮಾಡುತ್ತಿದ್ದಾರೆ!
                ಎಲ್ಲಾ ಸಮಸ್ಯೆಗಳಿಗೂ ಸರಕಾರದಲ್ಲಿ ಉತ್ತರವಿದ್ದೀತೇ? ಹಕ್ಕುಗಳನ್ನು ಹೋರಾಟ ಮೂಲಕ ಪಡೆಯುತ್ತೇವೆ.  ಜತೆಗೆ ನಂನಮ್ಮ ಕರ್ತವ್ಯಗಳನ್ನು ನಾಗರಿಕರಾಗಿ ಎಷ್ಟು ಯೋಚಿಸಿದ್ದೇವೆ? ಆದರೆ ಭಾರತದಲ್ಲಿ 'ಕರ್ತವ್ಯ'ಗಳನ್ನು ಜವಾಬ್ದಾರಿ ಎನ್ನುವ ನೆಲೆಯಲ್ಲಿ ಮೈಮೇಲೆ ಎಳೆದುಕೊಂಡ ಅಜ್ಞಾತ ವ್ಯಕ್ತಿಗಳು ಸಾವಿರಾರು ಮಂದಿ ಇದ್ದಾರೆ. ಅವರೆಂದೂ ವಾಹಿನಿಗಳಿಗೆ ಫೋಸ್ ಕೊಡುವುದಿಲ್ಲ. ತಾವೇ ಸ್ವತಃ ವರದಿ-ಚಿತ್ರಗಳನ್ನು ಪತ್ರಿಕಾಲಯಕ್ಕೆ ಒಪ್ಪಿಸುವುದಿಲ್ಲ. ಅವರದು ಜವಾಬ್ದಾರಿ ಅರಿತ ಕಾಯಕ. ನಿಜಾರ್ಥದ ಸಮಾಜ ಸೇವೆ. ಇದಕ್ಕೆ ಉದಾಹರಣೆ - ಮಹಾರಾಷ್ಟ್ರದ ಸತಾರಾದ ಡಾ.ಅವಿನಾಶ್ ಪೋಲ್.  ಗ್ರಾಮಕ್ಕೆ ದನಿಯಾಗಿ ನೀರಿನ ಬರದ ಗುಮ್ಮಕ್ಕೆ ಸಡ್ಡು ಹೊಡೆದ ಸಾಹಸಿ.
                 ನಾಲ್ಕೈದು ವರುಷದ ಹಿಂದೆ ಮಹಾರಾಷ್ಟ್ರದ ಜಾಲ್ನಾ ನಗರದ ಚಿತ್ರ ಕಣ್ಣೀರು ತರುವಂತಾದ್ದು. ನೀರಿಗಾಗಿ ಒದ್ದಾಟ. ಒಂದುವರೆ ಸಾವಿರ ಕೊಳವೆಬಾವಿಗಳು ಬತ್ತಿದ್ದುವು. ಮನೆಗಳಿಗೆ ವಾರಕ್ಕೊಮ್ಮೆ ರೇಶನ್ ನೀರು. ಅದೂ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಉದ್ದಿಮೆಗಳು ಷಟರ್ ಇಳೆದಿದ್ದುವು. ಬಹುತೇಕರು ಉದ್ಯೋಗ ಅರಸಿ ಬೇರೆಡೆ ಗುಳೆ ಹೋದರು. ಊರಿಗೆ ರಾಜಕಾರಣಿಗಳು ಬಂದರು, ಕ್ಯಾಮೆರಾಗಳಿಗೆ ಫೋಸ್ ಕೊಟ್ಟರು, ಹೋದರು! ಸಮಸ್ಯೆಯು ಸಮಸ್ಯೆಯಾಗಿಯೇ ಉಳಿಯಿತು.
                ಜಾಲ್ನಾ ನಗರದಲ್ಲಿ ಹೂಳು ತುಂಬಿದ ನಾಲ್ಕು ಸರೋವರಗಳಿದ್ದುವು. ದೂರದ ಜಾಯ್ವಾಡಿ ಅಣೆಕಟ್ಟಿನಿಂದ ಸರಕಾರವು ನೀರು ತರುವ ಯೋಜನೆಗೆ ಸಹಿ ಮಾಡಿತ್ತು. ಬರೋಬ್ಬರಿ ಇನ್ನೂರೈವತ್ತು ಕೋಟಿ ರೂಪಾಯಿಯ ಯೋಜನೆ! ಎಲ್ಲಾ ಕಾಮಗಾರಿ ಮುಗಿಯುವಾಗ ಅಣೆಕಟ್ಟಿನಲ್ಲಿ ನೀರಿರಲಿಲ್ಲ! ಒಂದು ವೇಳೆ ಇರುತ್ತಿದ್ದರೂ ಐವತ್ತು ಕಿಲೋಮೀಟರ್ ದೂರದಿಂದ ಪೈಪಿನಲ್ಲಿ ತರಬೇಕಾಗಿತ್ತು. ಏನಿಲ್ಲವೆಂದರೂ ದಿನಕ್ಕೆ ಒಂದು ಲಕ್ಷ ಖರ್ಚು. ಜಾಲ್ನಾಕ್ಕೆ ನೀರು ಪೂರೈಕೆಗಾಗಿಯೇ ಘನೆವಾಡಿ ಸರೋವರವನ್ನು ಆಗಿನ ನಿಜಾಮ ಕಟ್ಟಿಸಿದ್ದರು. ಅದು ಹೂಳು ತುಂಬಿತ್ತು.
                ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಘಸಂಸ್ಥೆಗಳು ಒಂದಾದುವು. ನೀರಿನ ಬರಕ್ಕೆ ಘನೆವಾಡಿ ಸರೋವರದ ಪುನರ್ಜೀವವೊಂದೇ ಹಾದಿ ಎಂದು ಕಂಡುಕೊಂಡರು. ಸಾಮಾಜಿಕ ಬದ್ಧತೆಯುಳ್ಳ ದಂತವೈದ್ಯ ಡಾ. ಅವಿನಾಶ್ ಪೋಲ್ ಅವರನ್ನು ಸಂಪಕರಿಸಿರು. ಅವಿನಾಶರು ಕಳೆದ ಎರಡು ದಶಕಗಳಿಂದ ನೀರಿನ ಕೆಲಕ್ಕೆ ಹಳ್ಳಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಊರವನ್ನು ಸಂಘಟಿಸಿ, ಶ್ರಮದಾನದ ಮೂಲಕ ಹಳ್ಳಿ ಉದ್ದಾರಕ್ಕೆ ಟೊಂಕ ಕಟ್ಟಿದ್ದಾರೆ. ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
               ಅವಿನಾಶರ ಸಾರಥ್ಯದಲ್ಲಿ ಜಲ ಕಾಯಕ ಶುರು. ಇಲ್ಲಿ ಬೀಳುವ ಮಳೆ ಕೇವಲ ಮುನ್ನೂರರಿಂದ ನಾಲ್ಕುನೂರು ಮಿಲ್ಲಿಮೀಟರ್. ಬಿದ್ದ ಮಳೆ ನೀರನ್ನು ಇಂಗಿಸಲು ಸಾವಿರಗಟ್ಟಲೆ ರಚನೆಗಳ ನಿರ್ಮಾಣಕ್ಕೆ ಸಲಹೆ ನೀಡಿದರು. ಶ್ರಮದಾನದ ಮೂಲಕ ಹಳ್ಳಿ ಒಂದಾಯಿತು. ಹತ್ತೋ ಹದಿನೈದೋ ಲಕ್ಷ ರೂಪಾಯಿ ವ್ಯಯವಾಗುತ್ತಿದ್ದ ಕಾಮಗಾರಿಗಳು ಎರಡೋ ಮೂರೋ ಲಕ್ಷದಲ್ಲೇ ನಿರ್ಮಾಣವಾದುವು. ಅವಿನಾಶರ ಯೋಜನೆಗಳಿಗೆ ಆರಂಭದಲ್ಲಿ ನಿಧಾನ ಸ್ಪಂದನ ದೊರೆತರೂ ಮುಂದೆ ಅದು ಬೀಸುಹೆಜ್ಜೆಯಾಯಿತು.
               ಅವಿನಾಶರಿಗೆ ಹಳ್ಳಿ ಸುಧಾರಣೆಯು ಆಸಕ್ತಿಯ ವಿಷಯ. ತನ್ನ ಒತ್ತಡಗಳ ಮಧ್ಯೆ ಕಷ್ಟಗಳಿಗೆ ಕಿವಿಯಾಗುತ್ತಾರೆ. ಮೊದಲ ಭೇಟಿಯಲ್ಲೇ ಅವಿನಾಶ್ ಹಳ್ಳಿಯ ಮೂಲೆ ಮೂಲೆಗಳಿಗೂ ಓಡಾಡುತ್ತಾರೆ. ಜಲಮೂಲಗಳನ್ನು ವೀಕ್ಷಿಸುತ್ತಾರೆ. ಆಗಲೇ ಅಲ್ಲಿ ಆಗಬೇಕಾದ ಕಾರ್ಯಕಗಳತ್ತ ಮಾಸ್ಟರ್ಪ್ಲಾನ್ ಮನದಲ್ಲಿ ಸಿದ್ಧವಾಗುತ್ತದೆ. ಅವಿನಾಶರಿಗೆ ಸರಕಾರಿ ಯೋಜನೆಗಳ ಕುರಿತು ಅಗಾಧ ತಿಳುವಳಿಕೆಯಿದೆ. ಸರಕಾರದ ಕೆಂಪುಪಟ್ಟಿ ಸಂಸ್ಕೃತಿಯ ಬೇಲಿಯನ್ನು ದಾಟಿ ಮುಂದಡಿಯಿಡುವುದು ಕಷ್ಟದ ಕೆಲಸ. ಆದರೆ ಕಚೇರಿಯೊಳಗಿರುವ ಕೆಲವು ಸಮಾಜಮುಖಿ ಮನಸ್ಸಿನವರು ಅವಿನಾಶರ ನಿಸ್ವಾರ್ಥ ದುಡಿಮೆಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಸ್ಪಂದಿಸುತ್ತಿದ್ದಾರೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಸರಕಾರಿ ಸ್ಕೀಮನ್ನು ಹಳ್ಳಿಗಳಿಗೆ ಹೊಂದಿಸುತ್ತಿದ್ದಾರೆ.
                ಸರಕಾರದ ಯೋಜನೆಗಳನ್ನು ಆಯಾಯ ಹಳ್ಳಿಗೆ ಜೋಡಿಸುವ ಇವರ ಅನನ್ಯ ಸಾಮಥ್ರ್ಯಕ್ಕೆ, ಇವರ ಸಂಪರ್ಕ ವಲಯದ ಹರವಿನ ಬಗ್ಗೆ, ಯೋಜನೆಗಳ ಒಳಹೊರಗಿನ, ವಿಧಿವಿಧಾನಗಳ ತಿಳಿವಳಿಕೆ ಬಗ್ಗೆ ಅಚ್ಚರಿ ಹುಟ್ಟುತ್ತದೆ, ಎನ್ನುತ್ತಾರೆ ಜಲತಜ್ಞ  ಶ್ರೀ ಪಡ್ರೆ. ಒಂದು ಹಳ್ಳಿಯಲ್ಲಿ ನೀರಿನ ಕೆಲಸ ಇನ್ನೇನು ಅಂತಿಮ ಹಂತಕ್ಕೆ ಬಂತು ಎಂದಾವಾಗ ಅಲ್ಲಿಂದ ಕಾಲ್ಕೀಳುವುದಿಲ್ಲ. ಆ ಊರಿನ ನೈರ್ಮಲ್ಯ, ನೀರುಳಿತಾಯ, ಬೆಳೆ ಆಯ್ಕೆ, ಶಿಕ್ಷಣ, ಸಾವಯವ ಕೃಷಿ - ಇಂಥ ವಿಚಾರದ ಬಗ್ಗೆಯೂ ಗಮನ ಹರಿಸುತ್ತಾರೆ. ಅವಿನಾಶರು ಮಾಧ್ಯಮದಿಂದ ದೂರ. ತಾವಾಯಿತು, ತಮ್ಮ ಕೆಲಸವಾಯಿತು. ತಾವು ಹಾಕಿದ ಯೋಜನೆಗಳಿಗೆ ಬಲ ಬರಲು ಅವರು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿಲ್ಲ!
              ಡಾ. ಅವಿನಾಶರಂತೆ ಅಲ್ಲದಿದ್ದರೂ, ಹಳ್ಳಿ ಪ್ರೀತಿಯ, ಪರಿಸರ ಕಾಳಜಿಯ, ನೀರಿನೆಚ್ಚರದ ಎಷ್ಟು ಮಂದಿ ದುಡಿಯುತ್ತಿಲ್ಲ. ಅದು ಗ್ರಾಮೀಣ ಭಾರತದ ಸಶಕ್ತತೆ. ಈ ಸಶಕ್ತತೆಗೆ ಸರಕಾರದ ಹಂಗಿಲ್ಲ. ರಾಜಕಾರಣಿಗಳ ಮುಲಾಜಿಲ್ಲ. ಇಲ್ಲಿರುವುದು ಅಪ್ಪಟ ಪ್ರೀತಿ. 'ನನ್ನ ಭಾರತ' ಎನ್ನುವ ಅಭಿಮಾನ. ಸರಕಾರದ ಎಷ್ಟು ಮನಸ್ಸುಗಳಿಗೆ ಇಂತಹ ದುಡಿಮೆಗಳು ಅರ್ಥವಾಗುತ್ತವೆ?

(Photo/Information : Shree Padre/Adike Patrike)
(Published in Nelada Nadi coloum/Udayavani)


Tuesday, October 11, 2016

ಶ್ರೀಪಡ್ರೆಯವರ 'ಹಲಸು' ಪುಸ್ತಕ



Thursday, September 15, 2016

ಜಲದಾಯಿ ಕೊಂಬುಗಿಂಡಿ ಈಗ ಜಲಸಾಕ್ಷರತೆಯ ಟೂಲ್

             ಕೊಂಬುಗಿಂಡಿ - ದೇವರ ನಾಡಿನ ಸಂಸ್ಕೃತಿಯ ಒಂದಂಗ. ಮಲೆಯಾಳದಲ್ಲಿದು 'ವಾಲ್ಕಿಂಡಿ'. ಕಾಲುದೀಪ, ಗಿಂಡಿಗಳಿಲ್ಲದ ಮನೆಯಿಲ್ಲ. ಮನೆಮಂದಿಗೆ, ಅತಿಥಿಗಳಿಗೆ ಕೈಕಾಲು, ಬಟ್ಟಲು-ಪಾತ್ರೆ ತೊಳೆಯಲು ಕೊಂಬುಗಿಂಡಿಯನ್ನೇ ಬಳಸುತ್ತಿರುವುದು ಪಾರಂಪರಿಕವಾಗಿತ್ತು. ಹೊಸ ವ್ಯವಸ್ಥೆಗಳು ಕೊಂಬುಗಿಂಡಿಯ ಜಾಗವನ್ನು ಅತಿಕ್ರಮಿಸಿದೆ. ಕೆಲವೊಂದು ಧಾರ್ಮಿಕ ಆಚರಣೆಗಳಿಗಷ್ಟೇ ಅಟ್ಟದಿಂದ ಇಳಿದು ಬರುತ್ತದೆ! ಬದಲಾದ ಕಾಲಘಟ್ಟದಲ್ಲೂ ಹಿರಿ ಮನೆಗಳಲ್ಲಿ ಗಿಂಡಿಯ ಬಳಕೆ ಈಗಲೂ ಊರ್ಜಿತ.
              ಅವಶ್ಯವಿದ್ದಷ್ಟೇ ನೀರು ಹೊರಹರಿಸಿ ಬಳಸುವುದು ಗಿಂಡಿಯ ವಿಶೇಷ. ಒಂದರ್ಥದಲ್ಲಿ ಹಿರಿಯರು ಹಾಕಿಕೊಟ್ಟ ನೀರಿನರಿವು. ನಳ್ಳಿ ನೀರು ಬರುವುದಕ್ಕಿಂತ ಮೊದಲು ಕೊಂಬಿನಗಿಂಡಿಯು ಕೇರಳದ ಮನೆಮನೆಯ ಜಲದಾಯಿ. ಒಂದೊಂದು ಮನೆಯಲ್ಲಿ ಕನಿಷ್ಠ ನಾಲ್ಕೈದು ಗಿಂಡಿಗಳು ಇದ್ದೇ ಇರುತ್ತಿದ್ದುವು. ಕಾಲುದೀಪ, ಆರತಿಗಳು, ಗಿಂಡಿಗಳೆಲ್ಲಾ ಕಂಚಿನಿಂದ ಸಿದ್ಧಪಡಿಸಿದವುಗಳು. ವಿವಿಧ ವಿನ್ಯಾಸದ ರಚನೆಗಳಲ್ಲಿ ಸೂಕ್ಷ್ಮ ಕಸೂತಿಗಳು ಹಿರಿಯರ ಕಲಾಗಾರಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
                ಅದು ಕಣ್ಣೂರು ಜಿಲ್ಲೆಯ ಮುಳಕ್ಕುನ್ನು ಸರಕಾರಿ ಪ್ರಾಥಮಿಕ ಶಾಲೆ. ಹಳ್ಳಿ ಪರಿಸರ. ಶಾಲೆಯಲ್ಲಿ ಹದಿನೈದಕ್ಕೂ ಮಿಕ್ಕಿದ ಡಿವಿಜನ್ಗಳಿವೆ. ಐನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಕೊಂಬುಗಿಂಡಿಗೆ ಇಲ್ಲಿ ಜಲಸಾಕ್ಷರತೆಯ ಕೆಲಸ. ಪುಟ್ಟ ಮಕ್ಕಳಿಗೆ ಎತ್ತಿ ಬಳಸಲು ಕಂಚಿನ ಗಿಂಡಿಯು ಭಾರವಾಗುತ್ತದೆ. ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ಕಿನ ಗಿಂಡಿಯನ್ನು ತಯಾರಿಸಿ ಮಕ್ಕಳ ಕೈಗೆ ನೀಡಿದ್ದಾರೆ. ಅಲ್ಲಿನ ಮಕ್ಕಳು ಬಟ್ಟಲು, ಕೈಕಾಲು ಅಲ್ಲದೆ ಉದ್ಯಾನದ ಹಸಿರಿಗೆ ನೀರುಣಿಸುವುದೂ ಇದರಲ್ಲೇ. ಇದು ಎಳೆ ಮನಸ್ಸುಗಳೊಳಗೆ ನೀರಿನ ಎಚ್ಚರ ಮತ್ತು ಜಲ ಸಂರಕ್ಷಣೆಗೆ ಬೀಜಾಂಕುರ. ಅವಶ್ಯವಿದ್ದಷ್ಟೇ ನೀರು ಬಳಸಿ ಎಂಬ ಪರೋಕ್ಷ ಪಾಠ.
               ಈ ಶಾಲೆಯು ನೀರಿನ ಅರಿವನ್ನು ಬಿತ್ತುವ ಚಟುವಟಿಕೆಗಳನ್ನು ನಡೆಸುತ್ತಿದೆ. ಆಡಳಿತದ ಗಮನ ಸೆಳೆದಿದೆ. ಮಾಧ್ಯಮಗಳು ಬೆಳಕು ಹಾಕಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳು 'ನೀರರಿವು' ಭಿತ್ತಪತ್ರವನ್ನು ಸಿದ್ಧಪಡಿಸುತ್ತಾರೆ. ಅದು ಜಲತರಂಗ ಹಸ್ತಪತ್ರಿಕೆಯಾಗಿ ರೂಪುಗೊಂಡು ಚಿಣ್ಣರು ಓದುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರುಳಿತಾಯದ ಸಂದೇಶವನ್ನು ಸಾರುವ ಕವನಗಳು ಪ್ರಕಟಗೊಳ್ಳುತ್ತಿವೆ. ಕೇರಳದ ಅನೇಕ ಪ್ರಸಿದ್ಧ ಕವಿಗಳಿಂದ ಬರೆಸಿದ ಕವನಗಳು ಕಂದಮ್ಮಗಳ ಜ್ಞಾನಕ್ಕೊಂದು ಉಪಾಧಿ. ಈ ಕವನಗಳ ಸಂಕಲನವು ಅಚ್ಚು ಕಂಡಿದೆ. ಆರಂಭದಲ್ಲಿ ಒಂದೆರಡು ಕೈ ಬರಹದ ಪುಸ್ತಿಕೆ. ಈಗದು ಸುಂದರ ವಿನ್ಯಾಸದಿಂದ ಮುದ್ರಣವಾಗಿ ಮಕ್ಕಳ ಕೈ ಅಲಂಕರಿಸುತ್ತಿದೆ. ವಿದ್ಯಾರ್ಥಿಗಳಿಗೆ ಓದುವುದಕ್ಕಾಗಿಯೇ ಪ್ರತ್ಯೇಕವಾದ 'ಜಲ ಲೈಬ್ರರಿ'ಯಿದೆ.
                ಬಳಸಿ ಬಿಸಾಕುವ ಬಾಟ್ಲಿ, ಪೆಟ್ಟಿಗೆಗಳು ಇಲ್ಲಿ ವಿಜ್ಞಾನದ ಮಾದರಿಗಳು. ಪ್ರತೀ ತರಗತಿಗೆ ನೀರಿನ ಪ್ರಯೋಗದ ಮಾರ್ಗದರ್ಶನ ಮಾಡುವ ಅಧ್ಯಾಪಕರು. 'ಲೋ ಕೋಸ್ಟ್-ನೋ ಕೋಸ್ಟ್' ಕಿಟ್ ನಿರ್ಮಿಸುವ ಇಂತಹ ಪಾಠ ಪಠ್ಯೇತರ. ನ್ಯೂಟನ್ನಿನ ನಿಯಮ, ಜಾದೂಗಾರರ 'ವಾಟರ್ ಆಫ್ ಇಂಡಿಯಾ' ಮಸೂರದಲ್ಲಿ ಎದುರಿನ ಬಿಂಬ ಕಾಣುವ ಬಗೆ, ಮೋಡದಿಂದ ಮಳೆ ಹೇಗೆ.. ಇಂತಹ ಕುತೂಹಲಕಾರಿ ಪ್ರಯೋಗಗಳು. ಇದಕ್ಕೆಲ್ಲಾ ದುಬಾರಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದ್ದಲ್ಲ ಎನ್ನುವುದು ಗಮನೀಯ.
               ಬಾಟ್ಲಿಗೆ ಸುತ್ತಲೂ ರಂಧ್ರ ಕೊರೆದು ನೀರು ತುಂಬಿ ಮೇಲೆತ್ತಿದ್ದಾಗ ಹೊರ ಚಿಮ್ಮುವ ನೀರಿನ ಧಾರೆಯು ಬಾಟ್ಲಿಯನ್ನು ತನ್ನ ಅಕ್ಷದಲ್ಲಿ ತಿರುಗಿಸುತ್ತದೆ. ಅಂದರೆ ಪ್ರತಿಯೊಂದು ಕ್ರಿಯೆಗೂ ಸಮ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್ನದ ಮೂರನೇ ನಿಯಮವನ್ನು ಮನದಟ್ಟು ಮಾಡಲು ಇಂತಹ ಪ್ರಯೋಗಗಳು. ಇದಕ್ಕೂ ಜಲಸಂರಕ್ಷಣೆಗೂ ನೇರಾನೇರ ಸಂಬಂಧವಿಲ್ಲ. ಆದರೆ ವಿದ್ಯಾರ್ಥಿಗಳ ಮನಸೆಳೆಯುವ ಕೆಣಿ. ಜತೆಜತೆಗೆ ನೀರಿನ ಪಾಠ. ವಿಜ್ಞಾನದ ಇಂತಹ ಐವತ್ತಕ್ಕೂ ಮಿಕ್ಕಿದ ಸೂತ್ರಗಳ 'ಜಲಸೂತ್ರ' ಪ್ರಕಟವಾಗಿದೆ.  ಅದರಲ್ಲಿ ನೀರುಳಿತಾಯದ ಸಂದೇಶಕ್ಕೆ ಮೊದಲ ಮಣೆ.
                 ಶಾಲೆಯ ಎಲ್ಲಾ ಡಿವಿಜನ್ನಿಗೊಂದು 'ಕಿಂಡಿ ಲೀಡರ್' ಇದ್ದಾರೆ. ಎಲ್ಲಾ ಲೀಡರುಗಳಿಗೆ ಮತ್ತೊಬ್ಬ ಮುಖ್ಯಸ್ಥ. ಮಕ್ಕಳ ಮೇಲೆ ಎಷ್ಟು ಪರಿಣಾಮ ಎಂದರೆ ಲೀಡರ್ಗಳು ಮನೆಯಲ್ಲಿ ಆಧುನಿಕವಾದ ನಲ್ಲಿ ವ್ಯವಸ್ಥೆ ಇದ್ದರೂ ಕೊಂಬುಗಿಂಡಿಯನ್ನೇ ಬಳಸುತ್ತಾರೆ. ಹೆತ್ತವರಿಗೆ ನೀರಿನ ಅರಿವಿನ ಮಹತ್ವ ಅರಿವಾಗಿದೆ. 'ಇಂತಹ ಕೊಂಬುಗಿಂಡಿಯನ್ನು ಖರೀದಿಸಿ ಬಳಸುತ್ತೇವೆ, ಎನ್ನುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಮಕ್ಕಳ ಮನಸ್ಸನ್ನು ತಟ್ಟಿದ ನೀರಿನ ಎಚ್ಚರ ಮನೆಯ ಕದವನ್ನೂ ತಟ್ಟಿದೆ.
                ಕೇರಳದ ಶಿಕ್ಷಣ ಇಲಾಖೆಯು ಮುಳಕ್ಕುನ್ನು ಶಾಲೆಯ ನೀರಿನ ಪಾಠವನ್ನು ಶ್ಲಾಘಿಸಿದೆ. ಅಧ್ಯಾಪಕರಿಗೆ ವಿತರಿಸುವ ಇಲಾಖೆಯ ಮಾರ್ಗದರ್ಶನದಲ್ಲಿ ಕೊಂಬುಗಿಂಡಿ ಪ್ರಯೋಗವನ್ನು ಉಲ್ಲೇಖಿಸಿದ್ದಾರೆ. ಕೊಂಬುಗಿಂಡಿಯು ಜಲಸಂರಕ್ಷಣೆಯ ಒಂದು ಸಂಕೇತ ಮಾತ್ರ. ಇಂತಹ ಚಟುವಟಿಕೆಗಳಿಗೆ ಊರಿನವರ ಸಹಕಾರ ಸ್ಮರಣೀಯ. ಎಲ್ಲಾ ಕೊಂಬುಗಿಂಡಿಗಳೂ ದೇಣಿಗೆಯಾಗಿಯೇ ಬಂದಿವೆ, ಎನ್ನಲು ಅಧ್ಯಾಪಕರಿಗೆ ಹೆಮ್ಮೆ. ಈ ಶಾಲೆಯಲ್ಲಿ ನೀರಿನ ಕೊರತೆಯಿಲ್ಲ. ಆದರೆ ಹತ್ತಿರದ ಶಾಲೆಗಳು ಈ ಪ್ರಯೋಗವನ್ನು ತಮ್ಮಲ್ಲೂ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಕೆಲವರು ಅನುಷ್ಠಾನದತ್ತ ಹೆಜ್ಜೆ ಊರಿದ್ದಾರೆ.
                ಶಾಲೆಯ 'ಕೊಂಬುಗಿಂಡಿ'ಯ ಮೂಲಕ ನೀರಿನೆಚ್ಚರದ ಕಾವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಊರಿನ ಮನೆಗಳಿಗೂ ಹಬ್ಬಿವೆ. ನೀರು ವ್ಯರ್ಥ ಮಾಡಬಾರದು. ಇದು ಜೀವಜಲ. ಎಚ್ಚರದಿಂದ ಬಳಸಬೇಕು, ಅರಿವು ಮೂಡುತ್ತಿದೆ. ನೂರಕ್ಕೂ ಮಿಕ್ಕಿ ಮನೆಗಳಲ್ಲಿ ಕಂಚಿನ ಕೊಂಬುಗಿಂಡಿ ಅಟ್ಟದಿಂದ ಕೆಳಗೆ ಇಳಿದಿವೆಯಂತೆ. ಜಲಸಾಕ್ಷರತೆಯಲ್ಲಿ ಶಾಲೆಯ ಸಾಧನೆಗೆ ಅಲ್ಲಿನ ಪ್ರಸಿದ್ಧ ಪತ್ರಿಕೆ ಮಲೆಯಳ ಮನೋರಮಾ ನಗದು ಪುರಸ್ಕಾರವನ್ನು ನೀಡಿ ಬೆನ್ನುತಟ್ಟಿದೆ.
                 ಹವಾಮಾನ ಬದಲಾಗುತ್ತಿದೆ. ವಾತಾವರಣದಲ್ಲಿ ಬಿಸಿ ಏರುತ್ತಿದೆ. ಮಳೆಗಾಲದಲ್ಲೂ ಮಳೆಯ ಕಣ್ಣುಮುಚ್ಚಾಲೆ. ಬೇಸಿಗೆಯಲ್ಲಿ ಬಾವಿ, ಕೆರೆಗಳು ಬತ್ತುತ್ತಿವೆ. ಕೊಳವೆ ಬಾವಿಗಳಲ್ಲಿ ನೀರು ಪಾತಾಳ ಸೇರಿವೆ. ಕೆಲವದರಲ್ಲಿ ಗಾಳಿ ಮಾತ್ರ! ನೀರಿನ ಬರದತ್ತ ವಾಲುತ್ತಿರುವ ಬದುಕಿಗೆ ನೀರಿನ ಎಚ್ಚರ, ಜಲ ಸಾಕ್ಷರತೆ ಭವಿಷ್ಯ ಬದುಕಿಗೆ ಅನಿವಾರ್ಯ. ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ನೀರಿನ ಪಾಠವನ್ನು ಹೊಸೆದ ಮುಳಕ್ಕುನ್ನು ಶಾಲೆಯ ಸಣ್ಣ ಕೆಲಸ ಕೇರಳಕ್ಕೆ ಮಾತ್ರವಲ್ಲ, ದೇಶಕ್ಕೆ ಮಾದರಿ. ಅಧ್ಯಾಪಕರಲ್ಲಿ ಇಂತಹ ಅರಿವು ಮೂಡಿದರೆ ಎಷ್ಟೋ ದೊಡ್ಡ ಪರಿಣಾಮ ಸಾಧಿಸಬಹುದು ಎನ್ನುವುದನ್ನು ಸಾರಿದೆ.
              ಕನ್ನಾಡಿನಲ್ಲೂ ಈ ಬಾರಿ ಬರದ ನೇರ ಅನುಭವ ನೋಡಿದ್ದೇವೆ. ಕುಡಿ ನೀರಿಗೂ ಒದ್ದಾಡುವಂತಹ ಸಂಕಷ್ಟವು ಬದುಕನ್ನು ನೇವರಿಸಿದೆ. ಈ ವರುಷ ಶೈಕ್ಷಣಿಕ ಸಂಸ್ಥೆಗಳಲ್ಲಿ ನೀರಿನ ಪಾಠದ ಸಂಚಲನ ಆರಂಭವಾಗಿದೆ. ಗಿಡ ನೆಡುವ, ನೀರಿಂಗಿಸುವ ನೀರಿನ ಎಚ್ಚರ ಹೆಜ್ಜೆಯೂರಿದೆ. ಕಳೆದೆರಡು ದಶಕದಿಂದ ಜಲತಜ್ಞ  ಶ್ರೀಪಡ್ರೆಯವರು ರಾಜ್ಯದ್ಯಂತ ನೀರಿನ ಯಶೋಗಾಥೆಗಳನ್ನು, ನೀರಿನ ಎಚ್ಚರಗಳನ್ನು ಚಿತ್ರ ಸಹಿತ ಜನರ ಮುಂದೆ ಹಿಡಿದಿದ್ದರು. ಸಾಕಷ್ಟು ಮಂದಿ ಜಲಯೋಧರು ರೂಪುಗೊಂಡರು. ಮಾಧ್ಯಮಗಳು ಸ್ಪಂದಿಸಿದುವು.
               ಸುಳ್ಯ ತಾಲೂಕಿನ ಗುತ್ತಿಗಾರು ಯುವಕ ಮಂಡಲವು ಕಳೆದ ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರ ಏರ್ಪಡಿಸಿತ್ತು. ಬತ್ತಿದ ನದಿಗಳ ದರ್ಶನ, ಕುಡಿಯುವ ನೀರಿನ ಬವಣೆಯನ್ನು ಕ್ಷೇತ್ರ ದರ್ಶನದಿಂದ ತೋರಿಸಿತ್ತು.  ಕಾಡುಗಳಿಗೆ ಮಕ್ಕಳನ್ನು ಕರೆದೊಯ್ದಿತ್ತು. ನಿಸರ್ಗದ ಪಾಠವನ್ನು ಮಾಡಿತ್ತು. ಯುವಕ ಮಂಡಲಗಳು ತಮ್ಮ ಚಟುವಟಿಕೆಗಳಲ್ಲಿ ಜಲಸಾಕ್ಷರತೆಯನ್ನೂ ಹಮ್ಮಿಕೊಳ್ಳಬಹುದು ಎಂದು ಗುತ್ತಿಗಾರು ಯುವಕ ಮಂಡಲ ತೋರಿದೆ. ಅತ್ತ ಶಿರಸಿಯ ಶಿವಾನಂದ ಕಳವೆ ಸಾರಥ್ಯದ 'ಕಾನ್ಮನೆ'ಯಲ್ಲಿ ನೀರಿನ ಪಾಠ ನಿರಂತರ.
                ಯಾವುದೇ ಸದ್ದು ಮಾಡದೆ ನೀರಿನ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ ನೂರಾರು ಜಲಯೋಧರ ಪರಿಶ್ರಮ ಅಜ್ಞಾತ. ಮನಸ್ಸು ಮಾಡಿದರೆ ಕನ್ನಾಡಿನ ಶಾಲೆಗಳಲ್ಲೂ ಜಲ ಸಾಕ್ಷರತೆಯ ಥಿಯರಿ ಮತ್ತು ಪ್ರಾಕ್ಟಿಕಲ್ ಎರಡನ್ನೂ ಮಾಡಬಹುದು. ಕೇಳುವ ಮಕ್ಕಳಿದ್ದಾರೆ. ಅನುಷ್ಠಾನಿಸುವ ಹೆತ್ತವರಿದ್ದಾರೆ. ಆದರೆ ಹೇಳಿ ಕೊಡುವ ಅಧ್ಯಾಪಕರು ಬೇಕಾಗಿದ್ದಾರೆ!
(ಉದಯವಾಣಿ/ನೆಲದ ನಾಡಿ/೨-೯-೨೦೧೬)
  

Thursday, September 1, 2016

ಹಲಸಿಗೆ 'ರಾಯಭಾರಿ' ಯೋಗ


             ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ ಶ್ರೀ ಪಡ್ರೆಯವರು ಈಚೆಗೆ 'ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ' ಪುರಸ್ಕಾರ ಪಡೆದರು. ಕೇರಳದ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಜಾಕ್ ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಶಾಂತಿಗ್ರಾಮ ಸಂಸ್ಥೆಗಳು ಪ್ರಶಸ್ತಿಯನ್ನು ಆಯೋಜಿಸಿದ್ದುವು. ಈ ಸುದ್ದಿಯು ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿದಾಡಿತು. ಹಿತ್ತಿಲಿನ ಹಲಸಿನ ಪರಿಮಳ ಕಡಲಾಚೆಯೂ ಬೀರಿತು. ಈ ಎಲ್ಲಾ ಖುಷಿಯ ಹಿಂದೆ ಶ್ರೀ ಪಡ್ರೆಯವರ ಮಾಹಿತಿ ಜಾಲಾಡುವಿಕೆಯ ಶ್ರಮ ಅಜ್ಞಾತ.
             'ಅಡಿಕೆ ಪತ್ರಿಕೆ'ಯ ಮೂಲಕ ನಿರಂತರ ಹಲಸಿನ ಕಥನ. ದೇಶ, ವಿದೇಶಗಳ ಮಾಹಿತಿ. ಮೌಲ್ಯವರ್ಧನೆಯ ಗಾಥೆ. ಉದ್ದಿಮೆಗಳ ಪರಿಚಯ. ಹಳ್ಳಿ ಯಶದ ಪ್ರಸ್ತುತಿ. ರುಚಿಗಳ ದಾಖಲಾತಿ. ಹಲಸು ಪ್ರೇಮಿಗಳ-ಉದ್ದಿಮೆದಾರರ ಕಂಪೆನಿಯ ಜತೆ ಸಂಪರ್ಕ. ಪಂಚತಾರಾ ಹೋಟೆಲಿನ ಟೇಬಲ್ ಮೇಲೆ ಇಂದು ಹಲಸಿನ ಪರಿಮಳ ಬೀರಿದೆಯಾದರೆ ಪಡ್ರೆಯವರ ಯೋಜಿತ ಸಂಪರ್ಕಗಳು ಕಾರಣ. ದೂರದ ಹವಾಯಿ ದ್ವೀಪದ ಕೆನ್ ಕನ್ನಾಡಿಗೆ ಬಂದಿರುವುದು ಹಲಸಿನ ಬೆನ್ನೇರಿ! ಆಸ್ಟ್ರೇಲಿಯಾದ ಜ್ಯೂಲಿನ್ ಫ್ಯಾಂಗ್ ಭಾರತದಲ್ಲಿ ಹಲಸು ಹಾಳಾಗುತ್ತಿರುವುದನ್ನು ನೋಡಿ ಮರುಗಿ 'ಅದಕ್ಕೊಂದು ದಾರಿ ತೋರಿಸಬೇಕು' ಎನ್ನುವ ಆಶಯದಿಂದ ಕರಾವಳಿಗೆ ಓಡಿ ಬಂದರು. ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆನ್ ಮೇರಿ ರ್ಯೂ ಈಗ ಮಂಗಳೂರಿಗರಂತೆ ಪರಿಚಿತರು!
            ಕೇರಳದ ವಯನಾಡಿನ 'ಉರವು' ಸಂಸ್ಥೆಯು ಮೊದಲಿಗೆ ಹಲಸು ಮೇಳ ಮಾಡಿತು. ಅದೇ ಜಾಡಿನಲ್ಲಿ ಸಾಗಿದ ಮೇಳದ ವಿನ್ಯಾಸವು ಕನ್ನಾಡಲ್ಲೂ ಪಸರಿಸಿತು. ಎಲ್ಲಿಯವರೆಗೆ ಅಂದರೆ ಕೃಷಿ ವಿಜ್ಞಾನ ಕೇಂದ್ರಗಳಂತಹ ಸರಕಾರಿ ವ್ಯವಸ್ಥೆಯ ಫೈಲಿನೊಳಗೂ ನುಗ್ಗಿತು. ವರುಷಕ್ಕೊಮ್ಮೆ ಕಾಲಾವಧಿಯಾಗಿ ಮೇಳ ನಡೆಸುವ ತಿಂಗಳನ್ನು ಗೊತ್ತು ಮಾಡಿತು. ವಿಶ್ವವಿದ್ಯಾಲಯದ ವರಿಷ್ಠರೂ ಸ್ಪಂದಿಸಿದರು. ಕೃಷಿ ವಿವಿಯ ಆಗಿನ ಕುಲಪತಿ ನಾರಾಯಣ ಗೌಡರ ಉತ್ಸಾಹದಿಂದ ಹಲಸು ಬೆಳೆಗಾರರ ಸಂಘ ರೂಪುಗೊಂಡಿತ್ತು.
            ಹಲಸಿನ ಸುದ್ದಿಗೆ, ಸದ್ದಿಗೆ ಈಗ ಎಂಟು ವರುಷ. ಆರಂಭದಲ್ಲಿದ್ದ 'ನಿಷ್ಪ್ರಯೋಜಕ' ಹಣೆಪಟ್ಟಿ ಕಾಣಿಸುತ್ತಿಲ್ಲ! ಹಲಸಿಗೂ ಮಾನವಿದೆ ಎಂಬ ಅರಿವು ಮೂಡಿದೆ. ಒಂದು ಕಾಲಘಟ್ಟದ ಬಡತನಕ್ಕೆ ಹೆಗಲು ಕೊಟ್ಟ ಹಲಸು ಅಲಕ್ಷ್ಯವಾಗಿತ್ತು. ಯಾವಾಗ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತಿಗೆ ವಿಷಯವಾಯಿತೋ, ಅಂದಿನಿಂದ ನಾಲಗೆ ತುದಿಯ ಮಾತಿಗೆ ವಸ್ತುವಾಯಿತು. ಬಗೆಬಗೆ ರುಚಿಯ ದರ್ಶನವಾಗತೊಡಗಿತು.
            ಎಷ್ಟೋ ಸಲ ದೂರದ ಸುದ್ದಿಗಳು ಸ್ಥಳೀಯವಾಗಿ ಪರಿಣಾಮ ಬೀರುತ್ತದೆ. ಎತ್ತಿ ಹೇಳುವಂತಹ ಅಭಿವೃದ್ಧಿ ಕಾಣದಿದ್ದರೂ, ಒಂದು ರೀತಿಯ ತಂಗಾಳಿ ಸಂಚಲನ ಆಗುತ್ತಲೇ ಇರುತ್ತದೆ. ಊಟದ ಬಟ್ಟಲಿಗೆ, ಸಮಾರಂಭಗಳ ಭೋಜನದ ಎಲೆಗೆ, ತಿಂಡಿ ತಟ್ಟೆಗೆ ಒಂದಾದರೂ ಹಲಸು ಐಟಂ ಅನಿವಾರ್ಯ ಅಂತ ಕಂಡು ಬಂದಿದ್ದರೆ ಅದಕ್ಕೆ ಈ ಆಂದೋಳನಗಳೇ ಕಾರಣ. ಹಲಸು ಮೇಳಗಳಲ್ಲಿ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಹಲಸಿನ ಉತ್ಪನ್ನಗಳನ್ನು ಕಾಣಬಹುದು. ಹಲಸಿನ ರುಚಿ ಗೊತ್ತಿದ್ದ, ಹೊಸ ರುಚಿ ತಯಾರಿಸುವ ಉತ್ಸಾಹವಿದ್ದ ನೂರಾರು ಹೆಣ್ಮಕ್ಕಳಿಗಿಂದು ಹಲಸಿನ ಪರಿಮಳ ಬದುಕು ನೀಡಿದೆ.
           ಅಡಿಕೆ ಪತ್ರಿಕೆಯ ಪ್ರೇರಣೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಉಬರಿನಲ್ಲಿ 'ಹಲಸು ಸ್ನೇಹಿ ಕೂಟ' ರೂಪುಗೊಂಡಿತು. ಬಂಟ್ವಾಳದಲ್ಲಿ 'ಹಲಸು ಪ್ರೇಮಿ ಕೂಟ' ಅಸ್ತಿತ್ವಕ್ಕೆ ಬಂತು. ಕೇರಳದಲ್ಲಿ ಹಲಸಿನ ಉತ್ಪನ್ನಗಳನ್ನು ಜನರಿದ್ದೆಡೆಗೆ ತಲಪಿಸುವ 'ಚಕ್ಕವಂಡಿ' (ಹಲಸಿನ ಬಂಡಿ) ಓಡುತ್ತಿದೆ. ಶಾಲೆಗಳಲ್ಲಿ ವರುಷಕ್ಕೊಮ್ಮೆಯಾದರೂ ಹಲಸಿನ ದಿನವನ್ನು ಆಚರಿಸಲಾಗುತ್ತಿದೆ. ಹಲಸಿನ ಸಂಸ್ಕ್ರರಣೆಯನ್ನು ಕಲಿಸಿಕೊಡುವ ಸಂಪನ್ಮೂಲ ವ್ಯಕ್ತಿಗಳು ತಯಾರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಮಿರಿಯಮ್ ಎಂಬ ಮಹಿಳೆ ಟ್ರಕ್ಕಿನಲ್ಲಿ 'ಲಾ ಜಾಕಾ ಮೊಬೈಲ್' ಎನ್ನುವ ಹೆಸರಿನಲ್ಲಿ ಹಲಸಿನ ಉತ್ಪನ್ನಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಶ್ರೀ ಪಡ್ರೆಯವರ ಹಲಸಿನ ಬಗೆಗಿನ ಮಾಹಿತಿ ಆಂದೋಳನ, ಹಲಸಿನ ಕೆಲಸಗಳು ತನಗೆ ಸ್ಫೂರ್ತಿ ನೀಡಿದೆ ಎನ್ನುತ್ತಾರೆ, ಮಿರಿಯಮ್.
            ಉಬರು ಹಲಸು ಸ್ನೇಹಿ ಕೂಟದ ವಿ.ಕೆ.ಶರ್ಮರ ಮನೆಯಲ್ಲಿ (2011) ನಡೆದ 'ರುಚಿ ನೋಡಿ ತಳಿ ಆಯ್ಕೆ'ಯೆಂಬ ಮನೆಯಂಗಳದ ಕಲಾಪವು ಐದಾರು ವರುಷಗಳಲ್ಲೇ ಹಲಸಿನ ತೋಟವನ್ನು ಎಬ್ಬಿಸುವ ತನಕ ಜನರನ್ನು ಎಬ್ಬಿಸಿತು. ಉತ್ತಮ ಗುಣಮಟ್ಟದ ಸ್ಥಳೀಯ ಹಣ್ಣುಗಳನ್ನು ಗೊತ್ತು ಮಾಡಿ, ಅವುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸಿತು. ದೂರದೂರಿನ ಹಣ್ಣುಗಳ ರುಚಿಯನ್ನು ಪರಿಚಯಿಸಿತು. ಕಸಿ ಗಿಡಗಳತ್ತ ಜನರ ಒಲವು ಹೆಚ್ಚಾಯಿತು. ಇನ್ನೇನು, ಒಂದೆರಡು ವರುಷದಲ್ಲಿ ಊರಿನ, ಹೊರ ಊರಿನ ತಳಿಗಳು ಫಲ ಕೊಡಬಹುದು.
            ಹಲಸು ಸ್ನೇಹಿ ಕೂಟವು ಈಚೆಗೆ ತನ್ನ ಸದಸ್ಯ ಕುಟುಂಬವನ್ನು ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ ಸೇರಿಸಿತು. ಹಲಸಿನ ಒಂದೊಂದು ಐಟಂ ತಯಾರಿಸಿ ತರಬೇಕೆನ್ನುವ ಶರ್ತ. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಕುಟುಂಬಗಳು ಭಾಗವಹಿಸಿದ್ದರು. ಅಬ್ಬಾ..... ನಲವತ್ತಕ್ಕೂ ಮಿಕ್ಕಿದ ವಿವಿಧ ರುಚಿಯ ಹಲಸಿನ ಐಟಂಗಳು!  ಹಲಸಿನ ಬೀಜದ ಚಟ್ನಿಪುಡಿ, ಬೋಂಡ, ಬರ್ಫಿ, ಪರೋಟ, ಉಪ್ಕರಿ; ಹಲಸಿನ ಹಣ್ಣಿನ ಇಡ್ಲಿ, ಕೇಸರಿಬಾತ್, ತುಪ್ಪ, ತುಕುಡಿ, ಸಕ್ಕರೆ ಬೆರಟಿ, ಹಲಸಿನ ಕಾಯಿಯ ಮತ್ತು ಹಣ್ಣಿನ ಹಲ್ವ...
           ಸದ್ದಿಲ್ಲದ ಕಾರ್ಯಕ್ರಮ. ಐದಾರು ವರುಷದ ಹಲಸಿನ ಕಾರ್ಯಕ್ರಮಗಳ ಫಲಶ್ರುತಿ. ಅಮ್ಮಂದಿರ ಮನಸ್ಸಿನೊಳಗೆ ಹಲಸಿನ ಪರಿಮಳ ಇಳಿದರೆ, ಅದು ಅಡುಗೆ ಮನೆ ಪ್ರವೇಶಿಸುವುದು ಖಚಿತ. ಇವೆಲ್ಲಾ ದೊಡ್ಡ ಮಟ್ಟದಲ್ಲಿ ಮಾಡಿದರೆ ಖಂಡಿತಾ ಮಾರಿಹೋಗುವಂತಹ ರುಚಿ, ಶುಚಿವುಳ್ಳವು. ಮಾರುಕಟ್ಟೆ ಅಲ್ಲದಿದ್ದರೂ ಈ ರುಚಿಗಳು ಊಟದ ಬಟ್ಟಲಿನಲ್ಲಿ ಸಿಗುವಂತಿರಬೇಕು. ಹೊಸ ಹೊಸ ರುಚಿಗಳ ಅನ್ವೇಷಣೆಯ ಮನಃಸ್ಥಿತಿ ಇದೆಯಲ್ಲಾ, ಒಂದು ಆಂದೋಳನ ಕಟ್ಟಿಕೊಟ್ಟ ಫಲಶ್ರುತಿ.
ಹಿತ್ತಿಲಿನ ಹಲಸು ಅಂಗಳಕ್ಕಿಳಿದು, ಜಗಲಿಯೇರಿ, ದೇಶ ಸುತ್ತಾಡಿ, ಕಡಲಾಚೆಗೂ ಹಾರಿ 'ಅಂತಾರಾಷ್ಟ್ರೀಯ ರಾಯಭಾರಿ'ಯೊಬ್ಬರನ್ನು ರೂಪಿಸಿತು ಎಂದರೆ ಒಟ್ಟೂ ಆಂದೋಳನದ ಯಶ.
(ಹೊಸದಿಗಂತ ಅಂಕಣ/ಮಾಂಬಳ/೧೦-೮-೨೦೧೬)

ಊಟದ ಮೇಜಿಗೆ ಜಿಗಿದ ರಂಬುಟಾನ್


              ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ 'ಅಮುಲ್' ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್ನಿಂದ ನೂರು ಲೀಟರ್ವರೆಗೂ ಹಾಲು ಉತ್ಪಾದಿಸುವ ಹೈನುಗಾರರು ಒಂದೇ ಸೂರಿನಡಿ ಬರುವಂತಾಯಿತು. ಈ ವ್ಯವಸ್ಥೆಯು ನಗರ, ಹಳ್ಳಿಗಳಲ್ಲಿ ಜನಸ್ವೀಕೃತಿ ಪಡೆಯಿತು. ಇಂದು ಹಾಲು ಉತ್ಪಾದಕರ ಸಹಕಾರಿ ಸೊಸೈಟಿಗಳು ಬದುಕಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿವೆ. ಇದೇ ರೀತಿಯ ವ್ಯವಸ್ಥೆಗಳು ಹಣ್ಣು, ತರಕಾರಿ ಮಾರಾಟಕ್ಕೂ ರೂಪುಗೊಳ್ಳಬೇಕು - ಕಾಸರಗೋಡು ಜಿಲ್ಲೆಯ ಕೃಷಿಕ ಡಾ.ಚಂದ್ರಶೇಖರ ಚೌಟರ ಮನದಿಂಗಿತ.
               ಚೌಟರು ರಂಬುಟಾನ್ ಹಣ್ಣನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಮಲೇಶ್ಯಾ ಮೂಲದ 'ರಂಬುಟಾನ್' ಬಹುತೇಕರಿಗೆ ಗೊತ್ತು. ಕನ್ನಾಡಿಗೆ ಮೂರುವರೆ ದಶಕದ ಹಿಂದೆಯೇ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸರು ಪರಿಚಯಿಸಿದ್ದರು. ತಾನು ಬೆಳೆದು, ಅಭಿವೃದ್ಧಿಪಡಿಸಿದ ಬಳಿಕವೇ ಕೃಷಿಕರಿಗೆ ಹಂಚಿದರು.  ಮಾರುಕಟ್ಟೆಯಲ್ಲಿ ಕಿಲೋಗೆ ಇನ್ನೂರು ರೂಪಾಯಿ ಏರುದರವಿದ್ದರೂ ಕೊಳ್ಳುಗರಿದ್ದಾರೆ. ಮ್ಹಾಲ್ಗಳಲ್ಲಿ ಮುನ್ನೂರು ರೂಪಾಯಿ ಮೀರುವುದಿದೆ. ಹಣ್ಣು ತಿನ್ನುವ ಅಭ್ಯಾಸವಿದ್ದವರು ರಂಬುಟಾನ್ ಹಣ್ಣನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
                ಮೂರು ವರುಷದ ಹಿಂದೆ ಚೌಟರು ಕರಾವಳಿಯ ಜಾಕೋಬ್ ಅವರ ರಂಬುಟಾನ್ ತೋಟಕ್ಕೆ ಭೇಟಿ ನೀಡಿದ್ದರು. ಆಗ ಗಿಡದಲ್ಲಿ ಹಣ್ಣುಗಳು ತೊನೆಯುವ ಋತು. ತೋಟದ ಸೌಂದರ್ಯ, ಹಣ್ಣಿನ ರುಚಿ, ನೋಟ ಮತ್ತು ಸ್ವಲ್ಪ ವಿಶೇಷವೇ ಅನ್ನಬಹುದಾದ ಹೊಸ ತಳಿಯು ಚೌಟರನ್ನು ಮೋಡಿ ಮಾಡಿತು. ರಂಬುಟಾನಿನ ತೋಟವೆಬ್ಬಿಸುವ ಕನಸಿಗೆ ಬೀಜಾಂಕುರ. ರಂಬುಟಾನ್ ಕೃಷಿಯ ಪ್ರಾಕ್ಟೀಸಸನ್ನು ಜಾಕೋಬ್ ಕಾಲಕಾಲಕ್ಕೆ ಸೂಚಿಸಿದರು. ಕೃಷಿಯ ಸೂಕ್ಷ್ಮಗಳನ್ನು ತಿಳಿಸಿದರು. ಪ್ರೋತ್ಸಾಹ ನೀಡಿದರು. ಹೀಗಾಗಿ ನನಗೆ ಸಣ್ಣ ಮಟ್ಟಿಗೆ ಹಣ್ಣಿನ ತೋಟವನ್ನು ರೂಪಿಸಲು ಸಾಧ್ಯವಾಯಿತು - ತನ್ನ ಹಣ್ಣಿನ ತೋಟದ ಕಳೆದ ದಿನಗಳನ್ನು ನೆನೆಯುತ್ತಾರೆ ಡಾ.ಚೌಟರು.
              ಕೇರಳದ ಪ್ರಸಿದ್ಧ ನರ್ಸರಿಯೊಂದರಿಂದ ಗಿಡಗಳ ಖರೀದಿ. ಕಣ್ಣು ಕಸಿಯಿಂದ ಅಭಿವೃದ್ಧಿ ಪಡಿಸಿದ ತಳಿ.   ಇದರ ಹಣ್ಣುಗಳು ಉರುಟು. ಉತ್ತಮ ಗಾತ್ರ. ಬೀಜದಿಂದ ಸುಲಭವಾಗಿ ಪಲ್ಪ್ ಬಿಟ್ಟುಕೊಡುವ ಗುಣ. ಕಳೆದ ವರುಷ ಸಣ್ಣ ಪ್ರಮಾಣದಲ್ಲಿ ರಂಬುಟಾನ್ ಮಾರುಕಟ್ಟೆ ಮಾಡಿದ್ದರು. ಈ ಬಾರಿ ಬೆಳೆಯೂ, ಬೆಲೆಯೂ ಉತ್ತಮವಾಗಿದೆ. ಕಿಲೋಗೆ 220-250 ರೂಪಾಯಿ ತನಕ ಮಾರಿಹೋಗುತ್ತಿದೆ.  ನೇರ ಮಾರಾಟದಿಂದ ಇಷ್ಟು ಮೊತ್ತವೂ ಕೃಷಿಕನಿಗೆ ದೊರಕುತ್ತಿರುವುದು ಗಮನಾರ್ಹ. ಚೌಟರೊಂದಿಗೆ ಸಹೋದರರಾದ ಮನೋಹರ ಚೌಟ, ಪ್ರಭಾಕರ ಚೌಟರು ಕೈಜೋಡಿಸುತ್ತಿದ್ದಾರೆ.
              ಹಿರಿಯಡ್ಕದ ನಟರಾಜ್ ಹೆಗ್ಡೆ, ಉಪ್ಪಿನಂಗಡಿಯ ಜಾಕೋಬ್, ಕೇರಳ ಕಲ್ಪೆಟ್ಟಾದ ಅಹಮದ್ - ಇವರೆಲ್ಲಾ ರಂಬುಟಾನ್ ಬೆಳೆದು, ಮಾರುಕಟ್ಟೆಯ ಜಾಲವನ್ನು ಹೊಂದಿದವರು. ಚೌಟರು ಸ್ವತಃ ಅಡಿಕೆ, ತೆಂಗು ಬೆಳೆಗಾರರು. ಇವರೆಲ್ಲರ ಸ್ಫೂರ್ತಿಯಿಂದಾಗಿ ಸ್ವತಃ ಬೆಳೆಯುವ ರಿಸ್ಕ್ ತೆಕ್ಕೊಂಡರು. ಮಾರುಕಟ್ಟೆಯ ಸಮಸ್ಯೆಯಿಲ್ಲ. ದರದಲ್ಲಿ ಏರುಪೇರಾಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲರದು ಒಂದೇ ಬ್ರಾಂಡಿನಡಿಯಲ್ಲಿ ಮಾರುಕಟ್ಟೆ ಮಾಡುವ ಮಾತುಕತೆ ನಡೆಯುತ್ತಿವೆ. ಈಗ ಚೌಟರ ತೋಟದ ರಂಬುಟಾನ್ ಕಲ್ಲಿಕೋಟೆ, ಪಯ್ಯನ್ನೂರು, ಮಂಗಳೂರು, ಮೈಸೂರು, ಬೆಂಗಳೂರು, ಮುಂಬಯಿ, ಪೂನಾ ವರೆಗೂ ಸಂಚಾರ ಮಾಡಿದೆ! ಎನ್ನಲು ಖುಷಿ.
               ರಂಬುಟಾನ್ ಕೃಷಿಯಲ್ಲಿ ಹತ್ತಾರು ತೊಡಕುಗಳು. ಚೌಟರು ಸ್ವಾನುಭವ ಹೇಳುತ್ತಾರೆ, ಗಿಡ ಬೆಳೆದು ಹೂ ಬಿಟ್ಟಾಗ ಗಂಡು ಹೂವಿನ ಕೊರತೆ. ಪರಾಗಸ್ಪರ್ಶ ಚೆನ್ನಾಗಿ ಆಗದಿರುವುದು. ಮಾರುಕಟ್ಟೆಯಲ್ಲಿ ಸಿಗುವ ಪೊಟೇಶನ್ನು ಬಳಸಿದರೆ ಗಿಡ ತಾಳಿಕೊಳ್ಳುವುದಿಲ್ಲ. ಸಾವಯವ ಗೊಬ್ಬರ ಅಗತ್ಯ. ಕಾಲಕಾಲಕ್ಕೆ ಪ್ರೂನಿಂಗ್ ಅತ್ಯಗತ್ಯ. ಅಲ್ಲದೆ ಕೆಲವೊಂದು ಟ್ರೀಟ್ಮೆಂಟ್ಗಳಿಗೆ ಗಿಡಗಳನ್ನು ಒಳಪಡಿಸಬೇಕಾಗುತ್ತದೆ. ಇದೇನೂ ದೊಡ್ಡ ಬ್ರಹ್ಮವಿದ್ಯೆಯಲ್ಲ. ಎಲ್ಲರೂ ಕಲಿತುಕೊಳ್ಳಬಹುದು. ಆಸಕ್ತಿ ಬೇಕಷ್ಟೇ.
              ಚೌಟರ ತೋಟದಲ್ಲಿ ಮೊದಲೇ ರಂಬುಟಾನ್ ಮರಗಳಿದ್ದುವು. ಆಪ್ತರಿಗೆ, ಸ್ನೇಹಿತರಿಗೆ ಹಂಚಿ ಖುಷಿ ಪಟ್ಟದ್ದರು. ಸ್ಥಳೀಯವಾಗಿ ಮಾರುಕಟ್ಟೆ ಯತ್ನ ಮಾಡಿದ್ದರು. ಸಾಕಷ್ಟು ಮಂದಿಗೆ ಹಣ್ಣಿನಿಂದ ಗುಳ ಬೇರ್ಪಡಿಸುವ ವಿಧಾನವನ್ನೂ ಹೇಳಿಕೊಟ್ಟಿದ್ದರು. ಯಾವಾಗ ಉತ್ತಮ ಗುಳ ಹೊಂದಿರುವ, ಬೇಗ ಬೆಳೆಯುವ ಹೊಸ ತಳಿ ಪರಿಚಯವಾಯಿತೋ ಅದಕ್ಕೆ ಹೊಂದಿಕೊಂಡರು. ಚೌಟರು ತೆಂಗಿನ ಮಧ್ಯೆ ರಂಬುಟಾನ್ ಬೆಳೆದಿದ್ದಾರೆ. ಎರಡು ತೆಂಗಿನ ಗಿಡಗಳ ಮಧ್ಯೆ ಒಂದು ರಂಬುಟಾನ್ ಗಿಡದಂತೆ ಹಬ್ಬಿಸಿದ್ದಾರೆ. ಅಡಿಕೆ ಗಿಡಗಳ ಅಂತರವನ್ನು ಬದಲಿಸಿದರೆ ಅಡಿಕೆ ಮಧ್ಯೆಯೂ ರಂಬುಟಾನ್ ಬೆಳೆಯಬಹುದೆನ್ನುವ ವಿಶ್ವಾಸ ಅವರದು.
              ಈ ತಳಿಯದ್ದು ನನ್ನ ತೋಟದಲ್ಲಿ ಮೇ ತಿಂಗಳಲ್ಲಿ ಹಣ್ಣು ಬಿಡಲು ಶುರುವಾಗಿದೆ. ಜುಲೈಯೊಳಗೆ ಮುಗಿದುಹೋಗುತ್ತದೆ. ಬೇರೆಡೆ ಇನ್ನೂ ಹಣ್ಣು ಶುರುವಾಗಿಲ್ಲ. ನಮ್ಮಲ್ಲಿ ಮೇ ತಿಂಗಳಿನಲ್ಲಿ ಹಣ್ಣು ಸಿಕ್ಕಿದೆ. ಆಗ ಹಣ್ಣಿನ ಋತು ಅಲ್ಲ. ಹಾಗಾಗಿ ದರವೂ ಹೆಚ್ಚು ಸಿಕ್ತು. ಆದರೆ ಬೇಗ ಯಾಕಾಯಿತು ಎನ್ನುವುದು ಕುತೂಹಲ. ಕಳೆದ ವರುಷ ಹಣ್ಣು ಕಿತ್ತ ಬಳಿಕ ಪ್ರೂನಿಂಗ್ ಮಾಡಿದ್ದೆ. ಬಹುಶಃ ಅದೇ ಕಾರಣವೋ ಏನೋ. ಸರಿಯಾಗಿ ಹೇಳಲು ಮುಂದಿನ ವರುಷದ ತನಕ ಕಾಯಬೇಕು, ಎನ್ನುತ್ತಾರೆ.
              ಇತರ ದೇಶಗಳಲ್ಲಿ ಹಣ್ಣು ತಿನ್ನವುದು ಆಹಾರದ ಭಾಗ. ಕನ್ನಾಡಿನಲ್ಲೂ ಹಣ್ಣಿಗೆ ಬೇಡಿಕೆಯಿದೆ. ಎಲ್ಲಾ ಋತುಗಳಲ್ಲೂ ಎಲ್ಲಾ ಹಣ್ಣುಗಳು ಲಭ್ಯ. 'ಟೇಬಲ್ ಫ್ರುಟ್' ಆಗಿ ಬಳಸುವುದು ಆಧುನಿಕ ಜೀವನ ಶೈಲಿಯ ಒಂದು ಭಾಗವಾಗಿದೆ. ನಗರ ಯಾಕೆ, ಹಳ್ಳಿಗಳಲ್ಲೂ ಹಣ್ಣುಗಳನ್ನು ತಿನ್ನುವ ಅಭ್ಯಾಸವಿದೆ. ಯಾವುದೇ ನರ್ಸರಿಗೆ ಹೋದರೂ ಹಣ್ಣಿನ ಗಿಡಗಳಿಗೆ ಬೇಡಿಕೆ. ಅದರಲ್ಲೂ ಹೊಸ ತಳಿಯದ್ದಕ್ಕೆ ಹೆಚ್ಚು ಒತ್ತು. ಈಗ ರಂಬುಟಾನಿಗೂ ಟೇಬಲ್ಲಿನಲ್ಲಿ ಜಾಗ!
              ಕೇರಳದ ತಳಿಪರಂಬದ ನರ್ಸರಿಗೆ ಚೌಟರು ಹೋಗಿದ್ದರು. ಒಂದು ರಂಬುಟಾನ್ ಗಿಡಕ್ಕೆ ಐದುಸಾವಿರ ರೂಪಾಯಿ! ಎರಡು ಸಾವಿರ ರೂಪಾಯಿಗೆ ಒಂದು ಮಾವಿನ ಗಿಡ! ಚೆಂಪೆಡಕ್ ಗಿಡಕ್ಕೆ ಆರುನೂರು ರೂಪಾಯಿ. ಡ್ಯೂರಿಯನ್ನಿಗೆ ಒಂದೂವರೆ ಸಾವಿರ. ಪೇರಳೆಗೆ ಇನ್ನೂರೈವತ್ತು ರೂಪಾಯಿ. ಇಷ್ಟು ಬೆಲೆಯಿದ್ದರೂ 'ರೇಟ್ ಹೆಚ್ಚಾಯಿತು' ಎಂದು ತಗಾದೆ ಮಾಡದೆ ತರುವವರ ಸಂಖ್ಯೆ ದೊಡ್ಡದಿದೆ! ತಂದ ಮೇಲೆ ಏನಾಗಿದೆ ಎನ್ನುವುದು ಬೇರೆ ಮಾತು!
               ಸಣ್ಣ ಪ್ರಮಾಣದಲ್ಲಿ ಹಣ್ಣುಗಳನ್ನು ಬೆಳೆಯುವ ಅಭ್ಯಾಸ ಹಬ್ಬುತ್ತಿದೆ. ಐದಾರು ರಂಬುಟಾನ್, ಮ್ಯಾಂಗೋಸ್ಟೀನ್, ಮಾವು, ಹಲಸು.. ಗಿಡಗಳು. ಸ್ವತಃ ಬೆಳೆದು, ತಿಂದು, ಹಂಚಿ ಉಳಿದುದನ್ನು ಹತ್ತಿರದ ಅಂಗಡಿಗಳಿಗೆ ಮಾರುತ್ತಾರೆ. ಅವರಿಗೇನೋ ಕೈಕಾಸು ಬಂತು. ಆದರೆ ಅಪ್ಪಟ ಮಾರುಕಟ್ಟೆಗೆ ಇಂತಹ ಮಾರಾಟದಿಂದ ಸ್ವಲ್ಪ ಮಟ್ಟಿನ ಹೊಡೆತ. ಹಾಗಾಗಿ ನೋಡಿ, ರಂಬುಟಾನ್ ಹಣ್ಣು ಕಿಲೊಗೆ ಐವತ್ತು, ನೂರು.. ಹೀಗೆ ವಿವಿಧ ದರಗಳಲ್ಲಿ ಸಿಗುತ್ತದೆ. ಹೊಸದಾಗಿ ರುಚಿ ಅನಭವಿಸುವವರಿಗೆ, ಹೊಸ ರುಚಿಯದ್ದು ಇನ್ನೊಂದು ಇದೆ ಎಂದು ಗೊತ್ತಾಗುವಲ್ಲಿಯ ತನಕ ಇಂತಹ ಮಾರಾಟ ಆಗುತ್ತಾ ಇರುತ್ತದೆ. ಬೆಳೆದವರಿಗೆ ಅಷ್ಟೊಂದು ಮಾರುಕಟ್ಟೆಯ ಜ್ಞಾನವಿಲ್ಲ, ಅಧ್ಯಯನವಿಲ್ಲ. ಮಾಹಿತಿಯಿಲ್ಲ - ಮಾರುಕಟ್ಟೆಯ ವಿವಿಧ ರೀತಿಗಳನ್ನು ಅಧ್ಯಯನಾತ್ಮಕವಾಗಿ ಚೌಟರು ವಿಶ್ಲೇಷಿಸುತ್ತಾರೆ.
               ಅಡಿಕೆಯ ದರವು ಆತಂಕದ ಸ್ಥಿತಿಯಲ್ಲಿದೆ. ತೆಂಗು ಯಾರಿಗೂ ಬೇಡವಾಗಿದೆ. ಪರ್ಯಾಯ ಬೆಳೆಗಳತ್ತ ಯೋಚನೆ ಬೇಕಾಗಿದೆ. ಎಲ್ಲಾ ಸಭೆಗಳಲ್ಲಿ, ಕೃಷಿಕರ ಮಾತುಕತೆಯಲ್ಲಿ ಆಗಾಗ್ಗೆ ಚರ್ಚಿತವಾಗುವ ವಿಚಾರ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ, ತೆಂಗಿಗೆ ಪರ್ಯಯ ಬೆಳೆಯಾಗಿ ರಂಬುಟಾನ್ ಗೆಲ್ಲಬಹುದು, ಎನ್ನುವ ಸಂತೋಷದ ಸುದ್ದಿಯನ್ನು ಹೇಳುವ ಡಾ.ಚಂದ್ರಶೇಖರ ಚೌಟರು, ಅದರ ಇನ್ನೊಂದು ಮುಖವನ್ನೂ ಹೇಳದೆ ಬಿಡಲಿಲ್ಲ.
                ಮಾರುಕಟ್ಟೆ ವ್ಯವಸ್ಥೆಯ ರೂಪೀಕರಣ, ಮಾರುಕಟ್ಟೆ ಜಾಲ, ಸ್ಥಿರ ದರ, ಕೃಷಿ ಕ್ರಮಗಳಲ್ಲೆಲ್ಲಾ ಸವಾಲು ಇದೆ. ಗುಣಮಟ್ಟವನ್ನೂ ಕಾಪಾಡಿಕೊಳ್ಳಬೇಕು. ಹಾಗಾಗಿ ಸುಲಭದಲ್ಲಿ ಗೆಲ್ಲಲು ತ್ರಾಸ. ಸದ್ಯ ಉತ್ತಮ ವಾತಾವರಣವಿದೆ. ಭವಿಷ್ಯದಲ್ಲಿ ಹೇಗಾದೀತು ಎನ್ನುವಂತಿಲ್ಲ.  ಕಾಲವೇ ಉತ್ತರಿಸಬೇಕಷ್ಟೇ. ಇವೆಲ್ಲದರ ಜತೆ ಆಸಕ್ತಿ, ತೊಡಗಿಸುವಿಕೆ ಮತ್ತು ಆಧ್ಯಯನ ಮುಖ್ಯವಾಗುತ್ತದೆ. ಕೃಷಿಯೊಂದು ಗೆದ್ದರೆ ಅದು ಕೃಷಿಯ ಗೆಲುವು. ಸೋತರೆ ನಮ್ಮ ಸೋಲು.
(Udayavani | Nelada_nadi coloum)
    


ಜಾಬ್ ವರ್ಕಿನಲ್ಲಿ ಅಡಿಕೆ ಸುಲಿ


               ಕೃಷಿಕರ ಹೆಮ್ಮೆಯ 'ಕ್ಯಾಂಪ್ಕೋ' ಸಂಸ್ಥೆಯು ಕೃಷಿ ಯಂತ್ರಮೇಳಕ್ಕೆ 2009ರಲ್ಲಿ ಶ್ರೀಕಾರ ಬರೆದಿತ್ತು. ನಂತರ ಜರುಗಿದ ಎರಡು ಕೃಷಿಮೇಳಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಬೆಳಕು ಚೆಲ್ಲಿತ್ತು. ಪರಿಣಾಮ ಕಣ್ಣ ಮುಂದಿದೆ. ಇಂದು ಕೃಷಿಕರ ಅಂಗಳದಲ್ಲಿ ಯಂತ್ರಗಳು ಸದ್ದು ಮಾಡುತ್ತಿವೆ.
            ಅಡಿಕೆ ಕೃಷಿಯಲ್ಲಿ ಬೋರ್ಡೋ ದ್ರಾವಣ ಸಿಂಪಡಿಸುವ, ಅಡಿಕೆ ಕೊಯ್ಯುವ ಕೆಲಸಗಳಷ್ಟೇ ಅಡಿಕೆಯನ್ನು (ಚಾಲಿ) ಸುಲಿಯುವ ಕೆಲಸವೂ ಶ್ರಮದಾಯಕ. ಈ ಕೆಲಸಕ್ಕೀಗ ಯಂತ್ರಗಳ ಅವಲಂಬನೆ. ಆರೇಳು ವರುಷಗಳಲ್ಲಿ ನೂರಾರು ಯಂತ್ರಗಳು ಆವಿಷ್ಕಾರವಾಗಿವೆ, ಅಭಿವೃದ್ಧಿಯಾಗಿವೆ. ಹೀಗೆ ಅಭಿವೃದ್ಧಿಯಾದ ಯಂತ್ರಗಳಲ್ಲಿ ಉಡುಪಿಯ 'ಯೋಜನ್ ಇಂಜಿನಿಯರಿಂಗ್ ಕೇರ್' ಯಂತ್ರವು ಅಡಿಕೆ ಸುಲಿತದ ಜಾಬ್ ವರ್ಕಿನಲ್ಲಿ ಜನಸ್ವೀಕೃತಿ ಪಡೆದಿದೆ.
            ಈ ಯಂತ್ರದಲ್ಲಿ ಜಾಬ್ ವರ್ಕ್  ಮಾಡುವ ಸುಬ್ರಾಯ ಭಟ್ ನೆಕ್ಲಾಜೆ ಹೇಳುತ್ತಾರೆ, "ವರುಷದಲ್ಲಿ ಹತ್ತು ತಿಂಗಳು ಈ ಯಂತ್ರ ಅನ್ನ ಕೊಡುತ್ತದೆ. ಕೈಯಲ್ಲಿ ಅಡಿಕೆ ಸುಲಿಯುವ ವಿಶೇಷಜ್ಞರ ಸಂಖ್ಯೆ ವಿರಳವಾಗುತಿದೆ. ಹಾಗಾಗಿ ಬಹುತೇಕ ಕೃಷಿಕರು ಯಂತ್ರವನ್ನು ಅಪೇಕ್ಷಿಸುತ್ತಿದ್ದಾರೆ." ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸನಿಹದ ಕುದ್ದುಪದವಿನವರು. ಮನೆಗೆ ಯಂತ್ರದೊಂದಿಗೆ ಬಂದು ಅಡಿಕೆ ಸುಲಿದು ಕೊಡುವ ಜಾಬ್ ವರ್ಕ್  ಕಾಯಕಕ್ಕೆ ಈಗ ಐದು ವರುಷ.
           ಸುಬ್ರಾಯ ಭಟ್ಟರು ತೊಡಗಿದ್ದು ಐವತ್ತು ಸಾವಿರ ರೂಪಾಯಿ ಮೂಲ ಬಂಡವಾಳದಿಂದ. ಆರಂಭಕ್ಕೆ ಒಂದೇ ಯಂತ್ರ. ಮೊದಲ ಹೆಜ್ಜೆಯಿಡುವಾಗ ಹೇಗಾಗುತ್ತೋ ಏನೋ ಎನ್ನುವ ಭಯ. ನಮ್ಮಲ್ಲಿಗೆ ಬನ್ನಿ ಎಂದು ಮುಂದಾಗಿ ಆದೇಶ ಕೊಟ್ಟವರೂ ಇದ್ದಾರೆ. ಹೀಗೆ ಶುರುವಾದ ಸುಬ್ರಾಯ ಭಟ್ಟರ ಅಡಿಕೆ ಸುಲಿ ಯಂತ್ರದ ಸದ್ದು ನಿಲ್ಲಲೇ ಇಲ್ಲ! ಕಾಸರಗೋಡು, ಕರಾವಳಿ ಪ್ರದೇಶದುದ್ದಕ್ಕೂ ಕೃಷಿಕರ ಮನ ಗೆದ್ದಿದ್ದಾರೆ. ಅವರಿಗಿದ್ದ ಸಾಮಾಜಿಕ ಸಂಪರ್ಕವು ಜಾಬ್ ವರ್ಕಿಗೆ  ಅನುಕೂಲವಾಯಿತು.
ಮೊದಲ ಒಂದು ವರುಷ ಪಂಜದ ಶ್ರೀದೇವಿ ಇಂಜಿನಿಯರಿಂಗ್ ಅವರ ಯಂತ್ರ, ನಂತರದ ನಾಲ್ಕು ವರುಷ ಸುಳ್ಯದ ಅಪರ್ಣಾ ಸ್ಟೀಲ್ ಇಂಡಸ್ಟ್ರೀಸ್ ಅವರ ಯಂತ್ರ. ಈಗ ಮೂನಾಲ್ಕು ತಿಂಗಳಾಯಿತಷ್ಟೇ, ಉಡುಪಿಯ 'ಯೋಜನ್ ಇಂಜಿನಿಯರಿಂಗ್ ಕೇರ್' ಯಂತ್ರ. ಹೊಸ ಯಂತ್ರವು ಗಂಟೆಗೆ ನೂರ ಐವತ್ತರಿಂದ ಇನ್ನೂರು ಕಿಲೋ ಸುಲಿಯುವ ಸಾಮಥ್ರ್ಯ.
           ಮಗ ರಾಘವೇಂದ್ರ ಬೆಂಗಳೂರಿನ ತಮ್ಮ ಉದ್ಯಮವನ್ನು ತೊರದು ತಂದೆಯ ಜಾಬ್ ವರ್ಕ್   ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಹೀಗೆ ತಂದೆ, ಮಗ ಕೃಷಿಕರ ಅಡಿಕೆ ಸುಲಿ ಅಗತ್ಯಗಳನ್ನು ಈಡೇರಿಸುತ್ತಿದ್ದಾರೆ. ಇಬ್ಬರೂ ಒಂದೊಂದು ಯಂತ್ರವನ್ನು ನಿರ್ವಹಿಸುತ್ತಾರೆ. ಸುಬ್ರಾಯ ಭಟ್ಟರ ಒಂದು ತಂಡದೊಂದಿಗೆ - ಯಂತ್ರ, ಜನರೇಟರ್, ನಾಲ್ಕು ಮಂದಿ ಸಹಾಯಕರಿದ್ದಾರೆ. 
           ಒಂದು ಕಿಲೋ ಚಾಲಿ ಅಡಿಕೆ ಸುಲಿತಕ್ಕೆ ಎಂಟರಿಂದ ಎಂಟೂವರೆ ರೂಪಾಯಿ ದರ. ಇದರಲ್ಲಿ ಲೇಬರ್, ಸಾರಿಗೆ, ಜನರೇಟರ್ ವೆಚ್ಚಗಳು ಸೇರಿತು. ಕೃಷಿಕರಲ್ಲಿ ವಿದ್ಯುತ್ ಲಭ್ಯವಿದ್ದರೆ ಅಥವಾ ಜನರೇಟರ್ ಇದ್ದರೆ ದರದಲ್ಲಿ ಒಂದು ರೂಪಾಯಿ ಕಡಿತ. ಅಡಿಕೆ ಸುಲಿದು ಯಂತ್ರಗಳ ಪ್ಯಾಕಪ್ ಆಗುವಾಗ ಲೆಕ್ಕಾ ಚುಕ್ತಾ.
            ಹಿಂದಿನ ವರುಷಗಳಲ್ಲಿ ಕೃಷಿಕರೇ ಯಂತ್ರಗಳನ್ನು ಚಾಲೂ ಮಾಡುವಾಗ ಕರೆಂಟು ಕಣ್ಣುಮುಚ್ಚಾಲೆಯಿಂದಾಗಿ ಮೋಟರು ಜಾಮ್ ಆಗಿ ಕೆಟ್ಟುಹೋದ ಘಟನೆಗಳಿವೆ. ಹೀಗೆ ಆದಾಗ ಅದನ್ನು ರಿಪೇರಿ ಮಾಡಲು ಒಂದು ವಾರ ಬೇಕು. ಅಷ್ಟು ದಿನ ಯಂತ್ರ ಸುಮ್ಮನೆ ನಿಲ್ಲುವುದು ನಷ್ಟ. ಜತೆಗೆ ರಿಪೇರಿ ಖರ್ಚು ಕೂಡಾ - ಸುಬ್ರಾಯ ಭಟ್ಟರ ಲೆಕ್ಕಾಚಾರ. ಹೊಸ ಯಂತ್ರದ ಕ್ಷಮತೆ ಇನ್ನಷ್ಟೇ ಅನುಭವಕ್ಕೆ ಬರಬೇಕಿದೆ.
            ಜಾಬ್ ವರ್ಕ್  ನಲ್ಲಿ ಎದುರಾಗುವ ಸಮಸ್ಯೆಗಳೇನು? ನಾವು ಅಡಿಕೆ ತೋಟವನ್ನು ಮಗುವಿನಂತೆ ಸಾಕುತ್ತೇವೆ. ಆದರೆ ಕೊಯಿದ ಅಡಿಕೆಯನ್ನು ಸಾಕುವುದಿಲ್ಲ! ಸರಿಯಾದ ಬಿಸಿಲಿನಲ್ಲಿ ಒಣಗಿಸಿ, ವಾರಕ್ಕೊಮ್ಮೆ ಮಗುಚುತ್ತಾ ಇರಬೇಕು. ಅಡಿಕೆಯು ಸರಿಯಾದ ಬಿಸಿಲಿನಲ್ಲಿ ಒಣಗಿದರೆ ಪಟೋರ, ಉಳ್ಳಿಗಡ್ಡೆ ಪ್ರಮಾಣ ಕಡಿಮೆಯಿರುತ್ತದೆ. ಮುಖ್ಯ ಸಮಸ್ಯೆ ಸುಲಿತದ ದರದಲ್ಲಿರುವ ಪೈಪೋಟಿ. ಜಾಬ್ ವರ್ಕ್   ಮಾಡುವವರು ತುಂಬಾ ಮಂದಿ ಇದ್ದಾರೆ. ಇವರ ಮಧ್ಯೆ ಈಜುವುದು ಜಾಣ್ಮೆಯ ಕೆಲಸ. ಭಟ್ಟರೊಂದಿಗೆ ಸಹಾಯಕರಾಗಿದ್ದವರು ಸ್ವತಂತ್ರವಾಗಿ ಜಾಬ್ ವರ್ಕ್   ಮಾಡುತ್ತಾರಂತೆ.
              ವರುಷದಿಂದ ವರುಷಕ್ಕೆ ಅಡಿಕೆ ತೋಟವು ವಿಸ್ತರಣೆಯಾಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಕಾರ್ಮಿಕರ ಸಂಖ್ಯೆ ಏರುವುದಿಲ್ಲ. ಹಾಗಾಗಿ ಯಂತ್ರದ ಮೂಲಕ ಅಡಿಕೆ ಸುಲಿಯಲು ಡಿಮಾಂಡ್ ಖಚಿತ! ಮುಂದೆ 'ವರುಷಪೂರ್ತಿ ದುಡಿಯಬೇಕಾಗಬಹುದು' ಎನ್ನುವ ದೂರದೃಷ್ಟಿಯಲ್ಲಿ ಖುಷಿ.
            ಸರಕಾರವು ಕೃಷಿಕರ ಪಂಪ್ಸೆಟ್ಟಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಜನರೇಟರ್ ಹೊಂದಿದರೆ ದುಬಾರಿ ದರ. ಹಾಗಾಗಿ ಅಡಿಕೆ ಸುಲಿ ಯಂತ್ರವನ್ನು ಚಾಲೂ ಮಾಡಲು ಪಂಪ್ಸೆಟ್ಟಿನಿಂದಲೇ ಸಂಪರ್ಕ ಪಡೆದುಕೊಳ್ಳಲು ಸರಕಾರವು ಅನುಮತಿ ನೀಡಬೇಕು. ಎನ್ನುವುದು ಭಟ್ಟರ ಆಗ್ರಹ.
            ಸುಬ್ರಾಯ ಭಟ್ಟರು ಹಿಂದೆ ಪವರ್ ಟಿಲ್ಲರಿಗೆ ಹಲ್ಲರ್ ಜೋಡಿಸಿ ಭತ್ತವನ್ನು ಮಿಲ್ ಮಾಡುವ ಜಾಬ್ವರ್ಕ್  ಮಾಡಿದ್ದರು.  ಈ ಅನುಭವ ಮುಂದೆ ಅಡಿಕೆ ಸುಲಿ ಯಂತ್ರದ ಜಾಬ್ ವರ್ಕಿಗೂ  ಅನುಕೂಲವಾಯಿತು.  (94801 01246)
(Hosadigantha|Mambala_coloum)




ಹಳ್ಳಿ ಸಂತೆಗೆ ಪಟ್ಟಣದಲ್ಲಿ ಮರುಜೀವ!



              ಮಂಗಳೂರಿನ ಸಾವಯವ ಸಂತೆಯಲ್ಲಿ ಪ್ರತಿಷ್ಠಿತ ಕುಟುಂಬವೊಂದು ಅರೆಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿ ತಿಂಗಳು ದಾಟಿಲ್ಲ, ನಂಮಗ ಬಿಳಿಯನ್ನ ಉಣ್ಣೋದೇ ಇಲ್ಲ. ಕೆಂಪಕ್ಕಿಗೆ ಒಗ್ಗಿಹೋಗಿದ್ದಾನೆ. ಎಲ್ಲಿ ಸಿಗುತ್ತೋ ಅಲ್ಲಿಗೆ ಬಂದು ಬಿಡ್ತೀವಿ, ಎಂದು ಬಿ.ಸಿ.ರೋಡಿನ ನರಸಿಂಹ ಮಯ್ಯರಿಗೆ ಫೋನಿಸಿದರು. ಕೊನೆಗೆ ಅಕ್ಕಿ ಖರೀದಿಸಿ ಒಯ್ದರು. ಆ ದಂಪತಿ ಕೆಂಪಕ್ಕಿಗಾಗಿ ಹುಡುಕಿ ಸುಸ್ತಾಗಿದ್ದರು. ಮಯ್ಯರು ಸಾವಯವ ಅಕ್ಕಿಯನ್ನು ಬೆಳೆಯುತ್ತಾರೆ. ಕನ್ನಾಡಿನಲ್ಲೆಡೆ ಸಾವಯವ ಉತ್ಪನ್ನ ಖರೀದಿ ಜಾಲದ ಸಂಪರ್ಕವಿದ್ದವರು.
              ಮಂಗಳೂರಿನ ದಂಪತಿಯ ಕೆಂಪಕ್ಕಿ ಹುಡುಕಾಟದ ಘಟನೆಯನ್ನು ಮಯ್ಯರು ಹೇಳುತ್ತಿದ್ದಂತೆ ರಾಜಧಾನಿಯ ಆ ದಿನ ನೆನಪಾಯಿತು. ಕೃಷಿ ಮೇಳದ ಸಾವಯವ ಅಕ್ಕಿಯ ಮಾರಾಟ ಮಳಿಗೆಗೆ ಐಟಿ ದಂಪತಿಗಳು ಆಗಮಿಸಿದ್ದರು. ಅವರ ಮಗನಿಗೆ ವರುಷದಿಂದ ಭೇದಿ ಸಮಸ್ಯೆ. ಹಲವು ಸಮಯ ವೈದ್ಯರಿಂದ ಚಿಕಿತ್ಸೆಯಾಗಿತ್ತು. ಮಾತ್ರೆ, ಸಿರಪ್ಗಳ ಸೇವನೆಯಿಂದ ಫಲಿತಾಂಶ ಅಷ್ಟಕ್ಕಷ್ಟೇ. ಆ ವೈದ್ಯರೇ 'ಪಾಲಿಶ್ ಮಾಡದ ಅಕ್ಕಿಯ ಅನ್ನವನ್ನು ಸೇವಿಸುವಂತೆ' ಸಲಹೆ ಮಾಡಿದ್ದರು. ಅದನ್ನು ಹುಡುಕಿ ಬಂದಿದ್ದರು.
               ಇಂತಹ ಹುಡುಕಾಟಗಳು ನಗರದಲ್ಲಿ ನಿರಂತರ. ಹಳ್ಳಿಯಲ್ಲೂ ಇಲ್ಲ ಎನ್ನುವಷ್ಟು ಧೈರ್ಯವಿಲ್ಲ. ವಿವಿಧ ರಾಸಾಯನಿಕಗಳು ಆಹಾರಗಳಲ್ಲಿ ಮಿಳಿತಗೊಂಡ ವರದಿಗಳು ರಾಚುತ್ತಲೇ ಇವೆ. ಇದರಿಂದಾಗಿ 'ನಿರ್ವಿಷ ಆಹಾರ'ದ ಅರಿವು ನಿಧಾನಕ್ಕೆ ತೆರೆದುಕೊಳ್ಳುತ್ತಿದೆ. ವರುಷದ ಹಿಂದೆ ಮ್ಯಾಗಿ ಸುದ್ದಿ ಮಾಡಿತು. ಮೈದಾದ ಒಳಸುರಿಗಳನ್ನು ಮಾಧ್ಯಮವು ಬಿಚ್ಚಿಟ್ಟಿತು. ವಿವಿಧ ರಾಸಾಯನಿಕಗಳಲ್ಲಿ ಬಲವಂತವಾಗಿ ಅದ್ದಿದ ಹಣ್ಣುಗಳ ಅಕರಾಳ ಮುಖಗಳು ಬಿತ್ತರವಾದುವು. ಈಚೆಗಂತೂ ಉಪಾಹಾರದ ಪ್ಲೇಟಿನಲ್ಲಿ ಬ್ರೆಡ್ ಕುಣಿಯುತ್ತಿದೆ! ಇವೆಲ್ಲ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎನ್ನುವ ಅರಿವಿನಿಂದ ನಿರ್ವಿಷ ಆಹಾರಗಳ ಹುಡುಕಾಟಕ್ಕೆ ತೊಡಗಿದ್ದಾರೆ, ಎನ್ನುತ್ತಾರೆ ಅಡ್ಡೂರು ಕೃಷ್ಣ ರಾವ್. ಇವರು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ.
               ಎರಡು ವರುಷವಾಯಿತು. ಬಳಗದ ತೆಕ್ಕೆಗೆ ಬಂದ ಸುಮಾರು ಆರುನೂರಕ್ಕೂ ಮಿಕ್ಕಿ ಪಟ್ಟಣಿಗರು ಸಾವಯವ ಉತ್ಪನ್ನಗಳಿಗೆ ಬದುಕನ್ನು ಹೊಂದಿಸಿಕೊಂಡಿದ್ದಾರೆ. ರಾಸಾಯನಿಕ ರಹಿತವಾದ ಕೃಷಿ ಎಂದು ಗುರುತಿಸಲ್ಪಟ್ಟ ಹತ್ತಾರು ಕೃಷಿಕರು ತರಕಾರಿ, ಹಣ್ಣು, ಸೊಪ್ಪುತರಕಾರಿ ಬೆಳೆದು ಪೂರೈಸುತ್ತಿದ್ದಾರೆ. ದೂರದೂರಿನಿಂದ ತರಿಸಿದ ಬೇಳೆ ಕಾಳುಗಳು ಕೂಡಾ ಲಭ್ಯ. ಸಾವಯವ ಕೃಷಿಕ-ಗ್ರಾಹಕ ಸರಪಳಿ ಗಟ್ಟಿಯಾಗುತ್ತಿದೆ. ನಿರ್ವಿಷ ಆಹಾರದ ಹುಡುಕಾಟದ ಟೆನ್ಶನ್ ಕಡಿಮೆಯಾಗಿದೆ. ಮಾರಾಟವಾಗುತ್ತಿಲ್ಲ ಎನ್ನುವ ಹಳ್ಳಿ ಉತ್ಪನ್ನಗಳು ಮಾರಿ ಹೋಗುತ್ತಿವೆ. ಸಣ್ಣ ಹೆಜ್ಜೆಯು ಮೂಡಿಸಿದ ದೊಡ್ಡ ಪರಿಣಾಮವಿದು.
            ಇದರ ಮೂಲ ಎಲ್ಲಿ? ಮಂಗಳೂರಿನ ಪಿ.ಎಮ್.ರಾವ್.ರಸ್ತೆಯಲ್ಲಿರುವ 'ಸಾಹಿತ್ಯ ಕೇಂದ್ರ'ದ ಮುಂಭಾಗ - ರಸ್ತೆ ಪಕ್ಕ - ರವಿವಾರ ಬೆಳ್ಳಂಬೆಳಿಗ್ಗೆ ಬಂದುಬಿಡಿ, ಗೊತ್ತಾಗಿಬಿಡುತ್ತದೆ. ತರಕಾರಿ, ಅಕ್ಕಿ, ಹಣ್ಣುಗಳು, ದವಸಧಾನ್ಯಗಳ 'ಹಳ್ಳಿ ಸಾವಯವ ತರಕಾರಿ ಸಂತೆ' ತೆರೆದಿರುತ್ತದೆ. ಇಲ್ಲಿ ಬೆಳೆದವರೇ ವ್ಯಾಪಾರಿಗಳು. ಮಾರುಕಟ್ಟೆ ದರಕ್ಕಿಂತ ಇಮ್ಮಡಿಯಿಲ್ಲ, ಮುಮ್ಮಡಿಯಂತೂ ಇಲ್ಲವೇ ಇಲ್ಲ. ಬೆಳೆದವರಿಂದಲೇ ದರ ನಿಶ್ಚಯ. ಬೆಳಿಗ್ಗೆ ಏಳಕ್ಕೆ ಜನ ಮುಗಿಬೀಳುತ್ತಾರೆ. ಹನ್ನೊಂದು ಗಂಟೆಗೆ ಬಹುತೇಕ ಉತ್ಪನ್ನಗಳೆಲ್ಲಾ ಖಾಲಿ. ಅವರಿಗಿರಲಿ ಎಂದು ಅಡಗಿಸಿಟ್ಟರೂ ಹುಡುಕಿ ಒಯ್ತಾರಂತೆ!
           ಸೀಮಿತ ಗುಂಪಿನಲ್ಲಿ ಆರಂಭವಾದ 'ಹಳ್ಳಿ ಸಂತೆ'ಯ ಪರಿಕಲ್ಪನೆಯು ನಗರದ ಸಾವಯವ ಮನಸ್ಸುಗಳಿಗೆ ಅರ್ಥವಾಗಿದೆ. ದುಡ್ಡು ಕೊಟ್ಟರೆ ಏನನ್ನೂ ತರಬಹುದು, ಆದರೆ ಆರೋಗ್ಯವನ್ನೋ? ಈ ಯೋಚನೆಯ ಮಂದಿಯನ್ನು ಸಂತೆ ಸೆಳೆದಿದೆ. ಅಕ್ಕಿ ಅಂದರೆ ಬಿಳಿಯಕ್ಕಿ, ಟೊಮೆಟೋ  ನುಣುಪಾಗಿರಬೇಕು, ಬದನೆಯನ್ನು ಹುಳ ಕೊರೆದಿರಬಾರದು-ದೊಡ್ಡ ಗಾತ್ರದ್ದಾಗಿರಬೇಕು.. ಮೊದಲಾದ ಮೈಂಡ್ಸೆಟ್ ಬದಲಾಗಿದೆ. ಬೆಳೆದವರೇ ಮಾರುವುದರಿಂದ ಪೂರ್ತಿ ಪ್ರತಿಫಲ ಬೆಳೆದವರಿಗೆ ಸಿಗುತ್ತದೆ. ಬೇರೆಡೆಯಾದರೆ ತೂಕದಲ್ಲಿ ಮೋಸ, ಶೋಷಣೆ ಎಲ್ಲವನ್ನೂ ಸಹಿಸಿ ಸಿಕ್ಕಿದ ಮೊತ್ತವನ್ನು ಕಿಸೆಗೆ ಸೇರಿಸಬೇಕಾಗುತ್ತದೆ, ಎನ್ನುವ ವಾಸ್ತವ ಹೇಳುತ್ತಾರೆ, ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ್. ಒಟ್ಟೂ ಕಾರ್ಯಕ್ರಮದ ಯೋಜನೆಯನ್ನು ಕ್ರಮಬದ್ಧವಾಗಿ ಇವರು ಯೋಚಿಸುತ್ತಾರೆ.
            ಈ ತರಕಾರಿ ಸಂತೆಯಲ್ಲಿ ಎಲ್ಲರೂ ವ್ಯಾಪಾರಿಗಳಾಗುವಂತಿಲ್ಲ. ಸಾವಯವ ಹೌದೋ ಅಲ್ವೋ ಖಾತ್ರಿಯಾಗಬೇಕು. ಬಳಗದ ನುರಿತ ಕೃಷಿ ಅನುಭವಿಗಳು ಸಂಬಂಧಪಟ್ಟ ಕೃಷಿಕರ ತೋಟಕ್ಕೆ ಭೇಟಿ ನೀಡುತ್ತಾರೆ. ತೋಟ ಸುತ್ತಾಡುತ್ತಾರೆ. ಮುಕ್ತವಾಗಿ ಮಾತನಾಡುತ್ತಾರೆ. ನಿರ್ವಿಷ ಕೃಷಿ ಅಂತ ಗೊತ್ತಾದ ನಂತರವೇ ಸಂತೆಯಲ್ಲಿ ಮಾರಾಟಕ್ಕೆ ಅವಕಾಶ. ಇಲ್ಲಿ ವಿಶ್ವಾಸ, ನಂಬುಗೆಯೇ ಬಂಡವಾಳ. ಸರಕಾರಿ ವ್ಯವಸ್ಥೆಯಲ್ಲಿ ಸಾವಯವ ದೃಢೀಕರಣ ಎನ್ನುವುದಿದೆ. ಸಾವಿರಾರು ರೂಪಾಯಿಗಳ ವ್ಯಯ. ಜತೆಗೆ ಅಧಿಕಾರಿಗಳ ಮರ್ಜಿ. ಸರಕಾರಿ ಕಚೇರಿಗಳ ಅಲೆದಾಟ. ಇವೆಲ್ಲಾ ನಮಗೆ ಬೇಕಾಗಿಲ್ಲ. ನಿರ್ವಿಷ ಯಾ ರಾಸಾಯನಿಕ ರಹಿತ ಆದರೆ ಸಾಕು. ದೃಢೀಕರಣ ಸರ್ಟಿಫಿಕೇಟ್ ಇಟ್ಟುಕೊಂಡು ನಾವೇನೂ ರಫ್ತು ವ್ಯವಹಾರ ಮಾಡುತ್ತಿಲ್ಲವಲ್ಲ.., ಎನ್ನುತ್ತಾರೆ ಅಡ್ಡೂರು.
            ಸಾವಯವ ಕೃಷಿಕ ಗ್ರಾಹಕ ಬಳಗವು ಮನೆಮದ್ದು ಶಿಬಿರ, ನಿರ್ವಿಷ ಆಹಾರದ ಅರಿವು, ಸ್ವಾವಲಂಬಿ ಆಹಾರ ವಸ್ತು ತಯಾರಿಕೆ, ಕೈತೋಟ ನಿರ್ವಹಣೆ, ಕೃಷಿಕರ ತೋಟಗಳಿಗೆ ಪ್ರವಾಸ ಏರ್ಪಡಿಸಿದೆ. ಕೃಷಿಯ ಒಲವಿದ್ದವರಿಗೆ ಈ ಕಾರ್ಯಹೂರಣ ಇಷ್ಟವಾಗಿದೆ. ಸಂತೆಯ ರೂಪೀಕರಣದಲ್ಲಿ ಇಂತಹ ಅಜ್ಞಾತ ಕೆಲಸಗಳು ಗುರುತರ. 'ನಮ್ಮ ಊಟಕ್ಕೆ ನಮ್ಮದೇ ತರಕಾರಿ' ಮನಸ್ಸು ಅರಳುತ್ತಿದೆ. ತಾರಸಿ ಕೃಷಿಯ ಒಲವು ಮೂಡುತ್ತಿದೆ. ಪ್ರದೀಪ್ ಸೂರಿ, ಗಣೇಶ ಮಲ್ಯ, ರಾಜೇಶ್.. ಬಳಗವು ಕೈತೋಟದ ಮಾಹಿತಿ ನೀಡುತ್ತಿದೆ. ಈಗ ತರಕಾರಿ ಬೀಜಗಳು ಕಿಟಕಿಯ ಸಂದಿಯಲ್ಲಿ ಉಳಿಯುವುದಿಲ್ಲ!
           'ಸ್ವಾವಲಂಬಿ ಸಂತೆ' ಬಳಗದ ಇನ್ನೊಂದು ಯಶಸ್ವಿ ಯೋಜನೆ. ಸಣ್ಣ ಬಂಡವಾಳದಿಂದ ಹುಟ್ಟಿದ ಮನೆ ಉದ್ದಿಮೆಯ ಉತ್ಪನ್ನಗಳಾದ ವಿವಿಧ ಪಾನೀಯಗಳು, ತಿಂಡಿತಿನಿಸುಗಳು, ಉಡುಪು, ಬ್ಯಾಗ್, ಕರಕುಶಲ.. ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ. ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಪ್ರಾಯೋಜಕರ ನೆರವಿನಿಂದ ತಿಂಗಳಿಗೊಮ್ಮೆ ಸಂತೆ. ಈಗಾಗಲೇ ಇಪ್ಪತ್ತಾರು ಸಂತೆಗಳು ಸಂಪನ್ನವಾಗಿವೆ. ಉತ್ಪಾದಕ ಅಮ್ಮಂದಿರಿಗೆ ಧೈರ್ಯ ಬಂದಿದೆ. ಪಿಲಿಕುಳ ಮತ್ತು ಮಂಗಳೂರು ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳಲ್ಲಿ ಮಳಿಗೆ ತೆರೆಯುವ ಹುಮ್ಮಸ್ಸು ಮೂಡಿದೆ. ಇವರಲ್ಲೂ ಸಾವಯವದ ಅರಿವು ಮೂಡುತ್ತಿದೆ.
          ನಾವೂ ತರಕಾರಿ ಬೆಳೆಯಬೇಕಲ್ಲಾ ಏನು ಮಾಡೋಣ? ಹಲವರ ಬೇಡಿಕೆ. ನಗರದಿಂದ ಇಪ್ಪತ್ತೆರಡು ಕಿಲೋಮೀಟರ್ ದೂರದ ಗಂಜಿಮಠದ ಮೊಗರು ಗ್ರಾಮದ ಪಾಕಟ್ಟುವಿನಲ್ಲಿ ಒಂದೆಕ್ರೆಯಲ್ಲಿ ತರಕಾರಿ ಕೃಷಿ. ಬೀಜ, ಗೊಬ್ಬರ, ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ. ವಿವಿಧ ಹುದ್ದೆಯಲ್ಲಿರುವ ಸುಮಾರು ಇಪ್ಪತ್ತೈದು ಮಂದಿ ಆಗಾಗ್ಗೆ ಭೇಟಿ ನೀಡಿ ಆರೈಕೆ. ಬೆಳೆದ ತರಕಾರಿಗಳನ್ನು ಸಮಾನವಾಗಿ ಹಂಚಿಕೊಂಡರು. ತಾವೇ ಬೆಳೆದ ತರಕಾರಿಯನ್ನು ತಿನ್ನಲು ಹೆಮ್ಮೆಪಟ್ಟುಕೊಂಡರು. ಹಳ್ಳಿಯನ್ನು, ಕೃಷಿಯನ್ನು, ಕೃಷಿಕರನ್ನು ಹೀನಾಯವಾಗಿ ಕಾಣುವ ಪ್ರಸ್ತುತ ಕಾಲಘಟ್ಟದಲ್ಲಿ; ಕೃಷಿಯನ್ನು ಪ್ರೀತಿಸಲು ಪ್ರೇರೇಪಿಸುವ ಇಂತಹ ಕಾರ್ಯಹೂರಣಗಳು ಗಮನೀಯ. ಮಂಗಳೂರಿನಿಂದ ಹದಿನೈದು ಕಿಲೋಮೀಟರ್ ದೂರದ ಕರಂಬಾರ್, ಕೆಂಜಾರಿನಲ್ಲಿ ಒಂದಷ್ಟು ಮಂದಿ ಸೇರಿಕೊಂಡು ಭತ್ತದ ಬೇಸಾಯ ಮಾಡುವ ಯೋಜನೆಗೆ ಶ್ರೀಕಾರವಾಗಿದೆ.
               ಬಳಗದ ಎಲ್ಲಾ ಕ್ರಿಯಾ ಯೋಜನೆಯ ಹಿಂದೆ ನಿರ್ವಿಷ ಆಹಾರ ಸೇವನೆಯ ದೊಡ್ಡ ಗುರಿಯಿದೆ. ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಸಿದವರೇ ಸಂತೆಯಲ್ಲಿ ಮಾರುವುದು ವಿಶೇಷ. ಬಳಕೆದಾರರು ಇವರೊಂದಿಗೆ ಮುಖಾಮುಖಿ ಮಾತನಾಡಿ ಎಲ್ಲಾ ಮಾಹಿತಿ ಪಡೆಯುತ್ತಿದ್ದಾರೆ. ವಿಷಮುಕ್ತ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಸಂಶಯ ಬಂದರೆ ಕೃಷಿಕರ ತೋಟಕ್ಕೆ ಹೋಗಿ ನೋಡುವ ಮನಃಸ್ಥಿತಿ ಹೊಂದಿದ್ದಾರೆ. ಕೃಷಿಕರೂ ಸ್ಪಂದಿಸುತ್ತಿದ್ದಾರೆ. ಎನ್ನುವ ಹಿಮ್ಮಾಹಿತಿ ನೀಡಿದರು, ಗೃಹಿಣಿ ರಾಜಲಕ್ಷ್ಮೀ.
               ತರಕಾರಿ ಸಂತೆಯನ್ನು ನೋಡುವಾಗ, 'ಕೃಷಿಕರು ತರುತ್ತಾರೆ, ಮಾರಾಟವಾಗುತ್ತದೆ' ಎಂದು ಹಗುರವಾಗಿ ಮಾತನಾಡಿದರೆ ತಪ್ಪಾದೀತು. ಕಾಂಚಾಣವೇ ಸರ್ವಸ್ವ ಎಂದು ತಿಳಿದ ಕಾಲಸ್ಥಿತಿಯಲ್ಲಿ ಆರೋಗ್ಯದತ್ತ ಮನಃಸ್ಥಿತಿಯನ್ನು ಬದಲಾಯಿಸುವುದು ಸಣ್ಣ ಕೆಲಸವಲ್ಲ. ನಗರದ ಮಾಲ್ ಸಂಸ್ಕೃತಿಯಿಂದ ಹೊರಬಂದು ನಿರ್ವಿಷ ಆಹರದ ಮನಸ್ಸನ್ನು ಹೊಂದುವುದು ಕಾಲದ ಅನಿವಾರ್ಯತೆ. ಈ ಹಿನ್ನೆಲೆಯಲ್ಲಿ ಸಾವಯವ ಹಳ್ಳಿಸಂತೆ ಪಟ್ಟಣದಲ್ಲಿ ಮರುಜೀವಗೊಂಡಿದೆ.
          'ಸಂತೆಯು ಇಂದು ಪಟ್ಟಣದಲ್ಲಿ, ನಾಳೆ ಹಳ್ಳಿಯಲ್ಲೂ ಆಗಬೇಕಾಗಬಹುದು. ಆದರೆ ಸಾವಯವ ಆಗಬೇಕಾದುದು ಆಹಾರವಲ್ಲ, ಮನಸ್ಸು' ಎಂದು ಅಡ್ಡೂರು ಕಣ್ಣು ಮಿಟುಕಿಸಿದರು.

(Udayavani/Nelada_nadi_coloum)



ಬದುಕಿನ ಸುಸ್ಥಿರತೆಗೆ ಕಬ್ಬಿನಲ್ಲೂ ಸುಸ್ಥಿರ ವಿಧಾನ


             ಉತ್ತರ ಕರ್ನಾಾಟಕದ ಯಾದಗೋಡು ಹಳ್ಳಿ. ನರ್ಸರಿಯೊಂದರಲ್ಲಿ ಲಾರಿಗೆ ಟ್ರೇಗಳು ಲೋಡ್ ಆಗುತ್ತಿದ್ದುವು. ಮೊಟ್ಟೆಗಳ ಸಾಗಾಟಕ್ಕೆ ಬಳಸುತ್ತಾರಲ್ಲಾ, ಅಂತಹುದು. ಇದೇನು ಇಷ್ಟು ದೊಡ್ಡ ಲಾರಿಯಲ್ಲೂ ಮೊಟ್ಟೆಗಳ ಸಾಗಾಟವೇ, ಎಂದೆ. ಜತೆಯಲ್ಲಿದ್ದ ಜಯಶಂಕರ ಶರ್ಮ ಹೇಳಿದರು, ಮೊಟ್ಟೆಗಳಲ್ಲ, ಅದು ಕಬ್ಬಿನ ಕಣ್ಣುಗಳಿಂದ ಸಿದ್ಧಪಡಿಸಿದ ನರ್ಸರಿ ಸಸಿಗಳು. ಇದನ್ನು ('Sustainable Sugarcane Initiative – SSI '' '- ಎಸ್ಎಸ್ಐ)  ವಿಧಾನದಲ್ಲಿ ಅಭಿವೃದ್ಧಿ ಪಡಿಸಿದುದಾಗಿದೆ. ಎಂದರು. .
                ನರ್ಸರಿಯ ಮಾಲಕ ಅಲಗೌಡಾ ಶ್ಯಾಮಗೌಡ ಪಾಟೀಲ. ಐದು ವರುಷಗಳಿಂದ ಎಸ್ಎಸ್ಐ ವಿಧಾನದ ಮೂಲಕ ಕಬ್ಬಿನ ಸಸಿಗಳನ್ನು ತಯಾರಿಸುತ್ತಿದ್ದಾರೆ. ಈಗಾಗಲೇ ಹತ್ತು ಲಕ್ಷಕ್ಕೂ ಮಿಕ್ಕಿ ಕಬ್ಬಿನ ಕಣ್ಣನ್ನು ಚಿಗುರಿಸಿ ಸಸಿಗಳನ್ನು ವಿತರಿಸಿದ್ದಾರೆ. ಈ ವಿಧಾನದಲ್ಲಿ ಅಭಿವೃದ್ಧಿಪಡಿಸಿದ ಸಸಿಗಳಿಗೆ ಹನಿ ನೀರಾವರಿಯ ಪದ್ಧತಿಯ ಮೂಲಕ ನೀರುಣಿಸಿದರೂ ತಾಳಿಕೊಳ್ಳುತ್ತವೆ. ಒಂದರ್ಥದಲ್ಲಿ ನೀರಿನ ಬರವನ್ನು ಎದುರಿಸಲು ಕಬ್ಬು ಕೃಷಿಗೊಂದು ಪರ್ಯಯ ಪದ್ಧತಿ.
                ಇದೇನೂ ಹೊಸತಲ್ಲ. ಮಹಾರಾಷ್ಟ್ರದಲ್ಲಿ ಎಸ್ಎಸ್ಐ ವಿಧಾನವು ಕೃಷಿಕ ಸ್ವೀಕೃತಿ ಪಡೆದಿದೆ. ಕನ್ನಾಡಿನಲ್ಲೂ ಹಬ್ಬುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತರ ಕನ್ನಡ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಬೆಳಗಾಂ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಿದೆ. ಸುಮಾರು ಇನ್ನೂರು ಎಕ್ರೆಯಲ್ಲಿ ಕೃಷಿಕರು ಕಬ್ಬನ್ನು ಬೆಳೆದು ಯಶ ಕಂಡಿದ್ದಾರೆ. ಸಾಂಪ್ರದಾಯಿಕ ವಿಧಾನದ ಕೃಷಿಯಿಂದ ಎಸ್ಎಸ್ಐಯಲ್ಲಿ ಇಳುವರಿ ದುಪ್ಪಟ್ಟು.
                 ಪಾಟೀಲರು ಐದು ವರುಷದ ಹಿಂದೆ ಮಹಾರಾಷ್ಟ್ರಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ಈ  ವಿಧಾನದಿಂದ ಮಾಡಿದ ಸಸಿಗಳನ್ನು ನೋಡಿದರು. ಮಾಹಿತಿ ಪಡೆದರು. ಪ್ರಾಯೋಗಿಕವಾಗಿ ಬೆಳೆಯಲು ಸಸಿಗಳನ್ನು ತಂದರು. ತೆಂಡೆಗಳು ಜಾಸ್ತಿ ಬಿಟ್ಟವು. ಕೃಷಿ ಮಾಡಲು ವಿಶ್ವಾಸ ಬಂತು. ಸ್ವತಃ ನರ್ಸರಿಯಲ್ಲಿ ಸಸಿಗಳನ್ನು ತಯಾರಿಸಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭದ ಉತ್ಸಾಹ ಕುಗ್ಗಿತು. ಟ್ರೇಗಳಲ್ಲಿ ಕಬ್ಬಿನ ಕಣ್ಣನ್ನು ಊರಿದ ಬಳಿಕ ಅದರ ಮೇಲೆ ಪ್ಲಾಸ್ಟಿಕ್ ಹಾಸಿದರೆ ಶಾಖವನ್ನು ಸೃಷ್ಟಿಯಾಗುತ್ತದೆ. ಈ ಮಾಹಿತಿ ಸಿಗದ ಕಾರಣ ಮೊದಲ ಯತ್ನದಲ್ಲಿ ಸೋತೆ, ಎನ್ನುತ್ತಾರೆ.
                 ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆದ ಕಬ್ಬು ಬೆಳೆಯಲ್ಲಿ ನೀರಿನ ಬಳಕೆ ಅಧಿಕ.  ಸಾಲಿನಲ್ಲಿ ನೀರನ್ನು ನಿಲ್ಲಿಸುವ ವಿಧಾನ ಜನಪ್ರಿಯ! ಅಂತರ್ಜಲ ಇಳಿತ, ಸಕಾಲಕ್ಕೆ ಮಳೆ ಬಾರದಿರುವುದು ಮೊದಲಾದ ಕಾರಣಗಳಿಂದ ಕಬ್ಬಿನ ಬೇಸಾಯ ಹೊರೆಯಾಗುತ್ತಿದೆ. ಜತೆಗೆ ಬ್ಯಾಂಕ್ ಸಾಲ, ದಲ್ಲಾಳಿಗಳ ಕರಾಮತ್ತಿನಿಂದ ಕೃಷಿಕ ಹೈರಾಣವಾಗುತ್ತಿರುವುದು ಗೊತ್ತಿರುವ  ವಿಚಾರ. ಎಸ್ಎಸ್ಐ ವಿಧಾನ ಕಬ್ಬು ಕೃಷಿಯಿಂದ ನೀರಿನ ಉಳಿತಾಯ ಸಾಧ್ಯ ಎಂದು ಬೆಳೆದವರು ಕಂಡುಕೊಂಡಿದ್ದಾರೆ.
                 ಸಸಿ ತಯಾರಿ ಹೇಗೆ? ಪಾಟೀಲರ ಅನುಭವ - ನರ್ಸರಿಗಳಲ್ಲಿ ಬಳಕೆ ಮಾಡುವ ಪ್ರೋಟ್ರೇಯಲ್ಲಿ ಅರುವತ್ತು ಸಸಿಗಳನ್ನು ಮಾಡಬಹುದು. ಕಳಿತ ತೆಂಗಿನ ನಾರಿನ ಹುಡಿ(ಕೊಕೊಪಿತ್)ಯನ್ನು ಟ್ರೇಯಲ್ಲಿ ಹರಡಿ. ಮೊದಲೇ ಕಣ್ಣೂ ಸೇರಿದಂತೆ ಕಬ್ಬನ್ನು ಒಂದಿಂಚಿನಂತೆ ತುಂಡರಿಸಿಟ್ಟುಕೊಳ್ಳಿ. ಟ್ರೇಯ ಕಳ್ಳಿಯಲ್ಲಿ ತುಂಡರಿಸಿದುದನ್ನು ಊರಿ. ಬಳಿಕ ಅದರ ಮೇಲೆ ಅರ್ಧ ಸೆಂಟಿಮೀಟರ್ ದಪ್ಪಕ್ಕೆ ಕೊಕೊಪಿತ್ ಹರಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಹಾಸನ್ನು ಮುಚ್ಚಿ. ಹೀಗೆ ಮಾಡಿದಾಗ ಟ್ರೇಯೊಳಗಿನ ಕಬ್ಬಿನ ಕಣ್ಣುಗಳಿಗೆ ವಾತಾವರಣದ ಶಾಖಕ್ಕಿಂತ ಅಧಿಕ ಉಂಟಾಗಿ ಏಳು ದಿವಸದಲ್ಲಿ ಮೊಳಕೆ ಬರುತ್ತದೆ. ಬಿಸಿಲು ಜಾಸ್ತಿ ಇದ್ದರೆ ಪ್ಲಾಸ್ಟಿಕ್ ತೆಗೆದು ನೀರು ಒದ್ದೆಯಾಗುವಷ್ಟು ನೀರು ಸಿಂಪಡಿಸಿ. ಹೀಗೆ ತಯಾರಾದ ಸಸಿಗಳನ್ನು ನಲವತ್ತೈದು ದಿವಸದಲ್ಲಿ ನಾಟಿ ಮಾಡಲೇಬೇಕು.
                  ಪಾಟೀಲರು ಕೆಲವು ಸೂಕ್ಷ್ಮಗಳನ್ನು ಹೇಳುತ್ತಾರೆ. ಸಸ್ಯಾಭಿವೃದ್ಧಿಗಾಗಿ ಏಳೆಂಟು ತಿಂಗಳು ಬೆಳೆದ ಕಬ್ಬನ್ನು ಬಳಸಿ. ಗಿಡದಿಂದ ರವದಿ ತೆಗೆದಿರಬಾರದು. ತೆಗೆದರೆ ಮೊಳಕೆ ಬರುವ ಸಾಮಥ್ರ್ಯ ಕುಂಠಿತವಾಗುತ್ತದೆ. ಕಬ್ಬನ್ನು ಕಟಾವ್ ಮಾಡಿದ ಎರಡು ದಿವಸದಲ್ಲಿ ಟ್ರೇ ಸೇರಲೇ ಬೇಕು. ಗೆದ್ದಲು ನಿಯಂತ್ರಣಕ್ಕಾಗಿ ಬೀಜ ಊರುವ ಮೊದಲು ರಾಸಾಯನಿಕ ಬೀಜೋಪಚಾರ ಬೇಕು. ತೀರಾ ತಂಪಾದ ವಾತಾವರಣವಿದ್ದರೆ ವಿದ್ಯುತ್ ಬಲ್ಪ್ ಉರಿಸಿ ಶಾಖ ಸೃಷ್ಟಿಮಾಡಬೇಕು. ಉತ್ತಮ ತರಹದ ಸಸಿಗಳು ತಯಾರಾಗಲು ಇಂತಹ ಸೂಕ್ಷ್ಮತೆಯತ್ತ ಎಚ್ಚರ ಬೇಕು. ನಾಟಿ ಮಾಡುವ ಒಂದು ವಾರದ ಮೊದಲು ಸಸಿಗಳಿಗೆ ನೀರುಣಿಕೆ ನಿಲ್ಲಿಸಬೇಕು.
                 ಸಾಲಿನಿಂದ ಸಾಲಿಗೆ ಐದಡಿ, ಗಿಡದಿಂದ ಗಿಡಕ್ಕೆ ಎರಡಡಿ ಅಂತರ. ನಾಟಿ ಮಾಡುವಾಗ ಮಣ್ಣಿನಲ್ಲಿ ತೇವಾಂಶವಿರಲಿ. ನಾಟಿ ಮಾಡಿದ ಬಳಿಕವೂ ನೀರಾವರಿ ಅಗತ್ಯ. ಕಾಲಕಾಲದ ಅರೈಕೆ. ಒಂದು ಎಕರೆಗೆ ಆರುಸಾವಿರ ಸಸಿಗಳು ಬೇಕು. ಇಪ್ಪತ್ತರಿಂದ ಇಪ್ಪತ್ತೈದು ತೆಂಡೆಗಳು ಒಂದೊಂದು ಗಿಡದ ಸುತ್ತ ಚಿಗುರುತ್ತವೆ. ಹನಿ ನೀರಾವರಿ ವ್ಯವಸ್ಥೆಯನ್ನು ಎಸ್ಎಸ್ಐ ವಿಧಾನದ ಗಿಡಗಳು ತಾಳಿಕೊಳ್ಳುತ್ತವೆ.
                ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬನ್ನು ನೇರ ನಾಟಿ ಮಾಡುತ್ತಾರೆ. ಸಾಲಿಂದ ಸಾಲಿಗೆ ಹೆಚ್ಚೆಂದರೆ ಎರಡೂವರೆ ಅಡಿ. ಗಿಡ ಬೆಳೆದಾಗ ಅದರ ಮಧ್ಯ ಓಡಾಡಲೂ ಕಷ್ಟ. ನರ್ಸರಿಯಲ್ಲಿ ಸಸಿ ಮಾಡಿದವುಗಳನ್ನು ನಾಟಿ ಮಾಡಿದರೆ ಸಾಲಿಂದ ಸಾಲಿಗೆ ಅಂತರವಿರುವುದರಿಂದ ಅದರೊಳಗೆ ಅಲ್ಪಕಾಲಿಕ ಬೆಳೆಗಳನ್ನು ಬೆಳೆಯಬಹುದು.  ಕಾಲಕಾಲದ ಆರೈಕೆ, ನಿರ್ವಹಣೆಗಳನ್ನು ಸಾಲಿನಲ್ಲಿ ಒಡಾಡಿ ನಿರ್ವಹಿಸಬಹುದು. ಪಾಟೀಲರು ಮೂರೆಕ್ರೆ ಕಬ್ಬಿನ ಮಧ್ಯೆ ಶೇಂಗಾ, ಬದನೆ, ಅವರೆ, ಬೆಂಡೆ ಬೆಳೆದಿದ್ದಾರೆ.
                ಸಾಂಪ್ರದಾಯಿಕ ಪದ್ಧತಿಯಲ್ಲಿ ಎಕ್ರೆಗೆ ಸುಮಾರು ಮೂವತ್ತೈದು ಟನ್ ಇಳುವರಿ. ಎಸ್ಎಸ್ಐ ವಿಧಾನದಲ್ಲಿ ಏನಿಲ್ಲವೆಂದರೂ ಐವತ್ತೈದರಿಂದ ಅರುವತ್ತು ಟನ್! ತೆಂಡೆ ಜಾಸ್ತಿ, ಕಬ್ಬಿನ ಗಿಡದ ಗಾತ್ರ ಹೆಚ್ಚು. ತುಂಬಾ ಎತ್ತರ ಬೆಳೆಯುತ್ತದೆ. ರೋಗ ಇಲ್ಲವೇ ಇಲ್ಲ ಎನ್ನಬಹುದು. ಎಲ್ಲಾ ಕಬ್ಬಿನ ಜಲ್ಲೆಗಳು ಒಂದೇ ಆಕಾರದಲ್ಲಿ  ಬೆಳೆಯುತ್ತವೆ. ಕಬ್ಬಿನಲ್ಲಿ ರಸವೂ ಹೆಚ್ಚು. ಈ ವಿಧಾನವು ಕೃಷಿಕರಿಗೆ ಅಗತ್ಯ. ಕೃಷಿಯಲ್ಲಿ ಎಷ್ಟೋ ಸಲ ಪಾರಂಪರಿಕ ವಿಧಾನವನ್ನು ನೆಚ್ಚಿಕೊಂಡಿರುತ್ತೇವೆ. ಆಧುನಿಕ ವಿಧಾನಕ್ಕೆ ಬದಲಾಗಲು ಮಾನಸಿಕ ತಡೆಯಿದೆ. ಇದನ್ನು ಬದಲಾಯಿಸಬೇಕು. ನಾನು ಬದಲಾಗಿದ್ದೇನೆ. ಮೊದಮೊದಲು ಈ ವಿಧಾನವನ್ನು ಹೇಳಿದಾಗ ನಕ್ಕರು, ಗೇಲಿ ಮಾಡಿದರು. ಅಂದು ವ್ಯಂಗ್ಯವಾಡಿದವರೇ ಈಗ ಸಸಿಗಳನ್ನು ಒಯ್ಯುತ್ತಾರೆ ಎನ್ನುತ್ತಾರೆ ಶ್ಯಾಮಗೌಡ ಪಾಟೀಲರು.
               ಅರಿವು ಮೂಡಿಸಲು ಗ್ರಾಮಾಭಿವೃದ್ಧಿ ಯೋಜನೆಯು ತರಬೇತಿ ನೀಡಿತ್ತು ಪ್ರವಾಸ ಏರ್ಪಡಿಸಿತ್ತು.  ಯೋಜನೆಯು ಪಾಟೀಲರಿಗೆ ಸಹಕಾರ ನೀಡಿತು. ಅವರ ನರ್ಸರಿಯಿಂದ  ಶೇ.60ರಷ್ಟು ಸಸಿಗಳನ್ನು ಯೋಜನೆಯೇ ವಿಲೆವಾರಿ ಮಾಡುವ ಭರವಸೆ ನೀಡಿತು. ಒಮ್ಮೆಗೆ ಹನ್ನೆರಡು ಸಾವಿರ ಸಸಿಗಳಿಗೆ ಆದೇಶ ಕೊಟ್ಟರೆ ಲಾರಿಯಲ್ಲಿ ಕಳುಹಿಸಿಕೊಡುತ್ತಾರೆ. ಅದೂ ಮುಂಗಡ ನೀಡಿದ ಬಳಿಕವೇ! ಅಕ್ಟೋಬರ್, ನವಂಬರಿನಲ್ಲಿ ನಾಟಿ ಮಾಡಬೇಕಾದುದರಿಂದ ಮೊದಲೇ ಕಾದಿರಿಸುವವರ ಸಂಖ್ಯೆ ಹೆಚ್ಚು. ಈಗ ರಾಜ್ಯದಲ್ಲಿ ಅಲ್ಲಿಲ್ಲಿ ಕೆಲವು ನರ್ಸರಿಗಳಿವೆ. ಗುಣಮಟ್ಟದ ಸಸಿಗಳನ್ನು ಸಿದ್ಧಮಾಡುವುದರಿಂದ ಸಸಿಗಳಿಗೆ ಬೇಡಿಕೆ ಹೆಚ್ಚು
              ಆರಂಭದ ಎರಡು ವರುಷ ಗಂಡ, ಹೆಂಡತಿ ದುಡಿದರು. ಈಗ ಸಹಾಯಕರಿದ್ದಾರೆ. ಮೂರು ತಿಂಗಳ ಅಂತರ ಬೇಸಾಯದಿಂದ ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ ಗಳಿಸಬಹುದು ಎನ್ನುವುದು ಅವರ ಅನುಭವ. ಕೆಲಸಗಳ ಸುಸೂತ್ರತೆಗಾಗಿ ಗ್ರಾಮಾಭಿವೃದ್ಧಿ ಯೋಜನೆಯ ಸಂಘವೊಂದನ್ನು ರೂಪೀಕರಿಸಿದ್ದಾರೆ. ಸಾವಯವ ವಿಧಾನದ ಗೊಬ್ಬರ, ಸಿಂಪಡಣೆಯತ್ತ ಯೋಚನೆ ಹರಿಯುತ್ತಿದೆ. ಸದ್ಯ ರಾಸಾಯನಿಕ ಗೊಬ್ಬರಗಳ ಬಳಕೆ.
               ಕನ್ನಾಡು ಬರವನ್ನು ಎದುರಿಸುತ್ತಿದೆ. ಸರಕಾರವು ಬರವನ್ನು ವೈಭವೀಕರಿಸುತ್ತಿದೆ! ವೈಭವೀಕರಿಸದೆ ಅವರಿಗೆ ನಿರ್ವಾಹವಿಲ್ಲ! ಇರಲಿ, ಬರವನ್ನು ಎದುರಿಸುವಂತಹ, ಕಡಿಮೆ ನೀರನ್ನು ಬಳಸಿ ಕೃಷಿ ಮಾಡುವ ವಿಧಾನಗಳಿಗೆ ಒತ್ತು ಕೊಡಬೇಕಾದ ದಿನಮಾನದಲ್ಲಿದ್ದೇವೆ. ಭತ್ತದ ಕೃಷಿಯಲ್ಲಿ ಈಗಾಗಲೇ ಶ್ರೀಪದ್ಧತಿಯು ಕೃಷಿಕ ಸ್ವೀಕೃತಿಯನ್ನು ಪಡೆದಿದೆ. ಈಗ ಕಬ್ಬಿಗೆ ಎಸ್ಎಸ್ಐ ವಿಧಾನದ ಪೋಣಿಕೆ ಯಶವಾಗುತ್ತಿದೆ.
                ಮಾದರಿಗಳು ಮುಂದಿದ್ದಾಗ ಅಳವಡಿಕೆ ಸುಲಭ. ಅಂತಹ ಮಾದರಿಗಳನ್ನು ಜನರ ಹತ್ತಿರ ಒಯ್ದು, ಫಲಿತಾಂಶವನ್ನು ಮನದಟ್ಟು ಮಾಡುವುದು ಮತ್ತು ಈಗಾಗಲೇ ಅಳವಡಿಸಿ ಯಶಸ್ಸಾದ ರೈತಾನುಭವಕ್ಕೆ ಕಿವಿಯಾಗಲು ಅವಕಾಶವಾದರೆ ಹೊಸ ಪದ್ಧತಿಗಳ ಅಳವಡಿಕೆ ಸುಲಭ.
(udayavani/nelada nadi/coloum)


ಬಟ್ಟಲು ತುಂಬಿದ ಹಣ್ಣುಗಳ 'ಫಲಾಹಾರ'


               'ದಿನಕ್ಕೊಂದು ಸೇಬು ತಿನ್ನಿ, ಆರೋಗ್ಯವಂತರಾಗಿ' - ಚಿಕಿತ್ಸಾಲಯವೊಂದರಲ್ಲಿದ್ದ ಫಲಕದ ವಾಕ್ಯವಿದು. ಜತೆಗೆ ಸೇಬುಹಣ್ಣನ್ನು ಕೈಯಲ್ಲಿ ಹಿಡಿದುಕೊಂಡ ಮಗುವಿನ ನಗು ಭಂಗಿಯ ಚಿತ್ರ.
             ಇದನ್ನು ದಂಪತಿ ಓದುತ್ತಿದ್ದಾರೆ. ತಮ್ಮ ಮಗುವಿನ ಮುಖ ನೋಡುತ್ತಾರೆ. ಸೇಬು ತಿನ್ನಿಸಿದ್ದು ಅಪಥ್ಯವಲ್ಲವೆಂಬ ಸಂತೋಷ. ದೂರದ ಸಿಮ್ಲಾ, ಅಮೇರಿಕಾದ ಸೇಬಿಗೆ ಸಂದಿತು, ಮಾನ! ರಾಸಾಯನಿಕಗಳಲ್ಲಿ ಮಿಂದೆದ್ದು ಉದರ ಸೇರುವ ಸೇಬಿನ ತಾಜಾತನವು ಈ ಖುಷಿಯಲ್ಲಿ ಲೀನವಾಯಿತು.
               ಬಂಟ್ವಾಳ ತಾಲೂಕಿನ ಮುಳಿಯ ಶಾಲೆಯಲ್ಲಿ ಜರುಗಿದ 'ಹಣ್ಣುಗಳೊಂದಿಗೆ ಒಂದು ದಿನ' ಕಲಾಪದ ಪ್ರದರ್ಶನ ಮಳಿಗೆಯಲ್ಲಿದ್ದ ಸಾಲುಸಾಲು ಹಣ್ಣುಗಳು ಚಿಕಿತ್ಸಾಲಯದ ಫಲಕವನ್ನು ಅಣಕಿಸಿದುವು! ಅಂದು ಹಿತ್ತಿಲು, ತೋಟ, ಗುಡ್ಡಗಳಲ್ಲಿ ಲಭಿಸುವ ನೂರಾರು ಹಣ್ಣುಗಳ ವೈವಿಧ್ಯಗಳಿದ್ದುವು.  ಊಟದ ಬಟ್ಟಲಿಗೆ  ಸ್ಥಳೀಯ ಹಣ್ಣುಗಳು ಮಿಳಿತಗೊಂಡುವು.
ಕಾಡುಹಣ್ಣುಗಳು ಕಾಡುವ ದಿನಗಳಿದ್ದುವು. ಸಾರಿಗೆ ವಿರಳವಾಗಿದ್ದಾಗ ಕಾಲ್ನಡಿಗೆ ಸಹಜ. ಒಂದೆರಡು ಕಿಲೋಮೀಟರ್ ಕಾಲ್ನಡಿಗೆಯ ಶಾಲಾ ಪಯಣದಲ್ಲಿ ಹೊಟ್ಟೆಗಿಳಿವ ಕಾಡುಹಣ್ಣುಗಳನ್ನು ಲೆಕ್ಕ ಇಟ್ಟವರಾರು? ಅದರೊಂದಿಗೆ ಬದುಕನ್ನು ಅರಳಿಸಿಕೊಂಡ ನೆನಪುಗಳು ಎಷ್ಟಿಲ್ಲ? ಸೇಬು, ಮುಸುಂಬಿ, ದ್ರಾಕ್ಷಿಯೊಳಗೆ ಒದ್ದಾಡುವ ಆಸೆಗಳಿಗೆ ಕಾಡುಹಣ್ಣುಗಳ ಪರಿಚಯ ಎಲ್ಲಿದೆ? .
              ಹಣ್ಣುಗಳ ಸೇವನೆಯು ಆರೋಗ್ಯದಾಯಕ. ವೈದ್ಯರ ಶಿಫಾರಸ್ಸು ಪೂರಕ. ಆಯಾಯ ಋತುವಿಗೆ ಅನುಗುಣವಾದ ಹಣ್ಣುಗಳನ್ನು ತಿನ್ನುವುದು ಪ್ರಕೃತಿ ತೋರಿದ ಹಾದಿ. ಆಧುನಿಕ ಜೀವನ ಶೈಲಿಯು ಈ ಹಾದಿಯನ್ನು ಮಸುಕಾಗಿಸಿದೆ. ಕಾಲಾಕಾಲದ ವಿವೇಚನೆಯಿಲ್ಲದೆ, ಋತುಗಳ ಪರಿವೆಯಿಲ್ಲದೆ ಎಲ್ಲವನ್ನೂ ಹೊಟ್ಟೆಗಿಳಿಸುವ ಯಾಂತ್ರಿಕ ಬದುಕಿನಿಂದ ರುಚಿಗಳು ಮಾಯವಾಗಿವೆ.
               ಒಂದೊಂದು ಹಣ್ಣಿನಲ್ಲಿ ಒಂದೊಂದು ರುಚಿ. ಅದರೊಳಗೆ ದೇಹಕ್ಕೆ ಬೇಕಾದ ವಿವಿಧ ವಿಟಮಿನ್ಗಳೋ, ಪ್ರೋಟೀನ್ಗಳೋ ಮಿಳಿತವಾಗಿರುತ್ತವೆ. ಗುಡ್ಡಕ್ಕೆ ಹೋದರೆ ನೇರಳೆ, ಕೇಪುಳು ಹಣ್ಣುಗಳು; ತೋಟದಲ್ಲಾದರೆ ಮಾವು, ಹಲಸು, ಪೇರಳೆ, ಚಿಕ್ಕು; ಅಂಗಳದಲ್ಲೋ ಚವಿ, ಚೆರ್ರಿಯಂತಹ ಹಣ್ಣುಗಳು. ಇವುಗಳ ರುಚಿಯನ್ನು ನಾಲಗೆಯು ಒಮ್ಮೆ ಹಿಡಿದುಬಿಟ್ಟರೆ ಆಯಿತು, ನೈಸರ್ಗಿಕ ಶಕ್ತಿಯನ್ನು ತಾವೇ ಆವಾಹಿಸಿಕೊಳ್ಳುತ್ತವೆ.
             'ಹಣ್ಣುಗಳೊಂದಿಗೆ ಒಂದು ದಿನ' ಮಾತುಕತೆಯನ್ನು ಆಯೋಜಿಸಿದ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಹೇಳುತ್ತಾರೆ, ಬದಲಾದ ಜೀವನಶೈಲಿಯಲ್ಲಿ ರುಚಿಯನ್ನು ಕಳೆದುಕೊಂಡಿದ್ದೇವೆ. ಆಹಾರ ವೈವಿಧ್ಯಗಳು ಟೀವಿಗೆ ಸೀಮಿತ. ಮಕ್ಕಳಿಗೆ ರುಚಿಗಳ ಪರಿಚಯವಿಲ್ಲ. ಹಿರಿಯರು ಹೇಳಿಲ್ಲ. ಹೇಳಲು ಪುರುಸೊತ್ತಿಲ್ಲ. ಯಾಕೆ ಹೇಳಿ? ಮಗ ನೂರಕ್ಕೆ ನೂರು ಅಂಕ ತೆಗೆದಿದ್ದಾನೆ. ಇದಕ್ಕಿಂತ  ಮಿಕ್ಕ ಯೋಚನೆ, ಯೋಜನೆಗಳು ಬೇಕಾಗಿಲ್ಲ ಎನ್ನುವ ಮಾನಸಿಕ ತಡೆ. ಈ ಹಿನ್ನೆಲೆಯಲ್ಲಿ ಹಣ್ಣುಗಳ ಸೇವನೆಯು ನಿಯಮಿತವಾಗಬೇಕು. ಅದಕ್ಕೆ ಪ್ರೇರಣೆ ನೀಡಲು ಈ ಹಣ್ಣುಗಳೊಂದಿಗೆ ಒಂದು ದಿನ.
             ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸರು ಕನ್ನಾಡಿಗೆ ವಿವಿಧ ಹಣ್ಣುಗಳ ಕೃಷಿ ಸಾಧ್ಯತೆಯನ್ನು ಮನದಟ್ಟು ಮಾಡಿದ ಕೃಷಿಕರು. ತಮ್ಮ ಫಾರ್ಮಿನಲ್ಲಿ ಬೆಳೆದು, ಇತರರೂ ಬೆಳೆಯುವಂತೆ ಪ್ರೋತ್ಸಾಹಿಸಿದವರು. ಮಲೇಶ್ಯಾ ಮೂಲಕ ರಂಬುಟಾನ್, ಡೂರಿಯನ್, ಮ್ಯಾಂಗೋಸ್ಟಿನ್.. ಹಣ್ಣುಗಳ ಕೃಷಿಯನ್ನು ಸ್ವತಃ ಬೆಳೆದು ತೋರಿಸಿದವರು. ಮೌಲ್ಯವರ್ಧನೆಯನ್ನು ಮಾಡಿದ ಮೇಲ್ಪಂಕ್ತಿ. ಬೆಳೆಯುವವನೇ ಮಾರಬಹುದು ಎಂದು ತೋರಿಕೊಟ್ಟರು. ಕನ್ನಾಡಿಗೆ ಹೊಂದುವ ವಿವಿಧ ಅಪೂರ್ವ ದೇಸಿ, ವಿದೇಶಿ ಹಣ್ಣುಗಳ ನರ್ಸರಿ ಮಾಡಿದವರು. ಇಷ್ಟು ಹಿನ್ನೆಲೆ ಯಾಕೆ? ಇಂದು ಕೃಷಿಕರ ಹೊಲದಲ್ಲಿ ರಂಬುಟಾನ್ನಂತಹ ಹಣ್ಣುಗಳು ಫಲ ಕೊಡುವುದರ ಹಿಂದೆ ಸೋನ್ಸರ ಅಜ್ಞಾತ ಶ್ರಮವಿದೆ.
               ಹವಾಯ್ ಹಣ್ಣುಗಳ ಊರು. ಬೆಳೆಯುವಲ್ಲಿಂದ ಮಾರುವ ತನಕದ ವ್ಯವಸ್ಥಿತ ಜಾಲ ಅಚ್ಚರಿ. ಅಲ್ಲಿನ ಹಣ್ಣು ಕೃಷಿಕ ಕೆನ್ಲವ್ ಕನ್ನಾಡಿಗೆ ಬಂದಿದ್ದಾಗ ಸೋನ್ಸರನ್ನು ಭೇಟಿಯಾಗಿದ್ದರು. ಹಣ್ಣುಗಳ ವೈವಿಧ್ಯ ನೋಡಿ ಬೆರಗಾಗಿದ್ದರು. 'ಭಾರತದಲ್ಲೂ ನನಗೊಬ್ಬ ಸ್ನೇಹಿತ ಸಿಕ್ಕಿದ' ಅಂತ ಜಾಲತಾಣಗಳಲ್ಲಿ ಬರೆದುಬಿಟ್ಟಿದ್ದರು. ಇಷ್ಟೆಲ್ಲಾ ಯಾಕೆ ಹೇಳಿದೆ ಅಂದರೆ ಹಣ್ಣುಗಳ ಕುರಿತಾದ ಅರಿವು ಭಾರತಕ್ಕಿಂತಲೂ ವಿದೇಶಗಳಲ್ಲಿ ಹೆಚ್ಚಿವೆ. ಮೂಲಿಕಾ ತಜ್ಞ ವೆಂಕಟರಾಮ ದೈತೋಟ ಒಮ್ಮೆ ಹೇಳಿದ್ದರು, ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೆಯೋ ಅದೇ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳಿಂದ ಆರೋಗ್ಯ ವೃದ್ಧಿ.
              ವಿವಿಧ ರಾಸಾಯನಿಕಗಳಿಂದ ತೋಯಿಸಿಕೊಂಡು, ಹಾರ್ಮೋನು ಲೇಪಿಸಿಕೊಂಡು, ತಾಳಿಕೆಯನ್ನು ದೀರ್ಘಗೊಳಿಸಿದ ಹಣ್ಣುಗಳತ್ತ  ಒಂದು ದೃಷ್ಟಿ ಇರಲಿ. ಇಂದು ಆದೇಶ ನೀಡಿದರೆ ನಾಳೆ ಬೆಳ್ಳಂಬೆಳಿಗ್ಗೆ ಬಾಳೆಹಣ್ಣು ರೆಡಿ ಮಾಡಿಕೊಡುವ ಕ್ಷಿಪ್ರ ವ್ಯವಸ್ಥೆಯನ್ನು ವೈಭವೀಕರಿಸಲು ಎಷ್ಟೊಂದು ಹೆಮ್ಮೆ ಪಡುತ್ತೇವಲ್ಲಾ. ತಾಜಾ ಹಣ್ಣುಗಳ ಸೇವನೆಯು ಬದುಕಿನ ಅಂಗವಾಗಬೇಕು. ಅದಕ್ಕಾಗಿ ಊಟದ ಬಟ್ಟಲಿಗೆ ಹಣ್ಣುಗಳು ಸೇರಲಿ.
               ಮುಳಿಯ ಕಾರ್ಯಕ್ರಮದಲ್ಲಿ ಸೋನ್ಸರು ಮುಖ್ಯ ವಿಚಾರದತ್ತ ಗಮನ ಸೆಳೆದರು _" ಅಮೇರಿಕಾ ದೇಶವು ಗೋಧಿ, ಅಕ್ಕಿಗಳನ್ನು ರಫ್ತು ಮಾಡುತ್ತವೆ. ಆಹಾರದಲ್ಲಿ ಇವುಗಳ ಸೇವನೆಗಿಂತಲೂ ಹಣ್ಣುಗಳ ಬಳಕೆ ವ್ಯಾಪಕವಾಗಿವೆ. ಹಾಗಾಗಿ ಅವರಿಗೆ ಗೋಧಿಯನ್ನು ರಫ್ತು ಮಾಡಲು ಸಾಧ್ಯವಾಯಿತು. ಹಣ್ಣುಗಳನ್ನು ಕನಿಷ್ಠ ಸಂಸ್ಕರಣೆ ಮಾಡಿ ಬೆಳೆದವನೇ ಮಾರುವಂತಾಗಬೇಕು. ಎಂದರು. ಸೋನ್ಸರಲ್ಲಿ ಬಹುತೇಕ ಹಣ್ಣುಗಳು ಮೌಲ್ಯವರ್ಧನೆಗೊಳ್ಳುತ್ತವೆ.
              ಬದುಕಿನಲ್ಲಿ ಅನುಷ್ಠಾನಕ್ಕೆ ಎಷ್ಟೋ ಬಾರಿ ಮಾದರಿಗಳು ಬೇಕಾಗಿವೆ. ಮುಳಿಯದ ಹಣ್ಣಿನ ಹಬ್ಬವು ಹೊಸ ಮಾದರಿಯನ್ನು ಸೃಷ್ಟಿಸಿದೆ. ಅಂದು ಹಣ್ಣುಗಳೇ ಊಟದ ತಟ್ಟೆಯನ್ನು ಆಕ್ರಮಿಸಿದ್ದುವು, ಅಲಂಕರಿಸಿದ್ದುವು. ಅನಾನಸು, ಪಪ್ಪಾಯಿ, ಗೇರುಹಣ್ಣು, ವಿವಿಧ ನಕ್ಷತ್ರನೇರಳೆ, ಹೂಬಾಳೆ, ಚಂದ್ರಬಾಳೆ, ಭಾಸ್ಕರ ಬಾಳೆ, ಜಾಂಜೀಬಾರ್, ಕಾವೇರಿ, ಲಾಂಗ್ಸಾಟ್ ಕರಬೂಜ, ದಾರೆಹುಳಿ, ಚಿಕ್ಕು, ಕಲ್ಲಂಗಡಿ.. ಹೀಗೆ ವಿವಿಧ ವೈವಿಧ್ಯ. ನಿಜಾರ್ಥದ 'ಫಲಾಹಾರ'. ಮೀಯಪದವಿನ ಕೃಷಿಕ ಡಾ.ಚಂದ್ರಶೇಖರ ಚೌಟರು ಈಚೆಗಷ್ಟೇ ಸ್ನೇಹಿತಗಡಣದೊಂದಿಗೆ ಮಲೇಶ್ಯಾ ದೇಶಕ್ಕೆ ಹೋಗಿ ಬಂದಿದ್ದರು. ಅಲ್ಲಿನ ತಾಜಾ ಹಣ್ಣುಗಳ ಮಾರುಕಟ್ಟೆಯತ್ತ ವಿಸ್ಮಯ ನೋಟ ಬೀರಿದರು.
              ಹಣ್ಣುಗಳ ಗುಂಗು ಹಿಡಿಸಿಕೊಂಡು ಓಡಾಡುತ್ತಿರುವಾಗ ಸ್ನೇಹಿತ ಕುಳಮರ್ವ ಶಂಕರ ಭಟ್ಟರು 'ನಿಮ್ಮೆದುರಲ್ಲೇ ಸಂಜೀವಿನಿ' ಎನ್ನುವ ಪುಸ್ತಕ ನೀಡಬೇಕೇ. ಅದರಲ್ಲಿ ಡಾ.ನಡಿಬೈಲು ಉದಯಶಂಕರರು ಹಣ್ಣುಗಳಿಗೆ ಸೇರುವ ರಾಸಾಯನಿಕ ವಿಷಗಳನ್ನು ಉಲ್ಲೇಖಿಸುತ್ತಾರೆ. "ದ್ರಾಕ್ಷಿಯ ಬೆಳೆಯನ್ನು ವರ್ಧಿಸಲು ಅದಕ್ಕೆ 'ಸಿಟೋಫೆಕ್ಸ್' ಸುರಿಯುತ್ತಾರೆ. ಮಾವಿನ ಮರವು ಹೆಚ್ಚು ಹೂ ಬಿಟ್ಟು ಹೆಚ್ಚಿ ಕಾಯಿಗಳು ಹಿಡಿಯುವಂತೆ ಮಾಡಲು 'ಪ್ಲಾಕ್ಲೋಬುಟ್ರಾಜಾಲ್' ಬಳಕೆ. ಕೀಟಗಳ ನಿಯಂತ್ರಣಕ್ಕೆ ಪ್ಯಾರಾಥಿಯಾನ್, ಮ್ಯಾಲಾಥಿಯಾನ್, ಡೈಮಿತೋಯೇಟ್, ಮೆಥಾಮಿಲ್, ಕಾಬರ್ಾರಿಲ್.. ಸಿಂಪಡಣೆ. ಇವೆಲ್ಲಾ ಒಂದೊಂದು ರೀತಿಯ ಘೋರ ವಿಷಗಳು."
             ವಿಷಬೇಡದ, ಸಿಂಪಡಣೆ ಬೇಕಾಗದ ಹಣ್ಣುಗಳು ನಮ್ಮ ಸುತ್ತ ಎಷ್ಟಿಲ್ಲ? ಹೆಚ್ಚೇಕೆ, ಹಲಸಿನ ಹಣ್ಣು, ಮಾವು, ಪಪ್ಪಾಯಿ ಸಾಲದೇ? ಹೆಚ್ಚು ಪ್ರತಿಷ್ಠೆಯನ್ನು ಹುಟ್ಟಿಸದ ಇಂತಹ ಹಣ್ಣುಗಳಳತ್ತ ಒಲವಿಲ್ಲ. ಬಲವಂತದಿಂದ ಒಲವು ಮೂಡಿಸಬೇಕಾದ ದಿನಮಾನಗಳಲ್ಲಿದ್ದೇವೆ. ಮುಳಿಯದ ಕಲಾಪದಲ್ಲಿ ಹಣ್ಣು ಕೃಷಿಕ ಅನಿಲ್ ಬಳೆಂಜರು ನೀಡಿದ ಚಿತ್ರ ಸಹಿತ ಮಾಹಿತಿಯು ಪ್ರಾಕ್ಟಿಕಲ್. ವಿವಿಧ ನಮೂನೆಯ ಹಣ್ಣುಗಳ ಗಿಡಗಳನ್ನು ತಂದು, ಅವುಗಳನ್ನು ಅಭಿವೃದ್ಧಿಗೊಳಿಸಿವ ಯುವ ಸಾಹಸಿ. ವಿದೇಶಿ ಹಣ್ಣುಗಳೂ ಕನ್ನಾಡಿಗೆ ಒಗ್ಗಿಕೊಳ್ಳುತ್ತವೆ ಎಂದು ಸೋನ್ಸರಂತೆ  ಸ್ವತಃ ಅನುಭವ ಪಡೆದಿದ್ದಾರೆ. ಇವರ ಬೆಳೆದ ಹಣ್ಣುಗಳ ಪ್ರದರ್ಶನ ಆಕರ್ಶಿಸಿತು.
               ಹಣ್ಣುಗಳೊಂದಿಗೆ ಒಂದು ದಿನವಲ್ಲ, ವರುಷವಿಡೀ ಸಿಗುವ ಸಂಪನ್ಮೂಲ ನಮ್ಮಲ್ಲಿದೆ. ಅದಕ್ಕೆ ಬೆಳಕು ಹಾಕಿದೆ, ಮುಳಿಯದ ಕಾರ್ಯಕ್ರಮ. ಹಲಸು ಸ್ನೇಹಿ ಕೂಟಕ್ಕೀಗ ಆರರ ಹರೆಯ. ತರಕಾರಿ, ಹಲಸು, ಮಾವು, ಕಾಡುಮಾವು, ಗೆಡ್ಡೆಗೆಣಸು, ಸಿರಿಧಾನ್ಯ.. ಹೀಗೆ ಒಂದೊಂದು ವಿಷಯಾಧಾರಿತವಾದ ಕಲಾಪಗಳನ್ನು ನಡೆಸುತ್ತಿದೆ. ಮಾವು, ಹಲಸು ಮತ್ತು ಇತರ ಹಣ್ಣುಗಳ ಹುಚ್ಚನ್ನು ಅಂಟಿಸಿಕೊಂಡ ಚಿಕ್ಕ ಬಳಗವಿದೆ. ನಾವೇನೂ ದೊಡ್ಡ ಪರಿವರ್ತನೆ ತರುತ್ತೇವೆ ಎನ್ನುವ ಹುಚ್ಚು ಇಲ್ಲ. ನಂನಮ್ಮ ಅಡುಗೆಮನೆಗಳು, ಜೀವನಶೈಲಿಗಳು ಬದಲಾಗಬೇಕು ಎನ್ನುವ ಆಶಯ.  ಅದು ಹಳಿ ಸೇರುತ್ತಿವೆಷ್ಟೇ, ಎಂದರು ವೆಂಕಟಕೃಷ್ಣ ಶರ್ಮ.
               ಕರಾವಳಿಯ ಮಣ್ಣು ಹಣ್ಣುಗಳ ಕೃಷಿಗೆ ಉತ್ತಮ. ಪ್ರಕೃತಿ ನಮ್ಮ ಪರವಾಗಿದೆ, ಎಂದವರು ಚೆಟ್ಟಳ್ಳಿ  ಐಐಹೆಚ್ ಮುಖ್ಯಸ್ಥ ಡಾ.ಸೆಂತಿಲ್ ಕುಮಾರ್. ಇನ್ಯಾಕೆ ತಡ..!

(ಉದಯವಾಣಿ-ನೆಲದನಾಡಿ ಅಂಕಣ)
 


ಗೆಣಸು ಕೃಷಿಯ ಚರಿತ್ರೆ ಬದಲಾಗುತ್ತಿದೆ..!





             ಬೆಳಗಾವಿ ಜಿಲ್ಲೆಯ ಖಾನಾಪುರವು ಸಿಹಿ ಗೆಣಸು ಕೃಷಿಗೆ ಖ್ಯಾತಿ. ನಾಲ್ಕು ದಶಕಗಳಿಂದ ಗೆಣಸು ಬದುಕಿನ ಜೀವನಾಡಿ. ತಾಲೂಕಿನ ಸುಮಾರು ಮೂರುವರೆ ಸಾವಿರದಷ್ಟು ಕೃಷಿಕರ ಜೀವನದ ಬಹುಪಾಲನ್ನು ಸಿಹಿಗೆಣಸು ಸಿಹಿಯಾಗಿಸುತ್ತದೆ. ಗೆಣಸು ಮಾತ್ರ ನೆಚ್ಚಿಕೊಳ್ಳದೆ ಇತರ ಕೃಷಿಯನ್ನು ಜತೆಜತೆಗೆ ಹೊಂದಿದ್ದಾರೆ. ಅರ್ಧ ಎಕರೆಯಿಂದ ಹದಿನೈದು ಎಕ್ರೆ ವರೆಗೆ ಬೆಳೆಯುವ ಸಣ್ಣ, ದೊಡ್ಡ ಕೃಷಿಕರಿದ್ದಾರೆ. ವರುಷಕ್ಕೆ ಒಂದೇ ಬೆಳೆ.
             ಸುಮಾರು ಹದಿನಾಲ್ಕುವರೆ ಸಾವಿರ ಎಕ್ರೆಯಲ್ಲಿ ಗೆಣಸು ಕೃಷಿಯಿದೆ. ಎಕ್ರೆಗೆ ಆಜೂಬಾಜು ಐವತ್ತು ಕ್ವಿಂಟಾಲ್ ಇಳುವರಿ. ಅಂದರೆ ಎಪ್ಪತ್ತೆರಡು ಟನ್! ಕ್ವಿಂಟಾಲಿಗೆ ಐನೂರು ರೂಪಾಯಿ ದರದಂತೆ ಲೆಕ್ಕ ಹಾಕಿದರೂ ಒಟ್ಟು ಮೂವತ್ತಾರು ಕೋಟಿ ರೂಪಾಯಿ ವ್ಯವಹಾರ. ಅರ್ಧಕ್ಕರ್ಧ ಖರ್ಚು ಮನ್ನಾ ಆದರೂ ಉಳಿಕೆ ಹದಿನಾರು ಕೋಟಿ ರೂಪಾಯಿಗೆ ತೊಂದರೆಯಿಲ್ಲ.
               ಅಂಕಿಅಂಶದತ್ತ ಕಣ್ಣಾಡಿಸಿದರೆ ರೋಚಕವಾಗಿ ಕಾಣುತ್ತದೆ. ತಾಲೂಕಿನ ಒಂದು ಕೃಷಿಯು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯವಹಾರವನ್ನು ಕುದುರಿಸುತ್ತದೆ ಎನ್ನುವುದು ಸ್ಥಳಿಯರಿಗೆ ಆಶ್ಚರ್ಯ. ಯಾಕೆ ಹೇಳಿ, ಯಾರೂ ಲೆಕ್ಕ ಇಟ್ಟು ಕೃಷಿ ಮಾಡುವವರಲ್ಲ. ಎಷ್ಟು ಇಳುವರಿ ಸಿಕ್ಕಿತು, ಮಾರುಕಟ್ಟೆಯಲ್ಲಿ ದರ ಹೇಗೆ, ಎಷ್ಟು ಸಿಗಬಹುದು.. ಎನ್ನುವ ಪಕ್ಕಾ ವ್ಯವಹಾರವಷ್ಟೇ. ಇದು ಸಹಜ ಕೂಡಾ.
              ಮಾರುಕಟ್ಟೆ ದರವು ಕ್ವಿಂಟಾಲಿಗೆ ನಾಲ್ಕುನೂರು ರೂಪಾಯಿಂದ ಒಂದು ಸಾವಿರದ ತನಕವೂ ಇದೆ. ಸರಾಸರಿ ಆರುನೂರು ರೂಪಾಯಿ ಸಿಕ್ಕರೆ ಲಾಭ. ಬೆಳಗಾವಿ ಎ.ಪಿ.ಎಂ.ಸಿ.ಯಲ್ಲಿ ಮಾರುಕಟ್ಟೆ. ದಲ್ಲಾಳಿಗಳಿಂದ ಟೆಂಡರ್ ಮೂಲಕ ಖರೀದಿ. ಖಾನಾಪುರಕ್ಕೆ ಬೆಳಗಾವಿ ಮತ್ತು ಗೋವಾ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವಿದೆ. ಹೆದ್ದಾರಿಯ ಬದಿಯಲ್ಲಿ ಕೃಷಿಕರೇ ನೇರ ಮಾರಾಟ ಮಾಡುವುದಿದೆ.
               ಒಂದು ಕಿಲೋಗೆ ಹತ್ತು ರೂಪಾಯಿಯಂತೆ ಮಾರಾಟ. ಕೆಲವೊಮ್ಮೆ ಮಾರುಕಟ್ಟೆಯ ಹಾವೇಣಿಯಾಟದಿಂದ ಟೊಮೆಟೋ, ನೀರುಳ್ಳಿಯಂತೆ ಮೂರು ರೂಪಾಯಿಗೆ ಇಳಿದುದೂ ಇದೆ. ಏರುದರ ಬರುವಲ್ಲಿಯ ತನಕ ಕಾಪಿಡಲು ಶೀತಲೀಕರಣದ ವ್ಯವಸ್ಥೆಯಿಲ್ಲ. ಹಾಗಾಗಿ ಸಿಕ್ಕ ಕ್ರಯಕ್ಕೆ ಮಾರುವ ಪ್ರಮೇಯ ಬರುವುದುಂಟು.
               ಸಿಹಿ ಗೆಣಸಿನ ಕೃಷಿ ಏರಿಯಾ ವಿಸ್ತರಣೆಯಾಗಿ ದಶಕ ಮೀರಿತು. ಮೊದಲೆಲ್ಲಾ ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿದ ರೈತರಿಗೆ ಒಲವು ಮೂಡಿತು. ಬೆಳೆಯುವ ಜಾಗ ವಿಸ್ತರಣೆಯಾಯಿತು. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲ ಎನ್ನುವ ವಾಸ್ತವ ಕೆಲವೊಮ್ಮೆ ಬೆಳೆದವರ ನಿದ್ದೆಗೆಡಿಸಿದುದೂ ಇದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ದೊಡ್ಡ ಗ್ರಾಹಕವರ್ಗವಿದೆ. ಸ್ಥಳೀಯವಾಗಿಯೂ ಅಲ್ಪಸ್ವಲ್ಪ ಬೇಡಿಕೆಯಿದೆ.
               ಮಳೆ ಕಡಿಮೆಯಾದಾಗ ಗೆಣಸಿಗೆ ಕಾಯಿಕೊರಕ ಹುಳುವಿನ ಕಾಟ. ಇದಕ್ಕೆ ಕೀಟನಾಶಕ ಸಿಂಪಡಣೆ. ಇದು ಕಾಯಿಕೊರಕ ಅಂತ ಗೊತ್ತಿಲ್ಲದೆ ಸಹಜವೆಂದು ನಂಬಿದವರೇ ಅಧಿಕ. ಸಕಾಲಕ್ಕೆ ನಿರ್ವಹಣೆ ಮಾಡಿದರೆ ಬೆಳೆಯನ್ನು ಉಳಿಸಿಕೊಳ್ಳಬಹುದು.  ಹಂದಿ, ಮುಳ್ಳುಹಂದಿ, ಹೆಗ್ಗಣಗಳೂ ಬೋನಸ್ ನೀಡುತ್ತವೆ! ರೈತರೇ ಕಾವಲು ಕಾದು ಕಾಡುಪ್ರಾಣಿಗಳನ್ನು ಓಡಿಸುತ್ತಾರೆ. ಬೇರೆ ಪರ್ಯಾಯ ವ್ಯವಸ್ಥೆಗಳಿಲ್ಲ.
             ಸಿಹಿ ಗೆಣಸಿನ್ನು ತಂದೂರಿ, ಚಿಪ್ಸ್, ಹೊಳಿಗೆಗೆ ಹೂರಣವಾಗಿ ಬಳಸುತ್ತಾರೆ. ಬೇಯಿಸಿದ ಗೆಣಸಿಗೆ ತುಪ್ಪ, ಹಾಲು, ಬೆಲ್ಲ ಸೇರಿಸಿ ಮಾಡುವ 'ಹುಗ್ಗಿ' ಜನಪ್ರಿಯ. ಎಣ್ಣೆಯಲ್ಲಿ ಕರಿದು, ಮಸಾಲ ಸೇರಿಸಿ ಮಾಡುವ ಚಿಪ್ಸ್ ಕುರುಕುರು ತಿಂಡಿ. ಮನೆಮಟ್ಟದ ಬಳಕೆ ಬಿಟ್ಟರೆ ಗೆಣಸು ಆಧಾರಿತ ಉದ್ದಿಮೆ ಇಲ್ಲದಿರುವುದು ವಿಷಾದನೀಯ. ಗೆಣಸಿನಿಂದ ಹಲವು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಸಾಧ್ಯ.
             ಅಕಾಲದಲ್ಲಿ ಗೆಣಸನ್ನು ಮಾರುಕಟ್ಟೆಗೆ ಕಳುಹಿಸಿದರೆ ಬೆಲೆ ಹೆಚ್ಚು ಸಿಗಬಹುದು ಎನ್ನುವ ದೃಷ್ಟಿಯಿಂದ ಕೃಷಿಕರೊಬ್ಬರು ಸಕಾಲಕ್ಕೆ ಗೆಣಸನ್ನು ಅಗೆಯದೆ ಹಾಗೆ ಬಿಟ್ಟುಬಿಟ್ಟಿದ್ದರು. ಒಂದೆರಡು ತಿಂಗಳ ಬಳಿಕ ಏರುದರವಿದ್ದಾಗ ಗೆಣಸನ್ನು ಅಗೆದು ನೋಡುತ್ತಾರೆ, ಅರ್ಧಕ್ಕರ್ಧ ಗೆದ್ದಲು ಸ್ವಾಹಾ ಮಾಡಿತ್ತು. ಅವರ ನಿರೀಕ್ಷೆ ಹುಸಿಯಾಯಿತು. ಪರಿಹಾರದ ದಾರಿ ಕಾಣದೆ ಕಂಗೆಟ್ಟಿದ್ದರು.
             ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗೆಣಸು ಕೃಷಿಕರ ನೆರವಿಗೆ ಬಂದಿದೆ. ಈಚೆಗೆ ಗೆಣಸು ಕೃಷಿಕರ ಅನೌಪಚಾರಿಕ ಸಭೆಯೊಂದನ್ನು ಹಮ್ಮಿಕೊಂಡಿತ್ತು. ಎಲ್ಲರನ್ನೂ ಒಂದೇ ಸೂರಿನಡಿ ತಂದು ಕೃಷಿಯ ಅಭಿವೃದ್ಧಿಗೆ ಪೂರಕವಾದ ಮಾಹಿತಿಯನ್ನು ನೀಡುವುದು ಕಾರ್ಯಹೂರಣ. ಗೆಣಸು ಕೃಷಿಯ ಚರಿತ್ರೆಯಲ್ಲೇ ಮೊದಲ ಸಭೆ! ಉತ್ತಮ ಪ್ರತಿಕ್ರಿಯೆ. ಕೇವಲ ಮಾರುಕಟ್ಟೆ, ದರ ಇಷ್ಟನ್ನೇ ತಲೆತುಂಬಿಕೊಂಡಿದ್ದ ರೈತರಿಗೆ ಬೀಜೋಪಚಾರದಿಂದ ತೊಡಗಿ ಮೌಲ್ಯವರ್ಧನೆಯ ತನಕ ಮಾಹಿತಿ ನೀಡುವ ನೀಲನಕ್ಷೆ ಸಿದ್ಧಪಡಿಸಿತು.
              ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರೆ ಸುಲಭ ಮಾರುಕಟ್ಟೆ ಸಾಧ್ಯ. ಇದರಿಂದಾಗಿ ಆದಾಯವರ್ಧನೆಯೂ ಆದಂತಾಗುತ್ತದೆ. ಕೃಷಿಕರಲ್ಲಿ ಹುಮ್ಮಸ್ಸು ಮೂಡಿಸುವ ಕಾರ್ಯಯೋಜನೆಯು ಸಿದ್ಧವಾಯಿತು. ಉಪ್ಪಿನಕಾಯಿ, ಹಪ್ಪಳ, ಸೆಂಡಿಗೆ, ಗುಲಾಬ್ಜಾಮ್.. ಮೊದಲಾದ ಪದಾರ್ಥಗಳನ್ನು ತಯಾರಿಸಬಹುದು. ಯೋಜನೆಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಅರಿವು ಮೂಡಿಸುವತ್ತ ಶೀಘ್ರವೇ ಯತ್ನಿಸಲಾಗುವುದು, ಎಂದು ಯೋಜನೆಯ ಧಾರವಾಡ ವಿಭಾಗದ ನಿರ್ದೇಶಕ ಜಯಶಂಕರ ಶರ್ಮ ಸಂಕಲ್ಪ.
             ಕುರುವಳ್ಳಿ ಕೃಷಿ ಸಂಶೋಧನಾ ಕೇಂದ್ರ, ತೀರ್ಥಹಳ್ಳಿ ಇವರು ಹಿಂದಿನ ತಿಂಗಳು ಗೆಡ್ಡೆಗೆಣಸಿನ ಮೇಳ ಆಯೋಜಿಸಿದ್ದರು.  ಯೋಜನೆಯು ಆಯ್ದ ಗೆಣಸು ಬೆಳೆಗಾರರನ್ನು ಮೇಳಕ್ಕೆ ಕಳುಹಿಸಿತು. ಕಳೆದ ವರುಷವಷ್ಟೇ ಗೆಡ್ಡೆ ಮೇಳವನ್ನು ಮಾಡಿ ಯಶಸ್ಸಾದ ಜೋಯಿಡಾ ತಂಡವೂ ಮೇಳಕ್ಕೆ ಆಗಮಿಸಿತ್ತು. ಎಲ್ಲರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡ ಖಾನಾಪುರ ಕೃಷಿಕರು ಖುಷ್. ಅದೇ ಮೇಳಕ್ಕೆ ಕೇರಳದ ತಿರುವನಂತಪರದ ಕೇಂದ್ರೀಯ ಗೆಡ್ಡೆ ಗೆಣಸು ಬೆಳೆಗಳ ಸಂಶೋಧನಾ ಸಂಸ್ಥೆಯು ಹಿರಿಯ ವಿಜ್ಞಾನಿ ಡಾ.ರಾಮನಾಥನ್ ಕೂಡಾ ಆಗಮಿಸಿದ್ದರು.
            ಗೆಣಸು ಕತೆಗೆ ಕಿವಿಯಾದ ರಾಮನಾಥನ್ ಉತ್ಸುಕರಾಗಿ ತಂಡದೊಂದಿಗೆ ಖಾನಪುರಕ್ಕೆ ಭೇಟಿ ನೀಡಿದರು. ಕೃಷಿಕರೊಂದಿಗೆ ಮಾತುಕತೆ ಮಾಡಿದರು. ದೇಶದ ಕೆಲವೇ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಯಬಹುದಾದ ಗೆಣಸು - ವೈದ್ಯಕೀಯ, ಆಹಾರ ಮತ್ತು ಕುರುಕುರು ತಿಂಡಿಗಳ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಹೊಂದಿದೆ. ರೈತರು ಈ ಬೆಳೆಯನ್ನು ಕ್ರಮಬದ್ಧವಾಗಿ ಬೆಳೆಯುವ ಮೂಲಕ ಅರ್ಥಿಕ ಸಬಲತೆ ಸಾಧಿಸಬಹುದು, ಎಂದು ಧೈರ್ಯ ತುಂಬಿದರು.
              ಗೆಣಸಿಗೆ ಬಾಧಿಸುವ ವಿವಿಧ ರೋಗಗಳ ನಿಯಂತ್ರಣಕ್ಕೆ  ಕೀಟತಜ್ಞ  ನೆಡುಚೆಝಿಯನ್ ಪರಿಹಾರೋಪಾಯಗಳನ್ನು ಸೂಚಿಸಿದರು. ಖಾನಾಪುರಕ್ಕೆ ಮೊದಲ ಬಾರಿಗೆ ವಿಜ್ಞಾನಿಗಳ ತಂಡ ಬಂದು ರೈತರೊಂದಿಗೆ ಸಮಾಲೋಚಿಸಿರುವುದು ಗಮನೀಯ. ರಾಮನಾಥನ್ ಉಪಸ್ಥಿತರಿದ್ದ ಸಭೆಯಲ್ಲಿ ಸ್ಥಳೀಯರು ಐದು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರು. ಗೆಣಸಿನಲ್ಲಿ ಹಲವಾರು ವೈವಿಧ್ಯಗಳಿದ್ದು ಅದನ್ನು ಕೂಡಾ ಬೆಳೆಯುವಂತೆ ಕಿವಿ ಮಾತು ಹೇಳಿದರು. ಪ್ರಾಯೋಗಿಕವಾಗಿ ಖಾನಾಪುರದಲ್ಲಿ ಸ್ಥಳೀಯ ವೈವಿಧ್ಯಗಳಲ್ಲದೆ, ಇತರ ಹೊಸ ತಳಿಗಳು ಆಗಮಿಸಲು ಕ್ಷಣಗಣನೆ ಆರಂಭವಾಗಿದೆ.
             ವಿಜ್ಞಾನಿಗಳ ಸಲಹೆಯಂತೆ  ಕೃಷಿ ಮಾಡಲು ಕೃಷಿಕರು ಮುಂದಾಗಿದ್ದಾರೆ. ಬೀಜ, ಸಸಿಯ ಹಂತದಿಂದಲೇ ವಿವಿಧ ಉಪಚಾರಗಳ ಅಗತ್ಯವಿದ್ದು, ಅದನ್ನು ರೈತರಿಗೆ ಹಂಚಲು ವಿಜ್ಞಾನಿಗಳೂ ಸಿದ್ಧರಾಗಿದ್ದಾರೆ. ಈ ಭಾಗದಲ್ಲಿ ಮಳೆ ಕಡಿಮೆಯಾದ ಕಾರಣ ರೋಗ ಜಾಸ್ತಿ. ಹಾಗೆಂದು ಮಳೆ ಬಂದರೂ ನಾಶ ಮಾಡಲಾರದಷ್ಟು ರೋಗ ಹಬ್ಬಿದೆ, ವಿಜ್ಞಾನಿಗಳ ಅಂಬೋಣ.
ಈ ಎಲ್ಲಾ ಪ್ರಕ್ರಿಯೆಗಳಿಂದ ರೈತರಿಗೆ ಉಮೇದು ಹೆಚ್ಚಾಗಿದೆ. ಸಂಘಟನೆಯ ಆವಶ್ಯವನ್ನು ಮನಗಂಡಿದ್ದಾರೆ. ಎಲ್ಲವೂ ಸರಿಹೋದರೆ ನಬಾರ್ಡ್  ನೆರವಿನೊಂದಿಗೆ ಗೆಣಸು ಬೆಳೆಗಾರರ ಸೊಸೈಟಿಯೊಂದು  ರೂಪುಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿದೆ. ರೈತರನ್ನು ಮೇಳಕ್ಕೆ ಒತ್ತಾಯವಾಗಿ ಕಳುಹಿಸಲಾಗಿತ್ತು. ಗೆಡ್ಡೆ ಗೆಣಸುಗಳ ಪ್ರಪಂಚ ವಿಶಾಲವಿದೆ ಎಂಬ ಅರಿವಾಯಿತು. ಉತ್ತಮ ಮಾರುಕಟ್ಟೆಯಿದೆ, ಮೌಲ್ಯವರ್ಧನೆ ಮಾಡಲೂ ಸಾಧ್ಯ ಎಂಬ ಮಾಹಿತಿ ರೈತರಲ್ಲಿ ಉತ್ಸಾಹ ಮೂಡಿಸಿತು. ಎಲ್ಲಕ್ಕಿಂತಲೂ ಮುಖ್ಯವಾಗಿ ವಿಜ್ಞಾನಿಗಳು ಸ್ಪಂದಿಸಿರುವುದು ಖಾನಾಪುರದಲ್ಲಿ ಸಂಚಲನ ಮೂಡಿಸಿದೆ, ಎನ್ನುತ್ತಾರೆ ಜಯಶಂಕರ್.
           ಗೆಣಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಉದ್ದಿಮೆ ಮತ್ತು ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವ ತಂಪುಮನೆಗಳ ಆವಶ್ಯಕತೆಗಳು ಮೊದಲಾದ್ಯತೆಯಲ್ಲಿ ಆಗಬೇಕಾಗಿದೆ. ನಬಾರ್ಡ್ ನೆರವಿನ ಸೊಸೈಟಿ, ಗೆಣಸು ಬೆಳೆಗಾರರ ಸಂಘ, ಗ್ರಾಮಾಭಿವೃದ್ಧಿ ಯೋಜನೆಯ ಹೆಗಲೆಣೆಗಳು ಖಾನಾಪುರದ ಗೆಣಸು ಕೃಷಿಗೆ, ಕೃಷಿಕರಿಗೆ ವರವಾಗಿ ಪರಿಣಮಿಸಲಿದೆ.

ನೀರಿನ ಕೂಗು ವಿಧಾನಸೌಧಕ್ಕೆ ಕೇಳಿಸುತ್ತಿಲ್ಲ!

ಕನ್ನಾಡಿನಲ್ಲೀಗ ಬಿಸಿಲ ಧಗೆ. ಕುಡಿ ನೀರಿಗೂ ತತ್ವಾರ. ಸಚಿವರು ನೀಡಿದ ಅಂಕಿಅಂಶದಂತೆ ಈ ವರುಷ ಸುಮಾರು ಎಂಟು ಸಾವಿರ ಕೊಳವೆ ಬಾವಿಗಳು ಬರಿದಾಗಿವೆ. ನಾಲ್ಕೂವರೆ ಸಾವಿರ ಹಳ್ಳಿಗಳಲ್ಲಿ  ಕುಡಿಯುವ ನೀರಿಗೆ ಸಮಸ್ಯೆಯಿದೆ. ಹನ್ನೊಂದು ಜಿಲ್ಲೆಗಳ ಮುನ್ನೂರು ಗ್ರಾಮಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅಂತರ್ಜಲ ಬರಿದಾಗಿದೆ. ರೈತರು ಬರದ ಬವಣೆಯಲ್ಲಿದ್ದಾರೆ. ಪರಿಹಾರದ ದಾರಿ ಕಾಣುತ್ತಿಲ್ಲ.
    'ಇನ್ನೊಂದು ಯುದ್ಧ ಆಗುವುದಿದ್ದರೆ ಅದು ನೀರಿಗಾಗಿ,' ಜಲಯೋಧರು ಆಗಾಗ್ಗೆ ಎಚ್ಚರಿಸುತ್ತಿರುವ ಮಾತು. ಇದು ಸತ್ಯವಾಗುವ ಎಲ್ಲಾ ಲಕ್ಷಣಗಳು ಹತ್ತಿರವಾಗುತ್ತಿವೆ. ರಾಜ್ಯಗಳೊಳಗೆ ನೀರಿಗಾಗಿ ಮುನಿಸು. ಪರಸ್ಪರ ಕೆಸರೆರಚಾಟ. ರಾಜಕೀಯ ಲಾಭದ ಲೆಕ್ಕಾಚಾರ. ಅದಕ್ಕೊಂದಿಷ್ಟು ಜಾತಿಯ ಸ್ಪರ್ಶ. ಮತೀಯ ನಂಟು. ಸಮಸ್ಯೆಗೆ ಪರಿಹಾರ ಯಾರಿಗೂ ಬೇಕಾಗಿಲ್ಲ.
    ಅಂತರ್ಜಲ ಬರಿದಾಗುತ್ತಿದೆ - ಎನ್ನುವುದು ಆಡಳಿತ ಯಂತ್ರಕ್ಕೆ  ಗೊತ್ತಿದೆ. ಜನನಾಯಕರಿಗೆ ತಿಳಿದಿದೆ. ಸಂಬಂಧಪಟ್ಟ ಇಲಾಖೆಗಳಿವೆ. ಇವರಿಗೆಲ್ಲಾ ಅಂತರ್ಜಲ, ಜಲಮರುಪೂರಣ, ನೀರಿನ ಅರಿವಿನ ಪಾಠ ಆಗಬೇಕೇನೋ. ಸಮಸ್ಯೆಗೆ ಪರಿಹಾರವನ್ನು ತುರ್ತಾಗಿ ಮಾಡಬೇಕಾದ ಸರಕಾರವು ಅಧಿಕಾರ ಉಳಿಸುವ ಚಿಂತನೆಯಲ್ಲಿ ತೊಡಗಿವೆ. ಮೋಡಬಿತ್ತನೆ, ನದಿ ಜೋಡಣೆ, ನೀರೆತ್ತುವ ಯೋಜನೆ, ನದಿ ತಿರುಗಿಸುವ ಯೋಜನೆ.. ಎಲ್ಲೆಲ್ಲಾ ಕೋಟಿಗಳ ಎಣಿಕೆ ಇದೆಯೋ ಅಲ್ಲೆಲ್ಲಾ ಫೈಲುಗಳನ್ನು ಸಿದ್ಧಪಡಿಸುವುದರಲ್ಲೇ ಅಧಿಕಾರಿ ವರ್ಗ ತಲ್ಲೀನವಾಗಿವೆ. 
ರಾಜ್ಯದ ಹಳ್ಳಿಗಳನ್ನು ಸುತ್ತುತ್ತಿರುವ ಪತ್ರಕರ್ತ ಶಿವಾನಂದ ಕಳವೆ ಹೇಳುತ್ತಾರೆ, ಕೃಷಿಕರೂ ಸೇರಿದಂತೆ ಜಲಸಾಕ್ಷರತೆ ಹೆಚ್ಚಬೇಕಾಗಿದೆ. ಪ್ರತ್ಯೇಕವಾದ ಜಲ ಅಕಾಡೆಮಿ ರೂಪುಗೊಳ್ಳಬೇಕು. ಚಿಕ್ಕ ಸಂರಕ್ಷಣಾ ಯಶೋಗಾಥೆಗಳಿಗೆ ಬೆಳಕೊಡ್ಡುವ ಕೆಲವಾಗಬೇಕು. ಮಳೆ ನೀರನ್ನು ಹಿಡಿದಿಡುವ ಸರಳ ವ್ಯವಸ್ಥೆಗಳನ್ನು ಪರಿಚಯಿಸಬೇಕು. ಜಲ ಸಂರಕ್ಷಣೆಯ ವಿವಿಧ  ರಚನೆಗಳು, ಚಾವಣಿ ನೀರಿನ ಜಲ ಸಂರಕ್ಷಣಾ ಸರಲಕರಣೆಗಳ ಪ್ರದರ್ಶನಾಲಯವನ್ನು ಜಿಲ್ಲೆಗಳು ಒಳಗೊಂಡಿರಬೇಕು. ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಚಾವಣಿ ನೀರು ಸಂಗ್ರಹದ ಮಾದರಿಗಳನ್ನು ಪರಿಚಯಿಸುವಂತಾಗಬೇಕು.
ಭೂಗರ್ಭ ಶಾಸ್ತ್ರಜ್ಞ ಎನ್. ದೇವರಾಜ ರೆಡ್ಡಿಯವರ ಮಾತನ್ನು ಗಮನಿಸಿ - ಮಣ್ಣಿನ ಗುಣಮಟ್ಟ, ಭೂಗರ್ಭದ ರಚನೆ, ಜಲ ಸೆಲೆ ಹರಿಯುವ ಅರಿವಿಲ್ಲದೆ, ಯಾರೋ ಅಂದಾಜು ಮಾಡಿ ಗುರುತಿಸುವ ಜಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಯುತ್ತಾರೆ. ಇಂತಹ ಅವೈಜ್ಞಾನಿಕ ಮನಃಸ್ಥಿತಿ ಅಂತರ್ಜಲದ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯವನ್ನೂ ಒಳಗೊಂಡು ದೇಶದಲ್ಲಿ ಕೊಳವೆ ಬಾವಿಗಳ ಕಾರ್ಯಕ್ಷಮತೆ ಉತ್ತಮವಾಗಿಲ್ಲ. ನೀರಿನ ಸಮಸ್ಯೆಗೆ ಕೊಳವೆ ಬಾವಿ ಕೊರೆಯುವುದೊಂದೇ ಪರಿಹಾರವಲ್ಲ. ಇದಕ್ಕೆ ಕೆರೆ ಕಟ್ಟೆಗಳಂತಹ ಜಲಸಂರಕ್ಷಣಾ ತಾಣಗಳನ್ನು ಜೋಡಿಸಬೇಕು. ನೀರು ಇಂಗಿಸುವ ಚೆಕ್ ಡ್ಯಾಮ್ಗಳು ನಿರ್ಮಾಣವಾಗಬೇಕು. ಕೊಳವೆ ಬಾವಿಗಳ ಮರುಪೂರಣಗಳಾಗಬೇಕು. ಈ ಯತ್ನಗಳೆಲ್ಲಾ ಸಾಮೂಹಿವಾಗಿ ನಡೆಯಬೇಕು.
ವೈಯಕ್ತಿಕ ನೆಲೆಯಲ್ಲಿ ಜಲ ಸಂರಕ್ಷಣೆಯನ್ನು ಮಾಡಿದ ಕೃಷಿಕರು ನೀರಿನ ಬರಕ್ಕೆ ಹೆದರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಮಣ್ಣು ಮತ್ತು ನೀರಿನ ಅರಿವು ಮೂಡಿಸಿಕೊಂಡ ಕೃಷಿಕರು ಬರನಿರೋಧಕ ಜಾಣ್ಮೆಯನ್ನು ಬಳಸಿಕೊಂಡಿದ್ದಾರೆ. ತಮ್ಮ ಹೊಲವನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು ಯಶಸ್ಸಾಗಿದ್ದಾರೆ. ಮಳೆ ನೀರನ್ನು ಹಿಡಿದಿಟ್ಟುಕೊಂಡು ವರುಷಪೂರ್ತಿ ಬಳಕೆ ಮಾಡುವ ಜಲಸಾಕ್ಷರರಿದ್ದಾರೆ. ತಿಪಟೂರಿನ ಬೈಫ್ ಸಂಸ್ಥೆಯಲ್ಲಿ ಮಳೆನೀರ ಕೊಯ್ಲಿನ ದೊಡ್ಡ ಮಾದರಿಯಿದೆ. ಧಾರವಾಡ ಸನಿಹ ಸ್ವಾಮೀಜಿಯೊಬ್ಬರು ಮಳೆನೀರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ನೀರಿನ ಅರಿವನ್ನು ಬಿತ್ತರಿಸುತ್ತಿದ್ದಾರೆ.
ಕಪ್ಪು ಮಣ್ಣಿರುವಲ್ಲಿ 'ಮರುಳು ಮುಚ್ಚಿಗೆ' ಎನ್ನುವ ರೈತ ತಂತ್ರಜ್ಞಾನ ಯಶವಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ಆಳ ಉಳುಮೆ ಮಾಡಿ ಅದರ ಮೇಲೆ ಮರಳು ಹೊದೆಸುತ್ತಾರೆ. ಕೆಂಪು ಮಣ್ಣಿರುವಲ್ಲೂ ಮರಳು ಮುಚ್ಚಿಗೆ ಮಾಡಿ ಉತ್ತಮ ಫಲಿತಾಂಶ ಪಡೆದಿವರಿದ್ದಾರೆ. ಉಸುಕು ಹಾಕಿದ ಭೂಮಿಯಲ್ಲಿ ಎಷ್ಟೇ ರಭಸದ ಮಳೆ ಬಂದರೂ ನೀರು ಹರಿದುಹೋಗುವುದಿಲ್ಲ. ಮಣ್ಣು ನೀರನ್ನು ಹೀರಿಕೊಳ್ಳುತ್ತದೆ. ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳವ ಸಾಮಥ್ರ್ಯ ಪಡೆಯುತ್ತದೆ, ಎನ್ನುವ ಅನುಭವ ರೋಣದ ಸಂಕನಗೌಡರದು. ಬಾಗಲಕೋಟೆ ಜಿಲ್ಲೆಯ ನೂರಾರು ರೈತರ ಹೊಲಗಳಿಗೆ ಈ ವಿಧಾನ ವಿಸ್ತರಿಸಿದೆ.
ಸುಮಾರು ಒಂದೂವರೆ ಶತಮಾನದ ಹಿಂದೆ ಪೂಜ್ಯ ಘನಮಠ ಶಿವಯೋಗಿ ಸ್ವಾಮೀಜಿಯವರು ಬರೆದ 'ಕೃಷಿ ಜ್ಞಾನ ಪ್ರದೀಪಿಕೆ'ಯಲ್ಲಿನ ಬರನಿರೋಧಕ ಜಾಣ್ಮೆಗಳನ್ನು ಹುನಗುಂದದ ಶಂಕ್ರಣ್ಣ ನಾಗರಾಳರು ಹಿರಿಯರ ಮಾರ್ಗದರ್ಶನದಲ್ಲಿ ಅನುಷ್ಠಾನಿಸುತ್ತಿದ್ದಾರೆ. 'ಹೊಲ ತಿದ್ದುವ' ವಿಧಾನದ ಮೂಲಕ ಮಣ್ಣು, ನೀರನ್ನು ಸಂರಕ್ಷಿಸುತ್ತಿದ್ದಾರೆ. ಬರದ ಬವಣೆಯಿಂದ ಅಂತರ ಕಾಪಾಡಿಕೊಂಡಿದ್ದಾರೆ. ಇವರ ಈ ಕಾಯಕಕ್ಕೆ ವಿಶ್ವವಿದ್ಯಾನಿಲಯವೂ ಮಾನ್ಯತೆ ನೀಡಿದೆ. ಬರ ನಿರೋಧದ ಜಾಣ್ಮೆಯ ಕುರಿತು ಒಂದೆರಡು ಪುಸ್ತಕವೂ ಅಚ್ಚಾಗಿದೆ.
'ಕೃಷಿ ಜ್ಞಾನ ಪ್ರದೀಪಿಕೆ' - ಇದು ರೈತರಿಗೆ ದಾರಿದೀಪ. ಅದರಲ್ಲಿನ ಎರಡು ಮಾದರಿಗಳು ಹೀಗಿದೆ.  ಹೊಲದ ನಾಲ್ಕು ದಿಕ್ಕಿಗೆ ಒಡ್ಡು ಹಾಕಿಸಿಕೊಳ್ಳತಕ್ಕದ್ದು. ಹೀಗೆ ಒಡ್ಡು ಹಾಕಿಸುವುದರಿಂದ ಹೊಲದ ಮಣ್ಣು ಹಾಗೂ ಹೊಲದ ಸಾರ ಕಡಿಮೆಯಾಗದೆ ಹೊಲವನ್ನು ಉತ್ತಮ ಪ್ರಕಾರದ ಹದಕ್ಕೆ ತರುವುದು. ಹಾಗೂ ಬಹಳ ಮಳೆಯಾದರೂ, ಸ್ವಲ್ಪ ಮಳೆಯಾದರೂ ಹೊಲದಲ್ಲಿ ನೀರು ನಿಂತು ತಂಪು ಮಾಡುತ್ತದೆ. ಆ ತಂಪಿನಿಂದ ಅರಗಾಲ, ಬರಗಾಲಗಳಲ್ಲಾದರೂ ತಕ್ಕಷ್ಟು ಬೆಳೆಯಾಗುವುದು.
ಒಂದು ಹೊಲದ ಮಣ್ಣು ಮತ್ತೊಂದು ಹೊಲಕ್ಕೆ ಹೋಗದ ಹಾಗೆ ಹೊಲದ ಬಾಂದಿನ ಹದ್ದು ಹಿಡಿದು ಒಂದು ಮೊಳ ಅಥವಾ ಎರಡು ಮೊಳ ಎತ್ತರವಾಗಿ ನಾಲ್ಕು ಕಡೆಗೂ ಸುತ್ತಲೂ ಒಡ್ಡು ಹಾಕಿಸುವುದು ಅವಶ್ಯಕವಾಗಿದೆ. ಈ ಪ್ರಕಾರವಾಗಿ ಹಾಕಿದ ಒಡ್ಡಿನಿಂದ ಆಗುವ ಪ್ರಯೋಜನವೇನೆಂದರೆ, ತಂತಮ್ಮ ಹೊಲಗಳನ್ನು ನೇಗಿಲಿನಿಂದಾಗಲೀ, ಮಡಿಕೆಯಿಂದಾಗಲೀ ಹೊಡೆದು ಬಿಗಿಯಾದ ಮಣ್ಣನ್ನು ಸಡಿಲು ಮಾಡಿ,  ಕುಂಟೆಯಿಂದ ಹರಗಿ ಮೆತ್ತಗೆ ಮಾಡಿದಲ್ಲಿ ಆ ಭೂಮಿಯ ಮಣ್ಣು ಚೆನ್ನಾಗಿ ಹದಕ್ಕೆ ಬರುವುದು.. ಪಾರಂಪರಿಕ ವಿಧಾನಗಳ ದಾಖಲಾತಿಗಳು ಕೃಷಿ ಜೀವನದ ಸರಳೀಕರಣಕ್ಕೆ, ಮಾರ್ಗದರ್ಶನಕ್ಕೆ ಪೂರಕ ಎನ್ನುವುದನ್ನು ಕೃಷಿ ಜ್ಞಾನ ಪ್ರದೀಪಿಕೆ ತೋರಿದೆ.
ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಮದಕಗಳು ಇಡೀ ಊರಿಗೆ ಅಂತರ್ಜಲ ಮರುಪೂರಣ ಮಾಡುತ್ತಿದ್ದ ರಚನೆಗಳು. ಅಜ್ಜಂದಿನ ದೂರದೃಷ್ಟಿಯ ದೃಷ್ಟಾಂತಗಳು. ಮದಕಗಳನ್ನು ದುರಸ್ತಿಪಡಿಸಿದರೆ ಅವು ದೊಡ್ಡ ರೀತಿಯಲ್ಲಿ ಪ್ರಯೋಜನ ಕೊಡಬಲ್ಲುವು. ಅನುಕೂಲಕರ ಜಾಗ ಮತ್ತು ಸಂಪನ್ಮೂಲ ಇರುವ ಕೆಲವು ರೈತರು ತಮ್ಮ ಜಮೀನಿನ ಮೇಲ್ಭಾಗದಲ್ಲಿ ಈ ರೀತಿಯ ಇಂಗುಕೊಳ ರಚಿಸಿಕೊಂಡರೆ ಅದು ಕೆಳಗಿನ ಇಡೀ ಭೂಮಿಗೆ ಜಲವಿಮೆಯಾಗತ್ತದೆ.  ಕೆಳಗಿನ ತೊರೆ-ತೋಡುಗಳಲ್ಲಿ ಹೆಚ್ಚು ಕಾಲ ನೀರಿರುವಂತೆ ಮಾಡುವಲ್ಲಿ ಸಹಾಯಕವಾಗುತ್ತದೆ.
ಈ ರೀತಿಯ ರಚನೆಗಳ ಕುರಿತು 'ದೇಸಿ ಕೃಷಿ ಜ್ಞಾನ' ಸಂಪುಟದಲ್ಲಿ ಶ್ರೀ ಪಡ್ರೆಯವರು ವಿವರಿಸುತ್ತಾರೆ, ಮೇಜರ್ ಸ್ಯಾಂಕಿ ಕ್ರಿ.ಶ. 1865ರಲ್ಲಿ ರಾಜ್ಯದ ಮುಖ್ಯ ಇಂಜಿನಿಯರ್. ಮೈಸೂರಿನಲ್ಲಿ ಮೈಲಿಗೊಂದು ಕೆರೆ ಇದೆ ಎಂದವರು. ಗುಡ್ಡದ ತುತ್ತ ತುದಿಯಿಂದ ಕೆರೆಗಳ ಸರಣಿ, ಒಂದು ಕೆರೆಗೆ ನೀರು ತುಂಬಿದಂತೆ ತಗ್ಗಿನ ಮತ್ತೊಂದು ಕೆರೆಗೆ ನೀರು ಹರಿಯುವ ಕಾಲುವೆ ವ್ಯವಸ್ಥೆಯು ಸ್ಯಾಂಕಿ ವರದಿಯ ಕಾಲದ ಕನ್ನಡಿ. ಈ ನಿರ್ಮಾಣದಲ್ಲಿ ಹೆಚ್ಚಿನವು ಕಣಿವೆ ಕೆರೆಗಳು. ಇತಿಹಾಸ ದಾಖಲೆ ಹಿಡಿದು ಕೆರೆ ದಂಡೆ ಮೇಲೆ ಓಡಾಡಿದರೆ ಪರಂಪರೆಯ ದಾರಿಗುಂಟ ಪಾಠಕ್ಕೆ ನಿಂತ ನಿರ್ಮಾಣ ಕೌಶಲ್ಯಗಳು ಅಪಾರ.
ನಮ್ಮ ದುರದೃಷ್ಟ ನೋಡಿ. ಎತ್ತಿನ ಹೊಳೆ ಯೋಜನೆಗೆ ಸಹಿ ಮಾಡುವವರಿಗೆ ನೀರಿನ ಸಂಕಷ್ಟಗಳ ಸ್ವಾನುಭವವಿಲ್ಲ. ಸಂರಕ್ಷಣಾ ಮಾದರಿಗಳ ಪರಿಚಯವಿಲ್ಲ. ಒಂದು ಸಾಂಸ್ಕೃತಿಕ ಪರಂಪರೆ, ಆ ಪ್ರದೇಶದ ಜನಜೀವನ ನಾಶವಾದರೂ 'ಅದು ತಮಗೆ ಸಂಬಂಧಪಡದಂತೆ ಫೋಸ್ ಕೊಡುವ' ಜನನಾಯಕರು. ಅದನ್ನು ಒಪ್ಪುವ, ಅಪ್ಪುವ ಹಿಂಬಾಲಕರು. ಇದನ್ನು ನೋಡುತ್ತಾ ಸಹಿಸುವ ನಾಗರಿಕರು. ಹಲವು ಕೋಟಿ ರೂಪಾಯಿಗಳ ಯೋಜನೆಗಳಿಂದ ಕಿಸೆ ಭದ್ರಪಡಿಸಿಕೊಳ್ಳುವ ವ್ಯವಸ್ಥೆಗಳು ನಿರಂತರ ನಡೆಯುತ್ತಿವೆ.
ಈಗ ನೋಡಿ ಶರಾವತಿಗೆ ಕನ್ನ..! ಶರಾವತಿ ಜಲಾಶಯದ ನೀರನ್ನು ಎತ್ತಿ ಸಾಗಿಸುವ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. ಸಮಿತಿ ರೂಪುಗೊಂಡಿದೆ. ಕೋಟಿ ರೂಪಾಯಿಗಳ ನಿರೀಕ್ಷೆಗಳ ಧಾವಂತಗಳ ಮುಂದೆ ಕನ್ನಾಡಿನ 'ನೀರಿನ ಕೂಗು' ವಿಧಾನಸೌಧಕ್ಕೆ ಹೇಗೆ ಕೇಳಿಸಿತು? 
(ಉದಯವಾಣಿ-ನೆಲದನಾಡಿ ಅಂಕಣ)