Sunday, June 3, 2012

'ನೀರನ್ನು ಬಡವರ ತುಪ್ಪದಂತೆ ಬಳಸಿ'


ತಾರಸಿ ಮನೆಯೊಂದರ ಟ್ಯಾಂಕಿ ತುಂಬಿತ್ತು. ನೀರು ಪೋಲಾಗುತ್ತಿತ್ತು. ಮನೆಯವರು ನಮಗದು ಸಂಬಂಧವೇ ಇಲ್ಲದಂತೆ ತಮ್ಮ ಪಾಡಿಗೆ ಇರುವುದನ್ನು ನೋಡಿ, 'ನೀರು ಕೆಳಗೆ ಬಿದ್ದು ಹಾಳಾಗುತ್ತಿದೆಯಲ್ಲಾ' ಎಂದು ಜ್ಞಾಪಿಸಿದೆ. 'ಹಾಳಾದ್ರೆ ಏನು, ನಮ್ಮ ಮನೆಯದಲ್ವಾ' ಎಂದರು.


ಎರಡು ದಿವಸ ಕಾರ್ಪೋರೇಶನ್ ನೀರು ಬಾರದಿದ್ದರೆ ಬದುಕು ಕಳೆದುಹೋಗುವಷ್ಟು ಬೊಬ್ಬಿಡುತ್ತೇವೆ. ಆದರೆ ನಮ್ಮ ಕೊಳವೆ ಬಾವಿಯ ನೀರು ಟ್ಯಾಂಕಿ ತುಂಬಿ ಗಂಟೆ ಗಟ್ಟಲೆ ತುಳುಕಿದರೂ ಏನೂ ಅನ್ನಿಸುವುದಿಲ್ಲ.

ಮನೆ ನಮ್ಮದು. ಕುಟುಂಬ ನಮ್ಮದು. ಹಿತ್ತಿಲು ನಮ್ಮದು. ಜಾಗವೂ ನಮ್ಮದೇ. ಆದರೆ ನೀರು 'ನನ್ನದು' ಎನ್ನುವುದು ಇದೆಯಾಲ್ಲಾ, ನಿಜಕ್ಕೂ ಅದೊಂದು ಅಹಂಕಾರ. ತಮ್ಮದೇ ಬೋರ್ವೆಲ್ನಿಂದ ಪೋಲಾಗುವ ನೀರು ಭೂಒಡಲಿಂದ ತಾನೆ ಬರಬೇಕು?

ಅಂತರ್ಜಲದ ಮಟ್ಟ ಪ್ರತಿವರ್ಷ ಕುಸಿಯುತ್ತಿದೆ. ಸಾವಿರ, ಸಾವಿರದೈನೂರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರಿಲ್ಲ. ಭೂ ಒಡಲಿಗೆ ನೀರು ಉಣಿಸದಿದ್ದರೆ, ನಮಗೆ ಬೇಕೆಂದಾಗ ಮೊಗೆಯುವುದಕ್ಕೆ ಸಾಧ್ಯವೇ? ನೀರಿಲ್ಲ ಎಂದಾಗ ಕೊರೆವ ಯಂತ್ರದ ಸದ್ದು ನಿಲ್ಲುತ್ತದೆ. ನಮ್ಮ ಪಾಸ್ಬುಕ್ ಬ್ಯಾಲೆನ್ಸ್ ಇಳಿತವಾಗುತ್ತದೆ. ಸ್ವಲ್ಪ ಚೇತರಿಸಿದಾಗ ಮತ್ತೊಮ್ಮೆ ಕೊರೆತ ಯಂತ್ರವನ್ನು ಅಂಗಳಕ್ಕೆ ಬರಮಾಡಿಕೊಳ್ಳುತ್ತೇವೆ. ನೀರಿನ ಅರಿವು ಬಾರದೆ ಇಂತಹ ಸಮಸ್ಯೆಗಳಿಗೆ ಅಂತ್ಯವಿಲ್ಲ.

ಇರಲಿ, ಜಗತ್ತಿನ ನೀರಿನ ಸ್ಥಿತಿ ಗತಿಯನ್ನು ಜಲತಜ್ಞ 'ಶ್ರೀ'ಪಡ್ರೆಯವರು ಹೀಗೆ ಕಟ್ಟಿಕೊಡುತ್ತಾರೆ - ನಮ್ಮ ಒಟ್ಟು ನೀರಿನಲ್ಲಿ ಅತಿ ದೊಡ್ಡ ಪಾಲು ಶೇ. 97.2. ಅದೂ ಉಪ್ಪುಪ್ಪು, ಸಮುದ್ರದಲ್ಲಿದೆ! ಚಿಕ್ಕ ಅಂಶ ಶೇ.2.2 ಮಂಜುಗಡ್ಡೆ ನೀರ್ಗಲ್ಲ ರಾಶಿ. ಇನ್ನು ಉಳಿಯುವುದು ಶೇ. 0.6 ಮಾತ್ರ. ಈ ಗುಟುಕಿನಲ್ಲೂ ಒಂದಷ್ಟು ಪಾಲು! ಇದರಲ್ಲಿ ಶೇ.97.4 ಅಂತರ್ಜಲ. ಸರೋವರದಲ್ಲಿ ತುಂಬಿರುವ ನೀರಿನ ಪಾಲು ಶೇ.1.47. ನದಿ, ಹೊಳೆಗಳಲ್ಲಿರುವ ಪಾಲು ಎಷ್ಟು? ಕೇವಲ ಶೇ. 0.01.

ಜಗತ್ತಿನ ಎಲ್ಲಾ ನೀರನ್ನು ಐದು ಲೀಟರಿನ ಬಾಲ್ದಿಯಲ್ಲಿ ಹಾಕಿದರೆ, ಅದರಲ್ಲಿ ಕುಡಿನೀರು ಒಂದೂವರೆ ಚಮಚ ಮಾತ್ರ. ಕೃಷಿ ಉದ್ದಿಮೆಗಳ ತ್ಯಾಜ್ಯ, ಫ್ಲೋರೈಡ್, ಮನುಷ್ಯತ್ಯಾಜ್ಯ ಇತ್ಯಾದಿ ಸೇರಿದ ಕಲುಷಿತ ನೀರನ್ನು ಇದರಿಂದ ಕಳೆದರೆ?

ಧಾರಾಳ ಮಳೆ ಬೀಳುವ ಊರುಗಳಲ್ಲಿ ನೀರಿನ ಕೊರತೆ ಕಾಣುತ್ತದೆ. ಜನವಸತಿ ಪ್ರದೇಶ, ಜನದೊತ್ತಡ ಇರುವಲ್ಲಿ ನೀರಿನ ಅಭಾವ ತೀವ್ರ. ಎಷ್ಟೇ ಮಳೆ ಬರಲಿ, ಬೇಸಿಗೆಯಲ್ಲಿ ನೀರಿಲ್ಲ. ಇದರಿಂದ ಮುಕ್ತಿ ಹೇಗೆ? ಒಂದೇ ಉಪಾಯ ಮಳೆಕೊಯ್ಲು.

'ಓಡುವ ನೀರನ್ನು ನಡೆಯುವ ಹಾಗೆ ಮಾಡುವುದು, ನಡೆಯುವ ನೀರನ್ನು ತೆವಳುವಂತೆ ಮಾಡುವುದು, ತೆವಳುವ ನೀರನ್ನು ನಿಲ್ಲಿಸುವುದು. ನಿಂತ ನೀರನ್ನು ಇಂಗಿಸುವುದು' ಇದು ಮಳೆ ಕೊಯ್ಲಿನ ಸರಳ ಸೂತ್ರ. ಇದೇನೂ ಹೊಸ ವಿದ್ಯೆಯಲ್ಲ. ನಮ್ಮ ಹಿರಿಯರು ಕಲಿಸಿಕೊಟ್ಟ ಸರಳ ಪಾಠ.

ಕಡಿಮೆ ಖರ್ಚಿನಲ್ಲಿ ಬಡವರೂ ಮಳೆನೀರಿಂಗಿಸಬಹುದು. 'ಮಳೆ ಎಲ್ಲಿ ಬೀಳುತ್ತಿದೆಯೋ, ಅಲ್ಲೇ ಅದನ್ನು ಇಂಗಿಸಿ'. ಇದಕ್ಕೆ ತತ್ಕ್ಷಣದ ಮಳೆಕೊಯ್ಲು ಎನ್ನುತ್ತಾರೆ. ಚಾವಣಿ ನೀರಿನ ಸಂಗ್ರಹ, ಇಂಗುಗುಂಡಿ, ಸಮತಳ ಬದು, ಗಿಡಮರ ನೆಡುವುದು.. ಇವೇ ಮುಂತಾದ ವಿಧಾನಗಳಿಂದ ಮಳೆನೀರನ್ನು ಇಂಗಿಸಬಹುದು.

ಕೊಳವೆ ಬಾವಿ ಮರುಪೂರಣ, ಕೆರೆಗಳು, ಮದಕಗಳು, ಬಾಂದಾರಗಳು.. ನಮ್ಮ ನೀರಿಂಗುವ ಮೂಲಗಳು. ಕೆರೆಗಳು ಮುಚ್ಚಿಹೋಗಿವೆ, ಕಟ್ಟಡಗಳು ಮೇಲೆದ್ದಿವೆ. ಮದಕಗಳ ಕತೆಯೂ ಅಷ್ಟೇ. ಗುಡ್ಡಗಳೆಲ್ಲಾ ನುಣುಪಾಗಿವೆ. ಕಾಡಿಲ್ಲದೆ, ನಮ್ಮ ಮೂಲಪುರುಷರು ಊರು ಸೇರಿದ್ದಾರೆ!

ನೀರಿನೆಚ್ಚರ ಎಲ್ಲಿಂದ ಆರಂಭವಾಗಬೇಕು? ಮನೆಮನೆಗಳಿಂದ, ನಲ್ಲಿಗಳಿಂದ, ಗೃಹಿಣಿಯರಿಂದ. ನೀರಿಗೆ ತೊಂದರೆಯಾದರೆ ಅತೀ ಹೆಚ್ಚು ತೊಂದರೆಗೆ ಒಳಗಾಗುವವರು ಗೃಹಿಣಿಯರು. ಹಾಗಾಗಿ ನೀರಿನ ಮಿತ ಬಳಕೆಯ ಪಾಠ ಮನೆಯಿಂದಲೇ ಆರಂಭವಾಗಬೇಕು.

ರಾಜಸ್ಥಾನದ ಮಳೆಕೊಯ್ಲಿನ ರೂವಾರಿ ಡಾ.ರಾಜೇಂದ್ರ ಸಿಂಗ್ ಆಗಾಗ ಎಚ್ಚರಿಸುವ ಮಾತು - 'ನೀರನ್ನು ಬಡವರ ತುಪ್ಪದಂತೆ ಬಳಸಿ'. ಎಷ್ಟೊಂದು ಅರ್ಥವಲ್ವಾ. ಬಹುಶಃ ಈ ಮಾತಿನ ಅಂತರಾರ್ಥ ಗೊತ್ತಾಗಿ ಬಿಟ್ಟರೆ, 'ಇನ್ನು ಟ್ಯಾಂಕ್ ತುಂಬಿದ ಬಳಿಕವೂ ನೀರು ಕೆಳಗೆ ಬಿದ್ದು ಪೋಲಾಗಲಾರದಲ್ವಾ'.

0 comments:

Post a Comment