Sunday, June 3, 2012

ಕೃಷಿಕ ಸಂರಕ್ಷಣೆಯ ಅಪೂರ್ವ ತಳಿ ಕರಿಯಾಲ ಹರಿವೆ


ಕೃಷಿಕ ಕರಿಯಾಲ ರಾಮಪ್ರಸಾದ್ ಮಿಂಚಂಚೆಯಲ್ಲಿ ಫೋಟೋಗಳನ್ನು ಕಳುಹಿಸಿ, 'ಈ ವರುಷ ಒಂಭತ್ತುವರೆ ಅಡಿ ಎತ್ತರಕ್ಕೆ ಹರಿವೆ ಗಿಡ ಬೆಳೆದಿವೆ. ಜಾಗತಿಕ ದಾಖಲೆಗೆ ಕಳುಹಿಸಬಹುದೇ?' ಎಂದು ವಿನೋದವಾಡಿದ್ದರು. ಸಾಮಾನ್ಯ ಹರಿವೆಗಿಂತ ಎತ್ತರವಾಗಿ ಬೆಳೆಯುವ ಇದು 'ಕರಿಯಾಲ ಹರಿವೆ'. ಇದಕ್ಕೆ ಈ ಹೆಸರು ಹೊಸೆದ ಹಾದಿಯನ್ನು ರಾಮಪ್ರಸಾದರ ತಂದೆ ಪುತ್ತೂರಿನ ಕರಿಯಾಲ ಶಿವರಾಮ ಭಟ್ಟರು ಹೀಗೆ ಜ್ಞಾಪಿಸಿಕೊಳ್ಳುತ್ತಾರೆ :

ವಿಟ್ಲದಲ್ಲಿ ನನ್ನ (1943) ಪ್ರಾಥಮಿಕ ವಿದ್ಯಾಭ್ಯಾಸ. ಆರನೇ ತರಗತಿಯಲ್ಲಿ ಓದುತ್ತಿದ್ದೆ. ಪಾಠದೊಂದಿಗೆ ಕೃಷಿಯೂ ಆಗ ಪಠ್ಯವಾಗಿತ್ತು. ಅದರ ನೇರ ಪಾಠವೂ ಇತ್ತು. ಅಧ್ಯಾಪಕ ನಾರಾಯಣ ಶೆಟ್ಟಿಯವರು ತರಕಾರಿ ಕೃಷಿ ವಿಚಾರಗಳನ್ನು ಹೇಳಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಅವರಿಂದ ಮಾಡಿಸುತ್ತಿದ್ದರು. ಅಲ್ಲದೆ ತಂತಮ್ಮ ಮನೆಗಳಲ್ಲಿ ತರಕಾರಿಗಳನ್ನು ಕಡ್ಡಾಯವಾಗಿ ಮಕ್ಕಳೇ ಬೆಳೆಸಬೇಕೆಂಬ ಅಲಿಖಿತ ನಿಯಮವನ್ನು ಜ್ಯಾರಿಗೆ ತಂದಿದ್ದರು. ಆ ಬಾರಿ ಶಾಲೆಯಲ್ಲಿ ಹರಿವೆ ಕೃಷಿ. ಹರಿವೆ ಗಿಡಗಳನ್ನು ಶಾಲೆಯಿಂದ ಒಯ್ದು ಬೆಳೆಸಿದೆ. ಮನೆಯವರೂ ಪ್ರೋತ್ಸಾಹಿಸಿದರು. ಹರಿವೆ ಸೊಂಪಾಗಿ, ಎತ್ತರವಾಗಿ ಬೆಳೆಯಿತು.

ಆಗಲೇ ಸಾಕಷ್ಟು ಮನೆಗಳಲ್ಲಿ ಹರಿವೆ ಬೆಳೆಯುತ್ತಿದ್ದರೂ ಇದು ಮಾತ್ರ ಉಳಿದವಕ್ಕಿಂತ ಭಿನ್ನವಾಗಿತ್ತು. ಪದಾರ್ಥ ಮಾಡಿದಾಗಲೂ ರುಚಿಯಲ್ಲಿ ಪ್ರತ್ಯೇಕತೆಯಿತ್ತು. ಇದರ ಪೂರ್ವಾಪರ ತಿಳಿಯದು. ಅಂದಿನಿಂದ ನಮ್ಮಲ್ಲಿ ಇದೇ ಹರಿವೆಯ ಬೀಜ ಮರುಬಳಕೆಯಾಗುತ್ತಾ ಇದೆ. ಪರಕೀಯ ಪರಾಗಸ್ಪರ್ಶವಾಗದಂತೆ ಎಚ್ಚರದಿಂದ ಬೆಳೆಸುತ್ತಿದ್ದೆವು. ಹೀಗೆ ಅಭಿವೃದ್ಧಿಯಾದ ಹರಿವೆಯನ್ನು ಗುರುತಿಸಲೋಸುಗ ಮನೆಯ ಹೆಸರನ್ನು ಹೊಸೆದು 'ಕರಿಯಾಲ ಹರಿವೆ' ಎಂದು 'ಅಡಿಕೆ ಪತ್ರಿಕೆ'ಯು ನಾಮಕರಣ ಮಾಡಿತು. ಅಂದಿನಿಂದ ಇದು ಮನೆಮಾತಾಯಿತು.

ಶಿವರಾಮ ಭಟ್ಟರು ಕಳೆದಾರು ದಶಕದಿಂದ ತನ್ನ ಮನೆಯ ಸದಸ್ಯನಂತೆ ಬೆಳೆದ ಹರಿವೆ ತಳಿಯೊಂದರ ಅಭಿವೃದ್ಧಿಯನ್ನು ವಿವರಿಸಿದ ಬಗೆಯಿದು. ಇವರಿಂದ ಪಡೆದ ಬೀಜ ಹಲವರ ಮನೆಯಂಗಳದಲ್ಲಿ ಮೊಳಕೆಯೊಡೆದಿದೆ. ಉದರ ಸೇರಿದೆ. ನನ್ನಿಂದ ಎಲ್ಲರೂ ಬೀಜ ಒಯ್ಯುತ್ತಾರೆ. ಅದನ್ನು ಬೆಳೆಸಿ ಯಾರೂ ಬೀಜ ಉಳಿಸಿಡುವುದಿಲ್ಲ. ನೆನಪಾದಾಗ ಪುನಃ ನನ್ನನ್ನೇ ಕೇಳುತ್ತಾರೆ ಎಂಬ ಖೇದ.

ಕರಿಯಾಲ ಹರಿವೆಯ ಎಲೆ ನಾಲ್ಕರಿಂದ ಆರು ಇಂಚು ಅಗಲ, ಎಂಟರಿಂದ ಹತ್ತಿಂಚು ಉದ್ದ ಬೆಳೆಯುತ್ತದೆ. ಕಾಂಡ ಎಂಟಿಂಚಿಗಿಂತಲೂ ದಪ್ಪ. ಗಿಡ ಸುಮಾರು ಏಳಡಿಗಿಂತಲೂ ಎತ್ತರ. ಉರುಟು ಎಲೆ. ತುದಿಯಲ್ಲಿ ಚೂಪಿಲ್ಲ. ಕಡು ಹಸುರು ಬಣ್ಣದ ದಂಟು ಮತ್ತು ಎಲೆ. ದಂಟಿನಲ್ಲಿ ನಾರಿಲ್ಲ. ಬೆರಳು ಗಾತ್ರಕ್ಕೆ ದಪ್ಪವಾಗುವಲ್ಲಿಯ ತನಕ ಕೈಯಲ್ಲೇ ಇದನ್ನು ಮುರಿಯಬಹುದು. ಸಸಿ ಮಾಡಿದ ಬಳಿಕ ಸಾಲಿನಲ್ಲಿ ನೆಟ್ಟಿದ್ದಾರೆ. ವಿಶೇಷವಾಗಿ ಹಟ್ಟಿ ತೊಳೆದ ನೀರು ಉಣಿಕೆ. ತರಕಾರಿ ಮಧ್ಯೆ ಗಿಡ ನೆಟ್ಟಿದ್ದಾರೆ. ಈ ಬಾರಿ ಹಳದಿ ಚುಕ್ಕೆ ರೋಗ ಬಂದಿಲ್ಲ.

ಮಳೆಗಾಲದ ಮೂರು ತಿಂಗಳು ಹೊರತು, ಉಳಿದೆಲ್ಲಾ ಋತುವಿನಲ್ಲಿ ಹರಿವೆ ಬೆಳೆಯಬಹುದು. ಅಂಗಳದ ಮೂಲೆಯಲ್ಲಿ ನಾಲ್ಕೈದು ಗಿಡವಿದ್ದರೆ ಸಾಕು, ವಾರದಲ್ಲಿ ಮೂರು ದಿವಸ ಪದಾರ್ಥಕ್ಕಾಗಿ ಬಳಸಬಹುದು. ಒಂದು ದಿವಸ ಎಲೆಯ ಪಲ್ಯ, ಮತ್ತೊಂದು ದಿವಸ ಕಾಂಡದ ಹುಳಿ ಪದಾರ್ಥ, ಇನ್ನೊಂದು ದಿವಸ ಎಲೆ ಮತ್ತು ಕಾಂಡ ಸೇರಿಸಿದ ಪದಾರ್ಥ....ಹೀಗೆ ಆಸಕ್ತಿಗೆ ತಕ್ಕಂತೆ ಖಾದ್ಯ ತಯಾರಿಸಬಹುದು. ಎಲೆಯ ಪತ್ರೊಡೆ ಬಹಳ ರುಚಿ.

ಗಿಡವನ್ನು ಮೊಳಕೆ ಬರಿಸಿ, ದೂರದೂರ ನೆಟ್ಟರೆ ರೋಗ ಕಡಿಮೆ. ಗಿಡಗಳ ಮಧ್ಯೆ ರಾವುಬೀಜದ ಮರದ ಗೆಲ್ಲುಗಳನ್ನು ನೆಟ್ಟರೆ, ಹರಿವೆ ಬರುವ ಕೀಟವನ್ನು ಶಿವರಾಮ ಭಟ್ಟರು ನಿಯಂತ್ರಿಸಿದ್ದಾರೆ. ಉಳಿದ ತರಕಾರಿಗಳ ಮಧ್ಯೆ ಮಧ್ಯೆ ಹರಿವೆ ಗಿಡ ನೆಡಬಹುದು.

ಸುಮಾರು 1980ರ ತನಕ ಈ ಹರಿವೆ ಅಲ್ಲಲ್ಲಿ ಚಾಲ್ತಿಯಲ್ಲಿತ್ತು. ಇದರ ಬೀಜವನ್ನು ಆಗ ಯಾರೂ ಉಳಿಸದ ಕಾರಣ ಈ ತಳಿಯೇ ಅಜ್ಞಾತವಾಗಿದೆ. ಅದನ್ನು ಕರಿಯಾಲ ಶಿವರಾಮ ಭಟ್ಟರು ಉಳಿಸಿದ್ದಾರೆ, ಬೆಳೆಸಿದ್ದಾರೆ, ಅಭಿವೃದ್ಧಿಪಡಿಸಿದ್ದಾರೆ. ಅವರಿಗೆ ನಾವೆಲ್ಲಾ ಋಣಿಗಳು. ಈ ಹರಿವೆಯನ್ನು ವರುಷದ ಹನ್ನೊಂದು ತಿಂಗಳು ಬೆಳೆಯಬಹುದು. ಅದರ ದಂಟನ್ನು ಸ್ವಲ್ಪ ಸಂಸ್ಕರಣೆಗೆ ಒಳಪಡಿಸಿ ತಯಾರಿಸಿದ 'ಪೋಡಿ' ಬಹು ಸ್ವಾದಿಷ್ಟ. ಕರಿಯಾಲ ಹರಿವೆಯ ಒಳಗುಟ್ಟನ್ನು ಕರಿಂಗಾಣದ ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತರು ಹೇಳುತ್ತಾರೆ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಮೂಲಕ ಬೀಜವನ್ನು ಸಾಕಷ್ಟು ಬಾರಿ ವಿತರಿಸಿದ್ದಾರೆ.

ಈ ಬಾರಿ ಎಂದಿಗಿಂತಲೂ ಹುಲುಸಾಗಿ ಎತ್ತರಕ್ಕೆ ಬೆಳೆದು ತನ್ನ ಸಾಮರ್ಥ್ಯ ತೋರಿದ ಹರಿವೆಯ ಅಭಿವೃದ್ಧಿ ಜತೆಗೆ, ಸಂರಕ್ಷಣೆಯತ್ತಲೂ ಯೋಚಿಸಬೇಕಾಗಿದೆ. ಈಗಾಗಲೇ ಬೀಜ ಒಯ್ದವರು, ಅಭಿವೃದ್ಧಿಪಡಿಸಿದ ಬಳಿಕ ಪುನಃ ಅದಕ್ಕಿಂತ ಇಮ್ಮಡಿ ಬೀಜವನ್ನು ಮರಳಿಸಿದರೆ ಬೀಜಸಂರಕ್ಷಣೆಯ ಕಾಯಕಕ್ಕೆ ನೆರವಾದಂತಾಗುತ್ತದೆ. (9482205938)

2 comments:

ಅಮಿತಾ ರವಿಕಿರಣ್ said...

Tumba asaktikara vishaya...asaktaru ee kariyal harive beejagalannu padedu kolluvudu heege..???dayamaadi tilisuttera??

Na.Karanth Peraje said...

ನಮಸ್ಕಾರ,
- ನಿಮ್ಮ ಆಸಕ್ತಿಗೆ ಖುಷಿಯಾಯಿತು.
- ಕರಿಯಾಲ ಹರಿವೆ ಬೀಜ ಕೆಲವು ವರುಷಗಳಿಂದ ಕೃಷಿಕರ ಮಧ್ಯೆ ಹರಿದಾಡುತ್ತಿದೆ. ಆದರೆ ಯಾರೂ ಬೀಜವನ್ನು ಉಳಿಸುವತ್ತ ಪ್ರಯತ್ನ ಮಾಡಿಲ್ಲ. ಅವರಿಂದ ಹರಿವೆ ಬೀಜ ಒಯ್ದು, ಬೆಳೆಸಿ, ಹರಿವೆಯನ್ನು ಮಾರಾಟ ಮಾಡಿದವರೂ ಇದ್ದಾರೆ. ಇಷ್ಟಿದ್ದೂ ಬೀಜ ನೀಡಿದವರಿಗೆ ಪಡೆದದ್ದಕ್ಕಿಂತ ದುಪ್ಪಟ್ಟು ಕೊಡಬಹುದಿತ್ತು. ಇದು 'ಕೃತಘ್ನತೆ' ಕಾಲವಲ್ವಾ ಮೇಡಂ. ಕರಿಯಾಲ ರಾಮಪ್ರಸಾದರಲ್ಲಿ ವಿಚಾರಿಸಿ. ಲೇಖನದ ಕೊನೆಗೆ ಮೊಬೈಲ್ ನಂಬ್ರ ಇದೆ.
- ವಂದನೆಗಳು.
- ನಾ. ಕಾ.

Post a Comment