Sunday, June 3, 2012

ಕಾಡು ಮಾವಿನ ರುಚಿ ಬಲ್ಲಿರಾ?
'ಕಾಡು ಮಾವಿನ ಮರದ ಗೆಲ್ಲುಗಳಲ್ಲಿ ದುರ್ಮಾಂಸ ಬೆಳೆಯುತ್ತದೆ. ಸಿಪ್ಪೆಗಳು ಒಡೆದ ಹಾಗೆ ಕಾಣುತ್ತದೆ. ಅಂತಹ ಮರದ ಆಯುಸ್ಸು ಮುಗಿಯಿತು ಎಂದರ್ಥ. ಇದರ ಕುಡಿಗಳನ್ನು ಆಯ್ಕೆ ಮಾಡಿ ಕಸಿ ಕಟ್ಟಿ ಅಭಿವೃದ್ಧಿ ಮಾಡುವುದೊಂದೆ ದಾರಿ,' ಎನ್ನುವುದು ಮಾಪಲ್ತೋಟ ಸುಬ್ರಾಯ ಭಟ್ಟರ ಅಭಿಮತ.

ಸುಳ್ಯ ತಾಲೂಕಿನ ಮರ್ಕಂಜದಲ್ಲಿ ಸುಬ್ರಾಯ ಭಟ್ಟರ ತೋಟ. ಅವರ ಜಮೀನಿನಲ್ಲಿ ನೂರಕ್ಕೂ ಮಿಕ್ಕಿ ಕಾಡು ಮಾವಿನ ಮರಗಳಿವೆ. ಎಲ್ಲವೂ ನೆಟ್ಟು ಬೆಳೆಸಿದಂತಾದ್ದು. ಜತೆಗೆ ಹಲಸು, ಮಾವಿನ ಕಸಿ ಗಿಡಗಳು, ಕಾಡು ಹಣ್ಣುಗಳು, ಮರಮಟ್ಟುಗಳು..

ಹೊಸ ಜಾತಿಯ ಮಾವಿನ ಸುಳಿವು ಸಿಕ್ಕರೆ ಸಾಕು, ಅಲ್ಲಿ ಸುಬ್ರಾಯ ಭಟ್ಟರು ರೆಡಿ. ತಿಂದು, ರುಚಿ ನೋಡಿದ ಬಳಿಕವೇ ತಳಿ ಆಯ್ಕೆ. ಹೈಬ್ರಿಡ್ ತಳಿಗಳಂತೆ ಕಾಡು ಮಾವಿಗೆ ಎತ್ತಿ ಹೇಳುವಂತಹ ಹೆಸರಿಲ್ಲ. ರುಚಿ, ಗುಣ ದೋಷಗಳ ಸುತ್ತ ಹೆಸರಿನ ಹೊಸೆಯುವಿಕೆ. ಉದಾ: ಸಾಸಿವೆ ಪರಿಮಳದ್ದು 'ಸಾಸಿವೆ ಮಾವು', ಜೀರಿಗೆ ಪರಿಮಳದ್ದು 'ಜೀರಿಗೆ ಮಾವು', ಮರ ಉದ್ದಕ್ಕೆ ಬೆಳೆದರೆ ಅದು 'ಗಳೆಮಾವು'.. ಹೀಗೆ.

'ಕಾಡು ಮಾವಿನ ರುಚಿಯನ್ನು ಗುರುತಿಸಲು ಕಷ್ಟ. ಹಣ್ಣಾಗುವ ಹೊತ್ತಿಗೆ ಮಳೆ ಬಿದ್ದರೆ ಸಾಕು, ರುಚಿ ವ್ಯತ್ಯಾಸವಾಗುತ್ತದೆ' ಎನ್ನುತ್ತಾರೆ. ಉತ್ಕೃಷ್ಟ ತಳಿ ಯಾವುದು? ಎಂಬ ಪ್ರಶ್ನೆಗೆ ಏನೆನ್ನುತ್ತಾರೆ ಗೊತ್ತೇ? 'ಎಲ್ಲವೂ ಉತ್ಕೃಷ್ಟವೇ. ಒಂದಕ್ಕಿಂತ ಒಂದು ಭಿನ್ನ. ಪ್ರತ್ಯೇಕವಾಗಿ ಶ್ರೇಷ್ಠ ಎನ್ನುವಂತಿಲ್ಲ'.

'ಮಿಡಿಯನ್ನು ಕತ್ತಿಯಲ್ಲಿ ಕೊಯ್ಯುವಾಗಲೇ ಮಿಡಿಯ ಒಳಗಿನ ಬಿಳಿಭಾಗ ಕಪ್ಪಾಯಿತು ಎಂದಾದರೆ ಅದು ಉಪ್ಪಿನಕಾಯಿಗೆ ಆಗುವಂತಹುದಲ್ಲ. ಕೆಲವೊಮ್ಮೆ ಉಪ್ಪು-ಸಾಸಿವೆ ಸೇರಿದಾಗ ಮಿಡಿ ಕಪ್ಪಾಗುತ್ತದೆ. ಹೀಗೆ ಮಿಡಿ ಪರೀಕ್ಷೆ ಮಾಡದೆ ಉಪ್ಪಿನಕಾಯಿ ಹಾಕಬಾರದು' ಎಂಬ ಕಿವಿಮಾತು.

ಇವರ ಗುಡ್ಡದಲ್ಲಿ ಉಪ್ಪಿನಕಾಯಿಗೆ ಆಗುವ ಹನ್ನೆರಡು ಮಾವಿನ ಮರಗಳು, ನೀರು ಮಾವಿಗೆ ಯೋಗ್ಯವಾಗಿರುವ ಎರಡು ತಳಿಗಳಿವೆ. ಹೈಬ್ರಿಡ್, ಕಸಿ ಸಸಿಗಳು ನೂರರ ಹತ್ತಿರವಿದೆ. ಇಷ್ಟೆಲ್ಲಾ ಗಿಡಗಳಲ್ಲಿ ಹಣ್ಣು ಇಳುವರಿ ನೀಡುತ್ತಿದ್ದರೂ ಮಾರಾಟ ಉದ್ದೇಶ ಭಟ್ಟರದ್ದಲ್ಲ. ಅಸಕ್ತರಿಗೆ ಹಂಚುತ್ತಾರೆ. ತನ್ನ ತೋಟದಲ್ಲಿ ಎಲ್ಲಾ ತಳಿಗಳೂ ಬೇಕೆನ್ನುವ ಹಪಹಪಿಕೆ.

ಈಚೆಗೆ ಭಟ್ಟರು ಮಾತುಕತೆಗೆ ಸಿಕ್ಕಾಗ ಕಾಡು ಮಾವಿನ ಕೃಷಿ ಮತ್ತು ಅವುಗಳ ಸೂಕ್ಷ್ಮ ವಿಚಾರಗಳನ್ನು ತೆರೆದಿಟ್ಟರು : ಮಾವಿನ ಹಣ್ಣುಗಳು ಮಾಗಿದಾಗ ಹಣ್ಣು ಹುಳಗಳು ತುಂಬಿರುತ್ತವೆ. ತಿನ್ನಲು ಸಿಗುವುದಿಲ್ಲ. ವಿಷ ಸಿಂಪಡಣೆಯಿಂದ ಪರಿಹಾರ ಕಾಣಬಹುದು. ಆದರೆ ಅದನ್ನೇ ಪುನಃ ನಾವು ತಿನ್ನಬೇಡ್ವೋ? ಕೀಟಗಳು ಅಟ್ಯಾಕ್ ಆಗದಂತೆ ಏನಾದರೂ ದಾರಿಗಳಿವೆಯೇ? ನಾನು ಗೋಅರ್ಕವನ್ನು ಸಿಂಪಡಿಸಿದೆ. ಆದರೆ ಹಣ್ಣು ಗೋಮೂತ್ರದ ಪರಿಮಳ ಬರುತ್ತದೆ. ಪ್ರತೀ ವರುಷವೂ ಗಿಡಗಳನ್ನು ಪ್ರೂನಿಂಗ್ ಮಾಡಿದರೆ ಸ್ವಲ್ಪ ಮಟ್ಟಿಗೆ ಹುಳಗಳು ಅಟ್ಯಾಕ್ ಆಗುವುದನ್ನು ತಪ್ಪಿಸಬಹುದು.

ಕಾಡು ಮಾವಿನ ಗೊರಟಿನ ಗಿಡ ಮರವಾಗಿ ಇಳುವರಿ ಕೊಡಲು ಏನಿಲ್ಲವೆಂದರೂ ಹತ್ತು ವರುಷ ಬೇಕು. ಅದರದ್ದೇ ಕಸಿ ಮಾಡಿದರೆ ಐದಾರು ವರುಷದಲ್ಲಿ ಹಣ್ಣು ಪಡೆಯಬಹುದು. ಸಸಿ ಸದೃಢವಾಗಿ ಬೆಳೆಯಲು ಗೊಬ್ಬರ ಮುಖ್ಯವಲ್ಲ. ಮಣ್ಣು ಮುಖ್ಯ. ಹೊಸದಾದ ಸಸಿ ನೆಡುವವರು ಹೊಸ ಮಣ್ಣನ್ನು ಆರಿಸಿದರೆ ಗಿಡಕ್ಕೂ, ಫಸಲಿಗೂ ಉತ್ತಮ.

ಕಾಡು ಮಾವಿನ ಹಣ್ಣಿನಲ್ಲಿ ಈ ವರುಷದ ರುಚಿ ಮುಂದಿನ ವರುಷ ಇರುವುದಿಲ್ಲ. ವ್ಯತ್ಯಾಸವಾಗುತ್ತದೆ. 'ಹೈಬ್ರಿಡ್ ಮಾವುಗಳು ಇವೆಯಲ್ಲಾ, ಅವು ಜರ್ಸಿ ದನಗಳಂತೆ' ಎಂದು ನಗೆಯಾಡುತ್ತಾರೆ. ನಿಜವಾದ ರುಚಿಯಿರುವುದು ಕಾಡು ಮಾವಿನಲ್ಲಿ. ಮಾಪಲ್ತೋಟದ ಎಲ್ಲಾ ಮರಗಳಲ್ಲಿ ಗುರುತು ಹಿಡಿಯಲು 'ಅವು ಯಾವ ತಳಿಯದ್ದು' ಎಂಬ ಟ್ಯಾಗ್ ಇದೆ. ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ.

ಮೂರು ದಶಕಕ್ಕೂ ಮಿಕ್ಕಿದ ಸಾಧನೆ. ಹಲಸು, ಮಾವು, ಕಾಡುಹಣ್ಣುಗಳ ಬಗ್ಗೆ ನಿಖರವಾಗಿ ಮಾತನಾಡಬಲ್ಲ ಅನುಭವಿ. ತಳಿ ಆಯ್ಕೆಗಾಗಿ ಮೂರ್ನಾಲ್ಕು ರಾಜ್ಯಗಳನ್ನು ಓಡಾಡಿದ ಸಾಧಕ. ತನ್ನಲ್ಲಿದ್ದ ಅನುಭವವನ್ನು ಇತರರಿಗೂ ಧಾರೆಯೆರೆಯುವ ಅಪರೂಪದ ಗುಣ. ಈ ಎಲ್ಲಾ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನ ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ 'ಹಲಸು ಸ್ನೇಹಿ ಕೂಟ' ಏರ್ಪಡಿಸಿದ ಮಾವಿನ ಹಬ್ಬದಲ್ಲಿ ಭಟ್ಟರನ್ನು ಗೌರವಿಸಿರುವುದು ಅರ್ಥಪೂರ್ಣ. (08257-274239)

0 comments:

Post a Comment