'ಡಾ.ಶಿವರಾಮ ಕಾರಂತರು ಬೆಟ್ಟದ ಜೀವ ಕಾದಂಬರಿ ಬರೆಯುವ ಮುನ್ನ ಈ ಮನೆಯಲ್ಲಿ ಹದಿನೈದು ದಿವಸ ಅತಿಥಿಯಾಗಿದ್ದು ಇಲ್ಲಿನ ಬದುಕಿನ, ಪರಿಸರಕ್ಕೆ ಮಾರುಹೋಗಿದರು,' ಎಂದು ಪಳಂಗಾಯ ಸದಾಶಿವ ಗೌಡರು ನೂರೈವತ್ತು ವರುಷದ ಮನೆಯನ್ನು ಪರಿಚಯಿಸುತ್ತಾ, ಹಿರಿಯರ ಬದುಕನ್ನು ಜ್ಞಾಪಿಸಿಕೊಂಡರು.
ಸುಳ್ಯ ತಾಲೂಕಿನ 'ಬಂಟಮಲೆ' ಎಂಟು ಗ್ರಾಮಗಳನ್ನು ಒಳಗೊಂಡಿದ್ದು, ಅದರಲ್ಲೊಂದು 'ಪಳಂಗಾಯ'. ದಟ್ಟ ಕಾನನದ ಮಧ್ಯೆ ಕಳೆದ ಶತಮಾನದ ಆದಿಯಲ್ಲೇ ಅಡಿಕೆ, ತೆಂಗು ಬೆಳೆಸಿ ಗೌರವದ ಬಾಳನ್ನು ಬಾಳಿದ್ದರು. ಬಳಿಕ ಅವರ ಮೊಮ್ಮಕ್ಕಳು ಕೃಷಿಯನ್ನು ಅಭಿವೃದ್ಧಿಪಡಿಸಿದರು. ದೇರಣ್ಣ ಗೌಡರು ವಾಸವಾಗಿದ್ದ ಮನೆಗೀಗ ಶತಮಾನ ದಾಟಿದೆ.
ಪಂಜದಿಂದ ಕೂತ್ಕುಂಜ ದಾರಿಯಾಗಿ ಪಳಂಗಾಯಕ್ಕೆ ಏಳು ಕಿಲೋಮೀಟರ್ ದೂರ. ಕೂತ್ಕುಂಜದಿಂದ ಕಾಡಿನ ಮಧ್ಯೆ ಐದು ಕಿಲೋಮೀಟರ್ ಕಚ್ಚಾರಸ್ತೆ. 1906ರಲ್ಲಿ ಬ್ರಿಟಿಷ್ ಸರಕಾರವಿದ್ದಾಗ ದೇರಣ್ಣ ಗೌಡರು ಎತ್ತಿನ ಗಾಡಿ ಹೋಗುವಷ್ಟು ಅಗಲಕ್ಕೆ ರಸ್ತೆ ನಿರ್ಮಿಸಿದ್ದರು. ಸುತ್ತು ಬಳಸು ದಾರಿ. ವರುಷಕ್ಕೆ ಎರಡು ರೂಪಾಯಿ ತೆರಿಗೆಯನ್ನು ಸರಕಾರಕ್ಕೆ ನೀಡುತ್ತಿದ್ದರು! ದೇರಣ್ಣ ಗೌಡರ ಮೊಮ್ಮಕ್ಕಳಲ್ಲೊಬ್ಬರಾದ ವಾಸುದೇವ ಗೌಡರು 'ಪಿಜ್ಜ'ನ ಕಾಲದ ಕೃಷಿ ಬದುಕನ್ನು ಮೆಲುಕುಹಾಕುತ್ತಾರೆ :
ಬ್ರಿಟಿಷರ ಆಳ್ವಿಕೆಯ ಕಾಲ. ಭದ್ರತೆಗಾಗಿ ಗುಡ್ಡದ ಮಧ್ಯೆ ಜೀವನ ರೂಪೀಕರಣ. ಕಾಲ್ನಡಿಗೆಯಲ್ಲಿ ಪ್ರಯಾಣ. ಕೆಲಸಕ್ಕೆ ಜನ ಯಥೇಷ್ಟ. ಗುಡ್ಡ ಪ್ರದೇಶದಲ್ಲಿ ಅಡಕೆ, ತೆಂಗು; ಕೆಳ ಪ್ರದೇಶದಲ್ಲಿ ಭತ್ತ, ಕಬ್ಬು ಕೃಷಿ. ಭತ್ತದ ಬೇಸಾಯದ ನಂತರ ಅಡಕೆ ಕೃಷಿಯ ಕೆಲಸಕ್ಕೆ ಸಹಾಯಕರು ಬರುತ್ತಿದ್ದರು. ದನಿ, ಆಳು ಸಂಬಂಧ ಗಟ್ಟಿ ಮತ್ತು ಸಮಾನ. ಊಟ-ತಿಂಡಿಗಳು ಬರೋಬ್ಬರಿ.
ಗುಡ್ಡ ಪ್ರದೇಶ. ಕಲ್ಲುಗಳನ್ನು ಒಡೆದು, ಕಟ್ಟಿ ಸಮತಟ್ಟು ಮಾಡಿ ತೋಟ ಎಬ್ಬಿಸಿದ್ದರು. ಅಧಿಕ ಜಲ ಸಂಪತ್ತು. ಅಡಕೆಯನ್ನು ಗಾಡಿಗಳಲ್ಲಿ ಪೇರಿಸಿ ಸಾಗಾಟ. ಒಂಟಿ ಪ್ರಯಾಣ ತ್ರಾಸ, ದರೋಡೆ ಭೀತಿ. ಹಾಗಾಗಿ ಕೃಷಿಕರೆಲ್ಲಾ ಜತೆಸೇರಿ ಎತ್ತಿನಗಾಡಿಗಳಲ್ಲಿ ಅಡಕೆ ಸಾಗಿಸುತ್ತಿದ್ದರು. ಪಳಂಗಾಯದಿಂದ ಪಾಣೆಮಂಗಳೂರಿಗೆ ಗಾಡಿಗಳಲ್ಲಿ ಪ್ರಯಾಣ, ನಂತರ ಬೋಟಿನಲ್ಲಿ ಅಡಕೆ ಗೋಣಿಗಳು ಮಂಗಳೂರು ಸೇರುತ್ತಿತ್ತು. ಐದಾರು ದಿವಸಕ್ಕೆ ಸಾಕಾಗುವಷ್ಟು ಅಡುಗೆ ಪರಿಕರಗಳು ಗಾಡಿಯಲ್ಲಿರುತ್ತಿದ್ದುವು. ಅಡಕೆ ಮಾರಿ ಮರಳುವಾಗ ಮೀನು, ಜೀನಸು ಸಾಮಾನುಗಳು.
ಪಂಜದಲ್ಲಿ ಬ್ರಿಟಿಷರ ಬಂಗ್ಲೆಯಿತ್ತು. ಅದರ ಕುರುಹು ಈಗಲೂ ಇದೆ. ಅವರು ಬಂಟಮಲೆಯನ್ನು ಸರ್ವೇ ಮಾಡಿದ್ದಾರೆ. ಕೋವಿಧಾರಿ ಅಧಿಕಾರಿಗಳು ವರುಷಕ್ಕೆರಡು ಸಲ ತಪಾಸಣೆಗೆ ಬರುತ್ತಿದ್ದರಂತೆ. ಅವರಿಗೆ ಅಂಜಿ ತಲೆಮರೆಸಿಕೊಳ್ಳುವವರೇ ಹೆಚ್ಚು. ದೇರಣ್ಣ ಗೌಡರು ಧೈರ್ಯದಿಂದ ಬರಮಾಡಿಕೊಂಡು, ಕೋಳಿ ಮಾಂಸದೂಟದ ಸಮಾರಾಧನೆ ಮಾಡಿಸುತ್ತಿದ್ದರು. ಕಾಡಿನಿಂದ ಸಂಗ್ರಹಿಸಿದ ಶುದ್ಧ ಜೇನನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳು ಖುಷಿಯಾಗಿ ತಂಟೆ ಬರುತ್ತಿರಲಿಲ್ಲ.
ದೇರಣ್ಣ ಗೌಡರ ಹಳೆಮನೆಗೆ ಆರಂಭದಲ್ಲಿ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಕಟ್ಟಿಸಿದ ಮನೆಯೀಗ ಶತಮಾನ ಆಯುಸ್ಸಿಗೆ ಸಾಕ್ಷಿಯಾಗಿದೆ. ನಿರ್ಮಾಣಕ್ಕೆ ಬೇಕಾದ ಹಂಚುಗಳು ಪಾಣೆಮಂಗಳೂರಿನಿಂದ ಪಂಜದವರೆಗೆ ಗಾಡಿಯಲ್ಲಿ ಬಂದಿತ್ತು. ಅಲ್ಲಿಂದ ಪಳಂಗಾಯಕ್ಕೆ ತಲೆಹೊರೆ. ಮರಮಟ್ಟುಗಳೆಲ್ಲಾ ಕಾಡಿಂದ ಬೇಕಾದಂತೆ ಕಡಿದುಕೊಳ್ಳಬಹುದಿತ್ತು. ಮರದ ಕುರಿತಂತೆ ಕಾನೂನು ಆಗ ರೂಪಿತವಾಗಿರಲಿಲ್ಲ. ಹಾಗಾಗಿಯೇ ಇರಬೇಕು, ಪಿಜ್ಜ ಕಟ್ಟಿಸಿದ ಮನೆಯ ಪಕ್ಕಾಸು, ಬಾಗಿಲು, ಸ್ಥಂಭಗಳು ಒಂದೊಂದು ಮರದಷ್ಟು ದೊಡ್ಡದಾಗಿವೆ!
ಹಿಂದಿನವರ ಲೈಫ್ಸ್ಟೈಲ್ ಭಿನ್ನ. ಅದರಲ್ಲಿ ಗೊಣಗಾಟವಿರಲಿಲ್ಲ, ಆನಂದವಿತ್ತು. ಬಂದುದನ್ನು ಬಂದ ಹಾಗೆ ಸ್ವೀಕರಿಸುವ ಛಾತಿಯಿತ್ತು. ದೇರಣ್ಣ ಗೌಡರು ಕಠಿಣ ದುಡಿಮೆಗಾರ. ಕಾಡಿನ ಮಧ್ಯದ ಐದು ಕಿಲೋಮೀಟರ್ ದೂರದ ಕಚ್ಚಾರಸ್ತೆಯನ್ನು ಸಹಾಯಕರೊಂದಿಗೆ ಸ್ವತಃ ಮಾಡಿದ್ದರು. ಬ್ರಿಟಿಷ್ ಅಧಿಕಾರಿಯ ಸಹಕಾರದಿಂದ ಇಂಜಿನಿಯರ್ ಒಬ್ಬರ ಸಲಹೆಯನ್ನೂ ಪಡದುಕೊಂಡಿದ್ದರು. ಕಲ್ಲನ್ನು ಎಬ್ಬಿಸಲು ಬಳಸುವ ಆರೇಳು ಅಡಿ ಉದ್ದದ ಕಬ್ಬಿಣದ 'ಸಬ್ಬಲ್' ಮಾರ್ಗ ಪೂರ್ತಿಯಾಗುವಾಗ ಸವೆದು ಒಂದು ಅಡಿಗೆ ಇಳಿದಿತ್ತು!
ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು ಅಧ್ಯಾಪಕರಾಗಿ ಪಂಜಕ್ಕೆ ವರ್ಗವಾಗಿ ಬಂದರು. ಪಳಂಗಾಯದಲ್ಲಿ ವಸತಿ. ನಿತ್ಯ ಕಾಲ್ನಡಿಗೆಯಲ್ಲಿ ಪಂಜಕ್ಕೆ ಹೋಗಿ ವಾಪಾಸಾಗುತ್ತಿದ್ದರು. ಇವರು ಬಂದ ಮೇಲೆ ಪಿಜ್ಜನಿಗೆ ಭೀಮಬಲ ಬಂದಿತ್ತು. ಕಾರಣ, ಪುಟ್ಟಣ್ಣ ಗೌಡರಿಗೆ ಆಂಗ್ಲ ಭಾಷೆ ಗೊತ್ತಿತ್ತು. ಮುಂದೆ ಬ್ರಿಟಿಷ್ ಅಧಿಕಾರಿಗಳೊಂದಿಗೆ ಸಲೀಸಾದ ವ್ಯವಹಾರ
ಗೌಡರ ತಲೆಯೊಲ್ಲೊಂದು 'ರಾಜ ಮುಟ್ಟಾಳೆ'. ವಿಶೇಷ ವಿನ್ಯಾಸದ, ಅಲಂಕಾರದ ಈ ಮುಟ್ಟಾಳೆಯೊಳಗೆ ಹಣವನ್ನು ಗೌಪ್ಯವಾಗಿಡುವ ವ್ಯವಸ್ಥೆಗಳಿದ್ದುವು. ಉಳ್ಳವರು ಮಾತ್ರ ಮುಟ್ಟಾಳೆಯನ್ನು ಧರಿಸಬಹುದಾಗಿತ್ತು. ಸಮೀಪದ ಜಾತ್ರೆಗಳಿಗೆ ಹೋದರೆ ದಾನದಲ್ಲಿ ಧಾರಾಳಿ. ತಾನು ಧರಿಸಿದ ಅಂಗಿಯನ್ನೇ ದಾನ ಮಾಡಿದ ಕರ್ಣ!
1946ರ ಸುಮಾರಿಗೆ ಒಂಭತ್ತು ಎಕ್ರೆ ಅಡಿಕೆ ಕೃಷಿಯಿತ್ತು. ಮೂವತ್ತೈದು ಖಂಡಿ ಅಡಕೆ ಮಾರಾಟ ಮಾಡುತ್ತಿದ್ದರು. ಅವರೊಂದಿಗೆ ಅಡಕೆ ವ್ಯಾಪಾರ ಮಾಡುತ್ತಿದ್ದವರೊಬ್ಬರು ಹೇಳಿದ್ದರು, 'ಒಂದು ಖಂಡಿ (ಎರಡೂವರೆ ಕ್ವಿಂಟಾಲ್) ಅಡಕೆಗೆ ಒಂದೂವರೆ ಪವನ್ ಚಿನ್ನವನ್ನು ಖರೀದಿಸುತ್ತಿದ್ದರಂತೆ. ನಗದು ಅಂದರೆ ಅವರಿಗೆ ಅಷ್ಟಕ್ಕಷ್ಟೇ'. ಚಿನ್ನದ ಕುರಿತು ಆಗಲೇ ದೂರದೃಷ್ಟಿ ಇತ್ತು.
ಅಡಕೆಯ ಕೊಳೆರೋಗಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುತ್ತೇವಷ್ಟೇ. ಆಗ ಕೊಳೆರೋಗ ಇತ್ತೋ ಇಲ್ಲವೋ, ದೇರಣ್ಣ ಗೌಡರು 'ರಾಳ ಪಾಕ'ವನ್ನು ಮಾಡಿ ಸಿಂಪಡಿಸುತ್ತಿದ್ದರು. ರಾಳದ ಹುಡಿಗೆ ಏನನ್ನು ಮಿಕ್ಸ್ ಮಾಡುತ್ತಿದ್ದರು ಅಂತ ಗೊತ್ತಿಲ್ಲ. ಆ ಹೊತ್ತಲ್ಲಿ ಪಾಕ ಮಾಡುವವರ ಕೈಯ ಸಿಪ್ಪೆ ಎದ್ದುಹೋಗುತ್ತಿದ್ದುವಂತೆ. ಅಡಕೆ ತೋಟವಿದ್ದವನಿಗೆ ಸಮಾಜದಲ್ಲಿ ಪ್ರತ್ಯೇಕ ಮಣೆ. ಅಡಕೆ ಇದ್ದವರಲ್ಲಿ ಹಣದ ಚಲಾವಣೆಯಿತ್ತು. ಆ ಕಾಲದಲ್ಲೆ ಅಡಕೆ ಬೀಜವನ್ನು ಆಯ್ಕೆ ಮಾಡಿ ನೆಟ್ಟದ್ದರಿಂದ ಉತ್ತಮ ಇಳುವರಿ. ಅಡಿಕೆ ಸಸಿಗಳನ್ನು ಒಯ್ಯಲು ದೂರದೂರಿಂದ ಕೃಷಿಕರು ಬರುತ್ತಿದ್ದರು.
ವರುಷಕ್ಕೊಮ್ಮೆ ಬೇಟೆ. ಕಡವೆ ಸಿಕ್ಕಿದರೆ ಕೊಂದು ಇಡೀ ಊರಿಗೆ ಸಮಾರಾಧನೆ. ಬ್ರಿಟಿಷ್ ಅಧಿಕಾರಿಗಳಿಗೂ ಕೂಡಾ. ಈಗ ಕಾನೂನಿನ ಭೀತಿಯಿತ್ತು. ಪಂಜದಲ್ಲಿರುವ ಬ್ರಿಟಿಷ್ ಬಂಗ್ಲೆಯ ಸೂರಿಗೆ ಊರಿನವರೇ ಗೌರವದಿಂದ ಸೋಗೆ ಹಾಸುತ್ತಿದ್ದುರು. ಅಧಿಕಾರಿಗಳಿಗೆ ಮತ್ತು ದೇರಣ್ಣ ಗೌಡರಿಗೆ ಸಲುಗೆಯಿತ್ತು. ತನ್ನಲ್ಲಿದ್ದ ರೈಫಲ್ ಕೊಟ್ಟು 'ಶೂಟ್ ಮಾಡಿ' ಎಂದಿದ್ದರಂತೆ. ಗೌಡರು ಶೂಟ್ ಮಾಡಿದಾಗ ಬುಲ್ಲೆಟ್ ಮರವನ್ನು ಸೀಳಿ ಹಾರಿ ಹೋದುದನ್ನು ನೋಡಿ ಬೆರಗಾಗಿದ್ದರು. ದೇರಣ್ಣ ಗೌಡರಲ್ಲಿ ಕೋವಿ ಇತ್ತು. ಕಾಡುಪ್ರಾಣಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಆಗ ಕೋವಿ ಹೊಂದಲು ಲೈಸನ್ಸ್ ಬೇಕಾಗಿರಲಿಲ್ಲ. 1950ರ ಬಳಿಕ ಪಳಂಗಾಯಕ್ಕೆ ವಾಹನ ಸೌಕರ್ಯ ಶುರು. ಪಿಜ್ಜನ ನೆನಪಿಗಾಗಿ ಈಗ ಉಳಿದಿರುವುದು ಮನೆ ಮಾತ್ರ.
ವಾಸುದೇವ ಗೌಡರು ತನ್ನ ಪಿಜ್ಜನ ಜೀವನವನ್ನು ವಿವರಿಸುತ್ತಾ ಹೋದಂತೆ, ಸುಖದೊಂದಿಗೆ ಕಷ್ಟಗಳನ್ನು ಅರಗಿಸಿಕೊಳ್ಳುವ ಲೈಫ್ಸ್ಟೈಲ್ ಗೋಚರಿಸಿತು. ಕಷ್ಟಗಳನ್ನು 'ಸಮಸ್ಯೆ' ಎನ್ನುತ್ತಾ ವೈಭವೀಕರಿಸಲಿಲ್ಲ. 'ತಂದೆ ಕರಿಯಪ್ಪ ಗೌಡರ ಕಾಲದಲ್ಲಿ ತೋಟದ ಕೆಲಸಗಳೆಲ್ಲಾ ವ್ಯವಸ್ಥಿತವಾಗಿ ನಡೆದುವು' ಎನ್ನುತ್ತಾರೆ. ಇಳಿಜಾರು ಪ್ರದೇಶವಾದ್ದರಿಂದ ಅಲ್ಲಲ್ಲಿನ ಬಂಡೆ ಕಲ್ಲನ್ನು ಕತ್ತರಿಸಿ, ಗೋಡೆ ಯಾ ಕಟ್ಟವನ್ನು ರಚಿಸಿರುವುದು ಆ ಕಾಲದ ದೇಸಿ ತಂತ್ರಜ್ಞಾನಕ್ಕೆ ಸಾಕ್ಷಿ. ಸುಮಾರು ಇಪ್ಪತ್ತು ವರ್ಷ ಸತತವಾಗಿ ಕಟ್ಟವನ್ನು ಕಟ್ಟುತ್ತಾ ಇದ್ದರಂತೆ. ಈ ಕೆಲಸಗಳಿಗೆ ಐತ್ತಪ್ಪ ಮೂಲ್ಯರು ಸಾರಥಿಯಗಿದ್ದು, ಈಗ ಸಾಕ್ಷಿಯಾಗಿ ಸಿಗುತ್ತಾರೆ. ಸದಾ ಜಿನುಗುವ ಒರತೆ ನೀರು. 1983ರಲ್ಲಿ ಜುಲಾಯಿ ತಿಂಗಳಲ್ಲಿ ಮಳೆಗಾಲ ಶುರುವಾಗಿತ್ತು. ಬಂಟಮಲೆ ಶಿಖರದಿಂದ ಇಳಿದು ಬರುವ ಒರತೆ ನೀರು ಪಳಂಗಾಯಕ್ಕೆ ನೀರಿನ ಬರವನ್ನು ಕೊಡಲಿಲ್ಲ.
ಈಚೆಗೆ ಏನೆಕಲ್ಲಿನ ಯಶೋಚಂದ್ರರ ಜತೆ ಭೇಟಿಯಿತ್ತೆ. 'ಹಳೆ ಮನೆ. ನಿರ್ವಹಣೆ ಕಷ್ಟವಲ್ವಾ' ಎಂದುದಕ್ಕೆ 'ಹಳೆ ಮನೆಯನ್ನು ಬದಲಾಯಿಸಿದರೆ ಆ ಮನೆಯ ಸಂಸ್ಕೃತಿಯ ಗುಣ ಕಳೆದುಹೋಗುತ್ತದೆ' ಎಂದವರು ಅದರಲ್ಲಿ ವಾಸವಾಗಿರುವ ಸದಾಶಿವ ಗೌಡರು.
ಹಿರಿಯರ ಕೊಡುಗೆಗಳನ್ನು ಮರೆಯದೆ, ಆಧುನಿಕ ಸೌಲಭ್ಯಗಳು ಬದುಕಿನೊಂದಿಗೆ ಥಳಕು ಹಾಕಿಕೊಂಡರೂ ಹಿರಿಯರ ಭೂಮಿಯೊಂದಿಗೆ ಬದುಕುತ್ತಿರುವ ಕುಟುಂಬಗಳನ್ನು ನೋಡಿ 'ಹೀಗೂ ಉಂಟೇ' ಎಂದು ಪ್ರಶ್ನಿಸಿಕೊಂಡೆ. 'ಇಂತಹ ಕಷ್ಟದ ಬದುಕನ್ನು ಮಕ್ಕಳಿಗೆ ಹೇಳಬೇಕು. ಅದನ್ನವರು ಓದಬೇಕು', ಏನಂತೀರಿ?
0 comments:
Post a Comment