ಬಾಲ್ಯ ನೆನಪಾಗುತ್ತದೆ, ಕಾಡು ಮಾವಿನ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದಿನಗಳು. ಸಂಜೆ ಶಾಲೆಯಿಂದ ಹಿಂದಿರುಗುವಾಗ ಮರದಡಿ ಬಿದ್ದ ಹಣ್ಣನ್ನು ತಿನ್ನಲು ಮಕ್ಕಳೊಳಗೆ ಪೈಪೋಟಿ. ಮರಕ್ಕೆ ಕಲ್ಲು ಹೊಡೆದು, ಹಣ್ಣುಗಳನ್ನು ಬೀಳಿಸಿ ಹೊಟ್ಟೆಗಿಳಿಸುವ ಮೋಜು. ಚಡ್ಡಿ ಕಿಸೆಯೊಳಗೆ, ಪುಸ್ತಕದ ಬ್ಯಾಗಿನೊಳಗೆ ಸೇರಿಕೊಂಡ ಮಾವಿನ ಹಣ್ಣು ಅಪ್ಪಚ್ಚಿಯಾಗಿ ಉಂಟು ಮಾಡಿದ ರಾದ್ದಾಂತ.
ಅಡುಗೆ ಮನೆ ಹೊಕ್ಕರೆ ಸಾಕು, ಕಾಡು ಮಾವಿನ ಹಣ್ಣಿನ ಬೇಯಿಸಿದ ಮತ್ತು ಹಸಿ ಗೊಜ್ಜು, ಹಣ್ಣಿನ ರಸಾಯನ..ಗಳ ಸವಿ ಮಾಸಲುಂಟೇ? ಗಂಜಿಯೊಂದಿಗೆ ನೆಂಜಿಕೊಳ್ಳಲು ಕಾಡು ಮಾವಿನ ಹಣ್ಣೇ ಬೇಕು. ಒಂದೊಂದು ಮರದ್ದು ಒಂದೊಂದು ರುಚಿ.
ಈಗ ಮಾವಿನ ಮರಗಳು ಎಲ್ಲಿವೆ? ರಸ್ತೆಯಂಚಿನಲ್ಲಿ ಹಿರಿಯರು ನೆಟ್ಟು ಪೋಷಿಸಿದ ಮಾವು, ಹಲಸು ಮರಗಳು 'ರಸ್ತೆ ಅಭಿವೃದ್ಧಿ'ಗೆ ಬಲಿಯಾಗಿವೆ. ರಬ್ಬರ್ ಕೃಷಿಗಾಗಿ ಗುಡ್ಡ ನುಣುಪಾಗಿ, ಮರಗಳೂ ನೆಲಕ್ಕುರುಳುತ್ತಿವೆ. ಮನೆಯ ಸರಹದ್ದಿನಲ್ಲಿ, ತೋಟದ ಮಧ್ಯದವು ಸದ್ಯ ಬಚಾವ್. ಕಾಡು ಮಾವಿನ ಹಣ್ಣು ಬದುಕಿನಿಂದ ಹಿಂದೆ ಸರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಮಾವಿನ ನೋವಿಗೆ ದನಿಯಾಗಲು ಬಂಟ್ವಾಳ ತಾಲೂಕಿನ (ದ.ಕ.) ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ ಮನೆಯಂಗಳಲ್ಲಿ ಮೇ 5ರಂದು 'ಕಾಡು ಮಾವಿನ ಹಣ್ಣಿನ ಹಬ್ಬ ಜರುಗಿತು. 'ಮಾವಿನ ಊಟ-ತಳಿ ಹುಡುಕಾಟ' ಶೀರ್ಷಿಕೆಯ ಹಬ್ಬದಲ್ಲಿ ಬದುಕಿನಿಂದ ಅಜ್ಞಾತವಾಗುತ್ತಿರುವ ಮರಗಳಿಗೆ ಕಾಯಕಲ್ಪ ನೀಡುವ ಸಂಕಲ್ಪ. ಅಳಿದುಳಿದ ಮರಗಳನ್ನು ಸಂರಕ್ಷಿಸುವ ನಿರ್ಧಾರ.
ಆಮಂತ್ರಣ ಪತ್ರ ಅಚ್ಚು ಹಾಕಿಸಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ನೀಡಿಲ್ಲ. ಆಳೆತ್ತರದ ಪ್ಲೆಕ್ಸಿಗಳನ್ನು ಮುದ್ರಿಸಿಲ್ಲ. ಪ್ರಕೃತಿಯನ್ನು ಪ್ರೀತಿಸುವ, ಹಲಸು-ಮಾವಿನ ಸಹವಾಸವಿರುವ ಮಂದಿಗೆ ದೂರವಾಣಿ ಮೂಲಕ ನಿರೂಪ. ಇನ್ನೂರೈವತ್ತಕ್ಕೂ ಅಧಿಕ ಮಂದಿಯ ಉಪಸ್ಥಿತಿ. ದಿನವಿಡೀ ಕಲಾಪ. ಮಾವಿನ ಸುತ್ತ ನೋವು ನಲಿವಿನ ಮಾತುಕತೆ.
ಎರಡು ದಶಕಕ್ಕೂ ಹಿಂದೆ ಮಾವು-ಹಲಸನ್ನು ಬದುಕಿಗಂಟಿಸಿಕೊಂಡ ಮಾಪಲತೋಟ ಸುಬ್ರಾಯ ಭಟ್, ಕರಿಂಗಾಣದ ಡಾ.ಕೆ.ಎಸ್.ಕಾಮತ್ ಮತ್ತು ತಳಿ ಸಂಗ್ರಾಹಕ ಗೊರಗೋಡಿ ಶ್ಯಾಮ ಭಟ್ಟರು ಮಾವಿಗೆ ದನಿಯಾದರು. ತಳಿ ಸಂಗ್ರಹದಲ್ಲಿಂದ ಊಟದ ಬಟ್ಟಲಿನ ತನಕ ವಿವಿಧ ಹಂತದ ಮಾತುಕತೆ-ಚರ್ಚೆ.
ಆಶ್ಚರ್ಯವೆಂದರೆ ಎರಡೂವರೆ ಗಂಟೆ ಕಾಲ ನಡೆದ ಕಲಾಪದಲ್ಲಿ ಪ್ರಶ್ನೆಗಳ ಸುರಿಮಳೆ. ಎಲ್ಲವೂ ಗಟ್ಟಿ ಹೂರಣದವು. ಸಮಯ ಕೊಲ್ಲುವ ಪ್ರಶ್ನೆಗಳಲ್ಲ. ಮಾವಿನ ರೋಗ, ಹತೋಟಿ, ಪುನಶ್ಚೇತನ, ಅಡುಗೆಯಲ್ಲಿ ಬಳಕೆ, ತಳಿ ವೈವಿಧ್ಯ..ಗಳ ಸುತ್ತ ಗಿರಕಿ. ಸಂಪನ್ಮೂಲ ವ್ಯಕ್ತಿಗಳಿಂದ ಅನುಭವಾಧಾರಿತ ನಿಖರ ಉತ್ತರ.
ಚರ್ಚೆಯ ಮುಂದುವರಿದ ಭಾಗವಾಗಿ 'ರುಚಿ ನೋಡಿ-ತಳಿ ಆಯ್ಕೆ' ಪ್ರಕ್ರಿಯೆ. ಮಿಡಿ ಮಾವು ಮತ್ತು ಹಣ್ಣುಗಳೆಂಬ ಎರಡು ವಿಭಾಗ. ಸುಮಾರು ಎಪ್ಪತ್ತು ವಿವಿಧ ರುಚಿಯ, ಸ್ವಾದದ ಮಿಡಿ ತಳಿಗಳು ಮತ್ತು ಅರುವತ್ತೈದು ಹಣ್ಣುಗಳ ತಳಿಗಳ ಪರೀಕ್ಷೆ. ನಿಶ್ಚಿತ ಮಾನದಂಡ. ತಲಾ ಆರು ಯಾ ಏಳು ತಳಿಗಳಂತೆ ಆಯ್ಕೆ. ಕಸಿ ಕಟ್ಟಿ ಅಭಿವೃದ್ಧಿ ಪಡಿಸುವತ್ತ ದೂರದೃಷ್ಟಿ. ಇಷ್ಟೊಂದು ಪ್ರಮಾಣದ ವೆರೈಟಿಗಳನ್ನು ಆಯ್ಕೆ ಮಾಡಿ ಮುಗಿಸುವಾಗ ತೀರ್ಪುಗಾರರ ಹಣೆಯಲ್ಲಿ ಬೆವರು!
ನಮ್ಮ ಮನೆಯಲ್ಲಿರುವ ಕಾಡು ಮಾವಿನ ತಳಿಗಳ ಪೈಕಿ ಹದಿನೇಳರಷ್ಟು ತಳಿಗಳ ಹಣ್ಣುಗಳನ್ನು ಆಯ್ದು ತಂದಿದ್ದೆ. ಇಷ್ಟು ವರುಷ ಇವುಗಳ ರುಚಿ, ಬಣ್ಣ, ಸ್ವಾದ.. ಯಾವುದೂ ಗೊತ್ತಿರಲಿಲ್ಲ. ತಳಿ ಆಯ್ಕೆ ಪ್ರಕ್ರಿಯೆಗಾಗಿಯೆ ನನ್ನ ತೋಟದಲ್ಲಿ ಈ ವರುಷ ಫಲ ನೀಡಿದ ಎಲ್ಲಾ ಮರಗಳ ಹಣ್ಣನ್ನು ರುಚಿ ನೋಡಿ, ಅವುಗಳನ್ನು ತಂದಿದ್ದೆ - ಎನ್ನುತ್ತಾರೆ ಕಡಂಬಿಲ ಕೃಷ್ಣ ಪ್ರಸಾದ್. ಹಬ್ಬಕ್ಕೆ ಹಣ್ಣನ್ನು ತಂದ ಒಬ್ಬೊಬ್ಬರಲ್ಲಿ ಇಂತಹ ರೋಚಕ ಕತೆಗಳಿದ್ದುವು.
ಮಾವಿನ ಮಿಡಿ ವಿಭಾಗದಲ್ಲಿ ಆಯ್ಕೆಯಾದವರು - ಆವರಣದಲ್ಲಿ ಕಾಡು ಮಾವಿನ ತಳಿಗಳ ಪ್ರಾದೇಶಿಕ ಹೆಸರುಗಳಿವೆ. ಅನಿಲ್ಕುಮಾರ್ ಐತನಡ್ಕ (ಬಾಕುಡ), ಅಜಕ್ಕಳ ನಾರಾಯಣ ಭಟ್ (ತುಳಸಿಮೂಲೆ ಅಜಕ್ಕಳ), ಶಂಕರನಾರಾಯಣ ಭಟ್ ಮಲ್ಯ (ಆನಂದರೈ, ಜರಿಮೂಲೆ, ಕೆರೆಬದಿ), ಮುಳಿಯ ರಾಧಾಕೃಷ್ಣ (ನಡುಮನೆ ಜೀರಿಗೆ) ಗಿರೀಶ್ ಬೈಂಕ್ರೋಡು (ದಾಮೋದರ), ಡಾ.ಅಶ್ವಿನಿ ಕೃಷ್ಣಮೂರ್ತಿ (ಪಾರ್ತಿಮೂಲೆ).
ಹಣ್ಣುಗಳ ವಿಭಾಗದಲ್ಲಿ - ಅನಿಲ್ ಕುಮಾರ್ ಐತನಡ್ಕ (ಜೀರಿಗೆ), ಪಡಾರು ರಾಮಕೃಷ್ಣ ಶಾಸ್ತ್ರಿ (ಬರಿಮಾರು ತೋಡು), ಕೇಶವ ಭಟ್ ಕಾಸರಗೋಡು (ಮಲಪ್ಪುರಂ 1), ಶಿರಂಕಲ್ಲು ಆರ್.ಎನ್.ಭಟ್ (ಚೆಂಡೆ ರೆಡ್), ಸದಾಶಿವ ಭಟ್ ಮುಂಡಂತ್ತಜೆ (ಬೊಳ್ಳೆ), ಮೀಯಂದೂರು ಸುಬ್ರಾಯ ಭಟ್ (ಮೀಯಂದೂರು 2) ಒಂದು ಸೀಮಿತ ಪ್ರದೇಶದ ಆಯ್ಕೆಗಳಿವು. ಇಂತಹ ತಳಿ ಆಯ್ಕೆಗಳನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿದರೆ, ಆ ಊರಿನ ಉತ್ತಮ ತಳಿಯನ್ನು ಆಯ್ಕೆ ಮಾಡಿ ಸಂರಕ್ಷಿಸಬಹುದು. ಉತ್ತಮ ರುಚಿಯ ಹಣ್ಣು ಸಿಗುತ್ತದೆ ಎಂದಾದರೆ ಯಾರಿಗೆ ಬೇಡ ಹೇಳಿ!
ಮಾವಿನ ಹಬ್ಬದಂದು ಮಧ್ಯಾಹ್ನ ಮಾವಿನದ್ದೇ ಖಾದ್ಯ. 'ಹಲಸು ಸ್ನೇಹಿ ಕೂಟ'ದ ಆಯೋಜನೆ. ಕಳೆದೊಂದು ವರುಷದಲ್ಲಿ ಸುತ್ತ ಮುತ್ತ ನಡೆದ ಹಲಸಿನ ಕಾರ್ಯಕ್ರಮದ ಹೂರಣವನ್ನು ಹೊತ್ತ ವಾರ್ತಾಪತ್ರದ ಬಿಡುಗಡೆ. ಕೇರಳ-ಪಡನಕಾಡ್ ಕೃಷಿ ವಿಶ್ವವಿದ್ಯಾಲಯ, ಸೋನ್ಸ್ ಫಾರ್ಮ್, ಮಾಪಲತೋಟ, ಎಡ್ವರ್ಡ್ ಅವರ ತೋಟದವು ಮತ್ತು ಇತರ ಹಣ್ಣುಗಳ ಪ್ರದರ್ಶನ ಹಬ್ಬದ ಹೈಲೈಟ್.
'ಕಾಡು ಮಾವಿನ ಬಗ್ಗೆ ಕಾಳಜಿಯಿಲ್ಲ. ಅದರತ್ತ ಜನರ ಗಮನವನ್ನು ಸೆಳೆದು ಸಂರಕ್ಷಣೆಯತ್ತ ಗಮನ ಹರಿಸಬೇಕಾಗಿದೆ' ಎಂದು ಹಬ್ಬದ ಆಶಯವನ್ನು ಹೇಳುತ್ತಾರೆ, ಸಂಘಟಕರಲ್ಲೊಬ್ಬರಾದ ಮುಳಿಯ ವೆಂಕಟಕೃಷ್ಣ ಶರ್ಮ. (9480200832)
ಕಳೆದ ವರುಷ ಉಬರು ಮನೆಯಂಗಳಲ್ಲಿ ಹಲಸಿನ ಹಣ್ಣಿನ ಹಬ್ಬ ಜರುಗಿತ್ತು. ಅದರ ಫಲಶ್ರುತಿಯಾಗಿ ಮಾವಿನ ಹಬ್ಬದಲ್ಲಿ ಇನ್ನೂರೈವತ್ತಕ್ಕೂ ಮಿಕ್ಕಿ ಹಲಸಿನ ಕಸಿ ಗಿಡಗಳು ಮಾರಾಟವಾಗಿರುವುದು ಹಲಸಿನರಿವು ಮೂಡಿದುದರ ಸಂಕೇತವಲ್ವೇ.
0 comments:
Post a Comment