Sunday, June 3, 2012

ಬದುಕಲ್ಲಿ ಮೊಗೆದ ಪ್ರಕೃತಿಯ ರಸಗಟ್ಟಿ
ವದ್ವ ವೆಂಕಟ್ರಮಣ ಭಟ್ ಅಳಿಕೆಯಲ್ಲಿ (ದ.ಕ.) ಭೌತಶಾಸ್ತ್ರ ಉಪನ್ಯಾಸಕ. ಗಿಡ, ಬಳ್ಳಿ, ಮರಗಳ ಕುರಿತು ಸ್ವಯಾರ್ಜಿತ ಸಸ್ಯಶಾಸ್ತ್ರೀಯ ಅಧ್ಯಯನ. ಪಾಠದಷ್ಟೇ ಹಸಿರಿಗೂ ಮಾನ, ಸಂಮಾನ. ಬದುಕಿನ ಕ್ಷಣವನ್ನೂ ಅನುಭವಿಸುವ ಸೂಕ್ಷ್ಮಸಂವೇದಿ. ಮೂವತೈದು ಹವ್ಯಾಸಗಳ ಸಂಪನ್ನತೆ.

ಸಾವಿರಕ್ಕೂ ಮಿಕ್ಕಿದ ಔಷಧೀಯ ಗಿಡಗಳ ಸಂರಕ್ಷಣೆ ಹವ್ಯಾಸಗಳಲ್ಲೊಂದು. ಅಳಿವಿನಂಚಿನಲ್ಲಿರುವುದಕ್ಕೆ ಆದ್ಯತೆ. ಹಣ ನೀಡಿ ತಂದವುಗಳೇ ಅಧಿಕ. ನೂರು ರೂಪಾಯಿಯಿಂದ ಸಾವಿರದ ತನಕ. ಕೇರಳ-ಕರ್ನಾಟಕದ ನರ್ಸರಿಗಳು ನೆಂಟರ ಮನೆಯಂತೆ! ಅದರೊಳಗೆ ನುಗ್ಗಿ ಹೊರ ಬರುವಾಗ 'ಇದನ್ನು ಹುಡುಕುತ್ತಾ ಇದ್ದೆ, ಸಿಕ್ಕಿತು ನೋಡಿ,' ಸಂತೋಷವನ್ನು ಹಂಚಿಕೊಳ್ಳುತ್ತಾರೆ.

ವದ್ವದವರು ಮಾರುತಿ ಓಮ್ನಿಯಲ್ಲಿ ಹೊರಟರೆಂದರೆ, ಮರಳುವಾಗ ಹೊಸ ಗಿಡಗಳ ಸಂಗ್ರಹ. ಮಡದಿ ಶಾರದಾ ವ್ಯವಸ್ಥಿತವಾಗಿ ಪೇರಿಸಿಡಲು ಸಿದ್ಧರಾಗಿರುತ್ತಾರೆ. ಪ್ರಯಾಣದುದ್ದಕ್ಕೂ ಸಿಗುವ ನರ್ಸರಿಗಳಿಗೆ ಭೇಟಿ. ಬರಿಗೈಯಲ್ಲಿ ಮರಳಿದುದು ಕಡಿಮೆ. ಗಿಡಗಳ ಸಸ್ಯಶಾಸ್ತ್ರೀಯ ಹೆಸರುಗಳು, ಗುಣಧರ್ಮಗಳು ನಾಲಗೆತುದಿಯಲ್ಲಿರುವುದರಿಂದ ನರ್ಸರಿಗಳಲ್ಲಿ ಇವರು ಮೋಸ ಹೋಗುವುದು ಕಡಿಮೆ!

ಮೂರು ದಶಕಗಳ ಸಂಗ್ರಹದ ಫಲವಾಗಿ, ಅವರ ಭೂಮಿಯಲ್ಲಿ ಮೆಟ್ಟಿದ್ದೆಲ್ಲಾ ಕಳೆಯಲ್ಲ. ಮುಟ್ಟಿದ್ದೆಲ್ಲಾ ಕಸವಲ್ಲ! ಎಲ್ಲವೂ ಔಷಧೀಯ ಸಂಬಂಧಿ ಸಸ್ಯಗಳೇ. ಮಾತಿಗೆ ಸಿಕ್ಕಾಗಲೆಲ್ಲಾ ಪರಿಸರದ್ದೇ ಸುದ್ದಿ-ಮಾತುಕತೆ. ಅಂತಹವರ ಒಡನಾಟದ ಹಪಹಪಿಕೆ. ಕಾಡು ಹರಟೆಯಿಂದ ದೂರ. ನಿರಂತರ ಜ್ಞಾನದಾಹ. ಪ್ರಯಾಣ ಹೋಗುವಾಗಲೆಲ್ಲಾ ಸಮಾನ ಆಸಕ್ತರನ್ನು ಒಂದಿಗೆ ಕರೆದೊಯ್ಯುವುದು ಜಾಯಮಾನ. ಚಾಲಕನ ಆಸನದಲ್ಲಿದ್ದರೂ ಹೊಸ ಗಿಡಗಳ ಹುಡುಕಾಟದಲ್ಲಿ ಮೂರನೇ ಕಣ್ಣು ಜಾಗೃತ.

'ನೋಡಿ. ಇದು ಅಶ್ವಗಂಧ, ಮಧುನಾಶಿನಿ, ಮಣಿತೊಂಡೆ, ಭೂತಪಚ್ಚೆ, ಮಾಣಿಕ್ಯ, ಜಾಪಾಳ, ವಿಷಘ್ನ, ಇರುವೇರಿ..' ಎನ್ನುತ್ತಾ ಮಾತಿಗೆಳೆಯುತ್ತಾರೆ. ಒಂದೊಂದು ಗಿಡಗಳ ಹತ್ತಿರ ಹೋದಾಗ ಅವುಗಳ ಪೂರ್ಣ ಪರಿಚಯ ಪ್ರಸ್ತುತಿ. ಗುಣಧರ್ಮಗಳ ವಿಶ್ಲೇಷಣೆ. ಔಷಧೀಯ ಮರ್ಮಗಳ ವಿವರಣೆ. ಹಿರಿಯರು ಬಳಸುತ್ತಿದ್ದ ವಿಧಾನಗಳ ನೆನವರಿಕೆ.

ಹೊಸ ಗಿಡಗಳು ಸೇರ್ಪಡೆಯಾದರೆ, ಅದನ್ನು ಅಭಿವೃದ್ಧಿ ಪಡಿಸಿ ಆಸಕ್ತರಿಗೆ ಹಂಚುತ್ತಾರೆ. ಹಂಚಿದಲ್ಲಿಗೆ ಮುಗಿಯುವುದಿಲ್ಲ. ಫೀಡ್ಬ್ಯಾಕ್ ಪಡೆಯುತ್ತಾರೆ. 'ಎಷ್ಟೋ ಮಂದಿ ಆಸಕ್ತಿಯಿಂದ ಬರುತ್ತಾರೆ. ಸಮಯ ಹೊಂದಿಸಿಕೊಂಡು ಗಿಡಗಳ ಔಷಧೀಯ ವಿಚಾರಗಳನ್ನು ಹೇಳುತ್ತೇನೆ. ಮರಳುವಾಗ ಗಿಡಗಳನ್ನು ಉಚಿತವಾಗಿ ಉಡುಗೊರೆ ಕೊಟ್ಟು ಕಳುಹಿಸುತ್ತೇನೆ. ಅದನ್ನು ಗೇಟಿನ ಪಕ್ಕವೇ ಬಿಸಾಡಿ ಹೋಗುವ ಸಸ್ಯಪ್ರಿಯರೂ ಇದ್ದಾರೆ! ಎನ್ನುತ್ತಾರೆ.

ಪ್ರಕೃತಿಯಲ್ಲಿ ಯಾವುದೂ ಕಳೆಯಿಲ್ಲ. ಎಲ್ಲವೂ ಉಪಯೋಗಿ. ನೋಡುವ ದೃಷ್ಟಿಕೋನ, ಭವಿಷ್ಯದ ನೋಟ ಬೇಕು. ಆಗ ಗಿಡಗಳ, ಪ್ರಕೃತಿಯತ್ತ ಮೋಹ ಹುಟ್ಟುತ್ತದೆ. ವದ್ವ ಮನೆಯಲ್ಲಿ ಪರಿಸರ ಕುರಿತು ಮಾತನಾಡುತ್ತಿದ್ದಂತೆ ನಾವು ಅದೇ ಆಗಿಬಿಡುತ್ತೇವೆ.

'ನಾನು ಯಾವುದಕ್ಕೂ ಶೇಪ್ ಕೊಟ್ಟಿಲ್ಲ. ಕಾಡಿನಂತೆ ಬೆಳೆದಿವೆ. ಕೆಲವೊಂದು ಗಿಡಗಳಿಗೆ ಕಾಡಿನ ವಾತಾವರಣ ಬೇಕು. ಎಲ್ಲವೂ ನ್ಯಾಚುರಲ್ ಆಗಿದೆ. ನನ್ನ ಅಣ್ಣ ಬಂದರೆ ಅವನಿಗೆ ಕಾರು ನಿಲ್ಲಿಸಲು, ತಿರುಗಿಸಲು ಜಾಗವೇ ಇಲ್ಲ!' ಎನ್ನುವಾಗ ಬೇಸರವಿಲ್ಲ, ಖುಷಿ. ಇಲ್ಲ್ಲಿ ಔಷಧೀಯ ಸಸ್ಯಗಳ ಪರಿವಾರದೊಂದಿಗೆ ಬಗೆಬಗೆಯ ಹೂಗಳು, ಆರ್ಕಿಡ್, ಕ್ರೋಟಾನ್, ಹಣ್ಣಿನ ಗಿಡಗಳ ಸಂಸಾರಗಳೂ ಇವೆ.

'ಮೂವತ್ತು ವರುಷದ ಹಿಂದೆ ಇದು ಬೋಳುಗುಡ್ಡ. ನಾನು ಎಂಟನೇ ತರಗತಿಯಲ್ಲಿದ್ದಾಗ ಕೃಷಿಯ ಟಚ್ ಸಿಕ್ಕಿತು. ಆಗ ನೆಟ್ಟ ಮಾವಿನ ಮರಗಳು ಈಗ ಫಲ ಕೊಡುತ್ತವೆ. ಅದನ್ನು ಸವಿಯುವುದು ಎಷ್ಟು ಖುಷಿ ಅಲ್ವಾ. ಗಿಡಗಳೊಂದಿಗೆ ನಾವು ನಿತ್ಯ ಟ್ಯೂನ್ ಆಗುತ್ತಾ ಇರಬೇಕು. ಅಂತಹವರಿಗೆ ಕೃಷಿ ಓಕೆ,' ಅನುಭವ ಸಾರುವ ಸಂದೇಶ.

'ಅಳಿಕೆ ಪರಿಸರದಲ್ಲಿ ಒಂದು ನೂರು ಎಂಭತ್ತೆರಡು ವೆರೈಟಿ ಹಕ್ಕಿಗಳನ್ನು ಗುರುತು ಹಿಡಿದಿದ್ದೇನೆ. ಈಗ ಇಪ್ಪತ್ತು ಸಿಕ್ಕರೆ ಪುಣ್ಯ.' ಕಾರಣ ಕೃಷಿಗೆ, ತೋಟಗಾರಿಕೆಗೆ ವ್ಯಾಪಕವಾಗಿ ಬಳಸುತ್ತಿರುವ ವಿಷ ಸಿಂಪಡಣೆ. ಹಕ್ಕಿಗಳಿಗೆ ಬೇಕಾದ ಹಣ್ಣು ಹಂಪಲುಗಳೆಲ್ಲಾ ವಿಷಮಯವಾಗಿದೆ. ಮೊದಲೆಲ್ಲಾ ಮನೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟುತ್ತಿತ್ತು. ಈಗೆಲ್ಲಿ? ಜೇನು ಸಂಸಾರವೆಲ್ಲಿ? ಅವುಗಳಿಗೆ ಪ್ರಿಯವಾದ ಹೂಗಳೆಲ್ಲಿ? ಹೀಗೆ ಪ್ರಕೃತಿಯನ್ನು ಓದುತ್ತಾ ಹೋದಂತೆ ಭವಿಷ್ಯದ ಕರಾಳದ ಕ್ಷಣಗಳು ಮಿಂಚಿ ಮರೆಯಾಗುತ್ತವೆ.

ವೆಂಕಟ್ರಮಣ ಭಟ್ಟರಿಗೆ ಗಿಡ, ಸಸ್ಯಗಳು ಅವರ ಮತ್ತೊಂದು ಹೃದಯ. ಅಂತೆಯೇ ಚಿಟ್ಟೆ, ಅಣಬೆ, ಜೇಡಗಳೂ ಕೂಡಾ. ಮೂವತ್ತು ಸಾವಿರಕ್ಕೂ ಮಿಕ್ಕಿದ ಚಿತ್ರಗಳು ಅವರ ಕಂಪ್ಯೂಟರ್ನಲ್ಲಿ ಅಪ್ಡೇಟ್ ಆಗುತ್ತಾ ಇರುತ್ತದೆ. ಇವುಗಳು ನೆಟ್ನಿಂದ ಇಳಿಸಿದವುಗಳಲ್ಲ. ಸ್ವತಃ ಕ್ಲಿಕ್ಕಿಸಿದವುಗಳೇ!

'ಈ ವಾರ ಐನೂರು ಫೋಟೋ ಹೊಡೆದೆ. ಕಳೆದ ನಾಲ್ಕು ತಿಂಗಳಲ್ಲಿ ಮೂರು ಸಾವಿರ ಮೀರಬಹುದು' ಎನ್ನುತ್ತಾರೆ. ರಜೆ ಇದ್ದ ದಿವಸ ಮನೆಯಲ್ಲಿ ಸಿಗರು. ತನ್ನ ಹತ್ತೆಕ್ಕರೆ ತೋಟದಲ್ಲಿ ಸುತ್ತುತ್ತಿರುತ್ತಾರೆ. ತೋಟದ ಕೆಲಸದ ಮೇಲ್ವಿಚಾರಣೆ ಆದಂತೆಯೂ ಆಯಿತು, ಫೋಟೋ ಕ್ಲಿಕ್ಕಿಸಿದಂತೆಯೂ ಆಯಿತು.

ಭೂಮಿಯಲ್ಲಿ ಜೀವವೈವಿಧ್ಯ ಜೀವಂತವಾಗಿದ್ದರೆ ಚಿಟ್ಟೆ, ಹಕ್ಕಿ, ಜೇಡಗಳು ಸದಾ ಸುತ್ತುತ್ತಿರುತ್ತವೆ! ವದ್ವ ಭಟ್ಟರ ಪ್ರಕೃತಿ ಓದಿನಲ್ಲಿ ಸತ್ಯವಿದೆ. ಸೂಕ್ಷ್ಮತೆಯಿದೆ. ತೆಗೆದ ಚಿತ್ರಗಳು ಅವರ ಮನೆಯ ಸುತ್ತಮುತ್ತಲಿನವೇ. ಮುನ್ನೂರು ವಿಧದ ಜೇಡ, ಐವತ್ತು ವಿಧದ ಕಪ್ಪೆಗಳು, ಮುನ್ನೂರು ವೆರೈಟಿ ಅಣಬೆ ಚಿತ್ರಗಳು ನೋಡುವುದೇ ಆನಂದ.

ಸೂಕ್ಷ್ಮ ಜೀವಿಗಳ ಫೋಟೋಗ್ರಫಿಯು ಬದುಕಿನಲ್ಲಿ ತಾಳ್ಮೆಯನ್ನು ಕಲಿಸುತ್ತದೆ. ಕೆಲವೊಂದನ್ನು ಕ್ಲಿಕ್ಕಿಸಲು ಗಂಟೆಗಟ್ಟಲೆ ಕಾಯಬೇಕು. ಕಾದರೂ ನಿರಾಶೆ ತಪ್ಪಿದ್ದಲ್ಲ. ಪ್ರತಿಯೊಂದು ಜೀವಿಯೂ ಕೂಡಾ ತಾವು ವಾಸಿಸುವ ಪ್ರದೇಶವನ್ನು ಗೊತ್ತುಮಾಡಿಕೊಳ್ಳುತ್ತವೆ. ಅದು ಯಾವ ಪ್ರದೇಶ ಎಂಬ ಸೂಕ್ಷ್ಮತೆ ಗೊತ್ತಾಗಿ ಬಿಟ್ಟರೆ ನಾವು ಅರ್ಧ ಯಶಸ್ವಿ.

ಚಿಟ್ಟೆಗಳೆಲ್ಲಾ ಮೇಲ್ನೋಟಕ್ಕೆ ಒಂದೇ. ಸಣ್ಣಪುಟ್ಟ ವ್ಯತ್ಯಾಸವಷ್ಟೇ. ಸುಂದರ ಅಂದ್ರೆ ಸುಂದರ. ಕೆಲವು ಮರ ತೂತು ಮಾಡಿ ಬದುಕುತ್ತವೆ. ಮತ್ತೆ ಕೆಲವು ಎಲೆಗಳನ್ನು ಸುರುಟಿಸಿ ಜೀವಿಸುತ್ತವೆ. ಚಿಟ್ಟೆಗಳು ನಮ್ಮನ್ನು ಗೊಂದಲದಲ್ಲಿ ಸಿಲುಕಿಸುವಷ್ಟು ಜಾಣ್ಮೆ ಹೊಂದಿವೆ. ರಕ್ಷಣೆಗಾಗಿ ಒಂದು ಕೀಟ ಇನ್ನೊಂದನ್ನು ಫೂಲ್ ಮಾಡುತ್ತವೆ. ಇದು ಪ್ರಕೃತಿ ಕೊಟ್ಟ ವರ.

'ಸೂಕ್ಷ್ಮ ಜೀವಿಗಳ ಬದುಕನ್ನು ಓದಲು ನಮ್ಮಲ್ಲೂ ಸೂಕ್ಷ್ಮತೆ ಬೇಕು. ಭಾವನೆ ಬೇಕು. ನೋಡುವ ದೃಷ್ಟಿಕೋನ ಬೇಕು. ಮದ-ಮೋಹ-ಮತ್ಸರ ಬಿಟ್ಟು ಪ್ರಕೃತಿಯೊಂದಿಗೆ ಬೆರೆತರೆ ಅವನ್ನೆಲ್ಲಾ ನೋಡಲು ಸಾಧ್ಯ' ಎನ್ನುವಾಗ, ಈ ಕಾಲಘಟ್ಟದಲ್ಲಿ ಅವೆಲ್ಲವೂ ಸಾಧ್ಯವಾ ಅಂತ ಪ್ರಶ್ನೆ ಎದುರಾಗುತ್ತದೆ. ಆದರೆ ಈ ಪ್ರಶ್ನೆಗೆ ಉತ್ತರವಾಗಿ ವದ್ವದವರೇ ಮುಂದಿದ್ದಾರೆ. ಇವನ್ನೆಲ್ಲಾ ನೋಡಲು ಗ್ರಂಥಗಳು ಬೇಕಾಗಿಲ್ಲ. ಸೂಕ್ಷ್ಮತೆ ಸಾಕು.

ತಾನು ಕ್ಲಿಕ್ಕಿಸುವ ಎಲ್ಲಾ ಸೂಕ್ಷ್ಮಜೀವಿಗಳ ಜಾತಕ ಭಟ್ಟರಲ್ಲಿದೆ. ಅದಕ್ಕೆ ಸಂಬಂಧಪಟ್ಟ ಕನ್ನಡ, ಆಂಗ್ಲ ಪುಸ್ತಕಗಳ ಬೃಹತ್ ಸಂಗ್ರಹ. ಪ್ರತಿಯೊಂದರ ಜೀವನಶೈಲಿ, ಹೆಸರುಗಳು ಕಂಠಸ್ತ. ತೆಗೆದ ಚಿತ್ರಗಳನ್ನು ಪ್ರಿಂಟ್ ಮಾಡಿಟ್ಟುಕೊಂಡಿದ್ದಾರೆ. 'ಇದರ ಹಿಂದಿರುವ ಸೂಕ್ಷ್ಮತೆಗಳು ಜನರಿಗೆ ಅರ್ಥವಾಗುವುದಿಲ್ಲ. ಅವರಿಗದು ಬೇಕಾಗಿಯೂ ಇಲ್ಲ' ಎನ್ನುವಾಗ ನಮ್ಮ ಸಮಾಜ ವ್ಯವಸ್ಥೆಯ ಅನಾಸಕ್ತ ಮುಖವೊಂದು ಮಿಂಚಿ ಮರೆಯಾಗುತ್ತದೆ.

ಇದು ಪೈಸೆ ಪೈಸೆ ಲೆಕ್ಕವಿಟ್ಟು, ಗುಣಾಕಾರ-ಭಾಗಾಕಾರ ಮಾಡಿಟ್ಟುಕೊಳ್ಳುವ ಹವ್ಯಾಸವಲ್ಲ. ಕ್ಯಾಲ್ಯುಕುಲೇಟರ್ ಇಲ್ಲದ ವ್ಯವಹಾರ. ಮನಸ್ಸಿಗೆ ಎಲ್ಲಿ ಸಂತೋಷ ಸಿಗುತ್ತದೋ ಆ ಹವ್ಯಾಸವನ್ನೆಲ್ಲಾ ಮೊಗೆಮೊಗೆದ ವದ್ವದವರಿಗೆ ಎಲ್ಲವೂ ಜ್ಞಾನಕೋಶಗಳು. ಸಸ್ಯಲೋಕದ ಸಂದರ್ಶನಕ್ಕಾಗಿ ಬರುತ್ತಾರೆ. ವಿದ್ಯಾರ್ಥಿಗಳಿಗಂತೂ ಪರಿಸರದ ನೇರ ಪಾಠ ಸಿಗುತ್ತದೆ. ಆದರೆ ತನ್ನ ವೃತ್ತಿ, ತೋಟದ ನಿರ್ವಹಣೆಯ ಮಧ್ಯೆ ಸಮಯ ಕೊಡಲು ತ್ರಾಸ.

ಕನ್ನಡ-ಆಂಗ್ಲ ಭಾಷೆಗಳ ಮೂರು ಸಾವಿರಕ್ಕೂ ಹೆಚ್ಚು ಪತ್ರಿಕೆಗಳು, ಜಾಲತಾಣಗಳಲ್ಲಿ ಸಿಗುವ ಸಾವಿರಗಟ್ಟಲೆ ಮ್ಯಾಗಜಿನ್ಗಳ ಮುಖಪುಟಗಳು, ಅಂಚೆಚೀಟಿಗಳು, ನಾಣ್ಯಗಳು, ಬೇರುಗಳು, ಬೀಜಗಳು, ಕಲ್ಲುಗಳು, ಹೂ, ಕ್ರೊಟನ್, ಬಳ್ಳಿಗಳು, ಹಣ್ಣಿನ ಗಿಡಗಳು.. ಕಾಲದ ಕಥನಗಳು. ಮಕ್ಕಳ ಖಿನ್ನತೆ, ಕೀಳರಿಮೆಗಳನ್ನು ದೂರಗೊಳಿಸುವ ಮನೋವೈದ್ಯ. ಜತೆಗೆ ನಾಟಿವೈದ್ಯರೂ ಕೂಡಾ. ಇವೆಲ್ಲವುಗಳು ಬದುಕಿನ ಮಧ್ಯೆಯೇ ಪ್ರಕೃತಿಯಿಂದ ಮೊಗೆದ ರಸಗಟ್ಟಿಗಳು. 'ವರ್ಕ್ ಇಸ್ ವರ್ಷಿಪ್ ’' ಬದುಕಿನ ಸೂತ್ರ. ಮನೆಯ ಹೆಸರು ಕೂಡ 'ಫ್ಲವರ್ ಕಾಟೇಜ್'. 'ಇವೆಲ್ಲಾ ಎಷ್ಟು ರಿಟರ್ನ್ ಕೊಡ್ತವೆ ಎಂಬ ಲೆಕ್ಕಕ್ಕಿಂತಲೂ ಅವೆಲ್ಲವೂ ನನ್ನ ಜಾಗದಲ್ಲಿ ಇವೆ ಎಂಬ ಸಮಾಧಾನ-ತೃಪ್ತಿ'.

ವದ್ವ ವೆಂಕಟ್ರಮಣ ಭಟ್ಟರ ಮನೆಯಿಂದ ಮರಳಿದ ಬಳಿಕ - ಒಬ್ಬ ವ್ಯಕ್ತಿಯಲ್ಲಿ ಮೂವತ್ತೈದಕ್ಕೂ ಮಿಕ್ಕಿ ಹವ್ಯಾಸಗಳು ಸಜೀವವಾಗಿರಲು ಸಾಧ್ಯವಾ? - ಎಂಬ ಚೋದ್ಯಕ್ಕೆ ಉತ್ತರ ಸಿಕ್ಕಿಲ್ಲ. (08255)239428,  9448150237

1 comments:

Anonymous said...

ಜಗದೊಡೆಯ ಮೆಚ್ಚುವಂತಹ ಕೆಲಸ. ವೃಕ್ಷೋ ರಕ್ಷಿತಿ ರಕ್ಷಿತಃ ಎನ್ನುವ ವಾಣಿಯಂತೆ
ನಮ್ಮ ವೆಂಕರಮಣ ಭಟ್ಟರ ಕೆಲಸ ನೋಡಿ ಮಹದಾನಂದವಾಯಿತು. ಆ ಭಗವಂತ
ಇಂತಹ ಸಜ್ಜನರ ಸಂತತಿ ಕೋಟಿ ಕೋಟಿ ಹೆಚ್ಚಿಸಲಿ ಎಂಬ ಮಹದಾಸೆ.
ಮಹನಿಯರಿಗೆ ಹಾಗೂ ಪ್ರಕಟಿಸಿದವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ನಂದಿ,(ಕರಿಬಸಪ್ಪ) ಮಲೆಬೆನ್ನೂರು.ದಾವಣಗೆರೆ.
nandimbr@gmail.com

Post a Comment