ಪುತ್ತೂರಿನ ನಿಧಿ ಫುಡ್ ಪ್ರಾಡಕ್ಟ್ಸ್ ಸಂಸ್ಥೆಯ ಹೊಸ ಉತ್ಪನ್ನ ‘ಜಾಕ್‍ಫ್ರುಟ್ ಸೀಡ್ ಚಪಾತಿ ಮಿಕ್ಸ್’. ಅಂದರೆ ಮೈದಾ ರಹಿತ ಗೋಧಿ ಮತ್ತು ಹಲಸಿನ ಬೀಜದ (ಹಬೀ) ಹುಡಿಯ ಮಿಶ್ರಣದ ಚಪಾತಿ ಮಿಕ್ಸ್.
“ಗೋಧಿ ಚಪಾತಿಯಂತೆ ಮೃದುವಾಗುತ್ತದೆ. ಸಣ್ಣಕೆ ಪರಿಮಳವಿದೆ. ಕಳೆದ ಜೂನಿನಿಂದ ಮಾರುಕಟ್ಟೆಗೆ ಇಳಿಸಿದ್ದೇನೆ. ಹಲಸಿನ ಪ್ರೀತಿಯುಳ್ಳವರು ಇಷ್ಟಪಟ್ಟಿದ್ದಾರೆ.” ಎನ್ನುತ್ತಾರೆ ರಾಧಾಕೃಷ್ಣ ಇಟ್ಟಿಗುಂಡಿ. ಇವರು ಸಂಸ್ಥೆಯ ಮುಖ್ಯಸ್ಥರು. ಈಗಾಗಲೇ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ‘ನಿತ್ಯ ಚಪಾತಿ’ ಬ್ರಾಂಡಿನಡಿ ತಯಾರಿಸಿದ ಚಪಾತಿಯು ಗ್ರಾಹಕರ ನಾಲಗೆ ಗೆದ್ದಿದೆ.
2019ರ ಮೇ - ಜೂನ್ ತಿಂಗಳಿನಲ್ಲಿ ರಾಧಾಕೃಷ್ಣ ಹಲಸಿನ ಬೀಜದ ಹುಡಿ ತಯಾರಿಸುವ ಯೋಚನೆಯನ್ನು ಪ್ರಯೋಗಕ್ಕೆ ತಂದರು. ಸ್ವಲ್ಪ ಪ್ರಮಾಣದಲ್ಲಿ ಬೀಜವನ್ನು ಸಂಗ್ರಹ ಮಾಡಿದರು. ಬೀಜವನ್ನು ಬೇಯಿಸುವ, ಒಣಗಿಸುವ ಮಾನದಂಡ ಗೊತ್ತಿಲ್ಲದೆ ಉತ್ಪನ್ನ ಹಾಳಾಯಿತು. ಆಗ ಹಲಸಿನ ಋತು ಮುಗಿದಿತ್ತು.
ಅದೇ ಸಮಯಕ್ಕೆ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಐಐಹೆಚ್ಆರ್) ಸಂಸ್ಥೆಯ ಹಬೀ ಹುಡಿ ತಯಾರಿಯ ಫಾರ್ಮುಲಾ ಅಂತಿಮ ಹಂತ ತಲುಪಿತ್ತು. ಮುಖ್ಯಸ್ಥ ಡಾ.ದಿನೇಶ್ ಅವರನ್ನು ರಾಧಾಕೃಷ್ಣ ಸಂಪರ್ಕಿಸಿದರು. ಅವರ ಪೂರ್ಣ ಸಹಕಾರದಿಂದ ಉತ್ತೇಜಿತರಾದರು. ಎಷ್ಟು ಪ್ರಮಾಣದಲ್ಲಿ ಹಲಸಿನ ಬೀಜವನ್ನು ಬೇಯಿಸಬೇಕು, ಎಷ್ಟು ಪ್ರಮಾಣದಲ್ಲಿ ಅದನ್ನು ನಿರ್ಜಲೀಕರಣ ಗೊಳಿಸಬೇಕು ಎನ್ನುವ ಮಾಹಿತಿ ತಿಳಿದುಕೊಂಡರು.
ಗುಣಮಟ್ಟದ ಹಲಸಿನ ಬೀಜದಿಂದ ಉತ್ಪನ್ನಕ್ಕೂ ಗುಣಮಟ್ಟ ಬರುತ್ತದೆ. ಹೇಗೆ? ರಾಧಾಕೃಷ್ಣ ವಿವರಿಸುತ್ತಾರೆ, “ಮೊಳಕೆ ಬಾರದ, ಬೆಳೆದು ಒಡೆಯದ, ಹಾಳಾಗದ ದೊಡ್ಡ ಗಾತ್ರದ ಬೀಜಗಳ ಆಯ್ಕೆ. ಬೀಜವನ್ನು ಬೇಯಿಸಿ, ಸಿಪ್ಪೆ ತೆಗೆದು, ಒಣಗಿಸುವುದು ಮೊದಲ ಹಂತವು ಶ್ರಮ ಬೇಡುವ ಕೆಲಸ. ನಂತರ ಯಂತ್ರದಲ್ಲಿ ಹುಡಿ ಮಾಡಿ, ನಿರ್ಜಲೀಕೃತಗೊಳಿಸಿದರೆ ಉತ್ತಮ ಗುಣಮಟ್ಟದ ಪೌಡರ್ ಸಿದ್ಧ. ಒಂದು ವರುಷ ತಾಳಿಕೆ. ನಿರ್ಜಲೀಕರಣ ಮಾಡದೆ ಬಿಸಿಲಿನಲ್ಲಿ ಒಣಗಿಸಿದರೆ ತಾಳಕೆ ಹೆಚ್ಚು ಬಾರದು.” ಹಬೀ ಹುಡಿ ತಯಾರಿಯಲ್ಲಿ ಮಾನವ ಶ್ರಮ ಮತ್ತು ಯಾಂತ್ರಿಕ ಶಕ್ತಿ ಅರ್ಧರ್ಧ.
“ಹಬೀ ಹುಡಿಯನ್ನು ಮಧುಮೇಹಿಗಳು ಹೆಚ್ಚು ಬಳಸುತ್ತಾರೆ. ಇದು ಮಧುಮೇಹಕ್ಕೆ ಎಷ್ಟು ಫಲಕಾರಿ ಎನ್ನುವುದು ತಿಳಿದಿಲ್ಲ. ಹಬೀ ಹುಡಿಯಿಂದ ಜ್ಯೂಸ್, ಸಿಹಿಉಂಡೆ ತಯಾರಿಸಿ ಸೇವಿಸಬಹುದು. ಚೆನ್ನೈ, ಪುಣೆ, ಬೆಂಗಳೂರು, ಮೈಸೂರು ಇಲ್ಲೆಲ್ಲಾ ಹಬೀ ಹುಡಿಯನ್ನೇ ಬಯಸುವ ಸೀಮಿತ ಗ್ರಾಹಕರಿದ್ದಾರೆ.”
ಲಾಕ್ ಡೌನ್ ಬಳಿಕ ಜೂನ್ ತಿಂಗಳಿನಿಂದ ಮಾರುಕಟ್ಟೆ ಮಾಡುತ್ತಿದ್ದಾರೆ. ಸದ್ಯ ತಿಂಗಳಿಗೆ ನೂರೈವತ್ತು ಕಿಲೋದಷ್ಟು ಚಪಾತಿ ಮಿಕ್ಸ್ ತಯಾರಿ.
ಐವತ್ತು ಕಿಲೋ ಹಬೀ ಹುಡಿ. “ನೋಡ್ತಾ ಇರಿ, ಈಗ ಸಣ್ಣ ಪ್ರಮಾಣದಲ್ಲಿ ಉತ್ಪನ್ನ ಸಿದ್ಧವಾಗುತ್ತಿದೆ. ಮುಂದಿನ ಜನವರಿ ತಿಂಗಳಿನಿಂದ ವರುಷಪೂರ್ತಿ ಹಬೀ ಹುಡಿ ಸಿಗುವಂತೆ ಅಡಿಗಟ್ಟು ಮಾಡಿ ಕೊಂಡಿದ್ದೇನೆ.” ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು ರಾಧಾಕೃಷ್ಣ.
ಇವರ ನಿಧಿ ಫುಡ್ ಪ್ರಾಡಕ್ಟ್ಸ್ ಮೂಲಕ ಚಪಾತಿಯ ಮಾರಾಟ ಜಾಲವನ್ನು ಹಬೀ ಉತ್ಪನ್ನಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಸುಳ್ಯದಿಂದ ಕುಂದಾಪುರ ತನಕ. ಈಗಿನ ವ್ಯವಸ್ಥೆಯಲ್ಲಿ ವರ್ಷಕ್ಕೆ ಹದಿನೈದು ಕ್ವಿಂಟಾಲ್ ಹಬೀ ಹುಡಿ ತಯಾರಿಸುವ ಸಾಮಥ್ರ್ಯವನ್ನು ಅವರ ಘಟಕ ಹೊಂದಿದೆ.
ಹಬೀ ಹುಡಿಯ ಇನ್ನೂರು ಗ್ರಾಮಿನ ಪ್ಯಾಕಿಗೆ ರೂ. 130. ಚಪಾತಿ ಮಿಕ್ಸ್ಗೆ ಅರ್ಧ ಕಿಲೋಗೆ ರೂ. 150. ಈಚೆಗೆ ಹಬೀ ಬಿಸ್ಕೆಟ್ (ಕುಕ್ಕೀಸ್) ಕೂಡಾ ಪ್ರಾಯೋಗಿಕವಾಗಿ ತಯಾರಿಸಿದ್ದಾರೆ. ಕಾಲು ಕಿಲೋದ ಕುಕ್ಕೀಸ್ ಪ್ಯಾಕೆಟಿಗೆ ರೂ.130. ಇದಕ್ಕೆ ಮೂರು ತಿಂಗಳು ತಾಳಿಕೆ. “ಸಾಮಾನ್ಯರಿಗೆ ಈ ಬೆಲೆ ಜಾಸ್ತಿ ಎಂದು ತೋರಬಹುದು. ಈಗಿನ ಉತ್ಪಾದನಾ ವೆಚ್ಚದಂತೆ ದರವಿದೆ. ಮುಂದೆ ಉತ್ಪಾದನೆ ಹೆಚ್ಚಾದಂತೆ ದರವನ್ನು ಕಡಿಮೆಗೊಳಿಸುವ ಯೋಚನೆಯಿಟ್ಟುಕೊಂಡಿದ್ದೇನೆ. ಈಗ ಕುಕ್ಕೀಸ್ಗೆ ಬೆಲ್ಲ ಬಳಸುತ್ತಿದ್ದೇನೆ. ಶೀಘ್ರದಲ್ಲಿ ಮಧುಮೇಹಿಗಳೂ ಬಳಸಲು ಇಷ್ಟವಾಗುವಂತೆ ಬೆಲ್ಲ ಬಳಸದೆ ಮಾಡುವ ಯೋಚನೆಯಿದೆ.”
ರಾಗಿ ಚಪಾತಿ, ರಾಗಿ ಚಪಾತಿ ಮಿಕ್ಸ್; ರಾಗಿಯ ಸ್ವೀಟ್ ಮಿಕ್ಸ್, ರೋಟಿ; ಅಗಸೆ ಬೀಜದ ಚಪಾತಿ ಮಿಕ್ಸ್, ಸ್ವೀಟ್ ಮಿಕ್ಸ್, ಪುಳಿಯೋಗರೆ, ಚಟ್ನಿ... ಇವೆಲ್ಲಾ ನಿಧಿ ಫುಡ್ ಪ್ರಾಡಕ್ಟ್ಸ್‍ನ ಇತರ ಉತ್ಪನ್ನಗಳು. ಪುತ್ತೂರಿನ ದರ್ಬೆಯಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮಳಿಗೆ ತೆರೆದಿದ್ದಾರೆ.
ರಾಧಾಕೃಷ್ಣ - 99807 48811, 96114 70575
nityachapati@gmail.com
0 comments:
Post a Comment