Monday, June 28, 2021

ಆ ದಿನಗಳು ಮತ್ತೆ ಬಾರದಿರಲಿ


 ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕ ರೂಪುಗೊಂಡ ಹಿನ್ನೆಲೆ – ಲೇಖಕ ಆಶಯ.

ಕೋವಿಡ್ 19 ಕೊರೊನಾ ವೈರಾಣು ನಿಯಂತ್ರಣಕ್ಕಾಗಿ 2020 ಮಾರ್ಚ್ 24ರಂದು ದೇಶ ಲಾಕ್ಡೌನಿಗೆ ಒಳಗಾಯಿತು. ವ್ಯವಹಾರಗಳು ಸ್ತಬ್ಧವಾದುವು. ಬದುಕು ಮೌನಕ್ಕೆ ಜಾರಿದುವು. ಎಂದೂ ನೋಡದ ಕರಾಳ ದಿನಮಾನಗಳು. ಮೇ ಬಳಿಕ ಹಂತಹಂತವಾಗಿ ಅನ್ಲಾಕ್ ಆದೇಶಗಳು ಬಂದುವು. ನಿಧಾನಕ್ಕೆ ಬದುಕು ತೆರೆದುಕೊಳ್ಳುತ್ತಾ ಬಂತು.

ಲಾಕ್ಡೌನಿನ ಆರಂಭದ ದಿವಸಗಳು. ತಾಜಾ ಸುದ್ದಿಗಳನ್ನು ಬಿತ್ತರಿಸಲು ವಾಹಿನಿಗಳ ಪೈಪೋಟಿ. ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ಗಳ ಭರಾಟೆಗಳು. ಆಗಲೇ ದಿನಪತ್ರಿಕೆಗಳು ಆನ್ಲೈನ್ನತ್ತ ವಾಲಿದ್ದುವು. ಕೆಲವು ಪ್ರಕಟಣೆ ನಿಲ್ಲಿಸಿದುವು. ಹಾಗಾಗಿ ವಾಹಿನಿಗಳ ಹೊರತು ಬೇರೆ ಆಯ್ಕೆಗಳಿದ್ದಿರಲಿಲ್ಲ. ವಾಟ್ಸಾಪ್, ಫೇಸ್ಬುಕ್ನಂತಹ ನವಮಾಧ್ಯಮಗಳಲ್ಲಿ ಹರಿದು ಬರುವ ಸುದ್ದಿಗಳ ತಾಜಾತನಗಳನ್ನು ಅಳೆಯುವುದೇ ತಲೆನೋವಾಯಿತು.

ಮುಂಜಾನೆ ಟಿವಿ ಚಾಲೂ ಮಾಡಿದರೆ ಸಾವುನೋವುಗಳ ವರದಿಗಳು. ಲಾಠಿ ಏಟುಗಳು. ದೂಷಣೆಗಳ ಮಾಲೆಗಳು. ಕಿಟ್ ವಿತರಣೆಯ ಗೊಂದಲಗಳು. ಲಾಕ್ ಡೌನ್ ಆದೇಶಗಳನ್ನು ಮುರಿಯುವ ಒಂದಷ್ಟು ಮನಸ್ಸುಗಳು. ರಾಜಕೀಯ ಮೇಲಾಟಗಳ ಚಿತ್ರಣಗಳು. ಅಂತೂ ಸುಮಾರು ಎರಡು ಮೂರು ತಿಂಗಳ ಋಣಾತ್ಮಕ ವಿಚಾರಗಳು ಮತಿಯನ್ನು ಕೆಡಿಸಿದ್ದುವು.

ಬದುಕಿನಲ್ಲಿ ಧನಾತ್ಮಕ ಚಿಂತನೆಯನ್ನು ಪಾಸಿಟಿವ್ ಎಂದರೆ, ಋಣಾತ್ಮಕ ಯೋಚನೆಯನ್ನು ನೆಗೆಟಿವ್ ಎನ್ನುತ್ತೇವೆ. ಕೊರೊನಾ ಪರ್ವದಲ್ಲಿ ಪಾಸಿಟಿವ್ ಅಂದರೆ ಸೋಂಕಿತ, ನೆಗೆಟಿವ್ ಅಂದರೆ ಸೋಂಕುರಹಿತ ಎನ್ನುವ ಅರ್ಥ. ಬದುಕಿನ ಪಾಸಿಟಿವ್ ಅರ್ಥಕ್ಕೂ, ಕೊರೋನಾ ತಂದಿತ್ತ ಅರ್ಥಕ್ಕೂ ವಿಭಿನ್ನ ಅರ್ಥಗಳು. ಶಬ್ದಾರ್ಥವನ್ನೇ ಬದಲಿಸಿದ ಕೊರೊನಾ ಸುದ್ದಿಗಳಿಂದ ದೂರವಿರುವುದೇ ಸವಾಲಾಗಿತ್ತು. 

ಸರಿ, ವಾಹಿನಿಗಳು ಬಳಸಿದ ಪದಗಳತ್ತ ಒಮ್ಮೆ ಹೊರಳೋಣ. ಮಂಗಳೂರಿನಲ್ಲಿ ಒಂದು ಕೊರೊನಾ ವೈರಸ್ ದಾಖಲಾದ ದಿವಸ. ವಾಹಿನಿಯೊಂದು ಕರಾವಳಿ ವಿಲವಿಲ ಎಂದು ವರದಿ ಮಾಡಿತ್ತು. ವಿಲವಿಲ ಎನ್ನುವ ಪದದ ಅರ್ಥ ವ್ಯಾಪ್ತಿ ಏನು? ಒಂದು ಕೇಸ್ ದಾಖಲಾದ ತಕ್ಷಣ ಕರಾವಳಿ ವಿಲವಿಲ ಒದ್ದಾಡಿತೇ? ಬೆಚ್ಚಿ ಬೀಳಿಸಿದ, ಕಂಗಾಲು, ಅಟ್ಟಹಾಸ, ಮಹಾಮಾರಿ, ರಣಭಯಂಕರ, ಹೆಮ್ಮಾರಿ, ಶಾಕಿನಿ-ಡಾಕಿನಿ, ಗುರುವಾರದ ಗಂಡಾಂತರ, ಶನಿವಾರದ ಶನಿ... ಹೀಗೆ ದಿನಕ್ಕೊಂದು ಪ್ರಾಸಬದ್ಧ ಶೀರ್ಶಿಕೆಯ ವಿಶೇಷ ಕಾರ್ಯಕ್ರಮಗಳು.

          ಲಾಕ್ಡೌನ್ ಇರುತ್ತಾ ಮದ್ಯದಂಗಡಿಗಳನ್ನು ತೆರೆಯಲು ಸರಕಾರ ಆದೇಶಿಸಿತು. ಆ ಸಮಯದಲ್ಲಿ ಬಳಕೆಯಾದ ಭಾಷೆಗಳನ್ನು ಗಮನಿಸಿ. ತೀರ್ಥ, ಎಣ್ಣೆ ಹೊಡೆಯೋದು, ವಾನಪ್ರಸ್ಥ, ಪರಮಾತ್ಮ ಒಳಗೆ ಹೋಗುತ್ತಿದ್ದಂತೆ ಸರಿಗಮ ಸ್ಟಾಟರ್್, ಎಣ್ಣೆದಾನವೇ ಶ್ರೇಷ್ಠ ಅಂದರೆ ಬೀರ್ಬಲ್ಲರ್, ಗಂಟಲಿಗೆ ಅಮೃತಪಾನ, ಸುರಗಂಗೆಗಾಗಿ ಸಾಲುಗಟ್ಟಿದ ಮಹಾ ತಪಸ್ವಿಗಳು.. ಇವೆಲ್ಲಾ ಮದ್ಯಪಾನಿಗಳನ್ನು ಲಕ್ಷಿಸಿ ಹೊಸೆದ ಪದಪುಂಜಗಳು.

          ಎಲ್ಲವನ್ನೂ ಮತೀಯ, ಜಾತೀಯ ಕಣ್ಣಿನಿಂದ ನೋಡುವ ವರ್ತಮಾನದಲ್ಲಿ ವಾಹಿನಿಗಳ ಶೀರ್ಸಿಕೆಗಳಲ್ಲಿ ಮತೀಯ ಭಾವನೆಗಳಿಲ್ಲವೇ? ನಂಬಿದ ಭಾವನೆಗಳನ್ನು ಅಗೌರವದಿಂದ ಕಂಡಂತಾಗಲಿಲ್ಲವೇ? ತೀರ್ಥ, ವಾನಪ್ರಸ್ಥ, ಪರಮಾತ್ಮ, ಅಮೃತಪಾನ, ಸುರಗಂಗೆ, ಮಹಾತಪಸ್ವಿಗಳು ಈ ಪದಗಳಿಗೂ ಪುರಾಣಗಳಿಗೂ ಸಂಬಂಧವಿಲ್ವಾ. ಬಾಯಿಗೆ ಬಂದಂತೆ ಪದಗಳನ್ನು ಪೋಣಿಸಿ ವಿಷಯವನ್ನು ಗಂಭೀರತನಕ್ಕೆ ಒಯ್ಯುವ ಸಾಹಸವನ್ನು ನೋಡಿ ನಿಜಕ್ಕೂ ರೋಸಿ ಹೋಗಿತ್ತು. ಹಾಗಿದ್ದರೆ ನಿಜಾರ್ಥದ ಪಾಸಿಟಿವ್ ಯಾವುದು?

          ವಾಹಿನಿಗಳು, ನವಮಾಧ್ಯಮಗಳು, ನಿತ್ಯದ ಮಾತುಕತೆಗಳು, ದೂರವಾಣಿ ಸಂಭಾಷಣೆಗಳಲ್ಲಿ ಋಣಾತ್ಮಕ ವಿಚಾರಗಳು ರಾಚುತ್ತಿದ್ದುವು. ಬದುಕಿನ, ಬದುಕುವ ಅವಕಾಶಗಳನ್ನು ಕೊರೊನಾ ಕಸಿದಿದೆ. ಬದುಕು ಮುಗಿದೋಯ್ತು.. ಮುಂತಾದ ಮಾತುಕತೆಗಳಿಗೆ ಕಿವಿಯಾಗಿದ್ದೆ. ಇದಕ್ಕೆ ಅಂತ್ಯ ಯಾವಾಗ? ಕೊರೊನಾ ವೈರಾಣು ತೊಲಗಿದಾಗ ಮಾತ್ರ. ಅದು ಸಾಧ್ಯವೇ? ಹಾಗಿದ್ದರೆ ಬದುಕಿನಲ್ಲಿ ಧನಾತ್ಮಕ ವಿಚಾರಗಳಿಗೆ ಬೆಳಕು ಹಾಕಬೇಡವೇ? ಹಾಕುವವರು ಯಾರು? ಆ ಬೆಳಕಿನಲ್ಲಿ ಧನಾತ್ಮಕ ವಿಚಾರಗಳನ್ನು ನೋಡುವ ಕಣ್ಣು, ಕೇಳುವ ಕಿವಿಗಳು ಇವೆಯೇ?

          ಹೀಗೆ ವಿಚಾರಗಳು ರಿಂಗಣಿಸುತ್ತಿದ್ದಾಗ ಕ್ಯಾಲೆಂಡರ್ ಹಾಳೆಗಳಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಪುಟ ಒಳಸೇರಿತು. ಆಗಲೇ ಕೆಲವೊಂದು ಪಾಸಿಟಿವ್ ಘಟನೆಗಳನ್ನು ನೋಟ್ಸ್ ಮಾಡಿಕೊಂಡಿದ್ದೆ. ನೆಗೆಟಿವ್ ಚಿಂತನೆಯನ್ನು ಪೂರ್ತಿಯಾಗಿ ಕೈಬಿಟ್ಟು ಕೊರೊನಾ ಮಧ್ಯೆ ಪಾಸಿಟಿವ್ ಅಂಶಗಳನ್ನು ದಾಖಲಿಸಿದರೆ ಅದೊಂದು ಸ್ಫೂರ್ತಿಯ ಕ್ಯಾಪ್ಸೂಲಾಗಲಿ ಎನ್ನುವ ಉದ್ದೇಶದಿಂದ ವಿಷಯವನ್ನು ಹೊಸೆಯಲು ಆರಂಭಿಸಿದೆ. 

          ಒಂದು ಲೇಖನ ಮುಗಿಯುವಷ್ಟರ ಹೊತ್ತಿಗೆ ಮತ್ತೊಂದರ ಸುಳಿವು ಪತ್ರಿಕೆಗಳಲ್ಲಿ  ಕಣ್ಣಿಗೆ ಬೀಳುತ್ತಿತ್ತು. ಅವೆಲ್ಲಾ ಒಂದು ಪ್ಯಾರಾದ ಸುದ್ದಿಯಾಗಿದ್ದುವು. ಅವುಗಳ ಜಾಡನ್ನರಸಿ, ಸಂಪರ್ಕ ಸಂಖ್ಯೆ ಪಡೆದು, ಸಂಬಂಧಿತ ವ್ಯಕ್ತಿಗಳನ್ನು ಮಾತನಾಡಿಸಿದಾಗ ಅಬ್ಬಾ.. ಎಷ್ಟೊಂದು ಸಮುದಾಯ ಮಟ್ಟದ ಕೆಲಸಗಳು ಸದ್ದಿಲ್ಲದೆ ಆಗಿಹೋಗಿವೆ! ಜತೆಗೆ ಬದುಕು ಬದಲಾಯಿಸಿಕೊಂಡವರ ಕತೆಗಳು.

          ಕನ್ನಾಡಿನಾದ್ಯಂತ ಕತ್ತು ಹಾಯಿಸುತ್ತಾ ಹೋದರೆ ಇಂತಹ ನೂರಾರು ಅಲ್ಲ, ಸಾವಿರಾರು ಘಟನೆಗಳು ಸಿಗಬಹುದು. ಸಮುದಾಯ ಮಟ್ಟದಲ್ಲಿ, ವೈಯಕ್ತಿಕ ನೆಲೆಯಲ್ಲಿ ಬದುಕು ಬದಲಾಯಿಸಿಕೊಂಡವರಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಜಾತಿ, ಮತ, ಅಂತಸ್ತುಗಳನ್ನು ಬದಿಗಿಟ್ಟು ಸೇವಾ ಭಾವದಿಂದ ದುಡಿದಿರುವುದು ಗುರುತರವಾದುದು. ಮುಂದಿನ ದಿವಸಗಳಲ್ಲಿ ಅದನ್ನೇ ಒಂದು ಪ್ರತ್ಯೇಕ ಪುಸ್ತಕವಾಗಿ ಹೊರ ತರುವ ಯೋಚನೆಯಿದೆ.

           ಸಮುದಾಯ ಮಟ್ಟದಲ್ಲಿ ಆಗಿರುವ ಕೆಲವು ಪ್ರಾತಿನಿಧಿಕ ಗಾಥೆಗಳು ಇಲ್ಲಿವೆ. ವೈಯಕ್ತಿಕವಾಗಿ ಬದುಕು ಕಟ್ಟಿಕೊಂಡವರ ವಿಚಾರಗಳಿವೆ. ಯಕ್ಷಗಾನದಂತಹ ಮಾಧ್ಯಮಗಳು ತನ್ನ ಎಂದಿನ ಹೂರಣದಿಂದ ಹೊರಳಿ ಕೊರೊನಾ ಜಾಗೃತಿಯನ್ನು ಕಥಾನಕವಾಗಿ ಹೊಸೆದು ಪ್ರದರ್ಶನಗಳಾಗಿವೆ, ತಾಳಮದ್ದಳೆಗಳು ಜರುಗಿವೆ. ಅಂತೆಯೇ ಅನ್ಯ ಪ್ರಾಕಾರಗಳು, ಉದ್ಯಮಗಳು ಪಲ್ಲಟಗೊಂಡಿವೆ. ಎಲ್ಲವನ್ನೂ ದಾಖಲಿಸುವುದು ಮಿತಿಯಲ್ಲಿ ಕಷ್ಟಸಾಧ್ಯ. ಇಲ್ಲಿ ಬಿಟ್ಟುಹೋದ ಅಂಶಗಳು ಅಗಣಿತ. ಅದು ಉದ್ದೇಶಪೂರ್ವಕವಲ್ಲ.

          ಪುಸ್ತಕದ ಹೆಸರು ಮುಸ್ಸಂಜೆಯ ಹೊಂಗಿರಣ. ನನ್ನ ಅಕ್ಷರ ಗುರು ಶ್ರೀ ಪಡ್ರೆಯವರು ಹೆಸರು ಸೂಚಿಸಿ ಬೆನ್ನು ತಟ್ಟಿದ್ದಾರೆ. ಕೊರೊನಾ ಕೃಪೆಯ ವರಗಳತ್ತ ಇಣುಕು ನೋಟಕ್ಕೆ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಮುನ್ನುಡಿ ಬರೆದು ಹರಸಿದ್ದಾರೆ. ವೈಯಕ್ತಿಕ ಬದುಕಿನ ಹಿತಾಕಾಂಕ್ಷಿ ಡಾ.ಮನೋಹರ ಉಪಾಧ್ಯರು ಬೆನ್ನುಡಿಯ ಸೇಸೆಯನ್ನಿಕ್ಕಿದ್ದಾರೆ. ಕಲಾವಿದ, ಪರಿಸರ ಹೋರಾಟಗಾರ ದಿನೇಶ ಹೊಳ್ಳರು ಅರ್ಥಪೂರ್ಣ ಮುಖಚಿತ್ರವನ್ನು ರಚಿಸಿದ್ದಾರೆ.

ಪುಸ್ತಕದ ಹೂರಣ ತಯಾರಿ ಹಂತದಲ್ಲಿ - ತೋವಿನಕೆರೆಯ ಪದ್ಮರಾಜು ಹೆಚ್.ಜೆ., ಗಣಪತಿ ಶರ್ಮ ಪಳ್ಳತ್ತಡ್ಕ, ಸವಣೂರಿನ ವಿವೇಕ ಆಳ್ವ, ಶಂ.ನಾ.ಖಂಡಿಗೆ ಪೆರ್ಲ, ಜಯ ಮಣಿಯಂಪಾರೆ, ಪ್ರಕಾಶ್ ಕುಮಾರ್ ಕೊಡೆಂಕಿರಿ - ಇವರೆಲ್ಲರ ಸಹಕಾರಕ್ಕೆ ಕೃತಜ್ಞ.  

          ಪುಸ್ತಕದ ಪ್ರಕಟಣೆಯ ಹೊಣೆಯನ್ನು ನಿಡುಗಾಲದ ಅಕ್ಷರ ಮಿತ್ರ, ಕೃಷಿಕ ಮಹೇಶ್ ಪುಚ್ಚಪ್ಪಾಡಿ ವಹಿಸಿಕೊಂಡಿದ್ದಾರೆ. ತನ್ನ ದಿ ರೂರಲ್ ಮಿರರ್ ಡಾಟ್ ಕಾಮ್ ಮೂಲಕ ಪ್ರಕಾಶಿಸಿದ್ದಾರೆ. ಇವರಿಗೆಲ್ಲಾ ಋಣಿ. ಇಲ್ಲಿರುವುದೆಲ್ಲಾ ಬದುಕಿನ ಪಾಸಿಟಿವ್.

- ನಾ. ಕಾರಂತ ಪೆರಾಜೆ

0 comments:

Post a Comment