ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಬಳಿಯೇ ಇದೆ ಸರು. ಇಲ್ಲಿನ ಗಾಯತ್ರಿ ದಿನೇಶ್ ಎಂಟು ವರುಷದ ಹಿಂದೆ ಮಾರುಕಟ್ಟೆಯಿಂದ ಸೀಮೆಬದನೆ (ಸೀಮೆ ಸೌತೆ, ಚೌಚೌ) ತಂದಿದ್ದರು. ಅದರಲ್ಲೊಂದು ಮೊಳಕೆಯೊಡೆದಿತ್ತು.
ಚಿಕ್ಕ ಹೊಂಡ ತೆಗೆದು ಗೊಬ್ಬರ ಹಾಕಿ ಅದರಲ್ಲಿ ಬೆಳೆಯ ಬಿಟ್ಟರು. ಎಲೆಯೊಡೆದು ಬೆಳೆಯುತ್ತಿದ್ದಾಗ ಚಪ್ಪರಕ್ಕೆ ಹಬ್ಬಿಸಿದರು.
ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಹೆಚ್ಚು ಕಾಯಿ ಬಿಡುವ ಋತು. ಹದಿನೈದು ದಿವಸಕ್ಕೊಮ್ಮೆ ಸುಮಾರು ಎರಡು ಡಜನ್ ಕಾಯಿಯ ಕೊಯಿಲು. ಒಂದು ಕಾಯಿ ಏನಿಲ್ಲವೆಂದರೂ ಕಾಲು ಕಿಲೋ ತೂಗುತ್ತದೆ. ಕೊಯಿದು ಹದಿನೈದರಿಂದ ಇಪ್ಪತ್ತು ದಿವಸ ತಾಳಿಕೆ.
ಕಾಯಿ ಬಿಡುವ ಏರುಋತು ಮುಗಿದಾಗ ಗಿಡ ಸೊರಗಿದಂತೆ ತೋರುತ್ತದೆ. ಅಷ್ಟರಲ್ಲಿ ಬುಡದಲ್ಲಿ ನಾಲ್ಕೈದು ಎಗೆಗಳು ಚಿಗುರುತ್ತವೆ. ಅವು ಬೆಳೆದು ಚಪ್ಪರಕ್ಕೆ ಹಬ್ಬುತ್ತವೆ. ವರುಷಕ್ಕೆ ಮೂರು - ನಾಲ್ಕು ಬಾರಿ ಹಟ್ಟಿಗೊಬ್ಬರ, ನೀರು ಹೊರತು ಬೇರೇನೂ ಆರೈಕೆ ಕೊಟ್ಟಿಲ್ಲ.
ತೊಂಡೆಕಾಯಿಗೆ ಏನೇನು ಆರೈಕೆ ಬೇಕೋ ಅಂತಹುದೇ ಇದಕ್ಕೂ ಸಾಕು. ಮಳೆಗಾಲದಲ್ಲಿ ವಿರಳವಾಗಿ ಕಾಯಿ ಬಿಡುತ್ತದೆ. ಆಗ ಗಾತ್ರವೂ ಚಿಕ್ಕದು. ಹಕ್ಕಿಗಳು ಎಳೆಯ ಮಿಡಿಯನ್ನು ತಿನ್ನುತ್ತವೆ.
“ಚಪ್ಪರದ ಸನಿಹ ಚಿಕ್ಕ ಶಮಿ ವೃಕ್ಷವಿದೆ. ಬಳ್ಳಿ ಅದಕ್ಕೂ ಹಬ್ಬಿಕೊಂಡಿದೆ. ಚಪ್ಪರದಲ್ಲಿ ಆಗುವುದಕ್ಕಿಂತ ಹೆಚ್ಚು ಮರದಲ್ಲಿ ಹಬ್ಬಿದ ಬಳ್ಳಿಯಲ್ಲಿ ಕಾಯಿ ಬಿಡುತ್ತಿದೆ. ಸೀಮೆ ಬದನೆಯು ಬಿಸಿಲುಪ್ರಿಯ ಎಂದು ತೋರುತ್ತದೆ.” ದಿನೇಶ್ ತಿಳಿಸುತ್ತಾರೆ.
“ಮಲೆನಾಡಿನ ಕೆಲವೆಡೆ ಇದು ಬೆಳೆ ಕೊಡುತ್ತಿಲ್ಲ. ಬಹುಶಃ ಮಣ್ಣಿನ ಗುಣ ಇರಬಹುದೋ ಏನೋ.
ಬಿಸಿಲು ತುಂಬಾ ಬೇಕು. ನೆರಳು ಜಾಸ್ತಿಯಿದ್ರೆ ಫಸಲು ಕಡಿಮೆ. ಬುಡದಲ್ಲಿ ನೀರು ನಿಲ್ಲುವಂತಿರಬಾರದು. ಇಳಿಜಾರಿನ ಪ್ರದೇಶವಾದರೆ ಒಳ್ಳೆಯದು. ಚಪ್ಪರದಲ್ಲಿ ಹರಡಿ ದಪ್ಪ ಪದರ ಆಗದಂತೆ ನೋಡಿಕೊಳ್ಳಬೇಕು. ಬೆಳೆದ ಕಾಯಿ ಕೊಯಿದಿಟ್ಟರೆ ತಾನಾಗಿ ಮೊಳಕೆ ಬರುತ್ತದೆ. ಎರಡು ಎಲೆ ಬಂದ ಮೇಲೆ ನೆಟ್ಟುಬಿಡಿ.”
ಇದರ ಪಲ್ಯ, ಹುಳಿ, ಬೋಂಡ ಉತ್ತಮ ರುಚಿ. ‘ಬೋಂಡವಂತೂ ಆಲೂಗೆಡ್ಡೆಯ ಬೋಂಡವನ್ನು ಮೀರಿಸುತ್ತದೆ!’ ಎಲ್ಲಾ ನಮೂನೆಯ ಖಾದ್ಯಕ್ಕೂ ಒಗ್ಗುವ ತರಕಾರಿ. ಪಾಯಸಕ್ಕೂ ಓಕೆ. “ತೊಂಡೆ ಕೃಷಿಯನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು ಎಂತಾದ್ರೆ ಇದ್ಯಾಕೆ ಆಗದು?” ದಿನೇಶರ ಚೋದ್ಯ.
ಮಲೆನಾಡಿನಲ್ಲಿ ಸೀಮೆ ಬದನೆ ಕೃಷಿ ವಿರಳ. ಇದು ಇಲ್ಲಿ ಕಾಯಿ ಬಿಡುವುದಿಲ್ಲ ಎಂಬ ನಂಬಿಕೆ ವ್ಯಾಪಕ. ಏಕಿರಬಹುದು? ಗಾಯತ್ರೀ ದಿನೇಶ್ ಹೇಳುತ್ತಾರೆ, “ಬಹಳ ಇದರ ಪರಿಚಯವಿಲ್ಲ; ಇದೊಂದು ತರಕಾರಿಯೆಂದೇ ತಿಳಿದಿಲ್ಲ. ರುಚಿಯೂ ಗೊತ್ತಿಲ್ಲ. ನನ್ನಲ್ಲಿಂದ ಒಯ್ದ ಸಸಿಗಳು ಬೆಂಗಳೂರಿನ ತಂಗಿ ಮನೆಯಲ್ಲಿ ಚೆನ್ನಾಗಿ ಬೆಳೆದಿದೆ. ಇಲ್ಲಿಯದು ಸ್ವಲ್ಪ ಚಪ್ಪಟೆ ಆಕಾರ. ಬೆಂಗಳೂರಿನಲ್ಲಿ ಉರುಟಾಗಿ ಬೆಳೆದುದನ್ನು ಗಮನಿಸಿದ್ದೇನೆ. ಇದಕ್ಕೆ ಮಣ್ಣು, ವಾತಾವರಣವೂ ಕಾರಣವಿರಬಹುದು. ಮುಖ್ಯವಾಗಿ ಸೀಮೆ ಸೌತೆಯು ರುಚಿಪ್ರಿಯರ ನಾಲಗೆಯನ್ನು ಗೆದ್ದಿಲ್ಲ ಎನ್ನಬಹುದೇನೋ.”
ವರುಷವಿಡೀ ಬೆಳೆ ಕೊಡುವ ಬಹುವಾರ್ಷಿಕ ತರಕಾರಿಯಿದು. ಹೊರಭಾಗ ಸೀಳಿದಂತಿರುವು ದರಿಂದ ‘ತಲೆ ಒಡ್ಕ’!’ “ಗರ್ಭಿಣಿಯರು ಸೇವಿಸ ಕೂಡದು; ‘ತಿನ್ನಬಾರದು’ ಎನ್ನುವುದು ಕೆಲವರ ಶಾಸ್ತ್ರ.. ಮಾರುಕಟ್ಟೆ ಬಿಡಿ, ಮನೆಮಟ್ಟದಲ್ಲೂ ಬೆಳೆಸಲು ಈ ಮಾನಸಿಕ ತಡೆ ಬಿಡುತ್ತಿಲ್ಲ” ಎನ್ನುತ್ತಾರೆ ಗಾಯತ್ರಿ.
ಸರು ದಂಪತಿಗಳು ಒಂದೇ ಬಳ್ಳಿಯಲ್ಲಿ ವರುಷಪೂರ್ತಿ ಕಾಯಿ ಪಡೆಯುತ್ತಿದ್ದಾರೆ. ಮನೆಬಳಕೆಗೆ ಆಗಿ ಉಳಿದದ್ದನ್ನು ಆಪ್ತೇಷ್ಟರಿಗೂ ಹಂಚಿ ‘ಬೆಳೆಯಿರಿ’ ಎಂದು ಸಲಹೆ ನೀಡುತ್ತಿದ್ದಾರೆ.
ಮಂಗಳೂರಿನ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸುರೇಶ್ ಉಡುಪ ಸೀಮೆಬದನೆ ಕೃಷಿಯಲ್ಲಿ ಗೆದ್ದ ಇನ್ನೊಬ್ಬ ಅಪೂರ್ವ ಕೃಷಿಕರು. “ಎರಡು ವರುಷದ ಹಿಂದೆ ನಮ್ಮ ಹಿತ್ತಿಲನ್ನೆಲ್ಲಾ ಕಳೆಯಂತೆ ಆವರಿಸಿತ್ತು.
ಯಥೇಷ್ಟ ಕಾಯಿಗಳೂ ಬಿಟ್ಟಿದ್ದುವು. ಇತರ ತರಕಾರಿ ಗಿಡಗಳನ್ನು ಪೂರ್ತಿ ಅವರಿಸಿತ್ತು. ಹಾಗಾಗಿ ಗಿಡವನ್ನೇ ಕಟ್ ಮಾಡಿದೆ. ಈ ವರುಷದಿಂದ ಪುನಃ ಬೆಳೆಯುತ್ತಿದ್ದೇನೆ. ಬದುಕಲು ತ್ರಾಸಪಡುತ್ತಿದೆ.” ಸುರೇಶ್ ವಿವರಿಸುತ್ತಾರೆ, “ಬಳ್ಳಿಯ ಬುಡಕ್ಕೆ ತಂಪು ಹವೆ ಬೇಕು. ಮಣ್ಣಿನೊಂದಿಗೆ ಇದ್ದಿಲನ್ನು ಸೇರಿಸುತ್ತಿದ್ದೇನೆ. ನೀರು ಇದ್ದಿಲನ್ನು ಹೀರಿಕೊಂಡು ಬುಡಕ್ಕೆ ಒಂದು ರೀತಿಯ ತಂಪು ಹವೆ ಒದಗಿಸುತ್ತದೆ. ಉಳಿದ ತರಕಾರಿಗಳಿಗೆ ನೀಡುವಂತೆ ಸೆಗಣಿ, ಜೀವಾಮೃತ ಉಣಿಸುತ್ತಿದ್ದೇನೆ.”
ಎರಡೇ ತಿಂಗಳು ರಜೆ
“ಒಂದು ಬಳ್ಳಿ ತಾರಸಿ ಮೇಲೆಲ್ಲಾ ಬೆಳೆದು, ಸುತ್ತಲಿನ ಕಂಪೌಂಡಿಗೂ ಹಬ್ಬಿತ್ತು. ಈ ವರುಷ ಚಪ್ಪರಕ್ಕೆ ಹಬ್ಬಿಸುವ ಯೋಜನೆಯಿದೆ. ಬೇರುಗಳನ್ನು ಇಲಿಗಳು, ಎಳೆಯ ಕಾಯನ್ನು ಹಕ್ಕಿಗಳು ಕುಕ್ಕಿ ಹಾಳು ಮಾಡುತ್ತವೆ” ಗಾಯತ್ರಿ ಸರು ಅವರ ತಂಗಿ ಬೆಂಗಳೂರಿನ ಆರ್. ಶೀಲಾ ತಿಳಿಸುತ್ತಾರೆ, “ಮಳೆಗಾಲದ ಎರಡು ತಿಂಗಳು ಮಾತ್ರ ಇದಕ್ಕೆ ರಜೆ. ನಾಲ್ಕು ವರುಷದಿಂದ ತರಕಾರಿಯಾಗಿ ಬಳಸುತ್ತಿದ್ದೇವೆ. ಆಪ್ತರಿಗೆ ಹಂಚುತ್ತೇವೆ. ಅಡುಗೆ ಮನೆಯ ತ್ಯಾಜ್ಯ ಬಿಟ್ಟರೆ ಬೇರೆ ಗೊಬ್ಬರ ಉಣಿಸುವುದಿಲ್ಲ. ಬೆಂಗಳೂರಿನ ವಾತಾವರಣಕ್ಕೆ ಚೆನ್ನಾಗಿ ಬೆಳೆಯುತ್ತದೆ.”
ದಿನೇಶ್ ಸರು - 94497 31385
(ಸಂಜೆ 7 - 9)
0 comments:
Post a Comment