ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕಕ್ಕೆ ಬೆನ್ನುಡಿ ಮೂಲಕ ಬೆನ್ನು ತಟ್ಟಿದವರು...... ಮಂಗಳೂರಿನ ಪಶುವೈದ್ಯ ಹಾಗೂ ಸುಮನಸಿಗ ಡಾ.ಪಿ.ಮನೋಹರ ಉಪಾಧ್ಯ
‘ಪಾಸಿಟಿವ್ ಪ್ಲಸ್’
ಮಾಲತಿ ಮುಕುಂದ ವೈಗೂರರಿಗೆ ಜೊತೆಗೆ ನಿಂತ ಇಡೀ ಮನೆಯು 12 ಬಗೆ ಮೌಲ್ಯವರ್ಧನೆ ಮಾಡಿ ಮಾವಿನಹಣ್ಣನ್ನು ಗೆಲ್ಲಿಸಿದ್ದಲ್ಲದೆ ಕುಟುಂಬ ಜೀವನದ ಮೌಲ್ಯವನ್ನು ಎತ್ತಿ ಹಿಡಿಯಿತು.
ಊರವರ ಕಿಸೆ ಮುಟ್ಟದೆ ಚಿಕ್ಕೇನಹಳ್ಳಿಗೆ ಡಿಜಿಟಲ್ ಸ್ಪರ್ಷ ಕೊಟ್ಟು ಮಕ್ಕಳ ಓದಿಗೆ ಸ್ಪೂರ್ತಿ ತುಂಬಿದ ಸ್ವಯಂ ಸೇವಾ ಸಂಸ್ಥೆಯ ಕೆಲಸ ಹೇಗೆಂದರೆ '' ಎಲ್ಲದಕ್ಕೂ ಸರಕಾರಕ್ಕೆ ಕಾಯಬೇಡಿ ''.
ಊರಿನ ಮತ್ಸರ, ತಾತ್ಸಾರದ ವಾತಾವರಣದ ಮಧ್ಯೆ ಅಪ್ಪನು ಮಗ ರವಿಯನ್ನು ತಬ್ಬಿದ ಪರಿ ಸಮಗ್ರ ಭಾರತಕ್ಕೊಂದು ಪುನರ್ನೋಟ .
ವಾಟ್ಸಾಪ್ನಲ್ಲಿ ಹತ್ತಿರ ಬಂದು 3 ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ಧ್ವನಿ ಇಲ್ಲದವರನ್ನು ತಲೆಎತ್ತುವಂತೆ ಮಾಡಿದ 92ರ ಎಸ್ಸೆಸ್ಸೆಲ್ಸಿ ಸಹಪಾಠಿಗಳ ಸ್ನೇಹಕ್ಕೆ ಎಷ್ಟು ಬೆಲೆ ಕಟ್ಟಬಹುದು ?
ಬಿಸಿ ಮನೆಯೂಟದ ಬುತ್ತಿಯನ್ನು ಗ್ರಾಹಕರ ಕಛೇರಿಯ ಬಾಗಿಲಿಗೆ ತರುವ ಆದರ್ಶರ ಕೆಲಸ ಮುಂಬಯಿಯ ಸಾವಿರಾರು ಡಬ್ಬಾವಾಲರನ್ನು ಒಮ್ಮೆಲೆ ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಸಿದಂತಾಯ್ತು .
'' ನಾನು ವ್ಯಾಪಾರಕ್ಕಾಗಿ ಪ್ರೆಸ್ ಓಪನ್ ಮಾಡಿಲ್ಲ '' ರಾಜೇಶ್ ಪವರ್ ಪ್ರೆಸ್ಸಿನ ರಘುನಾಥರಾಯರ ಮಾತು ನಾನೇ ಆಡಿದ ಹಾಗಾಯ್ತು .
ಆರತಿ ಪಟ್ರಮೆಯವರ ಮಾತಿನ ಮಂಟಪ , ಬಾಬಣ್ಣ ಉಣ್ಣಿಯಪ್ಪ ಆದದ್ದು, ಕೊಡೆಂಕಿರಿಯವರ ಅಡಿಕೆ ಚಿಗುರಿದ್ದು, ATV ಯ ಹೊಸ ಠೀವಿ , ಕುಂಟಿಕಾನರ ಜೀನಸು ವ್ಯಾಪಾರ, ಮೇಸ್ತ್ರಿಯವರಿಗೆ ಗಿಡಮೂಲಿಕೆ ಅಂಟಿದ್ದು, ನರಗುಂದದ ಕಸ್ತೂರಿಯಮ್ಮ ಮಾಂಗಲ್ಯ ಅಡವಿಟ್ಟದ್ದು, ರಮೇಶನ ಹಳ್ಳಿಗೆ ಮುಖಮಾಡಿದ್ದು , ....... ಹೀಗೆ ಅನೇಕ ಜೀವನ್ಮುಖಿ ಪ್ರಸಂಗಗಳು ಓದುಗನಿಗೆ ಹೊಸ ಅನುಭವಗಳು.
ರೈತರಿಗೆ ನೇರ ಗ್ರಾಹಕರನ್ನು ತಲುಪಲು ಅವಕಾಶ ಮಾಡಿಕೊಟ್ಟ ಪಾನಿ ಫೌಂಡೇಷನ್ ನ ಡಾ. ಅವಿನಾಶ್ ಪೋಲ್ ಎಂಬ ದಂತವೈದ್ಯನು ತರಕಾರಿ ಮಾರಾಟದಲ್ಲೂ ಕೈಯಾಡಿಸಿದ್ದು ಈ ಪುಸ್ತಕಕ್ಕೆ ವಿಶೇಷ ಬೋನಸ್.
ಅಡಿಕೆ ಪತ್ರಿಕೆ ಗರಡಿಯಲ್ಲಿರುವ ನಾ. ಕಾರಂತರ ಬರಹಗಳೇ ಹಾಗೆ . ಮೈನವಿರೇಳಿಸುವ ಸಣ್ಣ ವಿಚಾರವೊಂದು ಇಡೀ ಲೇಖನವನ್ನು ಆವರಿಸಿ ಬಿಡುವುದು. ಕೇಳಿದ, ಕಂಡ, ಅನುಭವಿಸಿದ , ದಾಖಲಿಸಿದ ವಿಷಯಗಳೆಲ್ಲ ಮಿತ್ರ ನಾ.ಕಾರಂತರಿಗೆ ಕೊರೋನಾ ರೋಗವು '' ಪಾಸಿಟಿವ್ '' ಆಗುವುದಾದರೆ ಓದುಗರಿಗೆ ಎಂದಿಗೂ ಅದು '' ಪಾಸಿಟಿವ್ ಪ್ಲಸ್ ''.
ಕಾಲಗರ್ಭದಲ್ಲಿ ಚದುರಿಹೋಗಬಹುದಾದ ವಿಷಯಗಳನ್ನೆಲ್ಲ ಒಟ್ಟಿಗೆ ಸೇರಿಸಿ ''ಮುಸ್ಸಂಜೆಯ ಹೊಂಗಿರಣ'' ವಾಗಿಸಿದ ನಾ.ಕಾರಂತರಿಗೆ ಮತ್ತು ಪುಸ್ತಕದ ಎಲ್ಲ ಪಾತ್ರಧಾರಿಗಳಿಗೆ ಮತ್ತೊಮ್ಮೆ ಧನ್ಯವಾದಗಳು.
- ಡಾ . ಪಿ. ಮನೋಹರ ಉಪಾಧ್ಯ
0 comments:
Post a Comment