ಕಾರ್ಕಳ ತಾಲೂಕಿನ ಅಜೆಕಾರಿನ ನಾರಾಯಣ ನಾಯ್ಕ್(71), ಸದಾನಂದ ನಾಯ್ಕ್(53) ಸಹೋದರರಿಗೆ ಈ ವರುಷ ನಿಂಬೆ ಕೃಷಿಯು ಸಂತೋಷ ನೀಡಿಲ್ಲ!
ಮಾರ್ಚ್ - ಮೇ ತಿಂಗಳು ನಿಂಬೆಯ ಏರು ಋತು. ಮಾರುಕಟ್ಟೆಯಲ್ಲಿ ಕಿಲೋಗೆ ಎಂಭತ್ತರಿಂದ ನೂರು ರೂಪಾಯಿ ತನಕ ಮಾರಿ ಹೋಗುತ್ತಿತ್ತು. ಲಾಕ್ಡೌನಿನಿಂದಾಗಿ ಇಪ್ಪತ್ತೈದು ರೂಪಾಯಿಗೂ ಮಾರಲು ಕಷ್ಟಪಡಬೇಕಾಯಿತು.
ನಾರಾಯಣ ನಾಯ್ಕರಿಗೆ ಮೂರೆಕ್ರೆಯಲ್ಲಿ ಅಡಿಕೆ, ಗೇರು, ತೆಂಗಿನ ಜತೆ ನಿಂಬೆ ಕೃಷಿ. ಇವರು ಬೆಂಗಳೂರಿನ ಹೆಚ್.ಎ.ಎಲ್.ನಲ್ಲಿ ಸೀನಿಯರ್ ಚೀಫ್ ಸುಪರ್ವೈಸರ್ ಆಗಿ ಈಗ ನಿವೃತ್ತ. ಸದಾನಂದರಿಗೆ ಹೈನುಗಾರಿಕೆ, ಭತ್ತದ ಬೇಸಾಯ, ತೆಂಗು, ಅಡಿಕೆಯೊಂದಿಗೆ ಮಿಶ್ರ ಕೃಷಿ. “ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಆಧರಿಸಬಹುದೆಂಬ ನಂಬುಗೆ”. ನಿಂಬೆ ಕೃಷಿಯ ಆರೈಕೆ ವಿಧಾನ, ನಿಗಾ ಮತ್ತು ಮಾರುಕಟ್ಟೆ ವಿಚಾರದಲ್ಲಿ ಇಬ್ಬರಲ್ಲೂ ಏಕರೀತಿ.
ಕಳೆದ ವರುಷ ಇಪ್ಪತ್ತೈದು ಕ್ವಿಂಟಾಲಿನಷ್ಟು ನಿಂಬೆ ಮಾರಿ ಹೋಗಿದೆ.” ಎನ್ನುವ ಖುಷಿಯನ್ನು ಹಂಚಿಕೊಂಡರು ನಾರಾಯಣ ನಾಯ್ಕ್. ಇವರ ನಿಂಬೆ ಕೃಷಿಗೆ ಈಗ ಐದನೇ ವರುಷ. ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯರು ಅಭಿವೃದ್ಧಿ ಪಡಿಸಿದ ‘ಸರ್ವಋತು ಪೂಜಾ ನಿಂಬೆ’ಯ ನೂರ ಅರುವತ್ತು ಗಿಡಗಳು ಇವರಲ್ಲಿದ್ದರೆ, ತಮ್ಮ ಸದಾನಂದರಲ್ಲಿ ಎಂಭತ್ತು ಗಿಡಗಳಿವೆ. ಇಬ್ಬರಿಗೂ ಬಾಳ್ತಿಲ್ಲಾಯರೇ ಮಾರ್ಗದರ್ಶಕ.
ಈ ತಳಿಯ ವಿಶೇಷ ಏನು? “ಉರುಟಾದ ದೊಡ್ಡ ಗಾತ್ರ, ಸಿಪ್ಪೆ ತೆಳು. ಜ್ಯೂಸ್ ಜಾಸ್ತಿ. ಕೊಯಿದು ರಾಶಿ ಹಾಕಿದಾಗ ಬಹು ದೂರದ ವರೆಗೂ ಪರಿಮಳ ಪಸರಿಸುವ ಗುಣ. ಪೂಜೆ, ನವರಾತ್ರಿ ಸಂದರ್ಭದ ಆಯುಧ ಪೂಜೆಗಳಲ್ಲಿ ಬೇಡಿಕೆ ಹೆಚ್ಚು.”
ಮಂಗಳೂರಿನ ಹಾಪ್ಕಾಮ್ಸ್ ಹಾಗೂ ಜ್ಯೂಸ್ ತಯಾರಿ ಘಟಕವೊಂದಕ್ಕೆ ಖಾಯಂ ಆಗಿ ನಿಂಬೆಹಣ್ಣನ್ನು ಒದಗಿಸುತ್ತಿದ್ದಾರೆ. ಏರು ಋತುವಿನಲ್ಲಿ ಕಿಲೋಗೆ ಎಂಭತ್ತರಿಂದ ನೂರು ರೂಪಾಯಿ ತನಕ ಬೆಲೆ ಸಿಕ್ಕಿದೆ. ಕಡಿಮೆಯೆಂದರೆ ಕಿಲೋಗೆ ನಲವತ್ತು ರೂಪಾಯಿ.
ಅಜೆಕಾರಿನಿಂದ ಮಂಗಳೂರಿಗೆ ಎಪ್ಪತ್ತೈದು ಕಿಲೋಮೀಟರ್ ದೂರ. ಸಾಗಾಟ ಖರ್ಚೇ ಅಧಿಕವಾಗುತ್ತದೆ. ಜತೆಗೆ ಹೋಗಿ ಬರಲು ಸಮಯವೂ ವ್ಯಯ. “ಹಾಗಾಗಿ ಕಾರ್ಕಳದಲ್ಲಿ ಇಲಾಖೆಯು ಹಾಪ್ಕಾಮ್ಸ್ ಮಳಿಗೆಯನ್ನು ಪ್ರಾರಂಭಿಸಿದರೆ ಕೃಷಿಕರಿಗೆ ಅನುಕೂಲ ಮತ್ತು ನಿಂಬೆ ಕೃಷಿಯನ್ನು ಬೆಳೆಸಲು ಉತ್ತೇಜನವೂ ಸಿಗುತ್ತದೆ.” ಎನ್ನುತ್ತಾರೆ.
ಆರೈಕೆ, ನಿಗಾ ಬೇಕು
ಬಾಳ್ತಿಲ್ಲಾಯರಿಂದ ನಿಂಬೆ ಸಸಿಗಳ ಪೂರೈಕೆ. 2 x 2 ಗಾತ್ರದ ಹೊಂಡ. ಗಿಡದಿಂದ ಗಿಡಕ್ಕೆ ಹತ್ತಡಿ ಅಂತರ. ಹಟ್ಟಿಗೊಬ್ಬರ, ಸುಡುಮಣ್ಣು, ಕುರಿಗೊಬ್ಬರ, ಕಹಿಬೇವಿನ ಹಿಂಡಿ, ಟ್ರೈಕೋಡರ್ಮಾ.. ಇವೆಲ್ಲ ಮಿಶ್ರಣಗಳ ಗೊಬ್ಬರ. ಒಂದೊಂದು ಹೊಂಡಕ್ಕೆ ಸುಮಾರು ಹನ್ನೆರಡು ಕಿಲೋದಷ್ಟು ಮಣ್ಣಿನೊಂದಿಗೆ ಸೇರಿಸಿ ಗಿಡ ನೆಟ್ಟಿದ್ದಾರೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರಾವರಿ.
“ಈ ಮಿಶ್ರಣವನ್ನು ಪ್ರತಿ ವರುಷವೂ ನೀಡುತ್ತಿದ್ದೇನೆ. ಇವುಗಳಲ್ಲಿ ಹತ್ತು ಕಿಲೋದಷ್ಟು ಹಟ್ಟಿಗೊಬ್ಬರವೇ ಇದೆ. ಗಿಡ ನೆಡಲು ಇಳಿಜಾರು ಪ್ರದೇಶವಾದರೆ ಒಳ್ಳೆಯದು. ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ಬೇಕು. ಅಲ್ಲದೆ ಎರಡು ಸಾಲುಗಳ ಮಧ್ಯೆ ಬಸಿಗಾಲುವೆ ಇದ್ದರೆ ಗಿಡಗಳು ಸೇಫ್.” ಎನ್ನುತ್ತಾರೆ.
ಮೊದಲ ಎರಡು, ಮೂರು ವರುಷ ಕೀಟ ಬಾಧೆ ಜಾಸ್ತಿ. ಎಳೆಯ ಚಿಗುರನ್ನು ತಿನ್ನುವ ಕೀಟಗಳು ಗಿಡದಲ್ಲೇ ಸಂಸಾರ ಮಾಡಿಕೊಂಡಿರುತ್ತವೆ. ಇವುಗಳ ನಿಯಂತ್ರಣಕ್ಕೆ ಕೀಟನಾಶಕ ಸಿಂಪಡಣೆ. ಮಳೆಗಾಲದಲ್ಲಿ ಗಿಡಗಳಿಗೆ ಶಿಲೀಂಧ್ರ (ಫಂಗಸ್) ಬಾಧಿಸುತ್ತದೆ. ಇದಕ್ಕೆ ಬೋರ್ಡೋ ದ್ರಾವಣ ಸಿಂಪಡಣೆಯಿಂದ ನಿಯಂತ್ರಣ. “ಗಿಡಗಳಿಗೆ ನಾಲ್ಕು ವರುಷ ಕಳೆದ ಬಳಿಕ ಹೇಳುವಂತಹ ಕೀಟ ಬಾಧೆ ಇಲ್ಲ. ಬಹುಶಃ ಗಿಡಗಳೇ ರೋಗ ನಿರೋಧಕ ಶಕ್ತಿಯು ಹೆಚ್ಚಿಸಿಕೊಳ್ಳುತ್ತವೆಯೋ ಏನೋ,” ನಾರಾಯಣ ನಾಯ್ಕರ ಗುಮಾನಿ.
ಟೆನ್ನಿಸ್ ಬಾಲ್ನಷ್ಟು ದೊಡ್ಡದು!
ಮಳೆಗಾಲ ಕಳೆದು ಎರಡು ತಿಂಗಳು, ಅಂದರೆ ಸುಮಾರು ನವೆಂಬರ, ದಶಂಬರ ತಿಂಗಳಿನಲ್ಲಿ ಮಳೆ ಬಂದರೆ ಇಳುವರಿಗೆ ತೊಂದರೆ. ಈ ಎರಡು ತಿಂಗಳುಗಳಲ್ಲಿ ಗಿಡಕ್ಕೆ ಸ್ಟ್ರೆಸ್ ಬೇಕು. ನೆಲದಲ್ಲೂ ತೇವ ಇರಕೂಡದು. ದಶಂಬರ ಕೊನೆಯಿಂದ ನೀರುಣಿಸಿದಾಗ ಗಿಡಗಳು ಚಿಗುರುತ್ತವೆ. ಮಾರ್ಚ್ನಿಂದ ಇಳುವರಿ ಶುರು. “ಬೆಂಗಳೂರಿನ ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಐಐಹೆಚ್ಆರ್) ಅವರ ಮಾಹಿತಿಯಂತೆ ಹೂ ಬಿಡುವ ಹೊತ್ತಿಗೆ, ಬಿಟ್ಟ ನಂತರ, ಕಡಲೆ ಗಾತ್ರದ ಕಾಯಿ ಕಚ್ಚುವಾಗ ಮತ್ತು ನಂತರ.. ಹೀಗೆ ನಾಲ್ಕು ಬಾರಿ ಹಾರ್ಮೋನ್ ಸಿಂಪಡಿಸುತ್ತಿದ್ದೇನೆ. ಟೆನ್ನಿಸ್ ಬಾಲ್ನಷ್ಟು ದೊಡ್ಡದಾಗಿ ಕಾಯಿ ಬಿಡುತ್ತದೆ!” ಎನ್ನುತ್ತಾರೆ.
ದೊಡ್ಡ ಗಾತ್ರದ ಸುಮಾರು 18 - 20 ನಿಂಬೆಹಣ್ಣು ಒಂದು ಕಿಲೋ ತೂಗುತ್ತದೆ. ಸಣ್ಣದಾದರೆ 20 -25. ಮರುದಿವಸ ಮಾರುಕಟ್ಟೆಗೆ ಒಯ್ಯುವ ಹಿಂದಿನ ದಿವಸ ಬಲಿತ ಕಾಯಿಗಳನ್ನು ಕೊಯ್ದು, ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಹಾಕುತ್ತಾರೆ. ದೊಡ್ಡ ಗಾತ್ರ, ಮಧ್ಯಮ ಗಾತ್ರದ ಕಾಯಿಗಳನ್ನು ಬೇರ್ಪಡಿಸಿ ‘ಗ್ರೇಡಿಂಗ್’ ಮಾಡುತ್ತಾರೆ. ಚಿಕ್ಕ ಗಾತ್ರದ ಕಾಯಿಗಳಿಗೆ ಸ್ಥಳೀಯವಾಗಿ ಗ್ರಾಹಕರಿದ್ದಾರೆ. ಚಿಕ್ಕ ಕಾಯಿಗಳಿಗೆ ಕೆಲವೊಮ್ಮೆ ದಾನ - ಧರ್ಮದ ಯೋಗ!
ನೆಲದಿಂದ ಗಿಡದ ಮೂರಡಿ ಎತ್ತರದ ವರೆಗೆ ಬಂದ ಚಿಗುರನ್ನು ತೆಗೆಯುತ್ತಾರೆ. ಇದರಿಂದಾಗಿ ಗಿಡಗಳಿಗೆ ಗೊಬ್ಬರ, ನೀರು ಉಣಿಸಲು, ಅಲ್ಲದೆ ಹಣ್ಣಾಗಿ ಉದುರಿದ ನಿಂಬೆ ಹಣ್ಣನ್ನು ಆಯಲು ಅನುಕೂಲ. ವರುಷಕ್ಕೊಮ್ಮೆ ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಸವರುವಿಕೆ (ಪ್ರೂನಿಂಗ್).
ಬಾಳ್ತಿಲ್ಲಾಯರು ನೆನಪಿಸಿಕೊಂಡರು, “ನಾರಾಯಣ ನಾಯಕರು ಶುರುವಿಗೆ ಪ್ರೂನಿಂಗ್ ಮಾಡಿದರು, ಎಳೆ ಕಾಯಿಗಳನ್ನು ಕಿತ್ತರು. ತಮ್ಮ ಸದಾನಂದರು ಹಟ್ಟಿಗೊಬ್ಬರ, ಸ್ಲರಿ ಕೊಟ್ಟು ಆರೈಕೆ ಮಾಡಿದರು. ಆರಂಭದಲ್ಲಿ ಸದಾನಂದರಿಗೆ ಇಳುವರಿ ಚೆನ್ನಾಗಿ ಬಂತು. ನಾರಾಯಣ ನಾಯ್ಕರಿಗೆ ನೀರೀಕ್ಷಿಸಿದಷ್ಟು ಬರಲಿಲ್ಲ. ಕಳೆದೆರಡು ವರುಷದಿಂದ ಇಬ್ಬರಲ್ಲೂ ಸಮ ಪ್ರಮಾಣದಲ್ಲಿ ಬರುತ್ತಿದೆ.”
ಕರಾವಳಿಗೆ ಒಗ್ಗುವ ನಿಂಬೆ
ಕರಾವಳಿಯಲ್ಲಿ ಎಲ್ಲ ತಳಿ ನಿಂಬೆಯೂ ಸಫಲವಾಗುವುದಿಲ್ಲ. ಆದರೆ, ಈ ‘ಪೂಜಾ ನಿಂಬೆ’ಯು ಕರಾವಳಿಯ ವಾತಾವರಣಕ್ಕೆ ಒಗ್ಗಿದ ತಳಿ. ಒಂದೂವರೆ ವರುಷದಲ್ಲಿ ಕಾಯಿ ಬಿಡುವ ಕ್ಷಮತೆ. ಸ್ಥಳೀಯ ತಳಿಯು ಕಾಯಿ ಬಿಡಲು ನಾಲ್ಕರಿಂದ ಐದು ವರುಷ ಬೇಕು. ಒಂದು ವೇಳೆ ಇಳುವರಿ ಬಂದರೂ ವಿರಳವಾಗಿರುತ್ತದೆ. ಮನೆಮಟ್ಟಕ್ಕೆ ಹೊರತು ದೊಡ್ಡ ಪ್ರಮಾಣದಲ್ಲಿ ನಿಂಬೆ ಕೃಷಿ ಮಾಡಿದವರು ಕಡಿಮೆ. “ಇದಕ್ಕೆ ಮಾರುಕಟ್ಟೆಯ ಕೊರತೆಯಾಗದು. ಬಹುತೇಕ ಆಹಾರೋತ್ಪನ್ನ ಉದ್ದಿಮೆಗಳಲ್ಲಿ ನಿಂಬೆಗೆ ಮಹತ್ವವಿರುವುದರಿಂದ ಬೇಡಿಕೆ ಇಲ್ಲ ಎಂದಾಗದು.” ಎಂದು ದನಿ ಸೇರಿಸಿದರು ನಾಯ್ಕ್ ಸಹೋದರರು.
ನಾರಾಯಣ ನಾಯ್ಕ್ 97410 88228
ಸದಾನಂದ ನಾಯ್ಕ್ 63608 34507
ಗಿಡಕ್ಕೆ ಸ್ಟ್ರೆಸ್ ಬೇಕು
“ಸರಿಯಾಗಿ ಆರೈಕೆ ಮಾಡಿ ಬೆಳೆಸಿದರೆ ಒಂದು ಗಿಡದಲ್ಲಿ ಮೂರನೆ ವರುಷದಲ್ಲಿ 750ರಿಂದ 1000 ನಿಂಬೆ ತೆಗೆಯಬಹುದು.” ಎನ್ನುತ್ತಾ ಗುರುರಾಜ ಬಾಳ್ತಿಲ್ಲಾಯರು ಈ ಕೃಷಿಯ ಸೂಕ್ಷ್ಮಗಳನ್ನು ತಿಳಿಸುತ್ತಾರೆ, “ಹೂ ಬಿಡುವ ಕಾಲದಲ್ಲಿ ಮಳೆ ಬರಕೂಡದು. ಗಿಡಕ್ಕೆ ಸ್ಟ್ರೆಸ್ ಸಿಗಬೇಕು. ಗಿಡದ ಎಲೆಗಳು ಗಿಳಿ ಹಸುರು ವರ್ಣಕ್ಕೆ ತಿರುಗಿದಾಗ ಗಿಡವು ಸ್ಟ್ರೆಸ್ ಆಗಿದೆ ಎಂದರ್ಥ. ನಂತರ ನೀರುಣಿಸಬೇಕು.”
ಗುರುರಾಜ ಬಾಳ್ತಿಲ್ಲಾಯ - 97317 34688
0 comments:
Post a Comment