ಮುಸ್ಸಂಜೆಯ ಹೊಂಗಿರಣ (ಕೊರೊನಾ ಕೃಪೆಯ ವರಗಳತ್ತ ಇಣುಕುನೋಟ) : ಈ ಪುಸ್ತಕವು ಪ್ರಕಾಶನಗೊಂಡ ನಾಲ್ಕೇ ತಿಂಗಳಲ್ಲಿ ಎಲ್ಲಾ ಪ್ರತಿಗಳು ಓದುಗರ ಕೈಸೇರಿವೆ ಎನ್ನಲು ಖುಷಿ. ಪುಸ್ತಕವನ್ನು ಕೊಂಡು ಓದಿ ಪ್ರೋತ್ಸಾಹಿಸಿದ ಎಲ್ಲಾ ಸುಮನಸಿಗ ಅಕ್ಷರ ಪ್ರಿಯರಿಗೆ ಶುಭಾಶಯಪೂರ್ವಕ ಕೃತಜ್ಞತೆಗಳು. ಪುಸ್ತಕದ ಹೂರಣದ ಒಂದೊಂದೇ ಎಳೆಯು ನಿಮಗಾಗಿ...... ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕದ ಮುನ್ನುಡಿ ...... ಹಿರಿಯ ಪತ್ರಕರ್ತ ಶ್ರೀ ಶಿವಸುಬ್ರಹ್ಮಣ್ಯ ಕಲ್ಮಡ್ಕ... ಬರೆದಿದ್ದಾರೆ.
ಜೀವಂತಿಕೆ ಮೆರೆಯುವ ಕಾಯಕ
ಮೂರು ದಶಕಗಳಿಗೂ ಮಿಗಿಲಾದ ಪತ್ರಿಕೋದ್ಯಮ ಅನುಭವ ಇರುವ ನಾನು ಒಂದು ಸಂಸ್ಥೆಯ ಕೆಟ್ಟ ವಾತಾವರಣಕ್ಕೆ ಬೇಸರಪಟ್ಟು ರಾಜಿನಾಮೆ ಬಿಸಾಕಿ ಸಂಸ್ಥೆಯಿಂದ ಹೊರ ನಡೆದ ತಕ್ಷಣ, ಮನಸ್ಸು ಹುಟ್ಟೂರಿನ ಕಡೆಗೇ ಹೋಗಿತ್ತು. ನನಗೆ ಈಗ ಅಚ್ಚರಿ ಮೂಡುವ ವಿಷಯವೆಂದರೆ, ಕೊರೊನಾದ ನಂತರದ ಪರಿಸ್ಥಿತಿಯಲ್ಲಿ ನಮ್ಮ ಸುತ್ತಮುತ್ತ ನೂರಾರು ಮಂದಿ ಹುಟ್ಟೂರಿನ ಕಡೆಗೆ ಮುಖ ಮಾಡಿದ್ದಾರೆ ಎಂಬ ಸುದ್ದಿ ವರದಿಯಾಗಿದ್ದು. ಇದು ತಾತ್ಕಾಲಿಕವೇ ಅಥವಾ ಹುಟ್ಟೂರಿಗೆ ಮುಖ ಮಾಡಿದವರು ಮತ್ತೆ ಹಿಂದಿನ ಉದ್ಯೋಗದ ಕಡೆಗೆ ಓಡುವರೇ ಅಥವಾ ಹೊಸ ಸವಾಲನ್ನು ಸ್ವೀಕರಿಸಿ ಸಾಧನೆಯ ಮೆಟ್ಟಿಲು ಏರುವರೇ ಎಂಬುದೇ ಈಗ ಎದುರಾಗಿರುವ ಪ್ರಶ್ನೆ.
ಕೊರೊನಾ ತತ್ತರಕ್ಕೆ ಪೂರ್ವದಲ್ಲೇ, ಪತ್ರಿಕೋದ್ಯಮ ಕ್ಷೇತ್ರದಿಂದ ಕ್ಷಣ ಮಾತ್ರದಲ್ಲಿ ಬಿಟ್ಟು ದೂರ ಸರಿದ ನನಗೆ ಧುತ್ತೆಂದು ಜೀವನದ ಬಹುದೊಡ್ಡ ಸವಾಲು ಎದುರಾಗಿತ್ತು. ಜೀವನ ಮಟ್ಟ, ಹುದ್ದೆಯ ಅಂತಸ್ತು, ಸಾರ್ವಜನಿಕ ಸಂಪರ್ಕ, ವಿತ್ತೀಯ ವ್ಯವಸ್ಥೆ ಹೀಗೆ ಎಲ್ಲವೂ ಇಲ್ಲದಾದಾಗ, ಜೀವನ ಸವಾಲನ್ನು ಎದುರಿಸಲು ನಾನು ಆಯ್ಕೆ ಮಾಡಿಕೊಂಡದ್ದು, ಎರಡು ದಶಕಗಳಿಗೂ ಮಿಗಿಲಾಗಿ ನನ್ನೊಳಗಿದ್ದ ವೈಲ್ಡ್ ಲೈಫ್ ಫೊಟೋಗ್ರಫಿ ಹವ್ಯಾಸದ ವಿಸ್ತರಣೆಯನ್ನು. ಸರಿಸುಮಾರು ಎರಡು ವರ್ಷ ಉದ್ಯೋಗವಿಲ್ಲದೆ ನಾನು ಪರಿತಪಿಸುತ್ತಿರುವಂತೆಯೇ, ನನ್ನ ಹುಟ್ಟೂರಲ್ಲಿ ಹಕ್ಕಿ ಫೊಟೋಗ್ರಫಿಗೆಂದೇ ಸ್ವಂತ ಲಾಭದ ಉದ್ದೇಶವಿಲ್ಲದ ಕೇಂದ್ರವೊಂದನ್ನು ಸ್ಥಾಪಿಸಲು ನಾನು ತಯಾರಿ ನಡೆಸಿದೆ.
2020ರ ಮಾರ್ಚ್ ತಿಂಗಳು. ಚೀನಾದಲ್ಲಿ ಹಬ್ಬಿದ ಕೊರೊನಾ ಭಾರತಕ್ಕೂ ಪ್ರವೇಶಿಸಿದೆ ಎಂಬ ಸುದ್ದಿ ಪ್ರಕಟವಾಗಿತ್ತು. ಕನಸಿನ ಕೇಂದ್ರದ ನಿರ್ಮಾಣಕ್ಕೆ ನೆಲಸಮತಟ್ಟು ಕಾಮಗಾರಿ ಮುಗಿಯುವ ಹಂತಕ್ಕೆ ಬಂದೊಡನೆ ನನ್ನ ಪತ್ನಿಯ ತಂದೆಯ (ನನ್ನ ಮಾವ) ಆರೋಗ್ಯ ಹದಗೆಟ್ಟಿತ್ತು. ಕಾಮಗಾರಿ ನಿಲ್ಲಿಸಿ ಮೈಸೂರಿಗೆ ಧಾವಿಸಿದೆ. ಅದೇ ದಿನ ನಿಧನರಾದರು. ಮರುದಿನ ಸ್ವಯಂ ಲಾಕ್ಡೌನ್ ಆಗಿದ್ದರೂ, ಅವರ ಅಂತ್ಯಸಂಸ್ಕಾರ ಮುಗಿಸಿ ಬೆಂಗಳೂರಿನ ನಿವಾಸಕ್ಕೆ ತೆರಳಿದೆ. ಅನಂತರದ ಕಾಲಘಟ್ಟವೇ ಕೊರೊನಾ. ತಿಂಗಳ ಲಾಕ್ಡೌನಿನಿಂದ ಎಲ್ಲವೂ ಮುಗಿಯಿತು, ದಿಕ್ಕೇ ತೋಚದು ಎಂದು ಸಾವಿರಾರು ಜನ ಕಂಗೆಟ್ಟು ಹೋಗಿದ್ದರು.
ಆದರೆ ನಾನು ಮಾತ್ರ ಸವಾಲು ಎದುರಿಸಿ, ನನ್ನ ಕನಸಿನ ಕೇಂದ್ರದ ನಿರ್ಮಾಣ ಕೈಗೊಂಡೆ. ಪೂರ್ಣಗೊಂಡಾಗ ಕೊರೊನಾ ಬಾಧಿಸಲೇ ಇಲ್ಲ ಎಂಬ ಭಾವನೆ ಮೂಡಿತ್ತು ಎಂದು ಹೇಳಿದರೆ ಅತಿಶಯೋಕ್ತಿ ಆದೀತು. ಸನ್ಮಿತ್ರರು, ಹಿತೈಷಿಗಳ ಬೆಂಬಲ ಇದ್ದಾಗ ಕೊರೊನಾಗೆ ಕಿರಿಕಿರಿ ಮಾಡಲು ಅವಕಾಶವೇ ಸಿಗಲಿಲ್ಲ! ನನ್ನ ಸ್ವಂತ ಅನುಭವವನ್ನು ಇಲ್ಲಿ ಯಾಕೆ ಹೇಳಿದೆನೆಂದರೆ, ಈ ಮುಸ್ಸಂಜೆಯ ಹೊಂಗಿರಣಕ್ಕೆ ಸಂಕ್ಷಿಪ್ತವಾಗಿ ನನ್ನ ಪಾಸಿಟಿವ್ ಸಂಗತಿಯನ್ನು ಈ ರೀತಿ ಸೇರ್ಪಡೆ ಮಾಡುವುದು ಉದ್ದೇಶವಾಗಿತ್ತು.
2020ರ ಮಾರ್ಚ್ ತಿಂಗಳಿನಿಂದ ವರ್ಷಾಂತ್ಯದವರೆಗೆ ಎಲ್ಲೆಲ್ಲೂ ಕೊರೊನಾ ಮತ್ತು ಕೋವಿಡ್ ಸಂಗತಿಗಳೇ ತುಂಬಿದ್ದಾಗ ಬೇರೆ ಪಾಸಿಟಿವ್ ಸಂಗತಿಗಳೂ ನಡೆಯುತ್ತದೆ. ಅದು ಜನರಿಗೆ ತಲಪಬೇಕು. ಟೆಲಿವಿಷನ್ಗಳಲ್ಲಿ ಆ ಪಾಸಿಟಿವ್ ಮಾಹಿತಿ ಕಡಿಮೆಯಾಗಿ, ಜನರು ಭಯಭೀತರಾಗುವ ಸುದ್ದಿಯೇ ಹೆಚ್ಚಾಗಿದ್ದವು. ಆದರಾಚೆಗೂ ಪಾಸಿಟಿವ್ ಸಂಗತಿಗಳಿವೆ ಎಂಬುದನ್ನು ಬೆರಳೆಣಿಕೆಯ ಟೆಲಿವಿಷನ್ಗಳು ತೋರಿಸಿದವು. ಈ ಮುಸ್ಸಂಜೆಯ ಹೊಂಗಿರಣದಲ್ಲಿ ದಾಖಲಿಸಿರುವ ಪಾಸಿಟಿವ್ ಸಂಗತಿಗಳು ಈ ಪೀಳಿಗೆಯ ಆತ್ಮವಿಶ್ವಾಸ ಹೆಚ್ಚಿಸುವ ಸಾಧನೆಯ ಮಾಹಿತಿಗಳ ಗುಚ್ಚವಾಗಿದೆ.
ಕೋವಿಡ್ ಪಾಸಿಟಿವ್ ಬಂದರೆ ಬದುಕು ನೆಗೆಟಿವ್ ಆಗುತ್ತದೆ. ವ್ಯಾಪಾರ ವ್ಯವಹಾರಗಳು ಲಾಕ್ಡೌನ್. ಹೀಗೆ ಲಾಕ್ಡೌನ್ ಆದರೆ ಜೀವ ಕಂಗೆಡುತ್ತದೆ. ಹಾಗೆ ಕಂಗೆಟ್ಟ ಜೀವಕ್ಕೆ ಒಂದಿಷ್ಟಾದರೂ ಓಯಸಿಸ್ ಅಥವಾ ಓಆರ್ಎಸ್ ಕೊಡುವ ಪ್ರಯತ್ನಗಳನ್ನು ಈ ಕೃತಿ ದಾಖಲಿಸಿದೆ ಎನ್ನಬಹುದು. ಕೋವಿಡ್ನಿಂದಾಗಿ ಕೃಷಿ ಡೌನ್, ಶಾಲೆ ಡೌನ್, ಕೃಷಿಯೇತರ ಚಟುವಟಿಕೆ ಡೌನ್, ಉದ್ಯಮ ಡೌನ್.. ಹೀಗೆ ಎಲ್ಲವೂ ಡೌನ್ ಆಗಿ ನಮ್ಮ ಹೃದಯ ಬಡಿತವೂ ಡೌನ್ ಆಗುವ ಪರಿಸ್ಥಿತಿ ಬಂದಿರುವಾಗ ಈ ಮುಸ್ಸಂಜೆಯ ಹೊಂಗಿರಣದ ನೈಜ ಘಟನೆಗಳು ಕೋವಿಡ್ ಹಾವಳಿಯಿಂದ ಸತ್ವ ಕಳೆದುಕೊಂಡ ಮನಸಿಗೆ ಜೀವ ತುಂಬುವ ಮತ್ತು ಜೀವಂತಿಕೆ ಎರೆಯುವ ಕಾಯಕ ಮಾಡಿದೆ. ಕೈಚೆಲ್ಲಿ ಕೂತ ಶ್ರಮಜೀವಿಗಳಿಗೆ ಇದೊಂದು ಉಷಾಕಿರಣವಾಗಿದೆ. ಈ ಕೃತಿಯನ್ನು ಮುಸ್ಸಂಜೆಯ ಹೊಂಗಿರಣ ಎನ್ನುವುದಕ್ಕಿಂತ ಲಾಕ್ಡೌನ್ ಕಾಲದ ಪಾಸಿಟಿವ್ ಗಾಥೆಗಳು ಎಂದರೆ ಸರಿಯಾಗುತ್ತದೆ. ಬದುಕೇ ನಿಂತು ಹೋದಂತಾದಾಗ ಆ ಬದುಕಿನ ಬಳ್ಳಿಗಳಿಗೆ ನೀರೆರೆದು ಪೋಷಿಸಿ ಮತ್ತೆ ಚಿಗುರುವಂತೆ ಮಾಡಿದ ಸಾಹಸಗಾಥೆಗಳು ಕೃತಿಯಲ್ಲಿವೆ.
ಕೊರೊನಾದ ಸಂಕಟ ಕಾಲದಲ್ಲಿ ಮೊಬೈಲ್ ದಾನದ ಪರಿಕಲ್ಪನೆ ಎಂಬ ಮೊದಲ ಲೇಖನವೇ ನಮ್ಮಲ್ಲಿ ಹೊಸ ಹುಮ್ಮಸ್ಸು ಮೂಡಿಸುವಂತಾದ್ದು. ಈಗಲೂ ಅನೇಕ ಹಳ್ಳಿಗಳಲ್ಲಿ ದೂರದ ಗುಡ್ಡದಲ್ಲಿ ಕೂತು ಆನ್ಲೈನ್ ಪಾಠ ಕೇಳುವುದು, ನೋಡುವುದನ್ನು ಖುದ್ದಾಗಿ ಕಂಡಿದ್ದೇನೆ. ಇಂತಹ ಸಂದರ್ಭದಲ್ಲೇ ಮಕ್ಕಳಿಗೆ ದಾನಿಗಳ ಮೂಲಕ ಮೊಬೈಲ್ ವಿತರಿಸಿದ ಮಹಾನುಭಾವರು ಇದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗ್ರಾಮಿಣ ಮಕ್ಕಳಿಗೆ ಟ್ಯಾಬ್ ವಿತರಿಸಲು ಅನುದಾನ, ಕೊರೊನ ಸಂಕಟ ಕಾಲದಲ್ಲಿ ಹಳ್ಳಿ ಹೈದರಿಗೆ ಅಡಿಕೆ ಮರವೇರಲು ತರಬೇತಿಯ ವ್ಯವಸ್ಥೆ ಮಾಡಿದ ಕ್ಯಾಂಪ್ಕೋ ಸಂಸ್ಥೆಯ ಪ್ರಯತ್ನವೇ ಪಾಸಿಟಿವ್ ಸಂಗತಿಗಳು.
ಹಳ್ಳಿಗಳಲ್ಲಿ ಮನೆಗೆ ಒಂದು ಲ್ಯಾಂಡ್ ಫೋನ್ ಇದ್ದರೆ ಹೆಚ್ಚು. ಅದೂ ವಾರದ ನಾಲ್ಕು ದಿನಗಳು ಕೆಟ್ಟು ಕೂತಿರುತ್ತವೆ. ಡೆಡ್. ಅಂಥ ಎಲ್ಲೆಲ್ಲೋ ಕುಗ್ರಾಮಗಳಲ್ಲಿ ನೆಟ್ವರ್ಕ್ ಇಲ್ಲದೆ ಆನ್ಲೈನ್ ಕ್ಲಾಸ್ ಹೇಗೆ ಮಾಡುವುದು? ಇಂಥ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಿ ಮೂಲೆಯ ಹಳ್ಳಿಗೂ ನೆಟ್ವರ್ಕ್ ಬರುವಂತೆ ಮಾಡಿ ಡಿಜಿಟಲ್ ಹಳ್ಳಿಯನ್ನಾಗಿ ಮಾಡಿದ ಹೆಗ್ಗಳಿಕೆ ಮಾತೃಭೂಮಿ ಸೇವಾಸಂಸ್ಥೆಯ ಹರೀಶ ಕುಮಾರ್ ಸಹೋದರರು. ಇವರು ಚೆನ್ನಪಟ್ಟಣದ ಚಿಕ್ಕೇನಹಳ್ಳಿಯನ್ನು ಡಿಜಿಟಲ್ ಹಳ್ಳಿಯಾಗಿ ಮಾಡಿ ದೇಶದ ಜನತೆ ಈ ಹಳ್ಳಿಯ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ.
ದಿನಸಿ ಅಂಗಡಿಗೆ ಡಿಜಿಟಲ್ ಸ್ಪರ್ಶ ಕೊಟ್ಟ ಪುತ್ತೂರಿನ ಪೆರ್ಲಂಪಾಡಿಯ ಹರಿಪ್ರಸಾದ್ ಕುಂಟಿಕಾನ ಅವರ ಸಾಹಸ ಗಾಥೆ ಓದಿದರೆ ಎಂಥವರೂ ಭೇಷ್ ಎನ್ನಲೇ ಬೇಕು. ಇಪ್ಪತ್ತೆಂಟು ವರ್ಷದ ಬಳಿಕ ಹತ್ತನೇ ತರಗತಿಯ ಸಹಪಾಠಿಗಳನ್ನು ಒಂದುಗೂಡಿಸಿದ ಲಾಕ್ಡೌನಿಗೆ ಧನ್ಯವಾದಗಳು ಎನ್ನುತ್ತಾರೆ ಪುತ್ತೂರಿನ ಉದ್ಯಮಿ ಕೇಶವ. ಐವತ್ತೆಂಟು ಹಳೆಯ ಸಹಪಾಠಿಗಳು ಸೇರಿ ವಾಟ್ಸಪ್ ಗ್ರೂಪ್ ಮಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅಶಕ್ತರಿಗೆ ಕೈಲಾದ ಸೇವೆ ಒದಗಿಸುತ್ತಿದ್ದಾರೆ.
ಕಾಸರಗೋಡು ಸೇರಿದಂತೆ ಕರಾವಳಿಯ ತರಕಾರಿ ಬೆಳೆಯುವ ಗುಂಪಿನ ಸದಸ್ಯರು ತಮ್ಮ ಮಾತು, ಜೋಕ್ಸ್ ಹೊರತು ಪಡಿಸಿ ತರಕಾರಿ ಬೆಳೆ, ರೋಗಬಾರದಂತೆ ತಡೆಗಟ್ಟುವುದು, ಬೀಜ ಸಂಗ್ರಹ ಹೇಗೆ ಮಾಡುವುದು ಮುಂತಾದ ಕೃಷಿ ಚಟುವಟಿಕೆಗಳನ್ನು ಮಾತಾಡುತ್ತಾರೆ. ತರಕಾರಿ ಕೃಷಿಗೆ ಇದರಿಂದ ಎಷ್ಟೋ ಅನುಕೂಲವಾಗಿದೆ. ಇಂಥದೊಂದು ಪ್ರಯತ್ನ ಮಾಡಿದ ಶ್ರೀ ಪಡ್ರೆಯವರ ಕಾರ್ಯ ಅಭಿನಂದನಾರ್ಹ.
ಇಂಥ ಜೀವಂತಿಕೆಯ ಎಷ್ಟೋ ಕೆಲಸಗಳು ಈ ಕೃತಿಯಲ್ಲಿದೆ. ಬದುಕು ಲಾಕ್ಡೌನ್ ಆಗದಂತೆ ದೈನಂದಿನ ಜೀವನ ನೆಗೆಟಿವ್ ಆಗದಂತೆ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಜೀವಂತ/ನೈಜ ಕತೆಗಳು ಈ ಕೃತಿಯಲ್ಲಿ ಇವೆ. ಬದುಕು ಲಾಕ್ಡೌನಿಗೆ ನಿಂತ ನೀರಲ್ಲ, ಏನೇ ಆದರೂ ಮುಂದೆ ಸಾಗಲೇ ಬೇಕು ಎಂಬ ಬದುಕಿನ ಪಾಸಿಟಿವ್ ಕತೆಗಳು ಇಲ್ಲಿವೆ.
ಕೊರೊನಾ ನಂತರ ನಗರಗಳಿಂದ ಹಳ್ಳಿಗೆ ಬಸ್ ಹತ್ತಿದವರು ಹಲವು ಮಂದಿ. ನಗರದಲ್ಲಿ ಉದ್ಯೋಗದಲ್ಲಿದ್ದು ಹಳ್ಳಿಯ ಬಗ್ಗೆ ಅನಾದರ ಭಾವನೆ ಹೊಂದದೇ ಇರುವವರು, ಆದರೆ ಹಳ್ಳಿಯ ವಾತಾವರಣಕ್ಕೆ ಒಗ್ಗಲು ಸಮಯ ಬೇಡವೇ ಎಂಬ ಪ್ರಶ್ನೆ ಮೂಡುತ್ತದೆ. ಕೈ ಕೊಡುವ ಕರೆಂಟ್ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಮತ್ತೆ ನಗರದತ್ತ ಬಸ್ ಏರುವಂತಾಗದೇ ಇದ್ದರೆ ಸಾಕು.
ಶ್ರೀಯುತ ನಾ. ಕಾರಂತ ಪೆರಾಜೆ ಅವರು ಪತ್ರಕರ್ತರು. ಸಹಜವಾಗಿ ಪತ್ರಕರ್ತ ನೋಡುವ ದೃಷ್ಟಿಕೋನವನ್ನು ಇಲ್ಲಿ ಕಾಣಬಹುದು. ಪತ್ರಿಕೋದ್ಯಮವೇ ನೆಗೆಟಿವ್ ಆಗುತ್ತಿದೆ ಎಂಬ ಗುರುತರ ಟೀಕೆಗಳು ವ್ಯಕ್ತವಾಗುವ ಸನ್ನಿವೇಶದಲ್ಲೇ, ಪಾಸಿಟಿವ್ ಥಿಂಕಿಂಗ್ ಮಾಡುವ ನಾವಿದ್ದೇವೆ ಎಂಬುದನ್ನು ಕಾರಂತರು ಸಾರಿ ಹೇಳಿದ್ದಾರೆ. ಧನಾತ್ಮಕ ಚಿಂತನೆಯೇ ಯಶಸ್ಸಿಗೆ ಹೆಜ್ಜೆಗಳು. ಕೊರೊನ ನಂತರ ದೇಶದ ಜನರ ಜೀವನ ಸರಿದಾರಿಗೆ ಬರುವುದೇ ಎಂಬ ಪ್ರಶ್ನೆಗೆ, ಸರಿದಾರಿಗೆ ಬರುವುದು ಕಷ್ಟದ ಸಂಗತಿಯಲ್ಲ ಎಂಬುದನ್ನು ಅನೇಕರ ಸಾಧನೆಗಳ ಮೂಲಕ ಕಾರಂತರು ವಿವರಿಸಿದ್ದಾರೆ.
ಇನ್ನೂ ಅನೇಕ ಲೇಖನಗಳಿವೆ. ಮೂಲ ವ್ಯಾಪಾರ, ವಹಿವಾಟು, ಉದ್ಯಮಗಳು ಕೊರೊನಾ ನಂತರ ಹೊಸ ಪರಿಕಲ್ಪನೆ ಪಡೆದದ್ದೂ ಇವೆ. ನೆಲಕಚ್ಚಿದ ವ್ಯಾಪಾರ, ನಿಧಾನಕ್ಕೆ ಸುಧಾರಿಸಿದ ನಿದರ್ಶನಗಳು ದೇಶದೆಲ್ಲೆಡೆ ಈಗ ಇವೆ. ಖಾಲಿ ಜಾಗದಲ್ಲಿ ತರಕಾರಿ ತೋಟವಾಗಿ ಮಾರ್ಪಾಡಾಗಲು ಕೊರೊನಾ ಸಂಕಟದ ಸವಾಲು ಕಾರಣ. ಅರ್ಧ ಸಂಬಳ ಕೊಡುವ ಕಂಪೆನಿಯ ನಿರ್ಧಾರವನ್ನೇ ಒಪ್ಪಿಕೊಳ್ಳದೆ ರಾಜಿನಾಮೆ ನೀಡಿ, ಅಡಿಕೆ ಖೇಣಿಯ ವೃತ್ತಿಗೆ ಕೈ ಹಾಕಿದ ಐಟಿ ಕಂಪೆನಿ ಬಿಟ್ಟು ಬಂದ ಶಿವಕುಮಾರರ ಸಾಹಸವನ್ನೂ ದಾಖಲಿಸಿದ್ದಕ್ಕೆ ಕಾರಂತರಿಗೆ ಭೇಷ್ ಎನ್ನಲೇಬೇಕು.
ಕಿಶೋರ್ ಮಾಸ್ತರರ ಅನ್ನದ ಕೃಷಿ, ಮಧ್ಯಾಹ್ನ - ರಾತ್ರಿ ಬಿಸಿ ಬಿಸಿ ಬುತ್ತಿಯೂಟ ಒದಗಿಸುವ ಕಥೆ, ಪುಸ್ತಕ ಮಾರಾಟ ಮಳಿಗೆಯನ್ನೇ ಬಿಟ್ಟು, ಅಡಿಕೆ ತೋಟಕ್ಕೆ ಮರುಜೀವ ನೀಡಿದ ಘಟನೆ, ಯಕ್ಷಗಾನ ತೋರಿದ ಜಾಗೃತಿ, ಯಕ್ಷಗಾನ ಅಕಾಡೆಮಿಯ ಮಾತಿನ ಮಂಟಪ, ಕೊರೊನ ವಾರಿಯರ್ಸ್ ಗಳ ಬದ್ಧತೆಯನ್ನೂ ಕಾರಂತರು ದಾಖಲಿಸಿದ್ದಾರೆ.
ಕೊರೊನಾ ಕಾಲದಲ್ಲಿ ಇಡೀ ದೇಶವೇ ಕಂಗೆಟ್ಟಿತ್ತು. ವ್ಯಕ್ತಿವ್ಯಕ್ತಿಗಳ ಮಧ್ಯೆ ಅಂತರ ಎಂಬ ನಿಯಮವೇ ಸಂಬಂಧಗಳನ್ನು ಹಾಳುಮಾಡುವುದೇ ಎಂಬ ಸಂಶಯ ಮೂಡಿತ್ತು. ಯಾರನ್ನೂ ಹತ್ತಿರದ ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾರ ಮನೆಗೂ ಹೋಗುವುದೂ ಕಷ್ಟವೇ ಎಂಬ ವಾತಾವರಣ ನಿರ್ಮಾಣವಾದಾಗ ಅತಿ ಪ್ರಯಾಸದಿಂದ, ಪುಟಿದೆದ್ದು ಸಮಾಜಕ್ಕೆ ಒಳಿತಾಗಲು ನೂರಾರು ಜನ ಶ್ರಮಿಸಿದ್ದಾರೆ. ಅವರ ಯಶಸ್ಸೇ ಪಾಸಿಟವ್ ಆಗಿ ಈಗ ಕಾಣುತ್ತಿದೆ. ನೆನಪಿರಲಿ, ಈ ಯಶಸ್ಸಿನ ಹಿಂದೆ ಕಷ್ಟ ಇದ್ದಿರಬಹುದು, ಕಣ್ಣೀರು ಹರಿದಿರಬಹುದು, ಕಿರುಕುಳದಿಂದ ಬೇಸತ್ತು ಕೆಲಕ್ಷಣ ಹಿಂದೆ ಸರಿದಿರಬಹುದು, ಯಾರಿಗಾಗಿ ಇದೆಲ್ಲ ಮಾಡಲಿ ಎಂದು ಮರುಗಿದವರೂ ಇದ್ದಾರು. ಈ ಚಿತ್ರಣವನ್ನು ಬಹಿರಂಗಪಡಿಸಲು ಅನೇಕರು ಇಷ್ಟಪಡುವುದಿಲ್ಲ. ಅದನ್ನು ಹೆಕ್ಕಿ ತೆಗೆದಿದ್ದರೆ, ಮುಸ್ಸಂಜೆಯ ಹೊಂಗಿರಣವೇ ಒಂದು ಕಾದಂಬರಿ ಆಗುತ್ತಿತ್ತು. ಅನೇಕ ಘಟನೆಗಳನ್ನು ವಿವರಿಸುವಾಗ ಸಂಕ್ಷಿಪ್ತವಾಗಿರುತ್ತದೆ ನಿಜ. ಆದರೆ, ಕಷ್ಟ ಕಾರ್ಪಣ್ಯದ ವಿವರ, ಆಯಾ ಸನ್ನಿವೇಶಗಳೇ ಈ ಕೃತಿಯಲ್ಲಿ ಪೂರ್ವ ನಿಶ್ಚಿತ ವಿಚಾರ ಆಗಿರಬೇಕು ಎಂದು ಹೇಳಲು ಮುನ್ನುಡಿ ಬರೆದ ನನಗೆ ಅಧಿಕಾರವಿಲ್ಲ.
ಕೃತಿಯನ್ನು ಓದಿ ಮುಗಿಸಿದಾಗ, ಲೇಖಕರ ಉದ್ದೇಶ ಪಾಸಿಟಿವ್ ಸಂಗತಿಗಳನ್ನು ಹೇಳಿ, ಜನರನ್ನೂ ಪಾಸಿಟಿವ್ ಆಗಿಸುವ ಮೂಲ ಉದ್ದೇಶ ಎಂಬುದು ಸ್ಪಷ್ಟ. ಕೊರೊನಾ ಕಾಲದಲ್ಲೂ ಸವಾಲು ಎದುರಿಸಿ ಧೈರ್ಯದಿಂದ ಜೀವನ ನಡೆಸಿದ ಮತ್ತು ದುಪ್ಪಟ್ಟು ಧೈರ್ಯದಿಂದ ಜೀವನ ನಡೆಸುತ್ತಿರುವ ನನಗೆ ಈ ಕೃತಿ ಹೊಸ ಹೊಸ ಕನಸುಗಳನ್ನು ತೆರೆದುಕೊಳ್ಳುವಂತೆ ಮಾಡಿದೆ. ಓದುಗರಿಗೂ ಹೀಗೆ ಅಗಲಿ, ಮನುಷ್ಯ ಜೀವನ ಹೆಚ್ಚು ಪಾಸಿಟಿವ್ ಆಗಲಿ ಎಂಬುದೇ ಹಾರೈಕೆ. ಮುಸ್ಸಂಜೆಯ ಹೊಂಗಿರಣದ ಎರಡನೇ ಮುದ್ರಣದ ವೇಳೆಗೆ ಮತ್ತಷ್ಟು ಹೊಸ ಹೊಸ ಪಾಸಿಟಿವ್ ಸಂಗತಿಗಳು ಸೇರ್ಪಡೆಗೊಳ್ಳಲಿ.
- ಶಿವಸುಬ್ರಹ್ಮಣ್ಯ ಕಲ್ಮಡ್ಕ, ಪತ್ರಕರ್ತ
0 comments:
Post a Comment