Saturday, June 5, 2021

ಬಾಳೆದಿಂಡಿಗೆ ಮೋಹಕ ಮರುಜನ್ಮ


 ಕಾಲು ಶತಮಾನದಲ್ಲಿ ಸಾವಿರ ಮಂಟಪಗಳು. ಒಂದೊಂದು ಮಂಟಪದ್ದೂ ಹೊಸ ವಿನ್ಯಾಸ. ಎಲ್ಲವೂ ಮುದದಿಂದ ತಯಾರಿ. ಇದುಬಾಳೆ ಮಂಟಪ' ಖ್ಯಾತಿಯ ಶೃಂಗೇರಿಯ ಶೃಂಗೇಶ್ವರರ ವಿಶೇಷ.

ಕಲಾವಿದರ ಕೈಚಳಕದಿಂದ ಉಪನಯನ, ವಿವಾಹಗಳಂತಹ ಶುಭ ಸಮಾರಂಭಗಳಲ್ಲಿ ಚಿತ್ತಾಕರ್ಷಕ ಮಂಟಪಗಳು ಮೂಡುತ್ತವೆ. ಮದುವೆ ಹಾಲುಗಳಲ್ಲ್ಲಿ ಸಿದ್ಧ ಮಾದರಿಯ ಮಂಟಪಗಳೇ ಹೆಚ್ಚು.  ಅದನ್ನು ದಿಢೀರಾಗಿ ಅಲಂಕರಿಸುವ ತಂಡಗಳಿವೆ. ಆದೇಶ ಕೊಟ್ಟು ಗಂಟೆಯೊಳಗೆ ರೆಡಿ. ಬಜೆಟ್ಟಿಗೆ ಅನುಗುಣವಾಗಿ ಬಣ್ಣಬಣ್ಣದ ಮನಮೋಹಕ ಚಿತ್ತಾರಗಳು ಮೋಡಿ ಮಾಡುತ್ತವೆ.

ಎಸ್.ವಿ.ಶೃಂಗೇಶ್ವರ ಕೃಷಿಕರು.  ಇವರು ಕಲ್ಲು ಬಾಳೆಯ - ಇದೊಂದು ಬಾಳೆ ತಳಿ - ದಿಂಡುಗಳನ್ನೇ ತಮ್ಮ ಬಾಳೆ ಮಂಟಪಕ್ಕೆ ಬಳಸುತ್ತಾರೆ. ಶೃಂಗೇರಿಯ ಕಡೆ ಅಡಿಕೆ ಗಿಡಗಳಿಗೆ ನೆರಳಿಗಾಗಿ ತಳಿಯನ್ನು ಬೆಳೆಸುವ ಪರಿಪಾಠ ಇದೆ. ಕಲ್ಲು ಬಾಳೆ ಎತ್ತರ ಮತ್ತು ವಿಶಾಲವಾಗಿ ಬೆಳೆಯುತ್ತದೆ. ಸಮಾರಂಭಗಳ ಭೋಜನದ ಬಾಳೆಯೆಲೆಗಾಗಿಯೇ ಇದನ್ನು ಬೆಳೆಯುವವರೂ ಇದ್ದಾರೆ.

ಹತ್ತಡಿ ಉದ್ದಗಲದ ಮಂಟಪ ತಯಾರಿಗೆ ಅರುವತ್ತು ಬಾಳೆ ದಿಂಡು ಬೇಕು. ಬಾಳೆ ಗಿಡವನ್ನು ತುಂಡರಿಸಿದ ಬಳಿಕ ದಿಂಡಿನ ಬಣ್ಣವನ್ನು ಗಮನಿಸು ತ್ತಾರೆ. ಬಣ್ಣ ವ್ಯತ್ಯಾಸವಿರುವ ದಿಂಡುಗಳನ್ನು ಬಳಸುವುದಿಲ್ಲ. ಒಂದು ದಿಂಡು ಬಿಳಿಯಾಗಿದ್ದು, ಮತ್ತೊಂದರ ಬಣ್ಣ ಸ್ವಲ್ಪ ಬೇರೆ ಯಾದರೆ, ಮಂಟಪದ ನೋಟ ಕೆಡುತ್ತದೆ.

ಬಾಳೆ ದಿಂಡು, ಅಡಿಕೆ ಮರದ ಕಂಬ ಮತ್ತು ಸಲಕೆಗಳು ಮಂಟಪದ ಮುಖ್ಯ ಕಚ್ಚಾವಸ್ತುಗಳು. ಕೆಲವರು ಮಂಟಪಕ್ಕೆ ಹಸುರು ಬಣ್ಣವನ್ನು ಬಯಸುತ್ತಾರೆ. ಇದಕ್ಕಾಗಿ ಹಲಸಿನ ಎಲೆಗಳ ಬಳಕೆ. ಕೆಲವೊಮ್ಮೆ ತೆಂಗಿನ ಗರಿಗಳನ್ನೂ ಬಳಸುವುದಿದೆ. ಅದ್ದೂರಿ ಮದುವೆಯಾದರೆ ಮಂಟಪದ ಕಂಬಗಳಿಗೆ ಸೇಬು, ಮುಸುಂಬಿ ಹಣ್ಣುಗಳನ್ನು ಪೋಣಿಸಲು ವಿನಂತಿಸುತ್ತಾರೆ.  ಎಳೆಯ ತೆಂಗಿನಕಾಯಿ,   ಬಣ್ಣ   ಬಣ್ಣದ ಹೂಗಳನ್ನೂ ಬಯಸುವ ಗ್ರಾಹಕರಿದ್ದಾರೆ.

ಶೃಂಗೇಶ್ವರ  ಹತ್ತಡಿಯಿಂದ ನಲುವತ್ತು ಅಡಿ ಉದ್ದಗಲದ ಮಂಟಪಗಳನ್ನು ಮಾಡಿದ್ದಾರೆ. ಹತ್ತಡಿಯ ಬಾಳೆ ಮಂಟಪ ತಯಾರಿಗೆ ಆರು ಜನ ಸಹಾಯಕರು. ಎಂಟರಿಂದ ಹತ್ತು ಗಂಟೆಗಳ ಅವಧಿ. ನಲುವತ್ತಡಿಯದ್ದಕ್ಕೆ ಒಂದೂವರೆ ದಿವಸ ಬೇಕು. “ಮದುವೆ ಮಾಡುವವರು ಮುನ್ನಾ ದಿನವೂ ಹಾಲನ್ನು ಕಾದಿರಿಸುವುದಿದೆ, ಬರೇ ಮಂಟಪ ತಯಾರಿಯಾಗಿ!”

ಸ್ಥಳೀಯವಾದರೆ ಹತ್ತಡಿಯದಕ್ಕೆ  ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ ಶುಲ್ಕ. ದೂರವನ್ನು ಲಕ್ಷಿಸಿ ದರದಲ್ಲಿ ಏರಿಳಿತ. ಮಂಟಪಕ್ಕೆ ಹೆಚ್ಚುವರಿ ಪೋಣಿಕೆಗಳಿದ್ದರೆ ಶುಲ್ಕದಲ್ಲ್ಲೂ ಏರಿಕೆ. ನಾಲ್ಕು ಲಕ್ಷ ರೂಪಾಯಿಯ ಶುಲ್ಕದ ಮಂಟಪವನ್ನೂ ಮಾಡಿದ್ದೇನೆ', ಜ್ಞಾಪಿಸಿಕೊಂಡರು ಶೃಂಗೇಶ್ವರ.

ಆದೇಶ ಬಂದಾಗ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ? “ಮೊದಲು ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಸ್ಥಳ ಪರೀಶೀಲನೆ ಮಾಡುತ್ತೇನೆ. ಕೆಲವರು ಸಭಾಗೃಹದ ಮಧ್ಯದಲ್ಲಿ ಮಂಟಪವನ್ನು ಬಯಸುತ್ತಾರೆ. ಅಂತಹ ಸಂದರ್ಭದಲ್ಲಿ ಅಳತೆ, ವಿನ್ಯಾಸಗಳಲ್ಲಿ ಬದಲಾವಣೆ ಬೇಕಾಗುತ್ತದೆ. ಕೆಲವು ಸಲ ಸಂಘಟಕರು ಹೊಸ ಸಲಹೆ, ಆಸೆಗಳನ್ನು ಹಂಚಿಕೊಳ್ಳುತ್ತಾರೆ. ಅದನ್ನು ಸಾಧ್ಯವಾದಷ್ಟೂ ಅಳವಡಿಸಿಕೊಳ್ಳಬೇಕು.”            

ಆರ್ಥಿಕವಾಗಿ ಹಿಂದುಳಿದವರಿಗೆ ಮಿತ ದರದಲ್ಲಿ ಅಂದರೆ ಮೂರು, ನಾಲ್ಕು ಸಾವಿರ ರೂಪಾಯಿಗಳಲ್ಲಿ ಬಣ್ಣದ ಕಾಗದಗಳ ಅಲಂಕಾರದ ಮಂಟಪವನ್ನು ತಯಾರಿಸುತ್ತಾರೆ. “ಹಿಂದೆಲ್ಲಾ ಬಣ್ಣದ ಕಾಗದಗಳೇ ಮಂಟಪದ ಕಚ್ಚಾವಸ್ತುಗಳು. ಚಪ್ಪರ ಮುಚ್ಚುವ ಬಣ್ಣದ ಕಾಗದಗಳ ಚಿತ್ತಾರಗಳು ಹೊಸ ಲೋಕವನ್ನು ಸೃಷ್ಟಿಸುತ್ತಿದ್ದುವು. ಕಾಲಘಟ್ಟದ ಮಂದಿ ಸಂತೋಷದಿಂದ ಸ್ವೀಕರಿಸಿದ್ದರು ಕೂಡಾ. ಸಭಾಗೃಹದಲ್ಲಿರುವ ಸಿದ್ಧ ಮಂಟಪದಲ್ಲಿ ಸಾಕಷ್ಟು ವಿವಾಹಗಳು ಆಗುತ್ತವೆ.”

ಆದರೆ, “ನಮ್ಮ ಮಗನ/ಮಗಳ ಮದುವೆಗೆ ಪ್ರತ್ಯೇಕ ಮಂಟಪವೇ ಬೇಕುಎಂಬ ಸಂಕಲ್ಪದವರೂ ಶೃಂಗೇಶ್ವರರ ಪಟ್ಟಿಯಲ್ಲಿದ್ದಾರೆ. ಪಾರಂಪರಿಕ ಹಿನ್ನೆಲೆ, ಥರದ ಆಸಕ್ತಿ ಇರುವವರು ಒಮ್ಮೆ ಬಾಳೆ ಮಂಟಪ ನೋಡಿದರೆ, ಮುಂದಿನ ತಮ್ಮ ಸಮಾರಂಭಗಳಲ್ಲೂ ಇಂತಹದೇ ಮಂಟಪ ಬಯಸಿ ಆರ್ಡರ್ ಮಾಡುವುದಿದೆ.

ಇಪ್ಪತ್ತು ಜಿಲ್ಲೆಗಳಲ್ಲಿ ಶೃಂಗೇಶ್ವರರ ಬಾಳೆ ಮಂಟಪಗಳು ಮೂಡಿವೆ. ಬಾಯಿಯಿಂದ ಬಾಯಿಗೆ ಪ್ರಚಾರ. ಅದರ ಸೆಳೆನೋಟದಿಂದಾಗಿಮಂಟಪ ಚೆನ್ನಾಗಿದೆ. ಯಾರು ಮಾಡಿದ್ದುಎನ್ನುವ ಕೌತುಕ ಹಲವರದು. “ನಮ್ಮ ಮದುವೆಗಿಂತ ನಿಮ್ಮ ಮಂಟಪವೇ ಮೇಲಾಯಿತಲ್ಲಾ,” ಎಂದು ಪ್ರೀತಿಯಿಂದ ಗೇಲಿ ಮಾಡಿದ್ದೂ ಇದೆ.  

ಬೆಂಗಳೂರಿನ ದೇವನಹಳ್ಳಿ ಸನಿಹದ ರೆಸಾರ್ಟ್  ಒಂದರಲ್ಲಿ ಮದುವೆ ಸಮಾರಂಭ. ಆಸ್ಟ್ರೇಲಿಯಾದ ಕುಟುಂಬವೊಂದು ಭಾಗವಹಿಸಿತ್ತು. ಮಂಟಪದ ಸೌಂದರ್ಯವು ಅವರನ್ನು ಸೆಳೆದು,’ ಆಸ್ಟ್ರೇಲಿಯಾಗೆ ಬಂದು ಮಂಟಪ ಮಾಡಿ ಕೊಡ್ತೀರಾ’ ಅಂತ ಬೇಡಿಕೆ ಮುಂದಿಟ್ಟರಂತೆ! “ದೂರದ ದೇಶವಲ್ವಾ. ನಯವಾಗಿ ಸಾಧ್ಯ ವಾಗದು ಎಂದೆಎನ್ನುತ್ತಾರೆ.

“ನನ್ನ  ಕೃತಿಗಳನ್ನು ನೋಡಿ ಮಂಟಪ ತಯಾರಿಯನ್ನು ಪ್ರವೃತ್ತಿಯನ್ನಾಗಿ ಮಾಡಿ ಕೊಂಡವರಿ ದ್ದಾರೆ. ಒಂದು ದಿವಸಕ್ಕೆ ಒಂದೇ ಪ್ರೋಗ್ರಾಂ. ಹೆಚ್ಚು ಬೇಡಿಕೆ ಬಂದರೆ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಸ್ವತಃ ನಾನೇ ಇದ್ದು ಮಾಡಬೇಕಾದ ಜಾಣ್ಮೆಯ ಕೆಲಸ.” ಎನ್ನುತ್ತಾರೆ.

ಶೃಂಗೇಶ್ವರ -  96325 50763

0 comments:

Post a Comment