ಡಾ.ಗೌಡರ ಪ್ರೇರಣೆಯ ರೀತಿ - ಹಲಸಿಗಾಗಿ ದುಡಿದವರಿಗೆ ಗೌರವ. ಡಾ.ಹಿತ್ತಲಮನಿಯವರಿಗೆ
ಈಚೆಗೆಅಂತಾರಾಷ್ತ್ರೀಯ ಹಲಸು ಸಮ್ಮೇಳನದಲ್ಲಿ ಸಂಮಾನ.
ಡಾ.ನಾರಾಯಣ ಗೌಡ
ಕಳೆದೊಂದು ದಶಕದಿಂದ ಅನಾಥ ಹಣ್ಣು ಹಲಸನ್ನು ಜನಪ್ರಿಯವನ್ನಾಗಿಸಲು ಸಾಕಷ್ಟು ಕೃಷಿಕ ಯತ್ನಗಳು ನಡೆದಿವೆ. ಈ ನಡುವೆ ಅದಕ್ಕೊಂದು ರಾಷ್ಟ್ರೀಯ ಮಾನ ತಂದು ಕೊಡುವ ಕೆಲಸವೂ ಸದ್ದಿಲ್ಲದೆ ನಡೆದಿದೆ. ಹಲಸು ಮತ್ತದರ ಮೌಲ್ಯವರ್ಧನೆಯತ್ತ ಗಂಭೀರ ಶ್ರಮವಹಿಸಿರುವ ದೇಶದ ಎರಡೇ ಎರಡು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮೊದಲಿಗ ಮತ್ತು ದೊಡ್ಡಣ್ಣ. ಎರಡನೆಯದು ಮಹಾರಾಷ್ಟ್ರದ ದಾಪೋಲಿಯ ಬೀಯೆಸ್ ಕೇಕೇವಿ ಕೃವಿವಿ.
2009. ಆಗ ಡಾ.ನಾರಾಯಣ ಗೌಡರು ಬೆಂಗಳೂರು ಕೃಷಿ ವಿವಿಯ ಹಿರಿಯ ಪ್ರಾಧ್ಯಾಪಕರಾಗಿದ್ದರು. ಕೃಷಿಕರ ಆದಾಯವರ್ಧನೆ ಮಾಡುವ ಯೋಜನೆಯೊಂದು ಅವರ ಹೆಗಲೇರಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆ ಹೋಬಳಿಯಲ್ಲಿ ಓಡಾಡುತ್ತಿದ್ದರು. ಹಸಿದಾಗ ತಿನ್ನಲು ಅಲ್ಲಿನ ರೈತರು ಹಲಸಿನ ಹಣ್ಣಿನ ಸೊಳೆ ಕೊಟ್ಟರು. ಅದರ ಸ್ವಾದಕ್ಕೆ ವಿವಿ ತಂಡವಿಡೀ ಮಾರುಹೋಯಿತು.
ಇದಕ್ಕೆ ಎಷ್ಟು ಬೆಲೆ ಸಿಗುತ್ತೆ. ವರುಷಕ್ಕೆ ಏನು ಆದಾಯ ಬರುತ್ತೆ? - ಇವರು ಪ್ರಶ್ನಿಸಿದರು. ಉತ್ತರ ಕೇಳಿದ ವಿವಿ ವಿಜ್ಞಾನಿಗಳು ದಂಗಾದರು. ಮಧ್ಯವರ್ತಿಗಳ ಕೈಯಲ್ಲಿ ಹಲಸಿನ ಮಾರುಕಟ್ಟೆ ನಲುಗಿತ್ತು. ರೈತರು ಚಿಕ್ಕಾಸು ದರದಲ್ಲೇ ತೃಪ್ತಿ ಪಡಬೇಕಿತ್ತು. ಏನಾದರೂ ಮಾಡಲೇಬೇಕು ಅನಿಸಿತು ಡಾ.ಗೌಡ ನೇತೃತ್ವದ ತಂಡಕ್ಕೆ. ಹಲಸಿಗೆ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿಯಾಗಬೇಕಾದ ಅನಿವಾರ್ಯತೆಯನ್ನು ಇವರು ಸವಾಲಾಗಿ ಸ್ವೀಕರಿಸಿದರು.
ಸಂಘಟಿತ ಮಾರುಕಟ್ಟೆ ರೂಪಿಸಿದರಷ್ಟೇ ರೈತರಿಗೆ ಒಳ್ಳೆ ಬೆಲೆ ಸಿಕ್ಕೀತು ಎನ್ನುವುದು ಇವರ ವಿಶ್ವಾಸ. ಯೋಜನೆಯ ಮೂಲೋದ್ದೇಶದಲ್ಲಿ ಇಲ್ಲದ 'ಹಲಸು ಅಭಿವೃದ್ಧಿ'ಯನ್ನು ತನ್ನ ಸಾತ್ವಿಕ ಒತ್ತಡದ ಮೂಲಕ ಸೇರಿಸುವುದರಲ್ಲಿ ಡಾ.ಗೌಡ ಸಫಲರಾದರು. ಕೆಲವೇ ತಿಂಗಳುಗಳಲ್ಲಿ ದೇಶದ ಏಕೈಕ ಹಲಸು ಬೆಳೆಗಾರರ ಸಂಘ ತೂಬುಗೆರೆಯಲ್ಲಿ ಹುಟ್ಟಿತು. ಹಾಲು ಸೊಸೈಟಿಗಳ ಮೂಲಕ ಹಲಸಿನ ಹಣ್ಣು ಸಂಗ್ರಹಿಸಿ ಹಾಪ್ಕಾಮ್ಸ್ ಮಳಿಗೆಗಳಿಗೆ ಪೂರೈಸುವ ಸರಪಳಿ ಕೊಂಡಿ ಸೃಷ್ಟಿಯಾಯಿತು. ತಗೊಳ್ಳಿ, ರೈತರಿಗೆ ಹೆಚ್ಚಿನ ಬೆಲೆ ಸಿಗಲು ಶುರುವಾಯಿತು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಯಿತು. ಹಲಸಿನ ಹಣ್ಣಿನ ತಾಜಾ ತೊಳೆ ಬಿಡಿಸಿ ನೇರವಾಗಿ ಗ್ರಾಹಕರಿಗೆ ಮಾರಲು ರೈತರನ್ನು ಪ್ರೇರೇಪಿಸಿದರು. ಇದಕ್ಕಾಗಿಯೇ ಪ್ರತ್ಯೇಕವಾಗಿ ಲಾಲ್ಬಾಗಿನಲ್ಲಿ ಹಲಸಿನ ಮೇಳಗಳ ಆಯೋಜನೆ. ಪಟ್ಟಣದಲ್ಲಿ 'ರೆಡಿ ಟು ಈಟ್' ರೂಪದಲ್ಲಿ ಸೊಳೆ ಕೊಟ್ಟಾಗ ಕೊಳ್ಳುಗರು ಮುಗಿಬೀಳುತ್ತಾರೆ. ತೂಬುಗೆರೆ ರೈತರಿಗೆ ತಮ್ಮ ಹಲಸಿಗೆ ನ್ಯಾಯಬೆಲೆ ಪಡೆಯುವ ಹೊಸದಾರಿ ಹೀಗೆ ಸೃಷ್ಟಿಯಾಯಿತು. ಎಲ್ಲಾ ಚಟುವಟಿಕೆಗಳಿಂದ ತೂಬುಗೆರೆ ಹಲಸು ಇನ್ನಷ್ಟು ಪ್ರಚಾರ ಪಡೆಯಿತು. ಖ್ಯಾತ ಕೃಷಿ ಮಾಸಿಕ 'ಅಡಿಕೆ ಪತ್ರಿಕೆ'ಯು 2009ರಲ್ಲಿ ಈ ಯಶೋಗಾಥೆಯನ್ನು ಮುಖಪುಟದಲ್ಲಿ ಬಿತ್ತರಿಸಿತು.
ನೇರ ಮಾರಾಟದ ಪರಿ ಕಂಡು ಮಧ್ಯವರ್ತಿಗಳು ಮೆತ್ತಗಾದರೂ. ತಾವೇ ಹೆಚ್ಚಿನ ದರ ಕೊಡಲು ಮುಂದಾದರು. ಆದರೆ ಇಷ್ಟರಲ್ಲಿ ತೂಬುಗೆರೆ ರೈತರಿಗೆ ಹಲಸಿನ ನೈಜ ಬೆಲೆ ಮತ್ತದನ್ನು ಪಡೆಯುವ ದಾರಿ ನಿಚ್ಚಳವಾಗಿತ್ತು.
ತೂಬುಗೆರೆ ಹಲಸಿನ ಹಣ್ಣು ತಿಂದರೆ ಇನ್ನೂ ಬೇಕೆಂಬಷ್ಟು ರುಚಿ. ಇಲ್ಲಿ ಹತ್ತಕ್ಕೆ ಎರಡು ಯಾ ಮೂರು ಮರದ ಹಣ್ಣುಗಳು ಕೆಂಪು ವರ್ಣದವು. ಕೆಂಪು ಸೊಳೆ ಗ್ರಾಹಕರನ್ನು ಥಟ್ಟೆಂದು ಸೆಳೆಯುತ್ತದೆ. ತೂಬುಗೆರೆ ರೈತರು ಮಾರಾಟಕ್ಕೆ ಹೋದಲ್ಲೆಲ್ಲಾ ಕೆಂಪು ಹಣ್ಣು ವಿಶೇಷ ಆಕರ್ಷಣೆ. ತೊಳೆ ಬಿಡಿಸಿ ಒಂದು ಹಣ್ಣಿನಿಂದ ಈ ಮಂದಿ 400-1000 ರೂಪಾಯಿ ವರೆಗೂ ಗಳಿಸುತ್ತಾರೆ. "2008ರಲ್ಲಿ ತೂಬುಗೆರೆ ಹೋಬಳಿಯಲ್ಲಿ ಹಲಸಿನಿಂದ ವರುಷಕ್ಕೆ ಮೂರು ಲಕ್ಷ ರೂಪಾಯಿ ಆದಾಯ ತರುತ್ತಿತ್ತು. ಈಗದು ಇಪ್ಪತ್ತೆಂಟು ಲಕ್ಷಕ್ಕೆ ಏರಿದೆ. ನಾವು ಖುಷಿಯಾಗಿದ್ದೇವೆ," ನೆನೆಯುತ್ತಾರೆ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ರವಿಕುಮಾರ್.
2010ರಲ್ಲಿ ನಾರಾಯಣ ಗೌಡರು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಹಲಸಿನ ಕುರಿತು ಇಟ್ಟುಕೊಂಡಿದ್ದ ಯೋಜನೆಗಳು ಗರಿಗೆದರಿದುವು. 2010ರಲ್ಲಿ ಕೃಷಿ ವಿವಿಯಲ್ಲಿ ಹಲಸು ವಿಚಾರಸಂಕಿರಣ ನಡೆಯಿತು. ಈ ವರುಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತಾರಾಷ್ಟ್ರೀಯ ಹಲಸು ಸಮ್ಮೇಳನ ನಡೆಸಿದರು. ಸಮುದಾಯ ಕಡೆಗಣಿಸಿದ ಅದ್ಭುತ ಹಣ್ಣನ್ನು ಈ ವಿವಿಯ ಕುಲಪತಿ ಹೆಮ್ಮೆಯಿಂದ ಹೆಗಲಿಗೇರಿಸಿಟ್ಟೇ ನಡೆದರು.
ಕೇಂದ್ರದ ಜೀವತಾಂತ್ರಿಕ ವಿಭಾಗದ ನಾಲ್ಕೂವರೆ ಕೋಟಿ ರೂಪಾಯಿ ಅನುದಾನದ ಹಲಸಿನ ಮೌಲ್ಯವರ್ಧನೆಯ ಯೋಜನೆಗೆ ಈಗ ಬೆಂಗಳೂರು ಕೃಷಿ ವಿವಿ ಸಾರಥಿ. ಈ ಯೋಜನೆಯಡಿ ಹಲಸಿನ ಕೆಲವು ಭರವಸೆಯ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಉಪಕುಲಪತಿಗಳು ತೆರೆಮರೆಯಲ್ಲಿದ್ದೇ ಇಂಥ ಹಲವು ಚಟುವಟಿಕೆಗಳನ್ನು ಯೋಜಿಸಿ ಸಾಕಾರಗೊಳಿಸಿದ್ದಾರೆ.
ಈಚೆಗೆ, ಜೂನ್ 24ರಂದು, ಇನ್ನೊಂದು ದೂರದೃಷ್ಟಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಂಗಳೂರು ಕೃವಿವಿ ವಿಜ್ಞಾನಿ - ಆಹಾರ ಉದ್ಯಮಿಗಳ ಮುಖಾಮುಖಿ. ಪಾಲ್ಗೊಂಡವರಿಗೆಲ್ಲಾ ಹಲಸಿನ ವಿನೂತನ ಉತ್ಪನ್ನಗಳ ರುಚಿ ತೋರಿಸಿ, 'ಈ ಉತ್ಪನ್ನಗಳ ವಾಣಿಜ್ಯ ಮಟ್ಟದ ತಯಾರಿಗೆ ಮುಂದೆ ಬನ್ನಿ' ಎನ್ನುವ ವಿನಂತಿ. ಮಾಹಿತಿ ಪಡೆದ ಉದ್ದಿಮೆದಾರರು ಹಲಸನ್ನೂ ಮುಂದೆ ಉದ್ದಿಮೆಯಲ್ಲಿ ಸೇರಿಸಿಕೊಳ್ಳುವ ಉತ್ಸಾಹ ತೋರಿಸಿದ್ದಾರೆ.
ತೂಬುಗೆರೆ ರೈತ ಸಮುದಾಯ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವನ್ನು, ಈ ಕುಲಪತಿಗಳನ್ನು ಮರೆಯುವಂತೆಯೇ ಇಲ್ಲ. ಅವರು ಹಲಸನ್ನು ಹೆಸರಾಗಿಸಿದವರು. ಆ ಮೂಲಕ ನಮ್ಮೂರಿಗೆ ಭಾಗ್ಯ ತಂದು ಕೊಟ್ರು - ಇದು ರವಿಕುಮಾರರ ಮನದಾಳದ ಮಾತು. ಈ ರೈತಸ್ನೇಹಿ ಉಪಕುಲಪತಿ ಇಂದು ತಮ್ಮ ಸ್ಥಾನದಿಂದ ವಿರಮಿಸುತ್ತಾರೆ.
ಇವರು ಅನಾಥ ಹಣ್ಣೊಂದನ್ನು ಸ್ವಯಂಪ್ರೇರಿತರಾಗಿ ಮೇಲೆತ್ತಿ ಅದಕ್ಕೆ ಮಾನ, ಬೆಳೆಗಾರರಿಗೆ ವರಮಾನ ತಂದುಕೊಟ್ಟ ಉಪಕುಲಪತಿ. ಈ ಕೊಡುಗೆಯನ್ನು ಚರಿತ್ರೆ ಮರೆಯದು. ಈ ವರೆಗಿನ ಅವರ ಹಲಸು ಪ್ರೀತಿಯ ಗಾಢತೆ ನೋಡಿದರೆ, ನಿವೃತ್ತರಾದರೂ ಅವರು ಹಲಸನ್ನು ಕೆಳಗಿಳಿಸರು!
ಕೃಷಿ ವಿಶ್ವವಿದ್ಯಾನಿಲಯವೊಂದು ದೃಢ ಸಂಕಲ್ಪ ಮಾಡಿದರೆ ರೈತ ಸಮುದಾಯದ ಬದುಕಿನಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಹುದು ನೋಡಿ. ನಾವುಗಳು ನಿರ್ಲಕ್ಷಿಸಿದ ಕಲ್ಪವೃಕ್ಷ, ಅರ್ಥಾತ್ ಹಲಸಿನ ಬೆಳೆಗಾರರೆಲ್ಲರ ಪರವಾಗಿ ಡಾ. ನಾರಾಯಣ ಗೌಡರಿಗೆ ಇದೋ ಹೃತ್ಪೂರ್ವಕ ಸಲಾಂ.