Friday, June 20, 2014

ಹಲಸು ರೂಪಿಸಿದ ಹುಲುಸು ಬದುಕು            ಕಾರ್ಕಳ ಸನಿಹದ ಸಾಣೂರು ಶಂಕರ ಪ್ರಭು ಹಲಸಿನ ಋತುವಿನಲ್ಲಿ ಮಾತಿಗೆ ಸಿಗರು! ರಾತ್ರಿ ಹತ್ತರ ನಂತರವಷ್ಟೇ ಮಾತು-ಕತೆ. ಕೈತುಂಬಾ ಅಹೋರಾತ್ರಿ ಕೆಲಸ. ಹಲಸಿನ ಕಾಯಿ, ಹಣ್ಣು, ಬೀಜಗಳು ವಿವಿಧ ರೂಪದಲ್ಲಿ ಮೌಲ್ಯವರ್ಧನೆ ಮಾಡುತ್ತಾರೆ. ಸೊಳೆ, ಹಪ್ಪಳ, ಚಿಪ್ಸ್, ಹಲ್ವದೊಂದಿಗೆ 'ಕುಮಂದ್ರ'ಕ್ಕೆ ಉತ್ತಮ ಬೇಡಿಕೆ. ಏನಿದು ಕುಮಂದ್ರ? ಕರಾವಳಿಯಲ್ಲಿ ಹೆಚ್ಚು ಮನೆಮಾತಾಗಿರುವ ಹಲಸಿನ ಮಾಂಬಳವನ್ನು ಸಾರಸ್ವತರು 'ಕುಮಂದ್ರ, ಸಾಟ್' ಎನ್ನುತ್ತಾರೆ.
             ಹಲಸಿನ ಹಣ್ಣಿನ (ತುಳುವ, ಅಂಬಲಿ) ಸೊಳೆಯನ್ನು ಮಿಕ್ಸಿಯಲ್ಲಿ ರುಬ್ಬುವುದು ಮೊದಲ ಕೆಲಸ. ತೆಳುವಾದ ಕಾಟನ್ ಬಟ್ಟೆಯನ್ನು ಚಾಪೆ ಅಥವಾ ಪೇಪರ್ ಶೀಟ್ ಮೇಲೆ ಹಾಸಿ, ಅದರ ಮೇಲೆ ರುಬ್ಬಿದ ಪಾಕವನ್ನು ಅರ್ಧ ಇಂಚು ದಪ್ಪ ಬರುವಷ್ಟು ಎರೆಯುತ್ತಾರೆ. ಇದು ಮೊದಲ ಪದರ. ನಂತರದ ದಿನಗಳಲ್ಲಿ ಎರೆದ ಐದಾರು ಪದರ ಒಣಗಿದರೆ ಕುಮಂದ್ರವಾಗುತ್ತದೆ.
             ಒಮ್ಮೆ ಹೀಗಾಯಿತು - ಹಲಸಿನ ಹಣ್ಣಿನ ಒಂದು ಲೇಯರ್ ಹಾಕಿದ್ದರು. ಅಷ್ಟರಲ್ಲಿ ಆಪ್ತರೊಬ್ಬರು ರಾಶಿರಾಶಿ ಕಾಡುಮಾವಿನ ಹಣ್ಣನ್ನು ತಂದರು. ಇದರ ರಸ ಹಿಂಡಿ ಎರಡನೇ ಪದರವಾಗಿ ಎರೆದರು. ಮೂರನೇ ಪದರಕ್ಕಾಗುವಾಗ ಸ್ನೇಹಿತರಿಂದ ಅನಾನಸು ಜಗಲಿ ಏರಿತು! ಅನಾನಸು ಮತ್ತು ಹಲಸಿನ ಹಣ್ಣನ್ನು ಜತೆಯಾಗಿ ರುಬ್ಬಿ ಮೂರನೇ ಪದರವಾಗಿ ಎರೆದರು. ನೋಡಿ, 'ತ್ರಿ ಇನ್ ವನ್' ಕುಮಂದ್ರ ರೆಡಿ! ಹಿಮ್ಮಾಹಿತಿಗಾಗಿ ರುಚಿ ನೋಡಲು ಹಲವರಿಗೆ ನೀಡಿದರು. ಹಲಸನ್ನು ಮೀರಿಸುವ ರುಚಿ! ಅನಿವಾರ್ಯವಾಗಿ ಆಗಿಹೋದ ಹೊಸ ಪಾಕವಿದು. ನಾಲ್ಕು ವರುಷವಾಯಿತು, ಶಂಕರ ಪ್ರಭುಗಳ ತ್ರಿ ಇನ್ ವನ್ ಕುಮಂದ್ರಕ್ಕೆ ಈಗ ಬಹುಬೇಡಿಕೆ.
            'ಕಾಡುಮಾವಿನಲ್ಲಿ ಹುಳಿಯ ಅಂಶ ಇರುವುದರಿಂದ ಹಲಸಿನೊಂದಿಗೆ ಹೊಂದಿಕೊಳ್ಳುತ್ತದೆ. ಉತ್ತಮ ರುಚಿಯೂ ಕೂಡಾ,' ಎನ್ನುತ್ತಾರೆ ನಂದಿನಿ ಪ್ರಭು. ಹೈಬ್ರಿಡ್ ಮಾವಿನ ಹಣ್ಣು ಕಾಡು ಮಾವಿನಷ್ಟು ರಸ ಬಿಟ್ಟುಕೊಡುವುದಿಲ್ಲ. ಏನಿಲ್ಲವೆಂದರೂ ಹತ್ತು ದಿವಸದ ಬಿಸಿಲ ಸ್ನಾನ ಬೇಕೇ ಬೇಕು. ಕಾಡುಮಾವಿನ ಹಣ್ಣಿಗೆ ಅದರದ್ದೇ ಆದ ರುಚಿ, ಸ್ವಾದವಿದೆ. ಮಾವಿನಹಣ್ಣಿನಿಂದಲೇ ತಯಾರಿಸುವ ಮಾಂಬಳ ಈಗ ಅಪರೂಪ. ಗ್ರಾಮೀಣ ಪ್ರದೇಶದಲ್ಲಿ ಅಲ್ಲೋ ಎಲ್ಲೋ ಮನೆಮಟ್ಟಕ್ಕಷ್ಟೇ ತಯಾರಿಸುತ್ತಾರೆ. 
ಸಿದ್ಧಗೊಂಡ ಕುಮಂದ್ರವನ್ನು ಕಟ್ ಮಾಡಿ ಚಾಪೆಯಂತೆ ಸುರುಳಿ ಮಾಡಿಡುತ್ತಾರೆ. ಹೀಗೆ ಕಟ್ ಮಾಡುವಾಗ ಆಚೀಚೆ ಬದಿಗಳಲ್ಲಿ ಉಳಿದುದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಸಂಗ್ರಹಿಸಿಡುತ್ತಾರೆ. ಇದು ಹಪ್ಪಳ, ಚಿಪ್ಸ್ಗಾಗಿ ಬಂದವರಿಗೆ ರುಚಿ ಹಿಡಿಸಲು. ರುಚಿ ನೋಡಿದವರು ಇದನ್ನೂ ಬಿಡರು. ಒಂದೆರಡು ಕಿಲೋ ಒಯ್ಯುತ್ತಾರೆ. ಇದು ಪ್ರಭುಗಳ ಮಾರಾಟ ಜಾಣ್ಮೆ.              
            ಒಂದು ಕಿಲೋ ತ್ರಿ-ಇನ್-ವನ್ ಕುಮಂದ್ರಕ್ಕೆ ಮುನ್ನೂರ ಐವತ್ತು ರೂಪಾಯಿ. ಹಲಸಿನದ್ದಕ್ಕೆ ಮುನ್ನೂರು ರೂಪಾಯಿ. ಸುಮಾರು ಎಂಟರಿಂದ ಒಂಭತ್ತು ತಿಂಗಳು ತಾಳಿಕೊಳ್ಳುತ್ತದೆ. ಎಪ್ರಿಲ್ನಿಂದ ಜೂನ್ ತನಕ ಹಣ್ಣು ಸಿಕ್ಕಾಗಲೆಲ್ಲಾ ಕುಮಂದ್ರ ತಯಾರಿ.  ಸರಕಾರಿ ಸ್ವಾಮ್ಯದ ಹಲಸಿನ ತೋಪನ್ನು ವಹಿಸಿಕೊಂಡಿದ್ದೇವೆ. ಸುಮಾರು ನಲವತ್ತು ಮರಗಳಿವೆ. ಸ್ನೇಹಿತರ, ಆಪ್ತರ ಬಳಿಯೂ ಹಣ್ಣನ್ನು ಪಡೆಯುತ್ತೇವೆ. ಹಣ್ಣಿನ ಲಭ್ಯತೆಯಂತೆ ಕುಮಂದ್ರ, ಹಲ್ವ ತಯಾರಿ. ಜತೆಜತೆಗೆ ಹಪ್ಪಳ. ಚಿಪ್ಸ್, ಹಣ್ಣಿನ ಸೊಳೆಯ ಗ್ರಾಹಕರಿಗೂ ಸಕಾಲಕ್ಕೆ ಪೂರೈಸಬೇಕಲ್ಲಾ..', ಎನ್ನುತ್ತಾರೆ ಪ್ರಭು.
            ಇವರ ಅಡುಗೆ ಮನೆಗೆ ರಜೆಯಿಲ್ಲ. ಸಮಯ ನಾಚುವಷ್ಟು ಕೈತುಂಬಾ ಕೆಲಸ. ಹಲಸಿನ ಋತುವಿನಲ್ಲಿ ಮಾತಿಗೆ ವಿರಾಮ. ಅನಾವಶ್ಯಕವಾಗಿ ಸಮಾರಂಭಗಳಿಗೆ ಹೋಗರು. ಚಿಪ್ಸ್, ಹಪ್ಪಳ, ಕಾಯಿಸೊಳೆ..ಗಳಿಗೆ ನಿರಂತರ ಬೇಡಿಕೆ. ಕಾರ್ಕಳದಲ್ಲಿ ಕಾಯಿಸೊಳೆಯನ್ನೇ ಸೀಮಿತವಾಗಿ ಖರೀದಿಸುವ ಗ್ರಾಹಕ ವರ್ಗವಿದೆ. ಸಾಮಾನ್ಯವಾಗಿ ಮಳೆ ಬಿದ್ದ ಮೇಲೆಯಷ್ಟೇ ಹಲಸು ಹಣ್ಣಾಗುತ್ತದೆ. ಹಾಗಾಗಿ ಬಿಸಿಲಿನಲ್ಲಿ ಒಣಗುವ ಹಪ್ಪಳ, ಕುಮಂದ್ರ ಮಾಡಲು ತ್ರಾಸ. ಅದಕ್ಕಾಗಿ ಡ್ರೈಯರನ್ನು ಹೊಂದುವ ಯೋಚನೆ ಪ್ರಭುಗಳಿಗಿದೆ. ಹಲಸಿನ ಬೀಜ ವ್ಯರ್ಥವಾಗುವುದಿಲ್ಲ. ಬೀಜವನ್ನು ಉಪ್ಪುಹಾಕಿ ಬೇಯಿಸಿ ಒಣಗಿಸುತ್ತಾರೆ. ಸಿಪ್ಪೆ ತೆಗೆದ ಬೀಜಕ್ಕೆ (ಸಾಂತಾಣಿ) ನಲವತ್ತು ರೂಪಾಯಿ. ತೆಗೆಯದ್ದಕ್ಕೆ ಮೂವತ್ತು ರೂಪಾಯಿ ಬೆಲೆ.
            ಹಲಸಿನ ಹಣ್ಣಿನಿಂದ ಮಾಡಿದ 'ಗಟ್ಟಿ'ಗೆ ಆರ್ಡರ್ ಮಾಡಿ ಒಂದು ಗಂಟೆಯಲ್ಲಿ ಸಿದ್ಧ. 'ಗಟ್ಟಿ ತಿಂದವರಿಗೆ ಚಿಪ್ಸ್, ಹಲ್ವ, ಕುಮಂದ್ರದ ಟೇಸ್ಟ್ ಹಿಡಿಸಿದರೆ ಅರ್ಧ, ಒಂದು ಕಿಲೋ ಖರೀದಿಸಿ ಒಯ್ಯುತ್ತಾರೆ. ಹಾಗಾಗಿ ಅಂದಂದು ಮಾಡಿದ ಉತ್ಪನ್ನ ಅಂದಂದೇ ಖಾಲಿ', ಶಂಕರ ಪ್ರಭು-ನಂದಿನಿ ದಂಪತಿಗಳ ಖುಷಿ. ನಾವು ಯಾವುದೇ ಕೆಲಸ ಮಾಡಲಿ, ಅದು ಹಣಕ್ಕೆ ಕನ್ವರ್ಟ್ ಆಗಲೇ ಬೇಕು - ಪ್ರಭುಗಳ ವೃತ್ತಿಕುಶಲತೆಯ ಅನುಭವ.
           ಹಲಸಿನ ಋತು ಕಳೆದ ಬಳಿಕ ಜಾತ್ರೆ, ಕೃಷಿಮೇಳಗಳಲ್ಲಿ ಪ್ರಭುಗಳ ತಂಪು ಪಾನೀಯ ಮಳಿಗೆ ಸಿದ್ಧವಾಗುತ್ತದೆ. ಬೆವರಿನ ಶ್ರಮದಿಂದ ಕಟ್ಟುವ ಬದುಕಿನಲ್ಲಿ ಸ್ವಾವಲಂಬಿತನವಿದೆ. ಇನ್ನೊಬ್ಬರ ಮುಂದೆ ಕೈಚಾಚದ ಸ್ವಾಭಿಮಾನವಿದೆ. ಗುಣಮಟ್ಟದ ಉತ್ಪನ್ನಗಳಿಂದ ಖಾಯಂ ಗ್ರಾಹಕವರ್ಗವನ್ನು ಸೃಷ್ಟಿಸಿಕೊಂಡ ಶಂಕರ ಪ್ರಭುಗಳನ್ನು ಮಾತನಾಡಿಸಿದರೆ ಅನುಭವದ ಹಲಸು ಎಸಳುಗಳು ರಾಚುತ್ತವೆ.
 (77604 34292)


0 comments:

Post a Comment