Wednesday, June 25, 2014

ಕೊಂಕಣದ ಚಾಕೋಲೆಟ್, ಮಲೆನಾಡಿನ ರೊಟ್ಟಿ...

                                                    ಹನ್ನೆರಡು ಸೊಳೆಗೆ ಇಪ್ಪತ್ಯೆದು ರೂಪಾಯಿ.
                                      ಕದಂಬ ಸಂಸ್ಥೆಯು ಮೇಳಕ್ಕಾಗಿಯೇ ಸಿದ್ಡಪಡಿಸಿದ ’ಜ್ಯಾಕ್ ಬಾರ್’

                                     ತೋಟಗಾರಿಕಾ ಇಲಾಖೆಯ ಆಹಾರ ವಿಭಾಗದ ಉತ್ಪನ್ನಗಳು-’ಓನ್ಲೀ ವೆಮೋ’

                                                        ಹಲಸಿನ ಬೀಜದ ’ನಿಪ್ಪಟ್ಟು’.

                ಶಿರಸಿಯ ಕದಂಬ ಮಾರ್ಕೆಟಿಂಗ್ ಆಯೋಜನೆಯಲ್ಲಿ ಹಲಸು ಮೇಳವು ೨೦೧೪ ಜೂನ್ 14, 15ರಂದು ಸಂಪನ್ನಗೊಂಡಿತು. ಆರಂಭದ ದಿನಗಳ ಏರು ಉತ್ಸಾಹವು ಮೇಳದ ಸಂಭ್ರಮದಲ್ಲಿ ಯಾಕೋ ಮಸುಕಾದಂತೆ ಕಂಡಿತು. ಸಂಘಟಕ ವಿಶ್ವೇಶ್ವರ ಭಟ್ಟರ ದೂರದೃಷ್ಟಿಯು ಹಲಸಿನ ಮೌಲ್ಯವರ್ಧನೆಯ ಯತ್ನದತ್ತ ವಾಲಿರುವುದು ಏಳೂ ಮೇಳಗಳ ಫಲಶ್ರುತಿ.
               ಬೆಂಗಳೂರು ದೊಡ್ಡಬಳ್ಳಾಪುರದ ತೂಬುಗೆರೆ ಹಲಸು ಬೆಳೆಗಾರರ ಸಂಘದ ಸದಸ್ಯರು ಮೇಳಕ್ಕಾಗಿಯೇ ಹಲಸಿನ ಹಣ್ಣನ್ನು ಮಾರಾಟಕ್ಕಾಗಿ ತಂದಿದ್ದರು. ಒಂದು ಡಜನ್ ಸೊಳೆ(ತೊಳೆ)ಗೆ ಇಪ್ಪತ್ತೈದರಿಂದ ಮೂವತ್ತು ರೂಪಾಯಿ ದರ. ಸೊಳೆಯ ಬಣ್ಣಕ್ಕೆ ಮಾರುಹೋದವರು ಡಜನ್ ಖರೀದಿಯಲ್ಲದೆ ಮನೆಗೂ ಪಾರ್ಸೆಲ್ ಒಯ್ಯುತ್ತಿದ್ದರು. ಹಲಸಿನ ಊರಿನಲ್ಲೇ ಸೊಳೆಯ ಭರ್ಜರಿ ಮಾರಾಟ! ”ಈ ಹಣ್ಣಿಗಿಂತಲೂ ಉತ್ಕೃಷ್ಟವಾದುದು ಮಲೆನಾಡಿನಲ್ಲಿದೆ. ಆದರೆ ಇದರ ಬಣ್ಣ ಮತ್ತು ಕುರುಕುರು ಗುಣ ಆಕರ್ಷಿಸಿತು,"  ಮೇಳಕ್ಕೆ ಆಗಮಿಸಿದ ಕೃಷಿಕ ಶ್ರೀಪಾದ ಹೆಗಡೆ ಸಂತಸ ಹಂಚಿಕೊಂಡರು.
                 ಬೆಂಗಳೂರಿನಲ್ಲಿ ಒಂದು ಸೊಳೆಗೆ ಮೂರರಿಂದ ಐದು ರೂಪಾಯಿ ತನಕ ದರವಿದೆ. ಪ್ಲಾಸ್ಟಿಕ್ ಪ್ಯಾಕೆಟಿನೊಳಗಿಟ್ಟ ಹಣ್ಣು ಸೆಳೆಯುತ್ತಿದೆ. ಒಂದು ಉದರ ಸೇರಿದರೆ ಇನ್ನೊಂದು ತಿನ್ನಬೇಕೆಂಬ ಆಸೆ. ಹಲಸಿನ ರುಚಿ ತಿಳಿದ ಎಲ್ಲರಿಗೂ ತಿಳಿದ ವಿಚಾರ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಅಂಬಲಿ (ತುಳುವ) ಹಲಸು ಅಧಿಕ ಸಂಖ್ಯೆಯಲ್ಲಿರುವುದರಿಂದ ಬಕ್ಕೆ ತಳಿಯ ಹಲಸಿನ ಹಣ್ಣಿಗೂ, ಕಸಿಗಿಡಕ್ಕೂ ಬೇಡಿಕೆ. ಹಾಗಾಗಿ ಮೇಳದಲ್ಲಿ ತೂಬುಗೆರೆಯ ಹಲಸಿಗೆ ಮಾನ-ಸಂಮಾನ!
                 ಹಲಸಿನ ಬೀಜದಿಂದ ತಯಾರಿಸಿದ ಸಿಹಿ ಮತ್ತು ಖಾರದ ಖಾದ್ಯಗಳ ಪ್ರದರ್ಶನ ಮೇಳದ ಹೈಲೈಟ್. ಸುಮಾರು ಎಪ್ಪತ್ತಕ್ಕೂ ಮಿಕ್ಕಿ ಐಟಂಗಳು ಬಂದಿದ್ದುವು. ಬೀಜದ ಶಂಕರಪೊಳೆ, ನಿಪ್ಪಟ್ಟು, ಪಂಚಕಜ್ಜಾಯ, ಲಾಡು, ಮಂಚೂರಿಯನ್, ಚಟ್ನಿಪುಡಿ... ಮೊದಲಾದ ರುಚಿ ವೈವಿಧ್ಯಗಳು ಅನ್ನದ ಬಟ್ಟಲಿಗೆ ಬರಬೇಕೆನ್ನುವ ಆಶಯ. "ಮಲೆನಾಡಿನಲ್ಲಿ ಹಲಸಿನ ಬೀಜದ ಬಳಕೆ ಪಲ್ಯ, ಸಾಂಬಾರಿನಲ್ಲಿದೆ. ಕೆಲವು ಆಸಕ್ತರು ಪುಡಿ ಮಾಡಿಟ್ಟುಕೊಂಡು ದೋಸೆಯೊಂದಿಗೆ ಮಿಕ್ಸ್ ಮಾಡಿ ಬಳಸುತ್ತಾರೆ. ಆದರೆ ಬೀಜದಿಂದಲೇ ವಿಧವಿಧದ ತಿಂಡಿ ಮಾಡಲು ಸಾಧ್ಯ ಎನ್ನುವುದು ಬಹುತೇಕ ಅಮ್ಮಂದಿರಿಗೆ ಮೇಳದಿಂದ ಅರಿವಾಯಿತು," ಎನ್ನುತ್ತಾರೆ ಪಾಕತಜ್ಞೆ ಮಮತಾ.
                ಮೇಳದಲ್ಲಿ ಹಪ್ಪಳ, ಚಿಪ್ಸ್ ಮಳಿಗೆಗಳಿದ್ದುವು. ಅವುಗಳ ಮಧ್ಯೆ ಅಪರೂಪದ್ದಾದ ಹಲಸಿನ ಸೊಳೆಯ ರೊಟ್ಟಿ, ಪರೋಟ, ಬೋಂಡಗಳು ಗಮನ ಸೆಳೆದುವು. ರೊಟ್ಟಿಯನ್ನು ಪ್ಲಾಸ್ಟಿಕ್ ಪ್ಯಾಕೆಟಿನೊಳಗೆ ಬಂಧಿಸಿ ತಂದಿದ್ದ ಪಡಂಬೈಲಿನ ಸುರೇಶ ಭಟ್ಟರು ರೊಟ್ಟಿಯೊಂದಿಗೆ ರೆಸಿಪಿಯನ್ನೂ ನೀಡುತ್ತಿದ್ದರು. ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ಮಳಿಗೆಯಲ್ಲಿ ಹಲಸಿನ ಹಣ್ಣಿನ ಸ್ಕ್ವಾಶ್, ಬೀಜದ ಬಿಸ್ಕತ್ತುಗಳು ಡೆಮೋ ಉದ್ದೇಶಕ್ಕಗಿ ಮಗುಮ್ಮಾಗಿ ಕುಳಿತಿದ್ದುವು. ನಮ್ಮ ಬಹುತೇಕ ಶೈಕ್ಷಣಿಕ ಮಹಾವಿದ್ಯಾಲಯಗಳ ಆಹಾರ ವಿಭಾಗವು ಹಲಸಿನ ಐಟಂಗಳನ್ನು ಸಿದ್ಧಪಡಿಸಿ ಪ್ರತಿವರುಷವೂ ಮೇಳಗಳಿಗೆ ತರುತ್ತಿವೆ. ಇವುಗಳು ಗ್ರಾಹಕರ ಕೈಗೆ ಯಾವಾಗ ತಲುಪಬಹುದೋ?
                ಕದಂಬ ಸಂಸ್ಥೆಯ ಮಳಿಗೆಯಲ್ಲಿದ್ದ ಹಣ್ಣಿನ 'ಜ್ಯಾಕ್ ಬಾರ್' ಮೇಳದ ಎರಡನೇ ದಿವಸದ ಬೆಳಿಗ್ಗೆಯೇ ಖಾಲಿಯಾಗಿತ್ತು. ಹಪ್ಪಳ, ಚಿಪ್ಸ್ ಹೊರತು ಪಡಿಸಿ ಹೊಸ ಉತ್ಪನ್ನ ತಯಾರಿಸಿದರೆ ಗ್ರಾಹಕ ಸ್ವೀಕೃತಿ ಪಡೆಯುತ್ತದೆ ಎನ್ನುವುದಕ್ಕೆ ಸಾಕ್ಷಿ. ಮಹಾರಾಷ್ಟ್ರದ ದಾಪೋಲಿಯ ಹಲಸು ಪ್ರಿಯ ಉದ್ಯಮಿ ವಿನಾಯಕ್ ಮಹಾಜನ್ ಹಲಸಿನ ಹಣ್ಣಿನ ಚಾಕೋಲೆಟ್ 'ಜ್ಯಾಕ್ ಪಾಟ್' ಸಿದ್ಧಪಡಿಸಿದ್ದರು. ಉದ್ಘಾಟನಾ ಸಮಾರಂಭದಲ್ಲದು ಬಿಡುಗಡೆಗೊಂಡಿತ್ತು.  ಚಾಕೊಲೆಟಿನದು ಹಳ್ಳಿ ಮನೆಯಲ್ಲೂ ತಯಾರಿಸಬಹುದಾದ ಸರಳ ರೆಸಿಪಿ. ಸೊಗಸಾದ ಪ್ಯಾಕಿಂಗ್. ಉತ್ತಮ ರುಚಿ.
               ಹಲಸಿನ ಖಾದ್ಯಗಳ ಮಳಿಗೆಗಳು ಕಡುಬು, ಬನ್ಸ್, ಬೋಂಡಾಗಳಿಗೆ ಸೀಮಿತವಾಗಿದ್ದುವು. ಅವಿನ್ನೂ ಮೈತುಂಬಿಕೊಳ್ಳಬೇಕಿತ್ತು. ಮೇಳ ಅಂದಾಗ ಮಾಹಿತಿ, ಭಾಷಣಗಳೊಂದಿಗೆ ಖಾದ್ಯಗಳೂ ಹಲಸು ಪ್ರಿಯರನ್ನು ಸೆಳೆಯುವಂತಿರಬೇಕು. ಉಚಿತವಾಗಿ ಕೊಡಬೇಕಾಗಿಲ್ಲ. ಶುಲ್ಕ ತೆತ್ತು ಒಯ್ಯುವವರ ಸಂಖ್ಯೆ ದೊಡ್ಡದಿದೆ. ಆದರೆ ಐಟಂಗಳು ವೈವಿಧ್ಯವಾಗಿರಬೇಕಷ್ಟೇ. ಕೇರಳದ ರಾಜಧಾನಿಯಲ್ಲಿ ಮೂರ್ನಾಾಲ್ಕು ವರುಷದ ಹಿಂದೆ ರಾಷ್ಟ್ರೀಯ ಹಲಸು ಮೇಳ ಜರುಗಿತ್ತು. ಏನಿಲ್ಲವೆಂದರೂ ಇಪ್ಪತ್ತೈದಕ್ಕೂ ಮಿಕ್ಕಿ ಮಳಿಗೆಗಳು ಸ್ಥಳದಲ್ಲೇ ಖಾದ್ಯಗಳನ್ನು ತಯಾರಿಸಿ ನೀಡುತ್ತಿದ್ದುವು. ಇಂತಹ ವ್ಯವಸ್ಥೆಗಳು ಹಲಸಿನ ಮೇಳಗಳಲ್ಲಾಗಬೇಕು.
                 ಮೊನ್ನೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಹಲಸಿನ ಹಬ್ಬ ಜರುಗಿತ್ತು. ಮೇಳಕ್ಕಾಗಿಯೇ ಹಣ್ಣಿನ ಸಿಹಿ ತಿಂಡಿ 'ಹಲ್ವ’ವನ್ನು 'ಹಲಸು ಸ್ನೇಹಿ ಕೂಟ' ತಯಾರಿಸಿತ್ತು. ತುಂಬ ಶ್ರಮ ಬೇಡುವ ಹಲ್ವವು ಗ್ರಾಹರೊಲವು ಪಡೆದಿದೆ. ಮಳೆ ಮುಗಿದ ಬಳಿಕವೂ ಹಲ್ವಕ್ಕೆ ಡಿಮಾಂಡಪ್ಪೋ.. ಡಿಮಾಂಡ್. "ಹಲ್ವವನ್ನು ಮಾರಾಟ ಮಾಡುವುದು ನಮ್ಮ ಉದ್ದೇಶವಲ್ಲ. ಇದರ ಮೂಲಕ ಹಲಸಿನ ಅರಿವು ಮೂಡಬೇಕು. ತಂತಮ್ಮ ಮನೆಗಳಲ್ಲಿ ಹಲ್ವ ತಯಾರಿಸುವಂತಾಗಬೇಕು," ಎಂದರು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ.
                 ಹಲಸಿನ ಸಮೃದ್ಧತೆಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಕದಂಬವು ಮೇಳವು ಏಳನೇಯದ್ದು.  ಕದಂಬ ಮಾರ್ಕೆಟಿಂಗ್ ಸಂಸ್ಥೆಯು "ಹಲಸಿನ ಬ್ರಾಂಡೆಡ” ಹಪ್ಪಳವನ್ನು ತಯಾರಿಸಿದೆ. ಅದಕ್ಕಾಗಿ ಮಹಿಳಾ ಗುಂಪುಗಳನ್ನು ರಚಿಸಿ, ಅವರಿಗೆ ತರಬೇತಿ ನೀಡಿ ಉತ್ಪನ್ನವನ್ನು ತಯಾರಿಸುತ್ತಿದೆ. ಪರಿಚಿತ ಉತ್ಪನ್ನವಾದರೂ ಆಕರ್ಷಕ ನೋಟ, ಪ್ಯಾಕಿಂಗ್ ಮತ್ತು ಗುಣಮಟ್ಟಗಳಿದ್ದರೆ ದರಕ್ಕಾಗಿ ಗ್ರಾಹಕರು ಕಿರಿಕಿರಿ ಮಾಡುವುದಿಲ್ಲ ಎನ್ನುವ ಅನುಭವ ಹಂಚಿಕೊಂಡರು ಕದಂಬದ ವಿಶ್ವೇಶ್ವರ ಭಟ್.
                    ೨೦೧೪ ಜೂನ್ 28, 29ರಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಲಸಿನ ಮೇಳ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆಯೋಜನೆ. ಈಗಲೇ ಡೈರಿಯಲ್ಲಿ ಗುರುತು ಹಾಕಿಟ್ಟುಕೊಳ್ಳಿ.



0 comments:

Post a Comment