Wednesday, June 4, 2014

ಹಸಿರು ಹಿತ್ತಿಲಿನ ಹಸಿರು ಮನಸ್ಸು


             ಮಂಗಳೂರಿನ ಮಂಗಳಾದೇವಿ ಸನಿಹದ ಮಂಕಿಕಟ್ಟೆ ಜೈಹಿಂದ್ ರೋಡಿನ ಬ್ಲಾನಿ ಡಿ'ಸೋಜರ ತಾರಸಿಯಲ್ಲಿ ದ್ರಾಕ್ಷಿ ಗೊಂಚಲುಗಳು ತೂಗುತ್ತವೆ! ಆಸಕ್ತಿಯಿದ್ದರೆ ಮನೆಮಟ್ಟಕ್ಕೆ ಬೇಕಾಗುವಷ್ಟು ದ್ರಾಕ್ಷಿಯನ್ನು ಕರಾವಳಿಯಲ್ಲೂ ಬೆಳೆಯಬಹುದು! ಈ ಸುದ್ದಿಯಲ್ಲೇನಿದೆ ಆಶ್ಚರ್ಯ!
            ಕರಾವಳಿಯಲ್ಲಿ ದ್ರಾಕ್ಷಿ ಕೃಷಿ ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಅಂತಹುದರಲ್ಲಿ ಬ್ಲಾನಿಯವರು ಕಳೆದ ವರುಷ ಕೇವಲ ಎರಡು ಗಿಡದಿಂದ ಸುಮಾರು 30-35 ಕಿಲೋ ದ್ರಾಕ್ಷಿ ಹಣ್ಣು ಪಡೆದಿದ್ದಾರೆ, ಸ್ನೇಹಿತರಿಗೆ ಹಂಚಿದ್ದಾರೆ. ಖುಷಿ ಪಟ್ಟಿದ್ದಾರೆ. ರುಚಿ ನೋಡಲು ವೈನ್ ಮಾಡಿದ್ದಾರೆ. ಈ ವರುಷ ಒಂದು ಗಿಡ ಉಳಿದುಕೊಂಡಿದೆ.
           ಬ್ಲಾನಿ ಸೋಜರು ಎರಡು ವರುಷದ ಹಿಂದೆ ನರ್ಸರಿಯೊಂದಕ್ಕೆ ಭೇಟಿ ನೀಡಿದ್ದರು. ಪ್ಲಾಸ್ಟಿಕ್ ತೊಟ್ಟೆಯಲ್ಲಿ ಬೆಳೆದ ಮೂರು ಗಿಡಗಳಿದ್ದುವು. ನರ್ಸರಿಗೂ ಅಚಾನಕ್ ಆಗಿ ಬಂದ ಅತಿಥಿಗಳಿವು.  ಮೂರರಲ್ಲಿ ಒಂದು ಕೈಕೊಟ್ಟಿತು. ಎರಡು ಬೆಳೆಯಿತು. ಮನೆಯ ಪಕ್ಕವೇ ನೀರು, ಗೊಬ್ಬರ ನೀಡಿ ಆರೈಕೆ ಮಾಡಿದರು. ಎತ್ತರಕ್ಕೆ ಏರಿದ ಗಿಡಕ್ಕೆ ತಾರಸಿಯಲ್ಲಿ ಚಪ್ಪರ ಮನೆ ರೂಪಿಸಿ ಬೆಳೆಯಲು ಅವಕಾಶ ಮಾಡಿ ಕೊಟ್ಟರು. ಸೊಂಪಾಗಿ ಬೆಳೆಯಿತು.
           ಬಳ್ಳಿಯಲ್ಲಿ ಒಂದೆಡೆ ಹೂ ಬಿಟ್ಟಿತೆನ್ನಿ. ನಂತರ ಚಿಗುರುವ ಚಿಗುರನ್ನು ಚಿವುಟುತ್ತಾರೆ. ಅದು ಮತ್ತೆ ಕವಲಾಗಿ ಚಿಗುರೊಡೆದು ಹೂಬಿಟ್ಟು ಕಾಯಿ ಕಚ್ಚುತ್ತದೆ. ಈ ಪ್ರಯೋಗದಿಂದಾಗಿ ಗೊಂಚಲು ಗೊಂಚಲು ಕಾಯಿ ಬಿಡಲು ಸಹಕಾರಿ. ಎಪ್ರಿಲ್ ತಿಂಗಳಿನಿಂದ ಜೂನ್ ತನಕ ಚಿವುಟುವ ಸರ್ಜರಿ ಕೆಲಸ. ಜೂನ್-ಆಗಸ್ಟ್ ತನಕ ಹಣ್ಣು ಲಭ್ಯ. ಕಳೆದ ವರುಷ ಮಾರುಕಟ್ಟೆಯಿಂದ ದ್ರಾಕ್ಷಿ ತಂದಿಲ್ಲ. ನನ್ನ ತಾರಸಿಯ ದ್ರಾಕ್ಷಿಯನ್ನು ಮನೆಮಂದಿ, ನೆಂಟರಿಷ್ಟರು ಸವಿದಿದ್ದಾರೆ,' ಎನ್ನಲು ಬ್ಲಾನಿಯವರಿಗೆ ಖುಷಿ.
ಯಾವುದೇ ರೋಗವಿಲ್ಲ ಎನ್ನುತ್ತಾರೆ. ಕಾಯಿಯಾಗಿದ್ದಾಗ ಹಸಿರು. ಮಾಗಿದಾಗ ಕಪ್ಪು ಮಿಶ್ರಿತ ಕೆಂಪು. ಇದನ್ನು ಕಾಬೂಲ್ ದ್ರಾಕ್ಷಿ ಎನ್ನುತ್ತಾರಂತೆ. ಮುಂದಿನ ಋತುವಿನಲ್ಲಿ ದ್ರಾಕ್ಷಿಯನ್ನು ಹೆಚ್ಚು ಅಭಿವೃದ್ಧಿ ಪಡಿಸುವಾಸೆ. ದ್ರಾಕ್ಷಿಯ ಎಳೆ ಕಾಯಿಗಳು ಹುಳಿ ರುಚಿ. ಉಪ್ಪಿನಕಾಯಿಗೆ ಹೊಂದುತ್ತದೆ ಎನ್ನುತ್ತಾರೆ ಬ್ಲಾನಿಯವರ ಅಮ್ಮ.
              ಬ್ಲಾನಿ ಕುಟುಂಬ ವರುಷಕ್ಕೆ ಕನಿಷ್ಠ ಎಂಟು ತಿಂಗಳು ತರಕಾರಿಯನ್ನು ಮಾರುಕಟ್ಟೆಯಿಂದ ಖರೀದಿಸುವುದಿಲ್ಲ. ಮನೆಯ ಸುತ್ತಮುತ್ತ ಮತ್ತು ತಾರಸಿಯಲ್ಲಿ ಸ್ವತಃ ತರಕಾರಿ ಬೆಳೆಯುತ್ತಾರೆ. ಹಾಗೆಂತ ಇವರಿಗಿರುವುದು ಕೇವಲ ಇಪ್ಪತ್ತೆಂಟು ಸೆಂಟ್ಸ್ ಜಾಗ. ಅದರಲ್ಲಿ ಎರಡು ಮನೆಗಳು. ಉಳಿದ ಜಾಗದಲ್ಲೆಲ್ಲಾ ಹಸಿರು. ಹತ್ತು ವರುಷದಿಂದ ತರಕಾರಿ ಸಹವಾಸ. ಮುಖ್ಯ ಕೃಷಿ ತೊಂಡೆಕಾಯಿ. ತೊಂಡೆಯ ಬುಡ ಕೆಳಗಿದ್ದರೆ ತಾರಸಿಯಲ್ಲಿ ತೊಂಡೆ ಚಪ್ಪರ. ಮಾರುಕಟ್ಟೆಯಲ್ಲಿ ಉತ್ತಮ ದರ ಕೂಡಾ. ತೊಂಡೆಬಳ್ಳಿಗೀಗ ಹತ್ತರ ಹರೆಯ!
             ಸೊಪ್ಪುತರಕಾರಿಯಿಂದ ತೊಡಗಿ ಕುಂಬಳಕಾಯಿ ತನಕ ವಿವಿಧ ವೈವಿಧ್ಯ ತರಕಾರಿ. ಪ್ಲಾಸ್ಟಿಕ್ ಬ್ಯಾಗಿನಲ್ಲಿ ಮಣ್ಣುತುಂಬಿ ಬೆಳೆಸುತ್ತಾರೆ. ನೀರಿನ ಮಿತ ಬಳಕೆ. ಮನೆಬಳಕೆಗಾಗಿ ಮಿಕ್ಕಿದ ತರಕಾರಿಯ ಮಾರಾಟ. ಬದಲಿಗೆ ಮನೆಯಲ್ಲಿ ಬೆಳೆಯದ, ಲಭ್ಯವಲ್ಲದ ಉತ್ಪನ್ನಗಳ ಖರೀದಿ. ಮನೆಯ ಸುತ್ತ ವಿವಿಧ ಮಾವಿನ ತಳಿಗಳು. ಮೇಣ ರಹಿತ ಹಲಸು, ಸೀತಾಫಲ, ಜಂಬುನೇರಳೆ, ಬಾಳೆ, ಪೇರಳೆಗಳು ಹಣ್ಣು ಕೊಡುವ ಹಂತಕ್ಕೆ ಬಂದಿವೆ. ನಮ್ಮ ಮನೆಯಲ್ಲಿ ಮಾವಿನ ಹಣ್ಣಿನ ಬಳಕೆ ಹೆಚ್ಚು. ಈ ವರುಷ ನಾವು ಅಂಗಡಿಯಿಂದ ಮಾವಿನ ಹಣ್ಣು ತಂದಿಲ್ಲ, ಎನ್ನುತ್ತಾರೆ.
             ಬ್ಲಾನಿಯವರಿಗೆ ಗಿಡಗಳ ಹುಚ್ಚು ಬಾಲ್ಯಾಸಕ್ತಿ. ಪತ್ನಿ ಉನ್ನತ ಹುದ್ದೆಯಲ್ಲಿದ್ದಾರೆ. ಸ್ವತಃ ತರಕಾರಿ, ಹಣ್ಣುಗಳನ್ನು ಬೆಳೆಸಬೇಕಾಗಿಲ್ಲ. ನಾವು ಬೆಳೆದ ಉತ್ಪನ್ನವನ್ನು ನಾವೇ ತಿನ್ನುವುದು ಸಂತೋಷವಲ್ವಾ. ಈ ಸಂತೋಷ ಹಣ ಕೊಟ್ಟರೂ ಸಿಗುತ್ತಾ, ಎಂಬ ಮರುಪ್ರಶ್ನೆಗೆ ಉತ್ತರವಿಲ್ಲ.  ಕಾಂಕ್ರಿಟ್ ಕಾಡಿನ ಮಧ್ಯೆ ಇವರ ಹಸಿರು ಹಿತ್ತಿಲು ಸಾಕಷ್ಟು ಮಂದಿಯನ್ನು ಸೆಳೆದಿದೆ.
               ಟೊಮೆಟೋ ಬೆಳೆದಿದ್ದರು. ಆಗಷ್ಟೇ ಮಾರುಕಟ್ಟೆಯಲ್ಲಿ ಟೊಮೆಟೋ ದರ ಕುಸಿದಿತ್ತು. ಗಿಡಗಳ ಆರೈಕೆ ಮಾಡುವುದನ್ನು ನೋಡಿದ ಅನೇಕರು ಗೇಲಿ ಮಾಡಿದ್ದರು. ಇದೆಲ್ಲಾ ಮನಸ್ಸಿಟ್ಟು ಮಾಡುವಂತಹ ಕೆಲಸ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ತಾನೆ. ಯಾರೋ ಗೇಲಿ ಮಾಡುತ್ತಾರೆಂತ ನಾವು ಕೃಷಿಯನ್ನು ಬಿಡಲು ಆಗುವುದಿಲ್ಲ. ಅವರ ಕೆಲಸ ಅವರು ಮಾಡುತ್ತಾರೆ, ನನ್ನ ಕೆಲಸ ನಾನು ಮಾಡುತ್ತೇನೆ, ಬ್ಲಾನಿಯವರ ಹಸಿರು ಹಿತ್ತಿಲು ಬೆಳೆದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಿಲ್ಲ.
               ಹೊಸ ಗಿಡಗಳು, ತಳಿಗಳು ಪತ್ತೆಯಾದರೆ ಅದರತ್ತ ಆಸಕ್ತ. ನಿತ್ಯ ಬೆಳಗ್ಗೆ ಮತ್ತು ಸಂಜೆ ಗಿಡಗಳೊಂದಿಗೆ ಮಾತನಾಡುತ್ತಾರೆ, ಯೋಗಕ್ಷೇಮ ವಿಚಾರಿಸುತ್ತಾರೆ. ಈಚೆಗೆ ಮಾಧ್ಯಮ ಬೆಳಕು ಬೀರಿದ್ದರಿಂದಾಗಿ ಕ್ಷೇತ್ರಭೇಟಿಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಣ್ಣ ಜಾಗದಲ್ಲಿ ಬೆಳೆಯುವ ತರಕಾರಿಯಿಂದ ಅಡುಗೆ ಮನೆಯನ್ನು ಹೇಗೆ ನಿರ್ವಿಷವಾಗಿ ಮಾಡಬಹುದು ಎನ್ನುವುದಕ್ಕೆ ಬ್ಲಾನಿಯವರ ಹಸಿರು ಹಿತ್ತಿಲಿನಲ್ಲಿ ಉತ್ತರವಿದೆ. ದ್ರಾಕ್ಷಿ, ತರಕಾರಿಗಳ ಅವರ ಜೀವನಾಸಕ್ತಿಯಲ್ಲಿ ಎದ್ದು ಕಾಣುವ ಸಾಹಸವೋ, ಸಾಧನೆಯೋ ಇಲ್ಲದಿದ್ದರೂ; ವಾಸ್ತವ ಬದುಕಿನ ಅನಿವಾರ್ಯತೆಯ ಸೆಳೆಯಿದೆ. (9972716340)


0 comments:

Post a Comment