ಹಲಸಿನ ಮೇಳಕ್ಕೆ ಮೊದಲ ಶ್ರೀಕಾರ ಬರೆದ ರಾಜ್ಯ ಕೇರಳ. ಹಲಸಿಗೆ ಪಂಚತಾರಾ ಟಚ್ ಕೊಟ್ಟುದೂ ಕೇರಳವೇ. ಬಿಳಿ ಕಾಲರಿನ ಮಂದಿಗೆ ಹಲಸು ಉಣಿಸಿ ಅದಕ್ಕೊಂದು ಗೌರವದ ಸ್ಥಾನ ತರಲೋಸುಗ ನಾಲ್ಕು ದಿವಸಗಳ 'ಜೇನು ಬಕ್ಕೆ ಮೇಳ' ಮೇ ತಿಂಗಳಾಂತ್ಯದಲ್ಲಿ ಎರ್ನಾಕುಲಂನಲ್ಲಿ ಜರುಗಿತು. ಪ್ರಾಯಃ ದೇಶದಲ್ಲೇ ಅಪೂರ್ವ.
ಖಾದ್ಯಗಳ ಮಳಿಗೆ ಮುಖ್ಯ ಆಕರ್ಷಣೆ. ಸುಮಾರು ಅರುವತ್ತು ವಿಧದ ಹಲಸಿನ ಖಾದ್ಯಗಳು ಅನ್ನದ ಬಟ್ಟಲು ಸೇರಿದೆ. ಭೋಜನಕ್ಕೆ (ಚಕ್ಕ ಸದ್ಯ) ಎಪ್ಪತ್ತೈದು ರೂಪಾಯಿ ಶುಲ್ಕ. ಮೀನು, ಮಾಂಸದೊಂದಿಗೆ ಹೊಂದಿಕೊಳ್ಳುವ ಖಾದ್ಯಗಳಿಗೆ ಬೇಡಿಕೆ. ಸ್ಥಳದಲ್ಲೇ ಬಿಸಿ ಬಿಸಿಯಾಗಿ ತಯಾರಿಸಿದವುಗಳಿಗೆ ಜನರೊಲವು. ಮೊದಲ ದಿನದ ವ್ಯವಹಾರ ಆರು ಲಕ್ಷ ರೂಪಾಯಿ!
ಹತ್ತು ಜಿಲ್ಲೆಗಳ 'ಕುಟುಂಬಶ್ರೀ' ಸದಸ್ಯರ ಅವಿರತ ಬೆವರ ಶ್ರಮ ಮೇಳದ ಹಿಂದಿದೆ. ಗ್ರಾಮೀಣ ಮಹಿಳೆಯರ ಅದಾಯವರ್ಧನೆ ಹಿಂದಿನ ಆಶಯ. "ಕೇರಳದಿಂದ ಚಿಲ್ಲರೆ ದರಕ್ಕೆ ಹಲಸನ್ನು ಕೊಂಡು ಬೇರೆ ರಾಜ್ಯಗಳಿಗೆ ಒಯ್ಯುತ್ತಾರೆ. ಅದರ ಬದಲು ಇಲ್ಲೇ ಆಹಾರವಾಗಿ ಪರಿವರ್ತನೆ ಮಾಡಿದರೆ ಅದಾಯವೂ ಸಿಕ್ಕಂತಾಗುತ್ತದೆ. ಜತೆಗೆ ಆಹಾರ ಸುರಕ್ಷೆಯೂ ಕೂಡಾ. ನಗರವಾಸಿಗಳಿಗೆ 'ರೆಡಿ ಟು ಈಟ್' ರೂಪದಲ್ಲಿ ನೀಡಿ ಹಲಸಿನ ರುಚಿಯನ್ನು ಪುನಃ ಹಿಡಿಸಬಹುದು ಎನ್ನುವ ಅನುಭವ ಈ ಮೇಳದಿಂದಾಯಿತು" ಎನ್ನುತ್ತಾರೆ ಕುಟುಂಬಶ್ರೀ ವರಿಷ್ಠರು.
ಮೇಳಕ್ಕೆ ಬಂದವರಲ್ಲಿ ಪ್ರತಿಷ್ಠಿತರೇ ಅಧಿಕ. ಸೂಪಜ್ಞರಿಗೆ ಬೆವರೊರೆಸಿ ಕೊಳ್ಳಲಾಗದಷ್ಟು ಒತ್ತಡ. ಒಂದು ಐಟಂ ರೆಡಿಯಾದರೆ ಕ್ಷಣಾರ್ಧದಲ್ಲೇ ಖಾಲಿ. ಮತ್ತು ಪುನಃ ಬೇಡಿಕೆ. ಎಲ್ಲಾ ಐಟಂಗಳು ಎರ್ನಾಕುಲಂ ಹಲಸು ಪ್ರಿಯರ ಮನ ಗೆದ್ದಿದೆ. ಈ ವರುಷದ ಯಶದ ಹಿನ್ನೆಲೆಯಲ್ಲಿ ಮುಂದಿನ ವರುಷ ಮೇಳಕ್ಕೆ ವ್ಯಾಪಕತೆ ತರಲು ಯೋಚಿಸುತ್ತಿದ್ದಾರೆ, ಕುಟುಂಬಶ್ರೀಯ ನಿದರ್ೇಶಕಿ ವಲ್ಸಲಾ ಕುಮಾರಿ.
ಮಹಾರಾಷ್ಟ್ರದ ದಾಪೋಲಿಯ ಬಾಳಾಸಾಹೇಬ್ ಕೊಂಕಣ್ ಕೃಷಿ ವಿದ್ಯಾಪೀಠದಲ್ಲೂ ಮೇ ಮೊದಲ ವಾರದಲ್ಲಿ ಚಾರಿತ್ರಿಕ ಮೊದಲ ಹಲಸು ಸಮ್ಮೇಳನ. ದೇಶಮಟ್ಟದಲ್ಲಿ ಹಲಸಿನ ಪಲ್ಪಿಂಗ್, ಎಳೆಗುಜ್ಜೆ ಕ್ಯಾನಿಂಗ್, ಪೆಕ್ಟಿನ್, ಅಡುಗೆಗೆ ಸಿದ್ಧ ಉತ್ಪನ್ನಗಳ ತಯಾರಿಯಲ್ಲಿ ಇವರದು ದೊಡ್ಡ ಹೆಜ್ಜೆ. ಮೇಳಕ್ಕಾಗಿಯೇ ವಿದ್ಯಾಪೀಠವು ಹಲಸಿನ ಬೀಜ ಹುಡಿ, ಒಣ ಹಣ್ಣು, ಹಣ್ಣಿನ ಬಾಸುಂದಿ, ಪುಡ್ಡಿಂಗ್, ರಸಗುಲ್ಲಾಗಳನ್ನು ಸಿದ್ಧಮಾಡಿದ್ದರು. ಹಲಸಿನ ಮೌಲ್ಯವರ್ಧನೆಯು ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿದ್ದರೂ ಪರಸ್ಪರ ಸಂವಹನ ಕೊರತೆಯಿದೆ. ಮೇಳವು ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ನೀಗಿಸಿದೆ. ಮೂರು ರಾಜ್ಯಗಳಿಂದ ಮೇಳಕ್ಕೆ ಪ್ರತಿನಿಧಿಗಳು ಆಗಮಿಸಿದ್ದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ನಾಲ್ಕು ವರುಷದ ಹಿಂದೆ ಹಲಸಿನ ಅಕಾಡೆಮಿಕ್ ರೂಪದಲ್ಲಿ ಸಮ್ಮೇಳನ ನಡೆಸಿತ್ತು. ಈಗ ಮತ್ತೆ ಎರಡನೇ ಯತ್ನ. ಕೇರಳ, ಆಂಧ್ರ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು. ಗಿಡ ನೆಡುವ ಆಸಕ್ತಿ ಬಹುತೇಕರಲ್ಲಿದ್ದರೂ, ಯಾವ ಗಿಡ ನೆಡಬೇಕೆನ್ನುವ ಮಾಹಿತಿಗಾಗಿ ಚಡಪಡಿಕೆಯಿತ್ತು. ಈ ಸಮ್ಮೇಳನಕ್ಕೆ 'ಅಂತಾರಾಷ್ಟ್ರೀಯ' ಟಚ್ ಇದ್ದುದರಿಂದ ಪ್ರಚಾರ ಜೋರಾಗಿತ್ತು. ಪ್ರದರ್ಶನಗಳು ಆವಶ್ಯಕತೆಯನ್ನು ಪೂರೈಸುವಲ್ಲಿ ಎಡವಿತು. ಎರಡನೇ ದಿನಕ್ಕಾಗುವಾಗ ಹಲಸಿನ ಹಣ್ಣಿನ ಪೂರೈಕೆ ಸಾಕಾಗಲಿಲ್ಲ. ಬಹುತೇಕರಿಗೆ ನಿರಾಶೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ನಾರಾಯಣ ಗೌಡರ ಸಾರಥ್ಯದಲ್ಲಿ ಹಲಸಿನ ಕೆಲಸಗಳು ನಡೆದಿದೆ. ತೂಬುಗೆರೆ ಹಲಸು ಬೆಳೆಗಾರರ ಸಂಘ ಆರಂಭವಾಗಿದೆ. ಹಲಸು ಬೆಳೆಗಾರರ ನಡುವೆ ಪರಸ್ಪರ ಕೊಂಡಿ ಏರ್ಪಟ್ಟಿದೆ. ಲಾಲ್ಬಾಗಿನಲ್ಲಿ ಹಲಸನ್ನು ಉತ್ತಮ ದರಕ್ಕೆ ಮಾರಲು ಕೃಷಿಕರಿಗೆ ಧೈರ್ಯ ಬಂದಿದೆ. ಬಿದ್ದು ಹಾಳಾಗುತ್ತಿದ್ದ, ಉಚಿತವಾಗಿ ಅದರಲ್ಲೂ ಒತ್ತಾಯಕ್ಕೆ ನೀಡಿ ಕೈತೊಳೆದುಕೊಳ್ಳುತ್ತಿದ್ದ ದಿನಗಳಿಗಿನ್ನು ಇಳಿಲೆಕ್ಕ! ಅದೀಗ ಗಳಿಕೆಯ ಉತ್ಪನ್ನವಾಗಿದೆ. ಉಪಕುಲಪತಿಗಳ ಹಿಂದೆ ಅವರ ಆಶಯವನ್ನು ಅರ್ಥಮಾಡಿಕೊಂಡ ಸಣ್ಣ ಅಧಿಕಾರಿ ಬಳಗದ ಶ್ರಮ ಗುರುತರ.
ಬೆಂಗಳೂರು ವಿವಿಯ ಹಲಸು ಸಮ್ಮೇಳನಕ್ಕೆ ವಿಯೆಟ್ನಾಮಿನ ಸದರ್ನ್ ಫ್ರುಟ್ ರೀಸರ್ಚ್ ಇನ್ಸ್ಟಿಟ್ಯೂಟಿನ ಉಪಕೇಂದ್ರವಾದ ಸೌತ್ ಈಸ್ಟ್ ಫ್ರುಟ್ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಮಾಯ್ ವಾನ್ ಟ್ರಾಯ್ ಆಗಮಿಸಿದ್ದರು. ವರುಷದ ಬಹುತೇಕ ತಿಂಗಳುಗಳಲ್ಲಿ ಹಲಸು ಲಭ್ಯವಾಗುವ ತುಮಕೂರು ಜಿಲ್ಲೆ ಸೆಳೆದಿತ್ತು. ಅದರಲ್ಲೂ ಅಕಾಲದಲ್ಲಿ ಹಣ್ಣು ಸಿಗುವ ತೋವಿನಕೆರೆ ಗ್ರಾಮಕ್ಕೆ ಭೇಟಿ. ವಿಯೆಟ್ನಾಮಿನ ಅತಿಥಿಗೆ ಪತ್ರಕರ್ತ ಪದ್ಮರಾಜು ಹಲಸಿನ ಖಾದ್ಯಗಳ ವ್ಯವಸ್ಥೆಯನ್ನು ದಿಢೀರಾಗಿ ಮಾಡಿದ್ದರು.
ಮಾಯ್ ತೋವಿನಕೆರೆಯನ್ನು ಸುತ್ತಿದರು. ರೈತರೊಂದಿಗೆ ಮಾತುಕತೆ ಮಾಡಿದರು. ಹಣ್ಣನ್ನು, ಖಾದ್ಯವನ್ನು ಸವಿದರು. ಇಲ್ಲಿನ ಹಲಸಿನ ವೈವಿಧ್ಯ ನೋಡಿ ಆಶ್ಚರ್ಯವಾಯಿತು. ರುಚಿಯೂ ಗಾಢವಾಗಿ ಆವರಿಸಿತು. ಈ ರುಚಿ ಬೇರೆ ಯಾವ ದೇಶದ ಹಲಸಿಗೂ ಬಾರದು. ಜಗತ್ತಿನಲ್ಲಿ ಹೆಚ್ಚು ಹಲಸು ಉತ್ಪಾದಿಸುವ ದೇಶಗಳ ಪೈಕಿ ಭಾರತವು ಎರಡನೇ ಸ್ಥಾನ. ಇಲ್ಲಿ ಪಾರಂಪರಿಕ ಖಾದ್ಯಗಳನ್ನು ಮಾಡುವುದು ವಿಶೇಷ, ಎನ್ನುವ ಮೆಚ್ಚುಗೆ. ತೋವಿನಕೆರೆಗೆ ಮಾಯ್ ಭೇಟಿ ಕೃಷಿಕರನ್ನು ಉತ್ತೇಜಿಸಿದೆ. ತಮ್ಮೂರಿನ ಹಣ್ಣಿನ ಮಹತ್ವವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದ ಮಂದಿಯ ಕಣ್ಣು ತೆರೆಸಿದೆ. ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬಹುದೆನ್ನುವ ವಿಶ್ವಾಸ ಮಹಿಳಾ ಗುಂಪುಗಳಿಗೆ ಬಂದಿದೆ ಎನ್ನುತ್ತಾರೆ ಪದ್ಮರಾಜು.
ಕೇರಳದಲ್ಲಿ ಹಲಸಿನ ಹಣ್ಣಿನಿಂದ 'ಬೆರಟಿ' (ಚಕ್ಕ ವರಟ್ಟಿ) ಎನ್ನುವ ಹೆಚ್ಚು ದಿವಸ ತಾಳಿಕೊಳ್ಳುವ, ಅಕಾಲದಲ್ಲಿ ಹಲಸಿನ ಖಾದ್ಯ ತಯಾರಿಸಬಹುದಾದ ಉತ್ಪನ್ನ ತಯಾರಿಸುತ್ತಾರೆ. ಸಿ.ವಿ.ಥಾಮಸ್ - ಇದಕ್ಕೊಂದು ಉದ್ಯಮ ರೂಪ ನೀಡಿದ್ದಾರೆ. ಬೆಂಗಳೂರಿನ ಸಮ್ಮೇಳನಕ್ಕೆ ಥಾಮಸ್ ತಮ್ಮ ಉತ್ಪನ್ನದೊಂದಿಗೆ ಆಗಮಿಸಿದ್ದರು. ಉತ್ಪನ್ನಗಳನ್ನು ಕೊಂಡು ಪ್ರೋತ್ಸಾಹಿಸಿದವರೇ ಅಧಿಕ. ಕೇರಳಕ್ಕಿಂತ ಇಲ್ಲಿ ವರಟ್ಟಿಗೆ ಮಾರಾಟಾವಕಾಶ ಜಾಸ್ತಿಯಿದೆ' ಎಂದು ನಗುತ್ತಾ ಖುಷಿ ಹಂಚಿಕೊಂಡರು.
ಕಳೆದ ವರುಷ ಕೇರಳದ ಜೇಮ್ಸ್ ಜೋಸೆಫ್ ಅವರ ಒಂಟಿ ಯತ್ನದಿಂದಾಗಿ ಹಲಸು ಪಂಚತಾರಾ ಹೋಟೆಲಿನ ಊಟದ ಮೇಜನ್ನೇರಿದುದು ಸದ್ದಾಗಲೇ ಇಲ್ಲ. ಹೋಟೆಲಿನ ಅಡುಗೆ ತಜ್ಞರಿಗೆ ತನ್ನ ಹಲಸಿನ ತಜ್ಞತೆಯನ್ನು ಮಿಳಿತಗೊಳಿಸುವ ಪ್ರಯೋಗ ಯಶಸ್ಸಾಗಿದೆ. ಇವರ ರೆಡಿ ಟು ಕುಕ್ ಉತ್ಪನ್ನಗಳಿಗೆ ಹೋಟೆಲಿನ ಚೆಫ್ಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಿಜಿಎಚ್ ಅರ್ತ್ ಹೋಟೆಲ್ ಗ್ರೂಪಿನ ಕಾರ್ಪೋರೆಟ್ ಚೆಫ್ ಜೋಸ್ ವರ್ಕ್ ಹೇಳುತ್ತಾರೆ, "ಅಕ್ಟೋಬರದಿಂದ ಮಾರ್ಚ್ ವರೆಗೆ ನಮ್ಮಲ್ಲಿಗೆ ಬರುವ ವಿದೇಶಿ ಪ್ರವಾಸಿಗಳು ಬರುವ ಸೀಸನ್ನಿನಲ್ಲಿ ಹಲಸಿನ ರೆಸಿಪಿ ಖಾಯಮ್ಮಾಗಿ ಮಾಡುವ ನಿರ್ಧಾರ ಮಾಡಿದ್ದೇವೆ,"
2013ರ ಜುಲೈ ತಿಂಗಳಲ್ಲಿ ಮೀಯಪದವಿನ ಡಾ.ಡಿ.ಸಿ.ಚೌಟರ ನಿರ್ದೇಶನದಲ್ಲಿ ಮಂಗಳೂರಿನ ಸರೋಶ್ ಇನ್ಸ್ಟಿಟ್ಯೂಟ್ ಆಪ್ ಹೋಟೆಲ್ ಅಡ್ಮಿನಿಸ್ಟ್ರೇಶನ್ನಲ್ಲಿ ಒಂದು ದಿವಸ ಹಲಸಿನ ಅಡುಗೆ. ಅಡುಗೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಮುಂದೆ ಡೆಮೋ. ಹಲಸಿನ ಪಿಝ್ಜಾ, ಶ್ರೀಖಂಡ್, ಮೂಸ್, ಕಾಕ್ಟೈಲ್, ಮೋಕ್ಟೈಲ್, ಫ್ಲಾಂಬೆ.. ತಯಾರಿ. ಚೆಫ್ಗಳಿಗೆ ಹಲಸಿನ ರುಚಿ ತೋರಿಸುವ ಪ್ರಕ್ರಿಯೆ ದೇಶಕ್ಕೇ ಪ್ರಥಮ.
ದೂರದ ಮಾತೇಕೆ? ಕರಾವಳಿಯ ಬಂಟ್ವಾಳ (ದ.ಕ.) ತಾಲೂಕಿನ ಅಳಿಕೆ ಸುತ್ತಮುತ್ತ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉತ್ಕೃಷ್ಟವಾದ ಐವತ್ತಕ್ಕೂ ಮಿಕ್ಕಿ ಹಲಸಿನ ತಳಿಗಳು ಅಭಿವೃದ್ಧಿಯಾಗುತ್ತಿವೆ. ರೈತರೇ ರುಚಿ ನೋಡಿ ಆಯ್ಕೆ ಮಾಡಿದಂತಹುದು. ಹಿಂದಿನ ವರುಷ ಮೂವತ್ತು ಟನ್ ಹಲಸು ಮುಂಬಯಿಯ ಐಸ್ಕ್ರೀಮ್ ಘಟಕಕ್ಕೆ ಮಾರಾಟವಾಗಿದೆ. ಅಡ್ಯನಡ್ಕದಲ್ಲಿ ಹಲಸು ಬೆಳೆಗಾರರ ಸಂಘ ರೂಪುಗೊಂಡಿದೆ. 'ಹಲಸು ಸ್ನೇಹಿ ಕೂಟ' ಸಕ್ರಿಯವಾಗಿದೆ.
ಒಟ್ಟಿನಲ್ಲಿ ದೇಶ-ವಿದೇಶಗಳಲ್ಲಿ ಹಲಸು (ಫನಸ್) ಡೈನಿಂಗ್ ಟೇಬಲ್ ಏರಿ ಕುಳಿತಿದೆ. ಒಂದೆಡೆ ಹಲಸನ್ನು ಅಪ್ಪಟವಾಗಿ ಪ್ರೀತಿಸುವ ಮಂದಿ. ಮತ್ತೊಂದೆಡೆ ಹೆಸರೆತ್ತಿದರೆ ಸಾಕು ಮೈಮೇಲೆ ಆವೇಶವಾದಂತೆ ದೂರ ಸರಿಯುವವರು. ಈ ಎರಡು ವರ್ಗದವರಿಗೂ ಹಲಸಿನ ಮೇಣ ಅಂಟಿದೆ! ಸೊಳೆಯನ್ನು ಬೇರ್ಪಡಿಸಿ, ಪ್ಯಾಕೆಟ್ ಮಾಡಿ ನೀಡಿದರೆ ಬೆಲೆ ತೆತ್ತು ಖರೀದಿಸುವ ಮಂದಿ ಹಳ್ಳಿಯಲ್ಲೂ ಇದ್ದಾರೆ. ರೆಡಿ ಟು ಕುಕ್ ರೂಪದಲ್ಲಿ ಅಂದಂದೇ ಒದಗಿಸಲು ಸಾಧ್ಯವಾದರೆ ಮಿತ ಪ್ರಮಾಣದಲ್ಲಿ ಪೇಟೆ ಯಾಕೆ, ಗ್ರಾಮೀಣ ಪ್ರದೇಶದಲ್ಲೂ ಮಾರಿ ಹೋಗುತ್ತದೆ.
ಹಲಸಿನ ಮೇಳಗಳ ಮಾಲೆ ಮತ್ತೆ ಆರಂಭವಾಗಿದೆ. ಮೊನ್ನೆ ಜೂನ್ 14-15ರಂದು ಶಿರಸಿಯ ಕದಂಬ ಸಂಸ್ಥೆಯು ಮೇಳವನ್ನು ಆಯೋಜಿಸಿತ್ತು. ಜೂನ್ 22ರಂದು ಪುಣಚ(ದ.ಕ.)ದಲ್ಲಿ ಹಲಸಿನ ಹಬ್ಬ. ಗೃಹ ಉದ್ದಿಮೆಯ ಕಷ್ಟ-ಸುಖಗಳ ಮಾತುಕತೆ. ಇದೇ ತಿಂಗಳ 28-29ರಂದು ಕಾರ್ಕಳದಲ್ಲಿ ಮೇಳ. ಬರುತ್ತೀರಲ್ಲಾ.
(ಉದಯವಾಣಿ/19-6-2014/ನೆಲದ ನಾಡಿ ಅಂಕಣದಲ್ಲಿ ಪ್ರಕಟ)
0 comments:
Post a Comment