Thursday, June 5, 2014

ಚೀನಿಕಾಯಲ್ಲಿ ಕಲಾವಿದನ ಮೋಡಿ







                   ಕೇರಳದ ಎರ್ನಾಕುಲಂನಲ್ಲೊಂದು ಶುಭ ಸಮಾರಂಭ. ಅದ್ದೂರಿ ವ್ಯವಸ್ಥೆ. ಸಾಲಂಕೃತ ವೇದಿಕೆ. ಕರ್ಣಾನಂದದ ವಾದ್ಯ ಗೋಷ್ಠಿ. ನಾಲಗೆಗೆ ಮೋಸ ಮಾಡದ ಖಾದ್ಯಗಳು.
                      ಸಭಾಭವನದ ಪ್ರವೇಶ ದ್ವಾರದಲ್ಲಿ ಹಣ್ಣು, ತರಕಾರಿಗಳ ಪ್ರದರ್ಶನವಿತ್ತು. ಇದರಲ್ಲೇನು ವಿಶೇಷ? ಪ್ರಶ್ನೆ ರಾಚಿದರೆ ಆಶ್ಚರ್ಯವಿಲ್ಲ. ಚೀನಿಕಾಯಿ (ಸಿಹಿಗುಂಬಳ) ಎಲ್ಲರಿಗೂ ಗೊತ್ತಿರುವ ತರಕಾರಿ. ನೋಡಿ, ಅದನ್ನು ಕಲಾತ್ಮಕವಾಗಿ ಚಿತ್ರಿಸಿದ ಕಲಾವಿದನ ಮೋಡಿ.
                    ಶಿವ, ಮತ್ಸ್ಯ, ಪಕ್ಷಿ, ಗಿಳಿಗಳನ್ನು ಚೀನಿಕಾಯಿಯಲ್ಲಿ ಕೊರೆದಿದ್ದಾರೆ. ಸೌತೆಕಾಯಿ ನವಿಲಾಗಿದೆ. ಪಪ್ಪಾಯಿ, ಕಲ್ಲಂಗಡಿ ಹಣ್ಣುಗಳು ವಿವಿಧ ಆಕಾರ ತಾಳಿವೆ. ಇತರ ಹಣ್ಣುಗಳನ್ನು ಕಲಾತ್ಮಕವಾಗಿ ಜೋಡಿಸಿದ್ದಾರೆ. ಎರ್ನಾಕುಲಂನ ಅನುಪ್ ಕೊಳಂಚೇರಿ ಕಲಾವಿದರ ಕೈಚಳಕ. ಬಹುತೇಕ ಸಮಾರಂಭಗಳ ಅಲಂಕಾರಗಳಲ್ಲಿ ಅನೂಪ್ ಅವರ ಮಾದರಿಗಳೂ ಎರ್ನಾಕುಲಂನಲ್ಲಿ ಖ್ಯಾತಿ.
                 ಕಣ್ಮನ ಸೆಳೆಯುವ ಪ್ರದರ್ಶನವನ್ನು ನೋಡುವ ಎಷ್ಟು ಹಸಿರು ಮನಸ್ಸಿಗಳಿದ್ದುವು? ಮಕ್ಕಳನ್ನು ಸೆಳೆದರೆ ಸಾಲದು. ಮಕ್ಕಳೊಂದಿಗೆ ಹಿರಿಯರೂ ಪ್ರದರ್ಶನ ನೋಡಿದಾಗ ಮಕ್ಕಳಿಗದು ಪಠ್ಯದ ಅನುಭವ ಕೊಡುತ್ತದೆ. ನಾನು ನೋಡಿದಂತೆ ಅಂದಿನ ಅನೂಪ್ ಮಾದರಿಗಳನ್ನು ನೋಡುವ ಕಣ್ಣುಗಳಿದ್ದುದು ವಿರಳ. ನೋಡಿಯೂ ನೋಡದಂತಿರುವ, ಮಕ್ಕಳು ಹಠ ಹಿಡಿದಾಗ ಗದರಿಸಿ ಎತ್ತೊಯ್ಯುವ ಹೆತ್ತವರನ್ನು ನೋಡಿ ಕಣ್ದಣಿಯಿತು!
                 ನೋಡಿ ಆಗಬೇಕಾದುದೇನು ಅಲ್ವಾ?! ಕಾಂಚಾಣವು ಬದುಕನ್ನು ನಿಯಂತ್ರಿಸುತ್ತಿರುವಾಗ ಬುದ್ಧಿಗೆ ಗ್ರಾಹ್ಯವಾದ ವಿಚಾರಗಳು ಮಸುಕಾಗುತ್ತವೆ. ಜನರು ನೋಡುತ್ತಾರೆ, ಮರೆಯುತ್ತಾರೆ. ಕಲೆಯನ್ನು ನೋಡುವ, ಗುರುತಿಸುವ ದೃಷ್ಟಿಕೋನ ಕಡಿಮೆಯಾಗುತ್ತಿದೆ, ಎಂಬ ವಿಷಾದ ಅನೂಪರದು. ಇಂತಹುದಕ್ಕೆಲ್ಲಾ ಬದುಕಿನ ಜಂಜಾಟವನ್ನು ಆರೋಪಿಸಿ ಬಿಡುತ್ತೇವೆ. ನಮಗೆ ಆಸಕ್ತಿ ಇಲ್ಲದಿದ್ದರೂ ಮಕ್ಕಳಿಗಾದರೂ ಇಂತಹ ಆಸಕ್ತಿಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮಾವು, ದ್ರಾಕ್ಷಿಗಳನ್ನು ಮಕ್ಕಳು ಪುಸ್ತಕದ ಚಿತ್ರಗಳನ್ನು ನೋಡಿ ಖುಷಿ ಪಡಬೇಕಷ್ಟೇ.
                ಅದ್ದೂರಿ ಸಮಾರಂಭಗಳಲ್ಲಿ ಇಂತಹ ಪ್ರದರ್ಶನಗಳು ನಮ್ಮೂರಲ್ಲೂ ಸಹಜ. ಆದರೆ ಇದನ್ನು ನೋಡುವ ಕಣ್ಣುಗಳು, ಆಸ್ವಾದಿಸುವ ಮನಸ್ಸುಗಳು ಬೇಕಾಗಿವೆ. ಮಧ್ಯಾಹ್ನ ಒಂದು ಗಂಟೆಗೆ ಬೆವರೊರೆಸಿಕೊಳ್ಳುತ್ತಾ ಸಭಾಭವನ ಹೊಕ್ಕಿ, ಅಷ್ಟಿಷ್ಟು ಖಾದ್ಯವನ್ನು ಹೊಟ್ಟೆಗಿಳಿಸಿ, ಅತಿಥೇಯರ ಕೈ ಕುಲುಕಿದಲ್ಲಿಗೆ ಭಾವನೆ-ಸಂಬಂಧಗಳ ಓಘ ಮುಗಿದಿರುತ್ತದೆ. ಬದುಕಿನಲ್ಲಿ ರಸಗ್ರಹಣ, ರಸಾನುಭವಗಳು ಶುಷ್ಕವಾಗುತ್ತಿರುವಾಗ 'ಸಿಹಿ ಯಾವುದು, ಕಹಿ ಯಾವುದು' ಎನ್ನುವುದನ್ನು ಹುಡುಕುವ ಕಾಲಘಟ್ಟದಲ್ಲಿದ್ದೇವೆ.
                 ಬದುಕಿನ ಸುಭಗತೆಯ ಅನಾವರಣಕ್ಕೆ ಕಲಾಸ್ವಾದನೆಯೂ ಮುಖ್ಯವಾಗುತ್ತದೆ.


0 comments:

Post a Comment