ಕ್ಯಾಂಪ್ಕೋದ ಮಾಜಿ ಅಧ್ಯಕ್ಷ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಎಸ್.ಆರ್.ರಂಗಮೂರ್ತಿಯವರು ದೀಪಜ್ವಲನದ ಮೂಲಕ ಹಬ್ಬವನ್ನು ಉದ್ಘಾಟಿಸಿದರು. ಚಿತ್ರದಲ್ಲಿ (ಎಡದಿಂದ ಬಲಕ್ಕೆ) ದೇವಿಪ್ರಸಾದ್ ಕಲ್ಲಜೆ, ಡಾ.ಶ್ಯಾಮಲಮ್ಮ, ಗೇಬ್ರಿಯಲ್ ಪಿ.ಎಸ್.ವೇಗಸ್, ಮುಳಿಯ ವೆಂಕಟಕೃಷ್ಣ ಶರ್ಮ, ಮುಳಿಯ ಶ್ಯಾಮ ಭಟ್, ಮಲ್ಯ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ್ ಕೊಪ್ಪರತೊಟ್ಟು..
ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ'ಪಡ್ರೆಯವರಿಂದ 'ಹಲಸಿನ ವಿಶ್ವದರ್ಶನ' ಸ್ಲೈಡ್ ಶೋ ಪ್ರಸ್ತುತಿ.ಪಾಕತಜ್ಞೆಯರಾದ ನಳಿನಿ ಮಾಲಂಕೋಡಿ ಮತ್ತು ಶಿಲ್ಪಾ ಕಜೆ ಇವರಿಂದ ಹಲಸಿನ ಬಗೆಬಗೆಯ ಖಾದ್ಯ ತಯಾರಿ ಪ್ರಾತ್ಯಕ್ಷಿಕೆ.
ಪುತ್ತೂರು ಫಾರ್ಮರ್ ಫಸ್ಟ್ ಕಾರ್ಯದರ್ಶಿ, ಅಧ್ಯಾಪಕ, ಕಲಾವಿದ ಶಂಕರ್ ಸಾರಡ್ಕ ಇವರ ಅಧ್ಯಕ್ಷತೆಯಲ್ಲಿ 'ಹಲಸಿನ ಮೌಲ್ಯವರ್ಧನೆ-ಮಾರುಕಟ್ಟೆ ಮಾತುಕತೆ' ಕಲಾಪ. ಶ್ರೀ ಕ್ಷೇತ್ರ ಧರ್ಮಸ್ಥಳ 'ಸಿರಿ' ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್ ಅವರಿಂದ ಕಲಾಪ ನಿರ್ವಹಣೆ. ಚಿತ್ರದಲ್ಲಿ (ಎಡದಿಂದ ಬಲಕ್ಕೆ) ಶಿರಂಕಲ್ಲು ನಾರಾಯಣ ಭಟ್, ಉಮಾ ವಿಜಯಕುಮಾರ್ ಕೊಪ್ಪ, ಸಾಣೂರು ಶಂಕರ ಪ್ರಭು, ಮನೋರಮಾ ಭಟ್, ಮೌನೀಶ ಮಲ್ಯ, ಕೃಷ್ಣ ನಾಯಕ್ ಬಿ.ಸಿ.ರೋಡು, ಮಹೇಶ್ ಬಿ.ಕೌಡಂಗೆ.
ಹಲಸು ಹಬ್ಬದ ಸಮಾರೋಪ : ಲೇಖಕ, ಕೃಷಿಕ ಅಡ್ಡೂರು ಕೃಷ್ಣ ರಾವ್ ಇವರಿಂದ ಸಮಾರೋಪ ಭಾಷಣ.
ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೇಶ್ ಹೆಚ್.ಆರ್. ಆಧ್ಯಕ್ಷೀಯ ಭಾಷಣ ಮಾಡುತ್ತಿರುವುದು. (ಮೇಲಿನ ಚಿತ್ರ); ಕೆಳಗಿನ ಚಿತ್ರದಲ್ಲಿ ಉಬರು ರಾಜಗೋಪಾಲ ಭಟ್, ಡಾ.ಅಶ್ವಿನಿ ಕೃಷ್ಣಮೂರ್ತಿ, ಅಡ್ಡೂರು, ಯೋಗೇಶ್, ಸಂಜೀವ ನಾಯಕ್ - ಕಾಣಬಹುದು.
'ಜ್ಯಾಕ್ ಮಂಚೂರಿಯನ್' ಮಳಿಗೆಯಲ್ಲಿ ರಶ್! ವೆಂಕಟ್ರಮಣ ಪುಣಚ ಇವರ ಪಾಕ ವಿಶೇಷ.
'ಮಂಚೂರಿ' ಎಷ್ಟೊಂದು ರುಚಿ.. ಎಷ್ಟಾದರೂ ಹಲಸು ನಿರ್ವಿಷ ಅಲ್ವಾ.. ಹಾಗಾಗಿ ಇನ್ನೊಂದೆರಡು ಪ್ಲೇಟ್ ಇರಲಿ.. ಏನಂತೀರಿ?
ಮತ್ತೊಂದೆಡೆ ಐಟಿ ಉದ್ಯೋಗಿ, ಕೃಷಿಕ ಮಂಚಿಯ ವಸಂತ ಕಜೆಯವರ ಹಲಸಿನ ಹಣ್ಣಿನ ಐಸ್ ಕ್ರೀಮಿನ ಮಳಿಗೆ.
ಸರ್ವ್ ಮಾಡ್ತಾ ಮಾಡ್ತಾ ವಸಂತಣ್ಣ ಸುಸ್ತೋ ಸುಸ್ತು!
'ಫನಸಾರೋಹಣ'ದ ಮೂಲಕ ಹಲಸಿನ ಹಬ್ಬಕ್ಕೆ ಚಾಲನೆ. ಸ್ವರ್ಣೋದ್ಯಮಿ, ಕೃಷಿಕ ಮುಳಿಯ ಶ್ಯಾಮ ಭಟ್ಟರಿಂದ.ಉದ್ಘಾಟನೆ : ಅಧ್ಯಕ್ಷತೆಯನ್ನು ಮಂಗಳೂರಿನ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ಪಿ.ಎಸ್.ವೇಗಸ್ ವಹಿಸಿ, ಹಲಸಿನ ಕೃಷಿಯ ಒಳನೋಟವನ್ನು ತೆರೆದಿಟ್ಟರು, "ಹಲಸಿನ ಜನಪ್ರಿಯತೆಗಾಗಿ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮೊದಲನೆಯದು ಉತ್ತಮ ತಳಿಗಳ ಆಯ್ಕೆ. ಹಪ್ಪಳ, ಚಿಪ್ಸ್, ಐಸ್ಕ್ರೀಂ.. ಹೀಗೆ ವಿವಿಧ ಐಟಂಗಳಿಗೆ ಒಂದೊಂದು ತಳಿಗಳ ಅಭಿವೃದ್ಧಿ. ಎರಡನೆಯದು ಮೌಲ್ಯವರ್ಧನೆಗಾಗಿ ಉದ್ಯಮಗಳ ಆರಂಭ ಮೂರನೇಯದು ಮಾರುಕಟ್ಟೆ ಸೃಷ್ಟಿ," ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ದೀಪಜ್ವಲದ ಮೂಲಕ ಹಲಸಿನ ಹಬ್ಬವನ್ನು ಉದ್ಘಾಟಿಸುತ್ತಾ, "ಹಲಸು ನಿರ್ಲಕ್ಷಿತ ಹಣ್ಣು ಎನ್ನುವ ಹಣೆಪಟ್ಟಿ ದೂರವಾಗುತ್ತಿದೆ. ಆದರೆ ಬದಲಾಗುತ್ತಿರುವ ಜೀವನ ಪದ್ಧತಿ, ಕೃಷಿ ದೃಷ್ಟಿಕೋನಗಳಿಂದಾಗಿ ಅದನ್ನು ಉಳಿಸುವತ್ತ ಗಮನ ಹರಿಸಬೇಕಾಗಿದೆ. ಹಲಸಿಗೆ ಬೆಲೆ ಬರುವ ದಿನಗಳು ತೀರಾ ಹತ್ತಿರದಲ್ಲಿವೆ," ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಿಕೆ ಡಾ.ಶ್ಯಾಮಲಮ್ಮ ಹಬ್ಬದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. "ಹಲಸಿನ ಮೌಲ್ಯವರ್ಧನೆಯನ್ನು ಮಾಡುವ ಆಸಕ್ತಿ ಕನ್ನಾಡಿನಾದ್ಯಂತ ಕಾಣುತ್ತಿದ್ದೇನೆ. ಹಲಸಿನ ಕಸಿ ಗಿಡಗಳತ್ತ ಜನರು ಆಕರ್ಶಿತರಾಗುತ್ತಿದ್ದಾರೆ. ಹಲಸಿನ ವೈವಿಧ್ಯತೆಯು ತಳಿ ಅಭಿವೃದ್ಧಿ ಮೂಲಕ ಕಾಣುತ್ತಿದೆ. ಹಲಸಿನ ಸೀಸನ್ನಿನಲ್ಲಿ ಪಲ್ಪಿಂಗ್ ಮಾಡಿದರೆ ವರುಷಪೂರ್ತಿ ಹಲಸಿನ ಸವಿಯನ್ನು ಸವಿಯಬಹುದು. ಇಂತಹ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸದಾ ಮಾರುಕಟ್ಟೆಯಿದೆ, ಎಂದು ಕನ್ನಾಡಿನ ಹಲಸಿನ ಕೆಲಸಗಳತ್ತ ನೋಟ ಹರಿಸಿದರು.
ಸಮಾರಂಭಕ್ಕೆ ಮುನ್ನ ಪುತ್ತೂರಿನ ಸ್ವರ್ಣೋದ್ಯಮಿ, ಕೃಷಿಕ ಮುಳಿಯ ಶ್ಯಾಮ ಭಟ್ಟರು 'ಫನಸಾರೋಹಣ'ಗೆಐದು ಹಬ್ಬಕ್ಕೆ ಶುಭ ಚಾಲನೆ ನೀಡಿದ್ದರು. ಪುಣಚ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ದೇವಿಪ್ರಸಾದ್ ಕಲ್ಲಜೆ ಮುಖ್ಯಅತಿಥಿಗಳಾಗಿ ಹಬ್ಬದ ಸಂಘಟನೆಯ ಆಶಯವನ್ನು ಹೇಳಿದರು.
ವಿದ್ಯಾರ್ಥಿಗಳಾದ ಕು.ಆಶಾ ಸಿ.ಹೆಚ್. ಮತ್ತು ಶ್ರೀಗೌರಿ ಪಿ.ಜಿ. ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಕೃಷಿಕ ಕೃಷ್ಣಪ್ರಸಾದ್ ಕೊಪ್ಪರತ್ತೊಟ್ಟು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಅಶೋಕ ಅಜಕ್ಕಳ ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಿದರು. ಜಯಂತ ನಾಯಕ್ ಪೊಸವಳಿಕೆ, ನಾರಾಯಣ ಭಟ್ ಕುಪ್ಳುಚಾರು, ಶ್ರೀಧರ ಶೆಟ್ಟಿ ದೇವರಗುಂಡಿ, ಮಲ್ಯ ಶಂಕರ ಭಟ್, ಗಿರೀಶ ತೋಟದಮೂಲೆ ಅತಿಥಿಗಳಿಗೆ ಫಲ-ಪುಷ್ಪ ನೀಡಿದರು.
ಹಲಸು ವಿಶ್ವದರ್ಶನ : ಉದ್ಘಾಟನೆಯ ಬಳಿಕ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಂದ 'ಹಲಸು ವಿಶ್ವದರ್ಶನ' ಸ್ಲೈಡ್ಶೋ ಪ್ರಸ್ತುತಿ ಜರುಗಿತು. ಇಂಡೋನೇಶ್ಯಾ, ಶ್ರೀಲಂಕಾ, ಫಿಲಿಪೈನ್ಸ್, ಮೆಕ್ಸಿಕೋ ದೇಶಗಳ ಹಲಸಿನ ಮೌಲ್ಯವರ್ಧಿತ ಸ್ಥಿತಿಗಳನ್ನು ವಿವರಿಸಿದರು. ಹಲಸು ಸ್ನೇಹಿ ಕೂಟದ ಕಡಂಬಿಲ ಕೃಷ್ಣಪ್ರಸಾದ್ ಸ್ವಾಗತಿಸಿ, ವಂದಿಸಿ, ನಿರ್ವಹಿಸಿದರು. ಗಣಪತಿ ಭಟ್ ನೀರ್ಕಜೆ ಸ್ಮರಣಿಕೆ ನೀಡಿದರು.
ಹಲಸಿನ ಖಾದ್ಯ ಪ್ರಾತ್ಯಕ್ಷಿಕೆ : ಅಡುಗೆ ವಿಶೇಷಜ್ಞೆಯರಾದ ಶ್ರೀಮತಿ ನಳಿನಿ ಮಾಯಿಲಂಕೋಡಿ, ಶ್ರೀಮತಿ ಶಿಲ್ಪಾ ವಸಂತ ಕಜೆ ಇವರಿಂದ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ಜರುಗಿತು. ಹಲಸು ಪರೋಟ, ಚಾಕೊಲೇಟ್, ಹಲಸವಲಕ್ಕಿ, ಹಲಸಿನ ಬೀಜದ ನುಚ್ಚಿನುಂಡೆ, ಜಾಕಬಾಟ್, ಹಲಹಪ್ಪಳ ಚಾಟ್..ಖಾದ್ಯಗಳು ಹಲಸು ಪ್ರಿಯರ ಮನಗೆದ್ದಿತು. ಶ್ರೀಮತಿ ನಯನ ಅಶೋಕ್ ಸ್ಮರಣಿಕೆ ನೀಡಿದರು.
ಸಮಾರೋಪ ಸಮಾರಂಭ : "ಒಂದು ಕಾಲಘಟ್ಟದಲ್ಲಿ ಆಹಾರ ಭದ್ರತೆಯನ್ನು ನೀಡಿದ ಹಲಸಿನ ಮೌಲ್ಯವರ್ಧನೆಗೆ ಕಾಲ ಪಕ್ವವಾಗಿದೆ. ಹಲಸು ಹಬ್ಬಗಳಿಂದ ಜನರಲ್ಲಿ ಮತ್ತೊಮ್ಮೆ ಕಳೆದ ಕಾಲದ ಬದುಕನ್ನು ನೆನಪಿಸಲು ಸಹಕಾರಿಯಾಗಿದೆ. ಹಳ್ಳಿಯ ಉತ್ಪನ್ನ ಹಳ್ಳಿಯಲ್ಲೇ ಬಿಕರಿಯಾದಾಗ ಮಾತ್ರ ಕೃಷಿಕರಿಗೆ ಲಾಭದಾಯಕ. ಹಾಗಾಗಿ ಪೇಟೆಯ ಪ್ರಭಾವದಿಂದ ಜೀವನ ಶೈಲಿ ಬದಲಾಗುತ್ತಿರುವ ಹಳ್ಳಿಯಲ್ಲಿ ಇಂತಹ ಉತ್ಸವಗಳಿಂದ ಯುವಕರಲ್ಲಿ ಕೃಷಿ ಪ್ರೀತಿ, ಪಾರಂಪರಿಕ ಆಹಾರ ಪ್ರೀತಿಯನ್ನು ಉಳಿಸಲು ಬೆಳೆಸಲು ಸಹಕಾರಿಯಾಗುತ್ತದೆ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಹಳ್ಳಿ ಉದ್ಯಮವನ್ನು ಸದೃಡಗೊಳಿಸಲು ಸಾಧ್ಯ," ಎಂದು ಮಂಗಳೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಹೆಚ್.ಆರ್.ಹೇಳಿದರು.
ಹಲಸಿನ ಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಗೇಶ್, 'ಇದೇ ವರುಷದ ಜುಲೈ ಒಳಗೆ ಮಂಗಳೂರಿನಲ್ಲಿ ಹಲಸಿನ ಮೇಳ ಮಾಡಲು ಇಲ್ಲಿನ ಹಬ್ಬ ಪ್ರೇರಣೆ ನೀಡಿದೆ ಎಂದರು. ಮಂಗಳೂರು ಕಾರ್ಪೋರೇಶನ್ ಬ್ಯಾಂಕಿನ ಅಧಿಕಾರಿ, ಪತ್ರಕರ್ತ ಶ್ರೀ ಅಡ್ಡೂರು ಕೃಷ್ಣರಾಯರು ಸಮಾರೋಪ ಭಾಷಣ ಮಾಡುತ್ತಾ, "ಯಾವುದೇ ಉತ್ಪನ್ನಗಳನ್ನು ನೇರ ಮಾರಾಟ ಮಾಡುವುದಕ್ಕಿಂತ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡಿದಾಗ ಲಾಭ ಹೆಚ್ಚು. ಮಧ್ಯವರ್ತಿಗಳಿಲ್ಲದೆ ಸ್ವತಃ ಕೃಷಿಕರೇ ಮಾರುಕಟ್ಟೆ ಮಾಡಲು ಉತ್ಸುಕರಾಗಬೇಕು. ಕೃಷಿಕರು ಕೃಷಿಯಲ್ಲಿ ಉಳಿಯಲು ಇಂತಹ ಕೆಣಿಗಳನ್ನು ಅಳವಡಿಸಿಕೊಳ್ಳಬೇಕಾದುದು ಕಾಲದ ಅನಿವಾರ್ಯ," ಎಂದರು.
ಸಮಾರಂಭದಲ್ಲಿ ಬಂಟ್ವಾಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್, ಅಡ್ಯನಡ್ಕ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಡಾ.ಅಶ್ವಿನಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಹಲಸಿನ ಹಬ್ಬದ ಅಗತ್ಯವನ್ನು ಸೋದಾಹರಣೆಗಳ ಮೂಲಕ ಪ್ರಸ್ತುತಪಡಿಸಿದರು. ಹಲಸಿನ ಹಣ್ಣಿನ ಸೊಳೆ ತಿನ್ನುವ ಸ್ಪರ್ಧೆ, ಹೆಚ್ಚು ತೂಕದ ಹಲಸು, ತಳಿ ಆಯ್ಕೆ, ಖಾದ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ವೇದಿಕೆಯಲ್ಲಿ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್, ಮುಳಿಯ ವೆಂಕಟಕೃಷ್ಣ ಶರ್ಮ ಉಪಸ್ಥಿತರಿದ್ದರು.
ಸಮಾರೋಪಕ್ಕೆ ಮುನ್ನ 'ಹಲಸಿನ ಮೌಲ್ಯವರ್ಧನೆ-ಮಾರುಕಟ್ಟೆ : ಮಾತುಕತೆ' ಎನ್ನುವ ಪ್ರಾಕ್ಟಿಕಲ್ ವಿಚಾರದ ಕುರಿತು ವಿಚಾರಸಂಕಿರಣ ಜರುಗಿತು. ಪತ್ರಕರ್ತ, ಅಧ್ಯಾಪಕ, ಪುತ್ತೂರು ಫಾರ್ಮರ್ ಫಸ್ಟ್ ಟ್ರಸ್ಟಿನ ಕಾರ್ಯದರ್ಶಿ ಶಂಕರ ಸಾರಡ್ಕ ಅಧ್ಯಕ್ಷತೆ ವಹಿಸಿದ್ದರು. ಹಲಸನ್ನು ತಮ್ಮ ಮಿತಿಯಲ್ಲಿ ಮೌಲ್ಯವರ್ಧನೆ ಮಾಡಿ, ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಮೌನೀಶ್ ಮಲ್ಯ ಬಿ.ಸಿ.ರೋಡು, ಉಮಾ ವಿಜಯಕುಮಾರ್ ಕೊಪ್ಪ, ಶಂಕರ ಪ್ರಭು ಸಾಣೂರು, ಕೃಷ್ಣ ನಾಯಕ್ ಬಿ.ಸಿ.ರೋಡು, ಮಹೇಶ್ ಬಿ.ಕೌಡಂಗೆ.. ಇವರಿಂದ ತಮ್ಮ ಉದ್ದಿಮೆಯ ಕಷ್ಟ-ಸುಖಗಳ ಪ್ರಸ್ತುತಿ. ಶ್ರೀ ಕ್ಷೇತ್ರ ಧರ್ಮಸ್ಥಳ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಸಂವಾದ ನಡೆಸಿಕೊಟ್ಟರು. ವೇದಿಕೆಯಲ್ಲಿ ಶಿರಂಕಲ್ಲು ನಾರಾಯಣ ಭಟ್ ಉಪಸ್ಥಿತಿ.
ಕೃಷಿಕ ವರ್ಮುುಡಿ ಶಿವಪ್ರಸಾದ್, ಶಿರಂಕಲ್ಲು ನಾರಾಯಣ ಭಟ್ಟರು ಅತಿಥಿಗಳಿಗೆ ಫಲ-ಪುಷ್ಪ ನೀಡಿ ಸ್ವಾಗತಿಸಿದರೆ, ಮಲ್ಯ ಶಂಕರನಾರಾಯಣ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಮುಳಿಯ ವೆಂಕಟಕೃಷ್ಣ ಶರ್ಮರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೃಷ್ಣಪ್ರಸಾದ್ ಕೊಪ್ಪರತೊಟ್ಟು ವಂದಿಸಿದರು. ಮಲ್ಯ ಸುಮಾ ಶಂಕರ್, ನಯನ ಆಶೋಕ್ ಅಜಕ್ಕಳ, ಕಡಂಬಿಲ ಕೃಷ್ಣಪ್ರಸಾದ್, ಬೈಂಕ್ರೋಡು ವೆಂಕಟಕೃಷ್ಣ, ಬೈಂಕ್ರೋಡು ಗಿರೀಶ ವಿವಿಧ ಜವಾಬ್ದಾರಿಗಳನ್ನು ನೆರವೇರಿಸಿದರು.
ಹಬ್ಬದ ವಿಶೇಷ : ಸಾವಿರಕ್ಕೂ ಮಿಕ್ಕಿ ಆಗಮಿಸಿದ ಹಲಸು ಪ್ರಿಯರಿಗೆ ಪುಷ್ಕಳ ಹಲಸು ಭೋಜನವಿತ್ತು. ಹಲಸಿನ ವಿವಿಧ ಮಳಿಗೆಗಳಿದ್ದುವು. ವಿಟ್ಲದ ವಿಶಾಲ್ ಐಸ್ಕ್ರೀಂ ಇವರ ಹಲಸಿನ ಮತ್ತು ಬೊಂಡದ ಐಸ್ಕ್ರೀಂ, ಮಂಚಿಯ ವಸಂತ ಕಜೆಯವರು ಹಬ್ಬಕ್ಕಾಗಿಯೇ ತಯಾರಿಸಿದ ಹಲಸಿನ ಐಸ್ಕ್ರೀಂ ಮಳಿಗೆಗಳು ಹಲಸು ಪ್ರಿಯರನ್ನು ಆಕರ್ಷಸಿದುವು. ವಾರಣಾಶಿ ಸಂಶೋಧನಾ ಪ್ರತಿಷ್ಠಾನ ಮತ್ತು ನವೋದಯ ನರ್ಸರಿಯ ಜ್ಯಾಕ್ ಅನಿಲ್ ಅವರ ಹಲಸಿನ ಗಿಡಗಳ ಮಾರಾಟ ಮಳಿಗೆಗಳತ್ತ ಜನರ ಚಿತ್ತ. ಗಿಡಗಳನ್ನು ಖರೀದಿಸಿ ನೆಡುವತ್ತ ಆಸಕ್ತಿ.
ಜ್ಯಾಕ್ ಮಂಚೂರಿಯನ್ ಮಳಿಗೆಯಲ್ಲಿ ರಶ್! ಯುವಕರನ್ನು ಹೆಚ್ಚು ಸೆಳೆದ ಮಳಿಗೆ. ಹಲಸಿನ ಉಪ್ಪುಸೊಳೆ, ಕುಮಂದ್ರ, ಚಿಪ್ಸ್, ಗಟ್ಟಿ.. ಉತ್ಪನ್ನಗಳಿಗೆ ಬೇಡಿಕೆ. ಹಲಸು ಸ್ನೇಹಿ ಕೂಟವು ಹಬ್ಬಕ್ಕಾಗಿಯೇ ಹಲಸಿನ ಹಲ್ವವನ್ನು ತಯಾರಿಸಿ ಮಾರಾಟಕ್ಕಿಟ್ಟಿತ್ತು. ಸಂಜೆಯೊಳಗೆ ಎಲ್ಲಾ ಉತ್ಪನ್ನಗಳು ಖಾಲಿ ಖಾಲಿ! ವಿವಿಧ ಹಲಸಿನ ತಳಿಗಳ ಪ್ರದರ್ಶನಗಳಿದ್ದುವು. ಹಲಸಿನ ಹಬ್ಬದಲ್ಲಿ ಬಿ.ಸಿ.ರೋಡಿನ ಕಲಾವಿದ ಮೌನೀಶ್ ಮೌಲ್ಯರ ಕೈಚಳಕದಲ್ಲಿ ರೂಪುಗೊಂಡ ಹಲಸಿನ ಪ್ರತಿಕೃತಿ 'ಸ್ಮರಣಿಕೆ'ಯು ಆಕರ್ಷಣೀಯವಾಗಿತ್ತು.
ಹೆಗಲೆಣೆ : ಹಬ್ಬಕ್ಕೆ ಅಡ್ಯನಡ್ಕದ ವಾರಣಾಶಿ ಹಲಸು ಬೆಳೆಗಾರರ ಸಂಘ, ಕೇಪು-ಉಬರು ಹಲಸು ಸ್ನೇಹಿ ಕೂಟ, ಅಡಿಕೆ ಪತ್ರಿಕೆ, ಪೆರ್ಲದ ಅಕ್ಷಯ ಕೃಷಿ ಕೂಟ' - ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಮಲ್ಯ ಶಂಕರ ಭಟ್, ಕೃಷ್ಣಪ್ರಸಾದ್ ಕೊಪ್ಪರತೊಟ್ಟು ಇವರ ದೊಡ್ಡ ಟೀಮ್ ಮತ್ತು ಪುಣಚದ ಹಲಸು ಪ್ರಿಯರು ಹಲಸಿನ ಹಬ್ಬದ ಯಶಸ್ಸಿನ ಹಿಂದೆ ದುಡಿದಿದ್ದಾರೆ.
1 comments:
ದಯಮಾಡಿ ಪುಣಚ ಹಲಸು ಹಬ್ಬಕ್ಕೆ ನನಗೆ ಹೇಳಿ. ನನ್ನ ಪೋನ್ ಸಂಖ್ಯೆ 9741502050
Post a Comment