Thursday, May 28, 2015

jack fest - kumta

ಕುಮಟಾದ ಹವ್ಯಕ ಸಭಾಭವನದಲ್ಲಿ 'ಹಲಸು ಮೇಳ'. ಜೂನ್ 20, 21.

ಕಾಡುಮಾವಿನ ಮರುಕಕ್ಕೆ ಹಸಿರುಸಿರಿನ ಮಿಣುಕು



             "ಖಾಸಗಿ ಜಮೀನಿನಲ್ಲಿರುವ ಮಾವಿನ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿಲ್ಲ" - ಹೀಗೊಂದು ಆದೇಶಕ್ಕೆ ಸಹಿ ಬಿದ್ದುದೇ ತಡ, ಫಲ ನೀಡುವ ಸಹಸ್ರಾರು ಮಾವಿನ ಮರಗಳು ನೆಲಕ್ಕೊರಗಿದುವು! ನೂರಾರು ಲಾರಿಗಳಲ್ಲಿ ನಾಟಾಗಳು ನಗರಮುಖಿಯಾದುವು. ಲಕ್ಷ ಎಣಿಕೆಯ ಮುಖಗಳ ನೆರಿಗೆ ಸಡಿಲವಾದುವು. ಇದು ಕಾಣದ ಕೈಗಳ ಕರಾಮತ್ತಿನ ತಾಕತ್ತು.
              ಸ್ವಂತ ಜಮೀನಿನಲ್ಲಿ ಬೆಳೆಸಿದವರು ಮರವನ್ನು ತಮ್ಮ ಉಪಯೋಗಕ್ಕಾಗಿ ಕಡಿಯಲು ಪರವಾನಿಗೆ ಬೇಕಾಗಿಲ್ಲ ಎನ್ನುವುದಾರೆ ಸರಿ. ಆದರೆ ಖಾಸಗಿ ಜಮೀನಿಗೆ ತಾಗಿಕೊಂಡಿದ್ದ ಅರಣ್ಯ ಭೂಮಿಯಲ್ಲಿರುವ ಮರಗಳು ನಾಶವಾದರೆ ತಡೆಯುವ ಬಗೆ ಹೇಗೆ? ವೈವಿಧ್ಯ ಮಾವಿನ ಮರಗಳು ಮಲೆನಾಡಿನ ಪಾರಂಪರಿಕ ಚಿರನಿಧಿಗಳು. ಆಡಳಿತ ವ್ಯವಸ್ಥೆಯ ಕೃಪಾಶ್ರಯದೊಳಗೆ ಬೀಗುತ್ತಿರುವ ಮಂದಿಗೆ ನಿಧಿಗಳತ್ತಲೇ ಕಣ್ಣು! ದೋಚುವತ್ತ ಕಾಳಜಿ.
               ರಬ್ಬರ್, ಕಾಫಿ, ಸಿಲ್ವರ್, ಸುಬಾಬುಲ್, ಚಿಕ್ಕು, ಅಕೇಶಿಯಾ, ಮಾವು... ಇಪ್ಪತ್ತಾರು ಜಾತಿಯ ಗಿಡಮರಗಳನ್ನು ಕಡಿಯುವುದಕ್ಕೆ ಖಾಸಗಿ ಜಮೀನಿನವರು ಪರವಾನಿಗೆ ಪಡೆಯಬೇಕಿಲ್ಲ ಎನ್ನುತ್ತದೆ ಸುತ್ತೋಲೆ. ಅದರೊಳಗೆ ಮಾವು ಕೂಡಾ ಸೇರಿಕೊಂಡಿರುವುದು ಗಮನಿಸಬೇಕಾದ ಅಂಶ. ಪರಿಸರ ಸಂಘಟನೆಗಳ ಧ್ವನಿ ವಿಧಾನಸೌಧದ ಬಾಗಿಲು ತಟ್ಟಿದ ಫಲವಾಗಿ ಮಾವು ಏನೋ ಹೊರಗುಳಿಯಿತು. ಅಷ್ಟು ಹೊತ್ತಿಗೆ ಸಾವಿರಾರು ಮರಗಳು ಟಿಂಬರ್ ಲಾಬಿಗೆ ಬಲಿಯಾದುವು - ರಿಪ್ಪನ್ಪೇಟೆಯ ಕೃಷಿಕ, ಸಾಮಾಜಿಕ ಕಳಕಳಿಯ ಅನಂತಮೂರ್ತಿ ಜವಳಿಯವರು ಮಾವಿನ ನೋವನ್ನು ಹಂಚಿಕೊಂಡರು.
               ವಿವಿಧ ಆಶಯಗಳನ್ನು ಮುಂದಿಟ್ಟು ರೂಪಿತವಾಗುವ ಯೋಜನೆಗಳಿಗೆ ಪರಿಸರದ ಆರೋಗ್ಯ ಬೇಕಾಗಿಲ್ಲ. ಹಸಿರು ಸಂಪತ್ತೆಂದರೆ ಅಷ್ಟಕ್ಕಷ್ಟೇ. ಯಾವುದೇ ಆದೇಶಕ್ಕೆ ಶ್ರೀಕಾರ ಬೀಳುವಾಗಲೇ ಲಾಬಿಗಳು ಇಲಾಖೆಯೊಳಗೆ ನುಗ್ಗುತ್ತವೆ. ತಮಗೆ ಬೇಕಾದಂತೆ ಆದೇಶಗಳನ್ನು ತಿರುಚುವ ಸಾಮಥ್ರ್ಯಕ್ಕೆ ಕಾಂಚಾಣ ಸಾಥ್ ಕೊಡುತ್ತದೆ. ಅದಕ್ಕೆ ರಾಜಕೀಯ ಮಗ್ಗುಲಿನ ಬೀಳ್ಗೊಡೆ. ವಿರೋಧಿಸಿದರೆ ಜೀವಭಯ. ವಿರೋಧಿಸದಿದ್ದರೆ ಏದುಸಿರಿನತ್ತ ಹೊರಳುವ ಬದುಕು. ಈ ಚಕ್ರವ್ಯೂಹದೊಳಗೆ ಕಾಣದ ಮುಖಗಳ ರಿಂಗಣ. ಕಾಡುಮಾವಿನ ತಳಿಗಳು ದಶಕದಿಂದಲೇ ವಿನಾಶದ ಸುಳಿವನ್ನು ನೀಡುತ್ತಾ ಬಂದಿವೆ.
               ಪರಿಸರದ ಪರವಾಗಿ ದೊಡ್ಡ ದನಿ ಎಬ್ಬಿಸಿದರೆ ಆತ 'ಅಭಿವೃದ್ಧಿ ವಿರೋಧಿ'! ಬಣ್ಣ ಬಣ್ಣದ ರಾಜಕೀಯ ರಾಡಿ ಗಬ್ಬೆಬ್ಬಿಸುತ್ತವೆ. ಬದುಕಿನೊಂದಿಗೆ ಮಿಳಿತವಾದ ಮಾವು, ಹಲಸಿನ ಮರಗಳು ಮತ್ತೆ ಚಿಗುರದಂತೆ ಕಡಿದು ಸಾಗಿಸುವ ಮಂದಿಯ ಬಾಯಿ ರುಚಿಗೆ ಮಾವಿನದ್ದೇ ಉಪ್ಪಿನಕಾಯಿ ಆಗಬೇಕು ತಾನೆ? ವ್ಯವಹಾರ ಜಗತ್ತು ಯಾವಾಗಲೂ ನಿರ್ದಾಕ್ಷಿಣ್ಯ. ಲಾಭದ ಲೆಕ್ಕಾಚಾರದಲ್ಲಿ ಬಾಂಧವ್ಯ, ರಕ್ತಸಂಬಂಧ, ವಿಶ್ವಾಸ, ನಂಬುಗೆಗಳು ಢಾಳು ಢಾಳು. ಅಷ್ಟೊಂದು ಮರಗಳ ಮಾರಣಹೋಮ ನಡೆಯುವ ಸುದ್ದಿ ರಕ್ಷೆಯ ಹೊಣೆ ಹೊತ್ತವರಿಗೆ ಗೊತ್ತಿಲ್ಲ ಅಂತೀರಾ?
             ಮಲೆನಾಡಿನಲ್ಲಿ ಮಾವಿನ ಮರಗಳ ಸಮಾಧಿಯ ವಿಷಾದದ ಕರಿನೆರಳು ಮಾಸುವ ಮೊದಲೇ ಇತ್ತ ಕರಾವಳಿಯಲ್ಲಿ ಕಾಡುಮಾವಿನ ತಳಿಗಳನ್ನು ಉಳಿಸುವ, ಬೆಳೆಸುವ ಚಿಂತನೆಗೆ ಶ್ರೀಕಾರ. ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ 'ಕಾಡು ಮಾವಿನ ಮೆಲುಕು' ಎನ್ನುವ ಕಾರ್ಯಾಗಾರ. ಅಭಿವೃದ್ಧಿಯ ತೆಕ್ಕೆಗೆ ಪುಡಿಯಾದ ಸಹಸ್ರಾರು ಮರಗಳ ಕಣ್ಣೀರಿನ ಮರುಕದೊಂದಿಗೆ ಅಳಿದುಳಿದ ತಳಿಗಳಿಗೆ ಮರುಹುಟ್ಟು ಕೊಡುವ ಹಸಿರು ಮನಸ್ಸುಗಳ ಸಂಕಲ್ಪ.
               ಬಹುತೇಕ ವೈಯಕ್ತಿಕ ಬಳಕೆಗಾಗಿ ತಳಿಗಳು ಅಭಿವೃದ್ಧಿಗಳಾಗುತ್ತಿವೆ. ಹಿರಿಯರು ನೆಟ್ಟು ಬೆಳೆಸಿದ ಮರಗಳು ಮಗ, ಮೊಮ್ಮಗನ ಕಾಲಕ್ಕಾಗುವಾಗ ಇಳಿಲೆಕ್ಕ ಎಣಿಸುತ್ತದೆ. ಅಂತಹ ಮರಗಳನ್ನು ಆ ಹಿರಿಯರ ಮೇಲಿನ ನೆನಪಿಗಾಗಿ ಅಭಿವೃದ್ಧಿ ಮಾಡುವುದುಂಟು. ಉಪ್ಪಿನಕಾಯಿ, ಹಣ್ಣಿಗಾಗಿ ಆಯ್ದ ತಳಿಗಳನ್ನು ಬೆಳೆಸುವ ಪರಿಪಾಠ ಸಾಮಾನ್ಯ. ಈಗಾಗಲೇ ಫಲ ಕೊಡುವ ಮರಗಳನ್ನು ಜತನದಿಂದ ಕಾಪಾಡುವ ಹಸಿರು ಮನಸ್ಸುಗಳಿಂದಾಗಿ ತಳಿಗಳು ಉಳಿದುಕೊಂಡಿವೆ. ಸರಿ, ಇವೆಲ್ಲಾ ನಮ್ಮ ಸ್ವಾರ್ಥದ ಮುಖಗಳು. ತಳಿಸಂರಕ್ಷಣೆಯ ನಿಜವಾದ ಮುಖ ಯಾವುದು?
                ಬೆಂಗಳೂರಿನ  ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಹೆಚ್ಆರ್)ಯ ಹಣ್ಣಿನ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಎಂ.ಆರ್.ದಿನೇಶ್ ತಳಿಸಂರಕ್ಷಣೆಯ ಅಗತ್ಯ ಮತ್ತು ಅನಿವಾರ್ಯವನ್ನು ಬೊಟ್ಟು ಮಾಡುತ್ತಾರೆ - ಮಾವಿನ ವೈವಿಧ್ಯಗಳು ನಮ್ಮ ದೇಶದ ಸಂಪತ್ತು. ನಾಲ್ಕು ಸಾವಿರಕ್ಕೂ ಮಿಕ್ಕಿ ಮಾವಿನ ವೈವಿಧ್ಯಗಳಿವೆ. ಹೊರ ದೇಶದವರು ನಮ್ಮತ್ತ ನೋಟ ಹರಿಸಿದ್ದಾರೆ. ಈಗಾಗಲೇ ವ್ಯವಸ್ಥಿತವಾಗಿ ಕೆಲವು ತಳಿಗಳನ್ನು ತಮ್ಮದೆಂದು ಹೇಳಿ ಪೇಟೆಂಟ್ ಪಡೆದ ಉದಾಹರಣೆಗಳಿವೆ. ಜಗತ್ತಿನ ಮಾವು ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಹಾಗಾಗಿ ಸ್ಥಳೀಯ ತಳಿಗಳನ್ನು ಉಳಿಸುವ, ಅದನ್ನು ಇತರರು ಕದ್ದೊಯ್ಯದಂತೆ ಮಾಡುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರಲ್ಲಿದೆ.
             ಐಐಹೆಚ್ಆರ್ ಸಂಸ್ಥೆಯು ತಳಿ ಸಂರಕ್ಷಣೆಯಲ್ಲಿ ಗುರುತರವಾದ ಕೆಲಸ ಮಾಡಿದೆ. ನಾಲ್ಕುನೂರ ಐವತ್ತಕ್ಕೂ ಮಿಕ್ಕಿ ಮಾವು ತಳಿಗಳನ್ನು ದಾಖಲಿಸಿದೆ. ಅದಕ್ಕೆ ಫಿಂಗರ್ ಪ್ರಿಂಟ್, ಬಾರ್ ಕೋಡ್ ವ್ಯವಸ್ಥೆ ಮಾಡಿದೆ.  ಒಂದೊಂದು ತಳಿಯ ಜಾತಕವನ್ನು ಸವಿವರವಾಗಿ ಬರೆದಿಟ್ಟಿದೆ. "ಇದರಿಂದಾಗಿ ತಳಿಗಳು ಕದ್ದು ಹೋಗುವ ಭೀತಿಯಿಲ್ಲ. ಒಂದು ವೇಳೆ ನಮ್ಮದೆಂದು ಬೇರೆ ದೇಶದವರು ಹೇಳಿಕೊಂಡರೆ ಕಾನೂನು ಸಮರ ಮಾಡುವಷ್ಟು ದಾಖಲೆ ನಮ್ಮಲ್ಲಿದೆ. ಹಾಗಾಗಿ ಕೃಷಿಕರು ತಂತಮ್ಮ ಹಿತ್ತಿಲಿನಲ್ಲಿರುವ ವಿಶೇಷ ತಳಿಗಳನ್ನು ತಮ್ಮದೇ ಹೆಸರಿನಲ್ಲಿ ನೋಂದಾಯಿಸಬಹುದು. ಈ ವ್ಯವಸ್ಥೆ ಸರಕಾರಿ ಮಟ್ಟದಲ್ಲಿದೆ ಎನ್ನುತ್ತಾರೆ" ದಿನೇಶ್.
             ಪುಣೆಯ ಪರಿಸರ ಶಿಕ್ಷಣ ಕೇಂದ್ರವು ಮಹಾರಾಷ್ಟ್ರ ಭಾಗದ ಪಶ್ಚಿಮ ಘಟ್ಟದ ಅಧ್ಯಯನವನ್ನು ಕೈಗೊಂಡು ಇನ್ನೂರಕ್ಕೂ ಹೆಚ್ಚು ಕಾಡುಮಾವಿನ ತಳಿಗಳನ್ನು ಪತ್ತೆ ಮಾಡಿ ದಾಖಲಿಸಿದೆ. ಇನ್ನೂರು ಪಾರಿಸರಿಕ ಕ್ಲಬ್ಗಳನ್ನು ಕಾರ್ಯಕ್ಕೆ ಬಳಸಿಕೊಂಡಿದೆ.  ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಸ್ಥಳೀಯ ಕೃಷಿಕರು, ವಿಜ್ಞಾನಿಗಳ ಸಹಕಾರ ಪಡೆದುಕೊಂಡಿದೆ. ತಳಿಗಳ ವೈಜ್ಞಾನಿಕ ಅಧ್ಯಯನ, ಸ್ಥಳೀಯ ಮಾಹಿತಿ, ಪಾಕೇತನಗಳನ್ನು ಅಭ್ಯಸಿಸಿದೆ. ಕಸಿ ಕಾರ್ಯಾಗಾರಗಳನ್ನು ನಡೆಸಿದೆ. ಪುಣೆಯ ಸನಿಹದ ಪರ್ವತಗಳಲ್ಲಿ ಇಪ್ಪತ್ತೈದಕ್ಕೂ ಅಧಿಕ ವಿವಿಧ ಮಾವಿನ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಮೌಲ್ಯವರ್ಧನೆಯತ್ತ ಹೆಜ್ಜೆಯಿರಿಸಿದ್ದಾರೆ. ಮುಳಿಯ ಮಾವು ಮೇಳದಲ್ಲಿ ಸಂಸ್ಥೆಯ ಅಭಿಜಿತ್ ಕಾಂಬ್ಳೆ, ಬಸವಂತ್ ಝಮಾನೆ ಯಶೋಗಾಥೆಗಳನ್ನು ಹೇಳುತ್ತಿದ್ದಂತೆ, "ಕನಿಷ್ಠ ಒಂದೆರಡು ಗಿಡವಾದರೂ ನಾವು ನೆಟ್ಟು ಬೆಳೆಸಿ ಉಳಿಸದಿದ್ದರೆ ಹೇಗೆ?" ಎಂದರು ಸನಿಹದಲ್ಲಿದ್ದ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್.
               ಕನ್ನಾಡಿನ ಸರಕಾರಿ ಸುತ್ತೋಲೆಯು ಸೃಷ್ಟಿಸಿದ ಅವಾಂತರಗಳ ಕತ್ತಲೆಯ ಮಧ್ಯೆ ಹಸಿರು ಮನಸ್ಸಿನ ಮಿಣುಕುಗಳ ಸದ್ದಿಲ್ಲದ ಸಾಧನೆ ಗುಲ್ಲಾಗದು. ಮುಳಿಯ 'ಕಾಡು ಮಾವಿನ ಮೆಲುಕು' ಕಾರ್ಯಾಗಾರದಲ್ಲಿ ತಳಿ ಸಂರಕ್ಷಣೆಗೆ ಒತ್ತು ನೀಡಿದ ಕಲಾಪಗಳು. ಯಾವುದೇ ಫಂಡ್ಗಳ ಹಿಂದೆ ಓಡದೆ ಸಂಪನ್ನವಾದ ಕಾರ್ಯಾಗಾರ. ’ಹಲಸು ಸ್ನೇಹಿ ಕೂ”ದ ಆಯೋಜನೆಯ ಹಿಂದೆ ಐದಾರು ತಿಂಗಳ ಶ್ರಮವಿದೆ. ಸ್ಥಳೀಯ ಹದಿನೈದಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳ ಗುಣವಿಶೇಷಗಳನ್ನು ಗೊತ್ತು ಮಾಡಲಾಗಿತ್ತು. ಅದನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಲಾಗಿತ್ತು.
                ಶಿರಸಿಯ ಪತ್ರಕರ್ತ ಶಿವಾನಂದ ಕಳವೆ ಹತ್ತು-ಹದಿನೈದು ವರುಷದ ಹಿಂದೆ ಮಲೆನಾಡಿನಲ್ಲಿ ಕಾಡುಮಾವಿಗೆ ದನಿಯಾಗಿದ್ದರು. ಮಿಡಿಮಾವು ಮೇಳವನ್ನು ನಡೆಸಿದ್ದರು. ಶಿರಸಿಯ ಅರಣ್ಯ ಕಾಲೇಜು ಯೋಜನೆಯೊಂದರ ಮೂಲಕ ಅಪ್ಪೆ ಮಿಡಿಗಳ ವೈಜ್ಞಾನಿಕ ದಾಖಲಾತಿ ಮಾಡಿತ್ತು. ಕೃಷಿಕ ಕಸಿಕೂಟಗಳನ್ನು ರೂಪಿಸಿ ಸಾವಿರಾರು ಗಿಡಗಳನ್ನು ಅಭಿವೃದ್ದಿಪಡಿಸಿ ರೈತರಿಗೆ ಹಂಚಿದ್ದಾರೆ. ಸಾಗರದಲ್ಲೂ ಮಾವಿನ ಮಾತುಕತೆ ನಡೆದಿದೆ. ಹೀಗೆ ಕನ್ನಾಡಿನ ಹಲವೆಡೆ ಮಾವಿನ ನೋವಿಗೆ ದನಿ ಕೊಡುವ ಯತ್ನ ನಡೆಯುತ್ತಲೇ ಬಂದಿರುವುದರಿಂದ ಕಾಡು ಮಾವಿನ ತಳಿಗಳಿಂದು ಉಸಿರಾಡುತ್ತಿವೆ.
             ಹಲಸು ಸ್ನೇಹಿ ಕೂಟದ 'ಕಾಡು ಮಾವಿನ ಮೆಲುಕು' ಕಲಾಪವು ಭವಿಷ್ಯ ಬದುಕನ್ನು ಮೆಲುಕು ಹಾಕುವಂತೆ ಮಾಡಿದೆ. ವೈಯಕ್ತಿಕ ಹಿತಾಸಕ್ತಿಯೊಂದಿಗೆ ಸಾಮಾಜಿಕ ಪ್ರಜ್ಞೆಯ ಮಹತ್ತನ್ನು ಬಿಂಬಿಸಿದೆ. ತಳಿಗಳನ್ನು ಸಂರಕ್ಷಿಸುವ ಆಶಯದೊಂದಿಗೆ ಗಿಡಗಳನ್ನು ಒಯ್ದ ನೂರಾರು ಕೃಷಿಕರ ಹಸಿರುಸಿರು ತುಂಬು ಭರವಸೆ ಮೂಡಿಸಿದೆ. ಸರಕಾರಿ ಆಶ್ರಯಗಳಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಜರುಗಿದ ಕಾಡು ಮಾವಿನ ದನಿಗೆ ಕಿವಿಯಾಗಲು ವಿಜ್ಞಾನಿಗಳೂ ಆಗಮಿಸಿದ್ದರು. ಕೃಷಿಕ ಮತ್ತು ವಿಜ್ಞಾನಿ ಒಟ್ಟಾದರೆ ಯಾವ ಶಕ್ತಿಯೂ ಕೂಡಾ ನಮ್ಮ ತಳಿಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದೆ.

(ಈ ಬರೆಹ ನಿನ್ನೆಯ - 28-5-2015 - ಉದಯವಾಣಿಯ ನೆಲದ ನಾಡಿಯಲ್ಲಿ ಪ್ರಕಟಿತ)



ಹಲಸಿನ ಪೋಷಕಾಂಶಗಳು

ಹಲಸಿನ ಪೋಷಕಾಂಶಗಳ ವಿವರಗಳು.
 ಕೃಪೆ : ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ

ಸಿಹಿ ಸವಿ ಹಹ ಜಿಲೇಬಿ

ಮಂಗಳೂರಿನ ಪಿಲಿಕುಳದಲ್ಲಿ ಜರುಗಿದ 'ವಸಂತೋತ್ಸವ'ದಲ್ಲಿ ಬಂಟ್ವಾಳದ 'ಹಲಸು ಪ್ರೇಮಿ ಕೂಟ'ದ ಮಳಿಗೆಯಲ್ಲಿ ಹಲಸಿನ ಹಣ್ಣಿನ ಸ್ವಾದದ ಜಿಲೇಬಿಗೆ ಕೊಳ್ಳುಗರು ಧಾರಾಳ....... ಬಿ.ಸಿ.ರೋಡಿನ ಮೌನೀಶ ಮಲ್ಯರ ಕಿತಾಪತಿ.....!

Tuesday, May 26, 2015

ಹಲಸಿನ ಹಣ್ಣಿನ ಕಬಾಬ್, ಕೇಕ್


ಮೇ 24ರಂದು ಮಂಗಳೂರಿನ 'ಪಿಲಿಕುಲ'ದಲ್ಲಿ ಜರುಗಿದ ವಸಂತೋತ್ಸವದಲ್ಲಿ ಹಲಸಿನ ಹಣ್ಣಿನ ಕಬಾಬ್, ಕೇಕ್, ಜಿಲೇಬಿ..ಗಳಿಗೆ ಬಹುಬೇಡಿಕೆ. ಬಿ.ಸಿ.ರೋಡಿನ ಮೌನೀಶ ಮಲ್ಯರು ತಮ್ಮ 'ಹಲಸು ಪ್ರೇಮಿ ಕೂಟ'ದೊಂದಿಗೆ ಮಳಿಗೆ ತೆರೆದು ಹಲಸಿನ ಹಣ್ಣಿನ ಇಪ್ಪತ್ತೇಳು ಖಾದ್ಯಗಳನ್ನು ಸ್ಥಳೀಯವಾಗಿ ತಯಾರಿಸಿ ಗ್ರಾಹಕರಿಗೆ  ನೀಡಿದ್ದರು. "ಹಲಸಿನ ಕಬಾಬ್ ತುಂಬಾ ಜನರಿಗೆ ಇಷ್ಟವಾಗಿತ್ತು. ಮತ್ತೂ ಕೇಳಿ ಪಡೆಯುತ್ತಿದ್ದರು. ಜನವರಿಗೆ ಇಷ್ಟವಾಗುವಂತೆ ಹಲಸಿನ ಖಾದ್ಯಗಳನ್ನು ತಯಾರಿಸಿ ಸರ್ವ್ ಮಾಡಿದರೆ ಗ್ರಾಹಕರು ಇದ್ದೇ ಇದ್ದಾರೆ" ಎನ್ನುತ್ತಾರೆ ಮೌನೀಶ್ ಮಲ್ಯರು.

Thursday, May 21, 2015

ಹಲಸಿನೊಂದಿಗೆ ಒಂದು ದಿನ

'ಹಲಸಿನ ಸವಿಯೂಟ' ಸವಿಯೋಣ ಬನ್ನಿ.

'ಕಾಡು ಮಾವಿನ ಸವಿ ಬೋಜನ'

ಮುಳಿಯದಲ್ಲಿ (ದ.ಕ.) ಜರುಗಿದ 'ಕಾಡು ಮಾವಿನ ಮೆಲುಕು' ಸಮಾರಂಭದಲ್ಲಿ
'ಕಾಡು ಮಾವಿನ ಸವಿ ಬೋಜನ'

ಕೃಷಿಕರೇ ಮಾಡಿದ 'ತಳಿಆಯ್ಕೆ'

            

                  "ಕಾಡುಮಾವಿನ ಸಸಿಗಳಿಗೆ ಇಷ್ಟೊಂದು ಬೇಡಿಕೆ ಬರಬಹುದೆಂದು ಊಹಿಸಿರಲಿಲ್ಲ," ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರು ಖುಷಿಯನ್ನು ಹಂಚಿಕೊಂಡಾಗ, ಮುಳಿಯ ಶರ್ಮರು, "ಮಧ್ಯಾಹ್ನದೊಳಗೆ ಒಂದು ಸಾವಿರಕ್ಕೂ ಮಿಕ್ಕಿ ಮಾವಿನ ಸಸಿಗಳು ಮಾರಾಟವಾದುವು," ಥಟ್ಟನೆ ಅಂಕಿಅಂಶ ನೀಡಿದರು.
                  ಬಂಟ್ವಾಳ ತಾಲೂಕಿನ ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ಜರುಗಿದ 'ಕಾಡು ಮಾವಿನ ಮೆಲುಕು' ಕಾರ್ಯಾಗಾರ ಜರುಗಿತು. 'ಹಲಸು ಸ್ನೇಹಿ ಕೂಟ'ದ ಆಯೋಜನೆ. ಕಾಡುಮಾವಿನ ಸಸಿಗಳಿಗೆ ಬೇಡಿಕೆ. ಪ್ರಕೃತಿಸಹಜವಾಗಿ ಬೆಳೆದು ಮಿಡಿ, ಹಣ್ಣನ್ನು ಕೊಡುತ್ತಿದ್ದ ಮರಗಳು ಅಜ್ಞಾತವಾದಾಗ ನೆಟ್ಟು ಬೆಳೆಸುವ ಮನಃಸ್ಥಿತಿ ಬಂದಿರುವುದು ಶ್ಲಾಘನೀಯ.
                   ಹಲಸು ಸ್ನೇಹಿ ಕೂಟದ ವಿ.ಕೆ.ಶರ್ಮ ಮತ್ತು ಸಂಗಡಿಗರು ಐದಾರು ತಿಂಗಳಿನಿಂದಲೇ ಕಾಡು ಮಾವಿನ ಸೊನೆಯನ್ನು ಅಂಟಿಸಿಕೊಂಡಿದ್ದರು! ಕಾರ್ಯಾಾಗಾರದ ಜತೆಗೆ ಕೃಷಿಕರಿಗೆ ಉತ್ತಮ ಮಾವಿನ ಗಿಡಗಳನ್ನು ನೀಡಬೇಕೆಂಬ ಆಶಯ. ಅದಕ್ಕಾಗಿ ಹುಡುಕಾಟ. ಕೆಲವೊಂದು ಮಾನದಂಡಗಳನ್ನು ಹಾಕಿಕೊಂಡು ತಳಿ ಆಯ್ಕೆ. ಅದರ ಗುಣ, ಬೆಳೆಯುವ ಕಾಲ, ಮಿಡಿಗೋ ಹಣ್ಣಿಗೋ ಎನ್ನುವ ನಿರ್ಧಾಾರ. ತಳಿಗಳನ್ನು ಗುರುತಿಸಲು ಪ್ರಾದೇಶಿಕ ಸೊಗಸಿನ ಹೆಸರಿನ ಹೊಸೆತ. ಸುಮಾರು ಹದಿನೈದು ತರಹದ ಕಾಡು ಮಾವಿನ ತಳಿಗಳನ್ನು ಆಯ್ಕೆ ಮಾಡಿ ಕಸಿ ಕಟ್ಟಿ ಅಭಿವೃದ್ದಿ. ಸಾವಿರಕ್ಕೂ ಮಿಕ್ಕಿದ ಗಿಡಗಳು ಕಾರ್ಯಾಗಾರದಂದು ಸಿದ್ಧವಾಗಿದ್ದುವು.
                    ಕೆಲವು ತಳಿಗಳ ಗುಣಧರ್ಮಗಳು ಹೀಗಿವೆ  - ಎಡ್ಡೆಕುಕ್ಕು : ಉತ್ತಮ ಮಾವು ಎಂದರ್ಥ. ವರ್ಷ, ಎರಡು ವರುಷಕ್ಕೊಮ್ಮೆ ಉತ್ತಮ ಫಸಲು. ಉಪ್ಪಿನಕಾಯಿಗೆ ಮಿಡಿ ಓಕೆ. ಹಣ್ಣು ರುಚಿ. ಮಾಂಬಳ, ರಸಾಯನಕ್ಕೆ ಬಳಸಬಹುದು. ಬೊಳ್ಳೆಕುಕ್ಕು : ಹಣ್ಣಾದಾಗ ಬಿಳಿವರ್ಣ. ತಿರುಳು ಬಿಳಿ. ನೀರು ಮಾವಿನಕಾಯಿಗೆ ಉತ್ತಮ. ಸಾರ್ಯಮಠ ಜೀರಿಗೆ : ಇದರ ಕಾಯಿಗೆ ಜೀರಿಗೆ ಪರಿಮಳ. ಎರಡು ವರುಷಕ್ಕೊಮ್ಮೆ ಇಳುವರಿ. ಹಣ್ಣಿನ ಗಾತ್ರ ದೊಡ್ಡದು. ತುಳಸಿಮೂಲೆ ಮಿಡಿ : ಮಿಡಿ ಉಪ್ಪಿನಕಾಯಿಗೆ ಉತ್ತಮ. ಹಣ್ಣಿನ ಗಾತ್ರ ಹದ. ನೀರು ಮಾವಿನಕಾಯಿ ಹಾಕಲು ಮತ್ತು ಎಲ್ಲಾ ವಿಧದ ಅಡುಗೆಗೂ ಉಪಯೋಗಿ. ವರದಾ : ಹಣ್ಣು ಗಟ್ಟಿ. ಹಳದಿ ವರ್ಣ. ಹತ್ತು ದಿನ ತಾಳಿಕೆ. ಮೃತ್ಯುಂಜಯ : ಹಣ್ಣಿನ ಗಾತ್ರ ಚಿಕ್ಕದು. ಹೆಚ್ಚು ಗುಳ. ದುಂಡನೆ ಗಾತ್ರ. ಉಪ್ಪಿನಕಾಯಿಗೆ ಶ್ರೇಷ್ಠ. ಅಕಾಲ ಮಾವು : ವರುಷಪೂರ್ತಿ ಇಳುವರಿ. ಸಿಪ್ಪೆ ತೆಳು. ಚಿಕ್ಕ ಗೊರಟು. ಇದರ ಕೆತ್ತೆಯ ಉಪ್ಪಿನಕಾಯಿ ರುಚಿ. ಬರಿಮಾರು ಹೊಳೆಬದಿ ಮಾವು : ಮಧ್ಯಮಗಾತ್ರದ ಹಣ್ಣು. ಅರಶಿನ ವರ್ಣ. ಗಾಢ ಪರಿಮಳ. ಎರಡು ವರುಷಕ್ಕೊಮ್ಮೆ ಫಸಲು. ಸಣ್ಣ ಗೊರಟು. ಗುಳದಲ್ಲಿ ನಾರಿನಂಶ ಕಡಿಮೆ. ಗಣ್ಣು ತಿನ್ನಲು ರುಚಿ.
                    ಪ್ರತಿಯೊಂದು ತಳಿಗಳಿಗೂ ಆಯಾಯ ಗುಣಗಳ ಫಲಕ ಅಂಟಿಸಿರುವುದರಿಂದ ಆಯ್ಕೆ ಮಾಡಿಕೊಳ್ಳಲು ಕೃಷಿಕರಿಗೆ ಅನುಕೂಲವಾಗಿತ್ತು. ಹಣ್ಣಿಗಿಂತಲೂ ಉತ್ತಮ ಮಿಡಿ ತಳಿಯ ಗಿಡಗಳಿಗೆ ಬಹು ಬೇಡಿಕೆ. ಗಿಡವನ್ನು ಒಯ್ಯಲೆಂದೇ ಆಗಮಿಸಿದ ಕೃಷಿಕರು ಅಧಿಕ. ಕೃಷಿಕರ ಸಂಶಯ, ಚೋದ್ಯಗಳಿಗೆ ಸ್ಥಳದಲ್ಲೇ ಕಸಿತಜ್ಞರ ಉತ್ತರ. "ಸ್ಥಳೀಯ ಮಟ್ಟದಲ್ಲಿ ಇಂತಹ ಕೆಲಸಗಳು ಆಗಬೇಕು. ಪ್ರತೀ ಗ್ರಾಮದಲ್ಲಿಯೂ ಉತ್ಕೃಷ್ಟವಾದ ಮಾವಿನ ಮರಗಳಿಗೆ. ಅಳಿದುಳಿದ ಮರಗಳ ಸಂರಕ್ಷಣೆಯೊಂದಿಗೆ, ಅವುಗಳ ಅಭಿವೃದ್ಧಿಯೂ ಮಾಡಬೇಕಿದೆ. ಎಲ್ಲದಕ್ಕೂ ಇಲಾಖೆಯನ್ನು ಕಾಯಬೇಕಾಗಿಲ್ಲ. ಕೃಷಿ ಸಂಸ್ಥೆಗಳು, ಸಮಾನ ಆಸಕ್ತರು ಜತೆ ಸೇರಿ ತಳಿ ಆಯ್ಕೆಯಂತಹ ಕಾರ್ಯವನ್ನು ಮಾಡಬಹುದು," ಎಂಬ ಆಶಯ ವ್ಯಕ್ತಪಡಿಸುತ್ತಾರೆ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟ.
                  ಹಲಸು ಸ್ನೇಹಿ ಕೂಟವು ನಾಲ್ಕು ವರುಷದ ಹಿಂದೆ 'ರುಚಿ ನೋಡಿ ತಳಿ ಆಯ್ಕೆ' ಎನ್ನುವ ಪ್ರಕ್ರಿಯೆ ಶುರು ಮಾಡಿತ್ತು. ಅಳಿಕೆ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಅಧಿಕ ತಳಿಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಸಾವಿರಾರು ಗಿಡಗಳಿಂದು ಕೃಷಿಕರ ತೋಟದಲ್ಲಿ ಬೆಳೆಯುತ್ತಿವೆ. ಕೆಲವರು ಹಲಸಿನ ತೋಟಗಳನ್ನು ಎಬ್ಬಿಸಿದ್ದಾರೆ.
                   ಕಾಡು ಮಾವಿನ ಮೆಲುಕು ಕಾರ್ಯಗಾರದಲ್ಲಿ ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಐವತ್ತಕ್ಕೂ ಮಿಕ್ಕಿ ಮಾವಿನ ವೈವಿಧ್ಯವನ್ನು ಪ್ರದರ್ಶನಕ್ಕೆ ತಂದಿದ್ದರು. ಇಲ್ಲಿನ ಮುಖ್ಯಸ್ಥ ಡಾ.ದಿನೇಶ್ ಅವರ ಮಾವಿನ ಕಥನಕ್ಕೆ ಕಿವಿಯಾದವರು ನೂರಾರು ಮಂದಿ. ಇನ್ನೂರಕ್ಕೂ ಮಿಕ್ಕಿ ಕಾಡುಹಣ್ಣುಗಳನ್ನು ಪತ್ತೆ ಮಾಡಿ ಅಭಿವೃದ್ಧಿ ಪಡಿಸಿದ ಪುಣೆಯ ಪರಿಸರ ಶಿಕ್ಷಣ ಕೇಂದ್ರದ ಯಶೋಗಾಥೆ ಕುತೂಹಲ ಮೂಡಿಸಿತು.
                 ಕಳೆದ ನಾಲ್ಕು ದಶಕಗಳಿಂದ ಮಾವು-ಹಲಸಿಗೆ ಮಾತನ್ನು ಕೊಡುತ್ತಿರುವ ಸುಳ್ಯ ಮರ್ಕಂಜದ ಕೃಷಿಕ ಮಾಪಲ್ತೋಟ ಸುಬ್ರಾಯ ಭಟ್ಟರ ತೋಟದ ಎಪ್ಪತ್ತಕ್ಕೂ ಮಿಕ್ಕಿ ಹಣ್ಣುಗಳು ಗಮನ ಸೆಳೆದುವು. ಅಲ್ಲದೆ ಕಡಂಬಿಲ, ಪೆರ್ಲದ ವರ್ಮುಡಿ  ... ವಿವಿಧ ಪ್ರದೇಶದ ಹಣ್ಣುಗಳು ಪ್ರದರ್ಶನಕ್ಕಿದ್ದುವು. ವಿಟ್ಲದ ವಿಶಾಲ್ ಐಸ್ಕ್ರೀಮ್ನವರ ಕಾಡುಮಾವಿನ ಸ್ವಾದದ ಐಸ್ಕ್ರೀಮ್ ಬಾಯಿಸಿಹಿ ಮಾಡಿತು. ಪುತ್ತೂರು ಸನಿಹದ ಮರಿಕೆಯ ಯುವ ಕೃಷಿಕ ಎ.ಪಿ.ಸುಹಾಸ್ ಅವರ ಕಾಡುಮಾವಿನ ರಸದ ಲಾಲಿ ಮತ್ತು ಜ್ಯೂಸ್ ಮಳಿಗೆಯಲ್ಲಿ ರಶ್. ಉಪ್ಪಿನಕಾಯಿ, ಮಾವಿನ ಖಾದ್ಯಗಳ ಮಳಿಗೆಗಳಿದ್ದುವು.
             ಹಲಸು, ಮಾವು, ಸಿರಿಧಾನ್ಯ, ತರಕಾರಿ, ಗೆಡ್ಡೆಗೆಣಸು... ಮೊದಲಾದ ಕಾರ್ಯಾಗಾರಗಳನ್ನು ಏರ್ಪಡಿಸಿದ ಹಲಸು ಸ್ನೇಹಿ ಕೂಟದ ಮಕುಟಕ್ಕೆ ಈಗ ಕಾಡು ಮಾವಿನ ಗರಿ.


Wednesday, May 20, 2015

ಹಲಸು ಸ್ನೇಹಿ ಕೂಟದ ವಾರ್ತಾಪತ್ರ




ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು-ಉಬರು 'ಹಲಸು ಸ್ನೇಹಿ ಕೂಟ'ದ ವಾರ್ತಾ ಪತ್ರ.
ಇದು ಆರನೇಯದ್ದು. ಈಚೆಗೆ ಮುಳಿಯದಲ್ಲಿ ಜರುಗಿದ ಮಾವಿನ ಹಬ್ಬದಲ್ಲಿ ಬಿಡುಗಡೆಗೊಂಡಿತು.

Tuesday, May 19, 2015

ಕಾಡು ಮಾವಿನ ಮೆಲುಕು ಕಾರ್ಯಾಗಾರದಲ್ಲಿ ಮಾವಿನ ಪ್ರದರ್ಶನ

ಮುಳಿಯ(ದ.ಕ)ದಲ್ಲಿ ಜರುಗಿದ 'ಕಾಡುಮಾವಿನ ಮೆಲುಕು' ಕಾರ್ಯಾಗಾರದಲ್ಲಿ - 27-5-2015 - 
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಐವತ್ತಕ್ಕೂ ಮಿಕ್ಕಿದ ಮಾವಿನ ಪ್ರದರ್ಶನ.
ತಳಿಯ ಹೆಸರು, ಹಣ್ಣಿನ ಭಾರ, ಸಿಹಿಯ ಪ್ರಮಾಣ, ತಿರುಳಿನ ಪ್ರಮಾಣ, ಸಂಸ್ಥೆಯ ವಿಳಾಸ
ತಿಳಿಸುವ ಸ್ಟಿಕ್ಕರ್ ಗಳನ್ನು ಅಂಟಿಸಿದ್ದರು. ಸಂಸ್ಥೆಯ ವಿಜ್ಞಾನಿ ಡಾ.ಆರ್.ದಿನೇಶ್ ತಂಡದೊಂದಿಗೆ 
ದಿನವಿಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

"ತಳಿಸಂರಕ್ಷಣೆಯಲ್ಲಿ ಕೃಷಿಕ ಪ್ರಜ್ಞೆ ಜಾಗೃತವಾಗಬೇಕು" - ಶ್ರೀ ಪಡ್ರೆ


(ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರಿಂದ ಸಮಾರೋಪ ಭಾಷಣ. 
ಚಿತ್ರದಲ್ಲಿ ಪಾತನಡ್ಕ ಸುಶೀಲ ಭಟ್, ಯಶೋದಾ ಕಾರ್ಯಾಡು, ಡಾ.ಸರಿತಾ ಹೆಗ್ಡೆ ಇದ್ದಾರೆ)

             "ಮಾವು, ಹಲಸು ನಮಗೆ ಉಪೇಕ್ಷಿತ ಕೃಷಿ ಉತ್ಪನ್ನ. ಹೊರಗಿನವರಿಗದು ಅಮೃತ. ಮನೆಗೊಂದು ಕಾಡು ಮಾವು ನೆಡುವ ಪರಿಪಾಠ ಆರಂಭವಾದಾಗ ತಳಿ ಸಂರಕ್ಷಣೆ ಅಜ್ಞಾತವಾಗಿ ನಡೆದುಹೋಗುತ್ತದೆ. ನಮ್ಮ ಪ್ರದೇಶದ ಉತ್ತಮ ಕಾಡು ಮಾವಿನ ತಳಿಗಳ ದಾಖಲೀಕರಣ ಮೊದಲು ಕೃಷಿಕ ಮಟ್ಟದಲ್ಲಿ ಆಗಬೇಕು. ವ್ಯವಸ್ಥಿತವಾಗಿ ಮಾವಿನ ಮರಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿಕ ಪ್ರಜ್ಞೆ ಜಾಗೃತವಾಗಬೇಕು. ಈ ಕುರಿತು ಚಿಂತನೆಗಳು ನಡೆಯಬೇಕು", ಎಂದು ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳಿದರು.
               ಅವರು ಮುಳಿಯ ಶಾಲೆಯಲ್ಲಿ ಜರುಗಿದ 'ಕಾಡು ಮಾವಿನ ಮೆಲುಕು' ಕಾರ್ಯಾಗಾರದಲ್ಲಿ ಸಮಾರೋಪ ಭಾಷಣ ಮಾಡುತ್ತಾ, "ಇಂತಹ ಕಾರ್ಯಕ್ರಮಗಳು ತಳಿಪ್ರಜ್ಞೆ  ಹುಟ್ಟಿಸುವಲ್ಲಿ ಸಫಲವಾಗುತ್ತದೆ," ಎಂದರು. ಶ್ರೀಮತಿ ಸುಶೀಲಾ ಯಸ್.ಎನ್.ಭಟ್, ಶ್ರೀಮತಿ ಯಶೋದಾ ಕಾರ್ಯಡು ಮತ್ತು ಡಾ.ಸರಿತಾ ಹೆಗ್ಡೆಯವರು ಕಾಡು ಮಾವಿನ ಮೌಲ್ಯವರ್ಧನೆಯ ವಿವಿಧ ಸಾಧ್ಯತೆಯನ್ನು ಸೋದಾಹರಣವಾಗಿ ಪ್ರಸ್ತುತಪಡಿಸಿದರು.
              ಕಾರ್ಯಕ್ರಮದಲ್ಲಿ ಕಾಡು ಮಾವಿನ ಹಣ್ಣು ಮತ್ತು ಮಿಡಿ ವಿಭಾಗದಲ್ಲಿ ಸ್ಪರ್ಧೆಗಳು ಜರುಗಿತ್ತು. ನೂರಾರು ಕೃಷಿಕರು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಕಡಂಬಿಲ ಮಾಧವ, ಅಮ್ಮಂಕಲ್ಲು ಕೇಶವ ಭಟ್, ಪೆರುವಡಿ ರಾಮಚಂದ್ರ ಭಟ್ ಇವರ ಹಿತ್ತಿಲಿನ ಮಾವಿನ ಹಣ್ಣುಗಳು ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಗಳಿಸಿತ್ತು. ಮಿಡಿ ವಿಭಾಗದಲ್ಲಿ ಗಿರೀಶ ತೋಟದ ಮೂಲೆಯವರ ಮಾವಿನ ಮಿಡಿಯು ಪ್ರಥಮ ಸ್ಥಾನಕ್ಕೇರಿದರೆ, ಈಶ್ವರಮಂಗಲದ ಸತ್ಯನಾರಾಯಣ ಭಟ್ ಮತ್ತು ಬೈಂಕ್ರೋಡು ವೆಂಕಟಕೃಷ್ಣ ಭಟ್ ಇವರ ಮರದ ಮಿಡಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುವು. ಸ್ಪರ್ಧಾಾ ವಿಜೇತರಿಗೆ ಮಾವಿನ ಸಸಿಗಳನ್ನು ಉಡುಗೊರೆಯಾಗಿ ನೀಡಲಾಯಿತು.
            ಈ ಸಂದರ್ಭದಲ್ಲಿ ರುಚಿಯಾದ ಮಾವಿನ ಅಡುಗೆ ತಯಾರಿಸಿದ ಸೂಪಜ್ಞರಾದ ನಾರಾಯಣ ಭಟ್ ಮತ್ತು ಗೋಪಾಲಕೃಷ್ಣ ಭಟ್ ಬರೆಮನೆ ಇವರನ್ನು ಗೌರವಿಸಲಾಯಿತು. ವಿಟ್ಲದ ವಿಶಾಲ್ ಐಸ್ಕ್ರೀಂನವರು ಸಿದ್ಧಪಡಿಸಿದ ಕಾಡು ಮಾವಿನ  ಐಸ್ಕ್ರೀಂ, ಮರಿಕೆಯ ಸುಹಾಸ್ ಎ.ಪಿ. ಸಿದ್ಧಪಡಿಸಿದ ಮಾವಿನ ಜ್ಯೂಸ್ ಮತ್ತು ಕ್ಯಾಂಡಿ, ಹಲವು ಬಗೆಯ ಉಪ್ಪಿನಕಾಯಿಗಳು, ಸವಿತಾ ಎಸ್.ಭಟ್ ಅಡ್ವಾಯಿ ಇವರ ಬಗೆಬಗೆಯ ಖಾದ್ಯಗಳು ಮಾವುಪ್ರಿಯರ ಒಲವು ಗಳಿಸಿತ್ತು.
            ಕಡಂಬಿಲ ಕೃಷ್ಣಪ್ರಸಾದರು ಸ್ವಾಗತಿಸಿದರು. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ವಂದಿಸಿದರು. ಶಿರಂಕಲ್ಲು ನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಬೈಂಕ್ರೋಡು ಮಹೇಶ್, ವೆಂಕಟಕೃಷ್ಣ ಅತಿಥಿಗಳನ್ನು ಗೌರವಿಸಿದರು.

Monday, May 18, 2015

ಅಳಿಯುತ್ತಿರುವ ಕಾಡು ಮಾವಿನ ತಳಿಗಳಿಗೆ ಮರುಹುಟ್ಟು ನೀಡಬೇಕು - ಡಾ.ಡಿ.ಸಿ.ಚೌಟ

(ವೇದಿಕೆಯಲ್ಲಿ - ಸುಶೀಲ ಭಟ್ ಪಾತನಡ್ಕ, ಸೇಡಿಯಾಪು ಜನಾರ್ದನ ಭಟ್, ಡಾ.ಡಿ.ಸಿ.ಚೌಟ, ಮುಳಿಯ ವೆಂಕಟಕೃಷ್ಣ ಶರ್ಮ, ಅಮ್ಮಂಕಲ್ಲು ಕೇಶವ ಭಟ್)
 (ಕಾಡುಮಾವಿನ ಹಣ್ಣನ್ನು ಗಣ್ಯರಿಗೆ ನೀಡುವ ಮೂಲಕ ಸೇಡಿಯಾಪು ಜನಾರ್ದನ ಭಟ್ಟರಿಂದ ಶುಭಚಾಲನೆ)
 (ಪಾತನಡ್ಕ ಸುಶೀಲ ಭಟ್ ಬರೆದ ಕಾಡು ಮಾವಿನ ಮೆಲುಕು ಖಾದ್ಯಗಳ ಪುಸ್ತಕ ಬಿಡುಗಡೆ)
 (ಡಾ.ಡಿ.ಸಿ.ಚೌಟರಿಂದ ಅಧ್ಯಕ್ಷೀಯ ಮಾತುಗಳು)
 (ಕಡಂಬಿಲ ಕೃಷ್ಣಪ್ರಸಾದರಿಂದ ಸ್ಮರಣಿಕೆ ಪ್ರದಾನ)
   (ಡಾ.ಮೋಹನ ತಲಕಾಲುಕೊಪ್ಪ ಇವರಿಂದ ತಳಿಸಂರಕ್ಷಣೆ ಗೋಷ್ಠಿ ಆರಂಭ)
 (ಡಾ.ಎಂ.ಆರ್.ದಿನೇಶರಿಂದ ತಳಿಸಂರಕ್ಷಣೆ ವಿಚಾರ ಪ್ರಸ್ತುತಿ)
 (ಪುಣೆಯ ಬಸವಂತ್ ಝಮಾನೆ ಇವರಿಂದ ವಿಚಾರ ಪ್ರಸ್ತುತಿ)
 (ಕೃಷಿಕ ಮಾಪಲ್ತೋಟ ಸುಬ್ರಾಯ ಭಟ್ಟರಿಂದ ಗೋಷ್ಠಿಯ ಸಮಾಪನ)
(ವಿವಿಧ ತಳಿಗಳ ಮಾವುಗಳ ಪ್ರದರ್ಶನ)

               "ಜೀವನವನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೇ ಪ್ರೀತಿ ಕಾಡುಮಾವಿನಲ್ಲಿತ್ತು. ಹೈಬ್ರಿಡ್ ಧಾವಂತದಲ್ಲಿ ಸ್ಥಳೀಯ ಮಾವಿನ ರುಚಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮಾವವನ್ನು ಆಘ್ರಾಣಿಸಲು ಕೂಡಾ ಸಿಗದಷ್ಟು ವಿರಳವಾಗಿದೆ. ಗುಣಮಟ್ಟದ ಮಾವಿನ ಮರಗಳು ಕಾಣಿಸುತ್ತಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಶತಮಾನ ಬಾಳಿದ ಮರಗಳು ಧರೆಗುರುಳಿವೆ. ಮತ್ತೊಮ್ಮೆ ಅವಕ್ಕೆ ಮರುಹುಟ್ಟು ಕೊಡಬೇಕಾಗಿದೆ. ಕಾಡು ಮಾವು ಬೆಳೆಯಲು ಪ್ರತಿಯೊಬ್ಬ ಕೃಷಿಕರೂ ಮನಮಾಡಬೇಕು," ಎಂದು ಮೀಯಪದವಿನ ಕೃಷಿಕ ಡಾ.ಚಂದ್ರಶೇಖರ ಚೌಟ ಹೇಳಿದರು.
               ಅವರು ಮೇ 17ರಂದು ಬಂಟ್ವಾಳ ತಾಲೂಕು (ದ.ಕ.) ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ಜರುಗಿದ 'ಕಾಡು ಮಾವಿನ ಮೆಲುಕು' (Mango Fest - Kadu mavina meluku) ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, "ಒಂದೇ ಕಾಂಡದಲ್ಲಿ ಮೂರು ದೋಣಿ ಮಾಡುವಷ್ಟು ದೊಡ್ಡದಾದ ಮರಗಳಿದ್ದುವು. ಈಗ ನಾಶವಾಗಿವೆ. ಖಾಸಗಿ ನೆಲೆಯಲ್ಲಿಂದು ತಳಿ ಸಂರಕ್ಷಣೆಯ ಕಾರ್ಯ ಆಗುತ್ತಿರುವುದು ಸಮಾಧಾನಕರ ವಿಚಾರ ಎಂದರು". ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್ ವೇದಿಕೆಯ ಗಣ್ಯರಿಗೆ ಕಾಡು ಮಾವಿನ ಹಣ್ಣನ್ನು ವಿತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, "ಎತ್ತರದ ಪ್ರದೇಶದಲ್ಲಿ ಕಾಡು ಮಾವನ್ನು ಬೆಳೆಸಬೇಡಿ. ತಪ್ಪಲು ಪ್ರದೇಶದಲ್ಲಿರಲಿ," ಎಂದರು.
              ಕಾಸರಗೋಡಿನ ಕೃಷಿಕ ಅಮ್ಮಂಕಲ್ಲು ಕೇಶವ ಭಟ್ಟರು, ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್ ಅವರಿಗೆ ಗಿಡವನ್ನು ಹಸ್ತಾಂತರಿಸುವ ಮೂಲಕ ಕಾಡು ಮಾವಿನ ತಳಿ ಬಿಡುಗಡೆ ಮಾಡಿದರು. ಸುಶೀಲಾ ಯಸ್.ಎನ್.ಭಟ್ ಅನುಭವದ ಪಾಕೇತನಗಳ  'ಕಾಡು ಮಾವಿನ ಮೆಲುಕು' ಪುಸ್ತಕವನ್ನು ಡಾ.ಡಿ.ಸಿ.ಚೌಟರು ಬಿಡುಗಡೆಗೊಳಿಸಿದರು. ಕೇಪು-ಉಬರು 'ಹಲಸು ಸ್ನೇಹಿ ಕೂಟ' ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಡಿಕೆ ಪತ್ರಿಕೆ, ಬಂಟ್ವಾಳದ ಹಲಸು ಪ್ರೇಮಿ ಕೂಟವು ಕೈಜೋಡಿಸಿತ್ತು. ವೇದಿಕೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ ಉಪಸ್ಥಿತರಿದ್ದರು.
              ಪೆರ್ಲದ ವರ್ಮುುಡಿ ಶಿವಪ್ರಸಾದ್ ಪ್ರಸ್ತಾವನೆ ಮೂಲಕ ಹಲಸು ಸ್ನೇಹಿ ಕೂಟದ ಚಟುವಟಕೆಗಳನ್ನು ಸೂಕ್ಷ್ಮವಾಗಿ ಪರಿಚಯಿಸಿದರು. ಕಡಂಬಿಲ ಕೃಷ್ಣಪ್ರಸಾದ್, ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್, ಬೈಂಕ್ರೋಡು ವೆಂಕಟಕೃಷ್ಣ, ಬೈಂಕ್ರೋಡು ಮಹೇಶ, ಅಶೋಕ ಅಜಕ್ಕಳ.. ಇವರಿಗೆ ವಿವಿಧ ಜವಾಬ್ದಾರಿಗಳು. ನಾ. ಕಾರಂತ ಪೆರಾಜೆ ನಿರ್ವಹಣೆ.
                ತಳಿಸಂರಕ್ಷಣೆ-ವೈವಿಧ್ಯ ಮಾತುಕತೆ : ಬೆಂಗಳೂರು ಐಐಹೆಚ್ಆರ್ ಸಂಸ್ಥೆಯ ಹಣ್ಣಿನ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ದಿನೇಶರಿಂದ ಮತ್ತು ಪುಣೆಯ ಪರಿಸರ ಶಿಕ್ಷಣ ಕೇಂದ್ರದ ಅಭಿಜಿತ್ ಕಾಂಬ್ಳೆ, ಬಸವಂತ್ ಝಮಾನೆ ಇವರಿಂದ ತಳಿಸಂರಕ್ಷಣೆ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ. ಪುತ್ತೂರು ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಮೋಹನ್ ತಲಕಾಲುಕೊಪ್ಪ ಮಾತುಕತೆಯ ಸಮನ್ವಯಕಾರರಾಗಿದ್ದರು. ಅಧ್ಯಕ್ಷತೆಯನ್ನು ಸುಳ್ಯ ಮರ್ಕಂಜದ ಮಾಪಲ್ತೋಟ ಸುಬ್ರಾಯ ಭಟ್ ವಹಿಸಿದ್ದರು.
            ವಿವಿಧ ತಳಿಗಳು : ’ಕಾಡು ಮಾವಿನ ಮೆಲುಕ” ಕಾರ್ಯಕ್ರಮಕ್ಕಾಗಿಯೇ ಅಭಿವೃದ್ಧಿ ಗೊಳಿಸಿದ ಮಾವಿನ ಗಿಡಗಳು ಮಧ್ಯಾಹ್ನದೊಳಗೆ ಖಾಲಿ ಖಾಲಿ! ಎಡ್ಡೆಕುಕ್ಕು, ಬೊಳ್ಳೆಕುಕ್ಕು, ಸಾರ್ಯ ಮಠ ಜೀರಿಗೆ, ತುಳಸಿಮೂಲೆ ಮಿಡಿ, ಜೀರಿಗೆ ಮಾವು, ಬಳಂಜ ಜೀರಿಗೆ, ವರದಾ, ಮೃತ್ಯುಂಜಯ, ಬಳೆಂಜ ಹಣ್ಣು, ನಡುಮನೆ ಜೀರಿಗೆ, ಅಕಾಲ ಮಾವು, ಕರಿಯಾಲ ಅಪ್ಪೆ, ಬರಿಮಾರು ಹೊಳೆಬದಿ ಮಾವು.. ಹೆಸರಿನ ತಳಿಗಳನ್ನು ಮಣಿಪಾಲ ಅತ್ರಾಡಿಯ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರು ಕಸಿ ಕಟ್ಟಿ ಅಭಿವೃದ್ಧಿಪಡಿಸಿದ್ದರು.
          ಮಳಿಗೆಗಳು: ವಿಟ್ಲದ ವಿಶಾಲ್ ಐಸ್ಕ್ರೀಂನ ಸಿ.ಎಫ್.ಸಿಕ್ವೇರಾ ಅವರು ಕಾಡು ಮಾವಿನ ಹಣ್ಣಿನ ಐಸ್ಕ್ರೀಂ, ಪುತ್ತೂರು ಮರಿಕೆಯ ಸುಹಾಸ್ ಎ.ಪಿ.ಇವರ ಜ್ಯೂಸ್-ಕ್ಯಾಂಡಿ, ಸವಿತಾ ಎಸ್.ಭಟ್ ಅಡ್ವಾಯಿಯವರ ಖಾದ್ಯಗಳು, ಬಗೆಬಗೆಯ ಉಪ್ಪಿನಕಾಯಿಗಳು, ಕಿನಿಲ ಅಶೋಕ್ ಅವರ ಮಂಗಗಳನ್ನು ಓಡಿಸುವ ಕೆಣಿ, ಫಿಲಿಪ್ ಅವರ ಸಿಂಪಡಣಾ ಸಲಕರಣೆ, ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಗಳಲ್ಲಿ ರಶ್.

(ಚಿತ್ರಗಳು - ರಾಧಾ ಮುಳಿಯ, ವಿಟ್ಲ)

Friday, May 15, 2015

halasu savi

24-5-2015, ರವಿವಾರ, ಮಂಗಳೂರಿ ಪಿಲಿಕುಳ ನಿಸರ್ಗಧಾಮದಲ್ಲಿ...... ಬನ್ನಿ

Wednesday, May 13, 2015

ಕಾಡುಮಾವಿನ ಬಿಸಿಯುಸಿರಿಗೆ ಕಾಯಕಲ್ಪ

           "ಕಾಡು ಮಾವಿನ ಹಣ್ಣಿನ ಗೊರಟನ್ನು ಚೀಪಿದಷ್ಟೂ ಜೊಲ್ಲುರಸ ಹೆಚ್ಚು ಉತ್ಪಾದನೆಯಾಗುತ್ತದೆ. ತಿಂದ ಆಹಾರವು ಬೇಗ ರಕ್ತಗತವಾಗುತ್ತದೆ. ಹುಳಿ-ಸಿಹಿ ರುಚಿಯುಳ್ಳ ಹಣ್ಣು ತಿಂದಷ್ಟೂ ರುಚಿವರ್ಧನೆಯಾಗುತ್ತಿರುತ್ತದೆ. ಹಣ್ಣಿನ ಋತುವಿನಲ್ಲಿ ಇದರ ಪಾಕೇತನಕ್ಕೆ ಮಹತ್ವ, ಪಾಣಾಜೆಯ ವೆಂಕಟ್ರಾಮ ದೈತೋಟರು ಕಾಡು ಮಾವಿನ ಗುಣಗಳನ್ನು ಹೇಳುತ್ತಾರೆ, ಕಸಿ ಮಾವಿನಲ್ಲಾದರೂ ಅಡ್ಡ ಪರಿಣಾಮ ಇದ್ದೀತು. ಕಾಡು ಮಾವಿನಲ್ಲಿಲ್ಲ. ಮಕ್ಕಳಿಗೆ ಹಸಿವು ಹೆಚ್ಚಿಸಲು ಕಾಡು ಮಾವಿನ ಹಣ್ಣನ್ನು ತಿನ್ನಿ ಎನ್ನುವ ದಿನಮಾನಗಳಿದ್ದುವು," ನೆನೆಯುತ್ತಾರೆ ವೆಂಕಟ್ರಾಮ ದೈತೋಟ.
            ಸಾಮಾನ್ಯವಾಗಿ ಮಳೆಗಾಲದ ಆರಂಭದ ದಿವಸಗಳಲ್ಲಿ ಕಾಡು ಮಾವು (ಕಾಟುಮಾವು) ಹಣ್ಣಾಗುವ ಸಮಯ. ಸಣ್ಣ ಗಾಳಿ ಬೀಸಿದರೂ ಸಾಕು, ಮಕ್ಕಳ ಗಡಣ ಅಲರ್ಟ್  ಆಗುತ್ತದೆ. ರಾತ್ರಿ ಮಳೆ-ಗಾಳಿ ಬಂದುಬಿಟ್ಟರೆ ಮುಗಿಯಿತು, ಮುಂಜಾನೆ ಮರದಡಿಯಲ್ಲಿ ಸಮ್ಮೇಳನವೇ ನಡೆದುಬಿಡುತ್ತದೆ! ಬಿದ್ದ ಹಣ್ಣನ್ನು ಹೆಕ್ಕಲು ಪೈಪೋಟಿ. ಮಾರ್ಗ, ಹಳ್ಳ, ತೋಡಿನ ಬದಿಗಳಲ್ಲಿದ್ದ ಮರಗಳಿಂದ ಬಿದ್ದ ಹಣ್ಣನ್ನು ಹೆಕ್ಕಲು ಪರವಾನಿಗೆ ಬೇಕಾಗಿಲ್ಲ ಎನ್ನುವ ಅಲಿಖಿತ ನಿಯಮ ಬದುಕಿನಲ್ಲಿತ್ತು.
              ಕಾಡು ಹಣ್ಣಿನಿಂದ ಮಾಡುವ 'ಮಾಂಬಳ'ದ ಸವಿ ಬಲ್ಲವರೇ ಬಲ್ಲರು. ಹಣ್ಣಿನ ರಸವನ್ನು ಹಿಂಡಿ ಅದನ್ನು ಪದರ ಪದರವಾಗಿ ಬಿಸಿಲಿನಲ್ಲಿ ಒಣಗಿಸಿ ಕಾಪಿಡುವ ಮಾಂಬಳ ಆಪದ್ಬಂಧು. ದಿಢೀರ್ ನೆಂಟರು ಬಂದರೆ ಮಾಂಬಳದ ಗೊಜ್ಜನ್ನು ಮಾಡುವ ಅಮ್ಮಂದಿರ ಕೈಯಡುಗೆಗೆ ಐದಾರು ತುತ್ತು ಅನ್ನ ಉದರಕ್ಕಿಳಿಯುತ್ತದೆ. ಮಕ್ಕಳಿಗೆ ಯಾಕೆ, ಹಿರಿಯರೂ ಕೂಡಾ ಚಾಕೋಲೇಟಿನಂತೆ ಮಾಂಬಳವನ್ನು ಚೀಪಲು ಶುರು ಮಾಡಿದರೆ ಸಾಕು, ರುಚಿಯ ಹೊನಲು ಹರಿಯುತ್ತದೆ! ಮಾತಿಗೆ ಸಿಕ್ಕಾಗಲೆಲ್ಲಾ ಮಾಂಬಳದ್ದೇ ಸುದ್ದಿ.
             ವಿವಿಧ ವೈವಿಧ್ಯ ಪರಿಮಳದ ಮಿಡಿಯು ಉಪ್ಪಿನಕಾಯಿಗೆ ಹೇಳಿಮಾಡಿಸಿದ್ದು.  ಉಪ್ಪಿನಕಾಯಿಗಾಗಿಯೇ ಸೀಮಿತವಾದ ಮರಗಳಿದ್ದುವು. ಮರದಿಂದ ಮಿಡಿಯನ್ನು ಇಳಿಸಿ, ಶುಚಿಗೊಳಿಸಿ, ಉಪ್ಪಿನಲ್ಲಿ ಮೀಯಿಸುವ ಜಾಣ್ಮೆ ಹಿರಿಯ ಅಮ್ಮಂದಿರಿಗೆ ಬೆರಳತುದಿಯಲ್ಲಿತ್ತು. ಉಪ್ಪನ್ನು ಹೀರಿದ ಮಿಡಿಗೆ ಸಾಸಿವೆ, ಮೆಣಸು ಯಾವ ಪ್ರಮಾಣದಲ್ಲಿರಬೇಕೆಂಬುದನ್ನು ಅನುಭವ ಕಲಿಸಿಕೊಟ್ಟಿದೆ. ಸಮಾರಂಭಗಳಲ್ಲಿ ಉಪ್ಪಿನಕಾಯಿಯೊಂದು ಮಾತಿಗೆ ವಸ್ತು. ತಂತಮ್ಮ ಅನುಭವ ಗಾಥೆಗಳನ್ನು ಹೇಳಲು ಖುಷಿ. ಇನ್ನೊಬ್ಬರ ಅನುಭವವನ್ನು ಕೇಳಲು ಧಾವಂತ.
              ಭೂತಕಾಲದ ನೆನಪುಗಳು ಯಾವಾಗಲೂ ಸವಿ ತಾನೆ. ಜೀವನಶೈಲಿ ಬದಲಾದಂತೆ ಕಾಡುಮಾವಿನ ಹಣ್ಣುಗಳು ದೂರವಾಯಿತು. ಆಹಾರ ಪದ್ಧತಿ ವ್ಯತ್ಯಾಸವಾದಂತೆ ಮಾವಿನ ಖಾದ್ಯಗಳಿಗೆ ಇಳಿಲೆಕ್ಕ. ನಾಟಾಕ್ಕಾಗಿ ಮರಗಳು ನಾಶವಾದುವು. ರಸ್ತೆಯ ಇಕ್ಕೆಲಗಳಲ್ಲಿ ಆಗಸದೆತ್ತರಕ್ಕೆ ಬೆಳೆದ ಮರಗಳು ಅಭಿವೃದ್ಧಿಗಳಿಗಾಗಿ ನೆಲಕ್ಕೊರಗಿದುವು. ಮಾಂಬಳ, ಉಪ್ಪಿನಕಾಯಿಯನ್ನು ಮಾರುಕಟ್ಟೆಯಿಂದ ಖರೀದಿಸುವುದು ಖುಷಿಯ ಸಂಗತಿಯಾದುವು. ಕಾಡು ಮಾವು ಬದುಕಿಂದ ಮರೆಯಾಯಿತು. ಎಲ್ಲೋ ಬೆಳೆದ ಹೈಬ್ರಿಡ್ ಹಣ್ಣು ಡೈನಿಂಗ್ ಟೇಬಲ್ ಸೇರಿದುವು. ಬಾಲ್ಯದ ಖುಷಿಗಳನ್ನು ಕಸಿದ ಬದುಕಿನ ಮಧ್ಯೆ ಕಾಡು ಮಾವು ಯಾಕೆ, ಎಲ್ಲಾ ಪ್ರಕೃತಿದತ್ತವಾದ ಹಣ್ಣುಗಳ ಸವಿ ಮರೆಯಾದುವು. ಮಗು ಗೊರಟನ್ನು ಚೀಪುತ್ತಿದ್ದಾಗ 'ಶಿಷ್ಟತೆ ಅಲ್ಲ' ಎಂದು ಗದರಿಸುವ ಅಮ್ಮಂದಿರನ್ನು ನೋಡಿದ್ದೇನೆ!
              ಕಾಡುಹಣ್ಣುಗಳನ್ನು ಸವಿದು ಶಾಲಾದಿನಗಳನ್ನು ಪೂರೈಸಿದ ಹಿರಿಯರಷ್ಟೇ ಮಾತಿಗೆ ಸಿಗುತ್ತಾರೆ. ಹಲಸು, ಪಪ್ಪಾಯಿ, ಸೀತಾಫಲ, ಪೇರಳೆ.. ಹಣ್ಣುಗಳ ಸುದ್ದಿ ಮಾತನಾಡಿದರೆ ಕಂದಮ್ಮಗಳು ಮುಖ ಸಿಂಡರಿಸುತ್ತಾರೆ. ಯಾಕೆ ಹೇಳಿ? ಮಕ್ಕಳಿಗೆ ಗೊತ್ತಿಲ್ಲ. ಹಿರಿಯರಾದ ನಾವು ಹೇಳಿಲ್ಲ. ಬಾಲ್ಯದಿಂದಲೇ ರುಚಿಯ ಪರಿಚಯ ಮಾಡಿಲ್ಲ. ಮತ್ತೆ ಮಕ್ಕಳನ್ನು ತೆಗಳಿ ಏನು ಪ್ರಯೋಜನ? ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂತಹ ಜೀವನಶೈಲಿಯನ್ನು ಪರಿಚಯಿಸುವ ಮಾಹಿತಿಗಳಿಲ್ಲ, ಬಿಡಿ.
ಆರೋಗ್ಯ ಭಾಗ್ಯವಾಗಲು ಮರೆತುಹೋದ ಜೀವನಶೈಲಿಗಳು ಮತ್ತೆ ಅಡುಗೆ ಮನೆಗೆ ಬರಬೇಕಾಗಿದೆ. ರೆಡಿ ಟು ಈಟ್ ಸಂಸ್ಕೃತಿ ನಗರದಲ್ಲಿ ಅನಿವಾರ್ಯ. ಆದರೆ ಗ್ರಾಮೀಣ ಬದುಕಿನ ಸಂಪರ್ಕವಿದ್ದು, ಎಲ್ಲಾ ಸಂಪನ್ಮೂಲಗಳನ್ನು ಹೊಂದಿದ ಅಡುಗೆ ಮನೆಗಳು ಯಾಕೆ ರೆಡಿ ಟು ಈಟ್ ವ್ಯವಸ್ಥೆಯನ್ನು ನೆಚ್ಚಿಕೊಳ್ಳಬೇಕು? ದೇಹಕ್ಕೆ ಬೇಕಾದ ಒಂದೊಂದು ಪೋಷಕಾಂಶಗಳಿಗೆ ಗುಳಿಗೆ, ಕಷಾಯಗಳನ್ನು ಸೇವಿಸುವ ಬದಲು, ಪಾರಂಪರಿಕವಾದ ಕಾಯಿ, ಹಣ್ಣು, ಎಲೆಗಳ ಸೇವನೆಯಿಂದ ನಾಲ್ಕು ದಿವಸ ಹೆಚ್ಚು ಬದುಕಬಹುದೇನೋ? ಇರಲಿ.
             ಬಂಟ್ವಾಳ ತಾಲೂಕಿನ ಕೇಪು 'ಹಲಸು ಸ್ನೇಹಿ ಕೂಟ'ವು ಈ ಎಲ್ಲಾ ವಿಚಾರಗಳನ್ನು ಸ್ಪರ್ಶಿಸಿದೆ.  ಆಹಾರದ ಮಾದರಿಗಳನ್ನು ರೂಪಿಸುವ ಕಾಯಕವನ್ನು ನಾಲ್ಕೈದು ವರುಷದಿಂದ ಮಾಡುತ್ತಿದೆ. ತರಕಾರಿ, ಗೆಡ್ಡೆ, ಎಲೆ, ಮಾವು, ಹಲಸು, ಸಿರಿಧಾನ್ಯ.. ಕಾರ್ಯಾಗಾರಗಳನ್ನು ನಡೆಸಿದೆ. ಹೊಸ ಹೊಸ ಖಾದ್ಯಗಳನ್ನು ಪರಿಚಯಿಸಿದೆ. ಗಿಡಗಳನ್ನು ಅಭಿವೃದ್ಧಿ ಮಾಡಿದೆ. ಆರೋಗ್ಯ ವರ್ಧನೆಯ ಗಾಢತೆಯನ್ನು ತಿಳಿಹೇಳುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ.
             ಈಗ ಕಾಡು ಮಾವಿಗೆ ಮಾತು ಕೊಡುವ ಸಮಯ. ಮೇ 17 ರವಿವಾರದಂದು ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ದಿನಪೂರ್ತಿ ಕಾರ್ಯಾಾಗಾರ ಸಂಪನ್ನವಾಗಲಿದೆ. ತಳಿಸಂರಕ್ಷಣೆ, ಮೌಲ್ಯವರ್ಧನೆ ಕುರಿತು ಮಾತುಕತೆ ನಡೆಯಲಿದೆ. ಕಾಡು ಮಾವಿನ ವಿವಿಧ ಖಾದ್ಯಗಳನ್ನು ಪರಿಚಯಿಸಲಾಗುತ್ತಿದೆ. ನಶಿಸುತ್ತಿರುವ ಆಯ್ದ ಕಾಡುಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಡು ಮಾವಿನ ಸವಿಯ ಪುಸ್ತಕ ಅನಾವರಣಗೊಳ್ಳಲಿದೆ. ಯಾವುದೇ, ಯಾರದ್ದೇ ಅನುದಾನವಿಲ್ಲದೆ ನಡೆಯುವ ಕಾರ್ಯಾಗಾರದ ವೆಚ್ಚವನ್ನು ಸರಿದೂಗಿಸಲು ಪ್ರತಿನಿಧಿಗಳಿಗೆ ಕನಿಷ್ಠ ಶುಲ್ಕವನ್ನು ನಿಗದಿಪಡಿಸಿದೆ.

ಶಮನಕ್ಕೆ ಕಾಯುತ್ತಿದೆ, ಕಾಡು ಮಾವಿನ ನೋವು

              ಪುತ್ತೂರಿನ ಕೃಷಿಕ ಮಣಿಲ ಮಹಾದೇವ ಶಾಸ್ತ್ರಿಯವರು ನೀಡಿದ ಸಿಹಿ ಸ್ವಾದದ ಮಾವಿನ ಹಣ್ಣು ನಿತ್ಯ ಕಾಡಲು ಶುರು ಮಾಡಿತು. ತಿಂದಷ್ಟೂ ಹುಚ್ಚು ಹಿಡಿಸುವ ಸಿಹಿ! ಈ ವರುಷ ಬರೋಬ್ಬರಿ ಇಳುವರಿ. ಐನೂರಕ್ಕೂ ಮಿಕ್ಕಿ! ಕೆಲವು ವರುಷ ಹತ್ತಿಪ್ಪತ್ತು ಹಣ್ಣು ಆದುದೂ ಇದೆ. ಒಳತಿರುಳು ಕೆಂಪು. ಗೊರಟಿಗೆ ಅಂಟದ ನಾರು. ತಿಂದಾಗ ಹಲ್ಲಿನೆಡೆಗೆ ಸಿಗದು. ರಸ ರಹಿತ ಗುಳ. ಕಸಿ ಮಾವಿನೊಂದಿಗೆ ಸೇರಿಸಿ ರಸಾಯನ ಮಾಡಿದರೆ ಸಕ್ಕರೆಯ ಆವಶ್ಯಕತೆ ಬೇಕಾಗದು. ಗುಳವನ್ನು ಕಿವುಚಿ ನೀರಿಗೆ ಸೇರಿಸಿದರೆ ಸಕ್ಕರೆ ರಹಿತ ಜ್ಯೂಸ್ ರೆಡಿ. ಕುಡಿದರೆ ದೇಹಾಯಾಸ ಮಾಯ, ಎನ್ನುತ್ತಾರೆ ಮನೆಯೊಡತಿ ಮಣಿಲ ಸಾವಿತ್ರಿ ಶಾಸ್ತ್ರಿ.
             ಹಣ್ಣಿನ ರಸವನ್ನು ಬಿಸಿಲ ಸ್ನಾನದಲ್ಲಿ ಪದರ ಪದರವಾಗಿ ಒಣಗಿಸಿ ಮಾಡುವ 'ಮಾಂಬಳ ಉತ್ಕೃಷ್ಟ. ಕರಾವಳಿಯಲ್ಲಿದು ಜನಪ್ರಿಯ. ಮಾರುಕಟ್ಟೆಯಲ್ಲಿ ಕೇಳಿ ಪಡೆವ ಗ್ರಾಹಕರಿದ್ದಾರೆ. ಮನೆಮಟ್ಟಕ್ಕೆ ತಯಾರಿಸುವ ಅಮ್ಮಂದಿರು ಅಕಾಲದಲ್ಲಿ ಬಳಸಲು ಕಾಪಿಡುತ್ತಾರೆ. ಮಾರಾಟ ಉದ್ದೇಶಕ್ಕಾಗಿ ತಯಾರಿಸುವವರೂ ಇದ್ದಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಏರುದರ.  ದಿನಕ್ಕೆ ಒಂದೆರಡು ಹಣ್ಣು ಸಿಕ್ಕರೂ ಸಾಕು, ಊಟಕ್ಕೆ ಬೇರೆ ಖಾದ್ಯ ಮಾಡಬೇಕಾಗಿಲ್ಲ.
ಹಸಿಗೊಜ್ಜು ಇದ್ದರೆ ಎರಡು ತುತ್ತು ಅನ್ನ ಹೆಚ್ಚೇ ಉಣ್ಣಬಹುದಂತೆ. ಇದಕ್ಕೆ 'ಕೆಂಪಣ್ಣು’ ಅಂತ ಸಾವಿತ್ರಿ ಅಮ್ಮ ಕರೆದಿದ್ದಾರೆ. 'ಮಣಿಲ ಕೆಂಪಣ್ಣು' ಅಂತ ಮರು ನಾಮಕಕ್ಕೆ ಮಗ ಮಹಾದೇವ ಶಾಸ್ತ್ರಿಯವರು ಉತ್ಸುಕರಾಗಿದ್ದಾರೆ. ಹಳೆಯ ಮರವಾದ್ದರಿಂದ ಉಳಿಸುವ ಅನಿವಾರ್ಯತೆಯಿದೆ. ಅಪರೂಪದ್ದಾದ ಕಾಡುಮಾವಿನ ಈ ತಳಿಯನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸುವತ್ತ ಆಸಕ್ತರಾಗಿದ್ದಾರೆ.
               ಕಾಡು ಮಾವಿನ ಸವಿಗೆ ಮಹಾದೇವ ಶಾಸ್ತ್ರಿಯವರ ಈ ತಳಿ ಒಂದು ಉದಾಹರಣೆಯಷ್ಟೇ. ನಮ್ಮ ಸುತ್ತಮುತ್ತ ನೂರಾರು  ತಳಿಗಳು ಬೆಳೆಸದೇ ಬೆಳೆದಂತಹುಗಳು ಇದ್ದುವಲ್ಲಾ. ಅವೆಲ್ಲಾ ಏನಾದುವು? ಮಾರ್ಗದ ಇಕ್ಕೆಲಗಳಲ್ಲಿ ಎತ್ತರಕ್ಕೆ ಬೆಳೆದು ತಂಪನ್ನೂ, ಇಳುವರಿಯನ್ನು ನೀಡುತ್ತಿದ್ದ ಸಾವಿರಾರು ಮರಗಳು ನೆಲಕ್ಕೊರಗಿವೆ. ಗುಡ್ಡಗಳಲ್ಲಿದ್ದ ಮರಗಳು ರಬ್ಬರ್ ಕೃಷಿಯ ಮೋಹಕ್ಕೆ ಕೊಡಲಿಗಾಹುತಿಯಾಗಿವೆ. ಕೃಷಿ ವಿಸ್ತರಣೆಯ ಧಾವಂತದಲ್ಲಿ ಅಪರೂಪದ ತಳಿಗಳು ನಾಶವಾಗಿವೆ. ರುಚಿ ವೈವಿಧ್ಯಗಳನ್ನು ಬದುಕಿನಲ್ಲಿ ಕಳೆದುಕೊಂಡಿರುವ ನಮಗೆ ಇಂತಹ ತಳಿಗಳು ನಾಶವಾದರೂ ಬೇಸರವಾಗುವುದಿಲ್ಲ.
                ನಮ್ಮ ನಾಲಿಗೆಯು ಪಾರಂಪರಿಕ ಹಳೆಯ ರುಚಿಗಳನ್ನು ಮರೆತಿದೆ. ಅದಕ್ಕೆ ಮತ್ತೊಮ್ಮೆ ರುಚಿಯನ್ನು ತೋರಿಸುವ ಕೆಲಸ ಸಾಧ್ಯವಾದರೆ ಕಳೆದುಕೊಂಡಿರುವ ತಳಿಗಳನ್ನು ಮರಳಿ ಮನೆ ಜಗಲಿಗೆ ತರಬಹುದು, ಎನ್ನುತ್ತಾರೆ ಕೃಷಿಕ ಮಾಪಲ್ತೋಟ ಸುಬ್ರಾಯ ಭಟ್. ಸುಳ್ಯ ತಾಲೂಕಿನ (ದ.ಕ.) ಮರ್ಕಂಜದ ಈ ಕೃಷಿಕರ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಕಾಡು ಮಾವಿನ ತಳಿಗಳಿವೆ. ಮಾಂಬಳ, ಗೊಜ್ಜು, ಹುಳಿಪದಾರ್ಥಗಳಿಗೆ ಬೇರೆ ಬೇರೆ ಜಾತಿಯ ಕಾಡುಮಾವುಗಳ ಸಂಗ್ರಹ.
                ಕಸಿ, ಸಂಕರ ತಳಿಯ ಮಾವಿನಂತೆ ಕಾಡುಮಾವಿಗೆ ನಿಶ್ಚಿತವಾದ ಹೆಸರಿಲ್ಲ. ಗುರುತು ಹಿಡಿಯಲು ಸುಲಭವಾಗುವಂತೆ ಪ್ರಾದೇಶಿಕವಾದ ಹೆಸರು. ಹಣ್ಣಿನ ಗುಣ, ಪರಿಮಳ, ರುಚಿಯನ್ನು ಹೊಂದಿಕೊಂಡು ನಾಮಕರಣ. ಉದಾ: ಸಾಸಿವೆ ಪರಿಮಳದ ಮಾವಿಗೆ 'ಸಾಸಿವೆ ಮಾವು', ಜೀರಿಗೆ ಪರಿಮಳದ್ದಕ್ಕೆ 'ಜೀರಿಗೆ ಮಾವು', ಉದ್ದಕ್ಕೆ ಬೆಳೆದ ಮರದ್ದು 'ಗಳೆ ಮಾವು', ಸಕ್ಕರೆ ಸಿಹಿಯ 'ಸಕ್ಕರೆ ಕುಟ್ಲಿ'....ಹೀಗೆ. ಮಾಪಲ್ತೋಟದವರು ಕಾಡು ಹಣ್ಣಿನ ಗಾಥೆಯನ್ನು ಹೇಳುತ್ತಿದ್ದಾಗ ಬಾಲ್ಯ ನೆನಪಾಯಿತು. ಮಾವಿನ ಋತುವಿನಲ್ಲಿ ಚಿಕ್ಕ ಗಾಳಿ ಬೀಸಿದರೆ ಸಾಕು, ಬಿದ್ದ ಹಣ್ಣನ್ನು ಹೆಕ್ಕಲು ಪಡುತ್ತಿರುವ ಧಾವಂತ. ಅದಕ್ಕಾಗಿ ಜಗಳ, ಮುನಿಸು..!
                ಶಿರಸಿಯ ಅರಣ್ಯ ಕಾಲೇಜು ಯೋಜನೆಯೊಂದರ ಮೂಲಕ ಮಲೆನಾಡಿನ ನೂರಾರು ಅಪ್ಪೆಮಿಡಿ ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಈ ಯೋಜನೆಯು ಕಳೆದ ದಶಂಬರಕ್ಕೆ ಅಂತ್ಯವಾದರೂ ಯೋಜನೆಯ ಪ್ರಕ್ರಿಯೆಗಳು ಮುಂದುವರಿಯುತ್ತಿವೆ. ಅಪರೂಪದ್ದಾದ ಮಾವಿನ ತಳಿಗಳನ್ನು ಪತ್ತೆ ಮಾಡಿ ಅವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು ಹೆಚ್ಚುಗಾರಿಕೆ. ಯೋಜನೆಯ ಮುಖ್ಯಸ್ಥ ಡಾ. ವಾಸುದೇವ್ ಹೇಳುವಂತೆ, "ಆಗಿರುವ ಕೆಲಸ ಶೇ. 10 ಮಾತ್ರ. ಇನ್ನೂ ಸಾಕಷ್ಟು ಕೆಲಸಗಳಿವೆ. ನಮ್ಮ ಯೋಜನೆಯಿಂದಾಗಿ ಸಾವಿರಾರು ರೈತರು ಸ್ವಪ್ರೇರಿತರಾಗಿ ಮಾವಿನ ತಳಿಗಳನ್ನು ಹುಡುಕಿ ನಮ್ಮ ಗಮನಕ್ಕೆ ತರುತ್ತಿದ್ದಾರೆ. ಕೃಷಿಕರಿಗೂ ತಳಿಗಳನ್ನು ಉಳಿಸಬೇಕೆನ್ನುವ ಜಾಗೃತಿ ಮೂಡುತ್ತಿದೆ. ಅಪ್ಪೆ ತಳಿಯ ತೋಟಗಳನ್ನು ಹೊಂದುವ ಬಯಕೆ ಕಾಡುತ್ತಿದೆ. ಚಿಕ್ಕ ಪ್ರಮಾಣದಲ್ಲಿ ತಳಿ ಬ್ಯಾಂಕ್ ಹೊಂದುವ ಉಮೇದು ಹೆಚ್ಚಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆಯಿದೆ."
                 ದಕ್ಷಿಣ ಕನ್ನಡ ಜಿಲ್ಲೆಯ ಕೇಪು-ಉಬರು ಹಲಸು ಸ್ನೇಹಿ ಕೂಟವು ಮೂರು ವರುಷದ ಹಿಂದೆ ಮಾವಿನ ಮೇಳವೊಂದನ್ನು ನಡೆಸಿತ್ತು. ತಳಿ ಆಯ್ಕೆ, ಅಭಿವೃದ್ಧಿಗೆ ಒತ್ತುಕೊಟ್ಟ ಮೇಳವು ಕೃಷಿಕರಲ್ಲಿ ಜಾಗೃತಿ ಮೂಡಿಸಿತ್ತು. ಈಗ ಮತ್ತೆ ಮೇ 17ರಂದು ಮುಳಿಯ ಶಾಲೆಯಲ್ಲಿ ಕಾರ್ಯಾಗಾರವೊಂದನ್ನು ಏರ್ಪಡಿಸಿದೆ. ಈ ಬಾರಿ ಕಾಡುಮಾವಿಗೆ ಮಾತು ಕೊಡುವ ಯತ್ನ. ಮೌಲ್ಯವರ್ಧಿತ ಉತ್ಪನ್ನಗಳ ಸಾಧ್ಯತೆಯ ಮಾತುಕತೆ. ಈಗಾಗಲೇ ತಳಿ ಸಂರಕ್ಷಣೆ ಮಾಡಿದ, ಮಾಡುತ್ತಿರುವವರ ಯಶೋಗಾಥೆಗೆ ಕಿವಿಯಾಗುವವರು ನೂರಾರು ಮಂದಿ.
                 ಈ ಭಾಗದ ಅಪರೂಪದ ಕಾಡುಮಾವನ್ನು ಪತ್ತೆ ಮಾಡುವ ಕೆಲಸ ಆರಂಭವಾಗಿದೆ. ಸುಮಾರು ಹದಿನೈದು ತಳಿಗಳನ್ನು ಗುರುತು ಮಾಡಲಾಗಿದೆ. ಅವನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಲಾಗಿದೆ. ಮೇಳದಂದು ಅವೆಲ್ಲಾ ಮಾರಾಟಕ್ಕೆ ಲಭ್ಯವಾಗಲಿದೆ. ಒಂದು ಕಾಲಘಟ್ಟದಲ್ಲಿ ಇವೆಲ್ಲಾ ಹಿರಿಯರಿಂದ ನೆಟ್ಟು ಬೆಳೆಸಿ ಅಭಿವೃದ್ಧಿಯಾಗಿರುವಂತಾದ್ದು. ಬುದ್ಧಿಪೂರ್ವಕವಾಗಿ ಅವನ್ನೆಲ್ಲಾ ನಾಶ ಮಾಡಿದ್ದೇವೆ. ದೂರವಾಗುತ್ತಿರುವ ತಳಿಗಳಿಗೆ ಪುನರ್ಜೀವ ಕೊಡುವ ಯತ್ನವಾಗಿ 'ಕಾಡುಮಾವಿನ ಮೆಲುಕು' ಎನ್ನುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ, ಆಶಯವನ್ನು ಹೇಳುತ್ತಾರೆ ಹಲಸು ಸ್ನೇಹಿ ಕೂಟದ ವಿ.ಕೆ.ಶರ್ಮ. (9480200832)
             ಕಾಡು ಮಾವಿಗೆ ನೋವು ಕೊಟ್ಟಿದ್ದೇವೆ. ನೋವು ಶಮನಿಸುವ ಕೆಲಸಕ್ಕೆ ಮಾವು ಪ್ರೀತಿಯ ಮನಸ್ಸುಗಳು ಎಚ್ಚರವಾಗಿವೆ. ಕಾಡು ಮಾವು ಕಾರ್ಯಾಾಗಾರಕ್ಕೆ ಬರಲು ನೀವು ಉತ್ಸುಕರೇ?


ಕಾಡಿನ ಕತೆಗೆ ಕವಿತೆಯಾದ ಚಿಣ್ಣರು

               ಅಂಡ್ರಿಯಾಸ್ ಕ್ಲೇಯರ್ ಜರ್ಮನ್ ಪ್ರಕೃತಿ ಶಾಸ್ತ್ರಜ್ಞ. ಜಾವಾ ಪ್ರದೇಶಕ್ಕೆ 1648ರಲ್ಲಿ ಚಹ ಬೆಳೆಯನ್ನು ಪರಿಚಯಿಸುತ್ತಾನೆ. ಮುಂದೆ 1835ರಲ್ಲಿ ಅಸ್ಸಾಂ ರಾಜ್ಯಕ್ಕೆ ಚಹ ಪ್ರವೇಶಿಸಿತು. ನಲವತ್ತು ವರುಷಗಳ ಬಳಿಕ ಚಹ ಒಂದು ವಾಣಿಜ್ಯ ಕೃಷಿಯಾಗಿ ಮಾರ್ಪಟ್ಟಿತು. 1867ರಲ್ಲಿ ಹತ್ತು ಎಕ್ರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಚಹ ಕೇವಲ ಒಂದೇ ದಶಕದಲ್ಲಿ ಇನ್ನೂರೈವಟ್ಟು ಪಟ್ಟು ವಿಸ್ತಾರಗೊಂಡಿತು. ಬದುಕಿಗಂಟಿದ ಚಹ ಈಗಂತೂ ವಿಶ್ವಖ್ಯಾತಿ.
             ಚಹ ಸೇವನೆ ರೂಢಿಯಾಗುವ ಹಿಂದೆ ವಿವಿಧ ಕುಡಿಗಳ ಕಷಾಯಗಳ ಬಳಕೆಯಿದ್ದುವು. ಮೈಕೈನೋವಿಗೆ ಶಿವನೆ ಸೊಪ್ಪಿನ ಕಷಾಯ, ಮಳೆಗಾಲದ ಛಳಿಗೆ ಕಾಳುಮೆಣಸಿನ ಕಷಾಯ, ಒಂದೆಲಗ ಕಷಾಯ.... ನೂರಾರು. ಬದುಕಿನಲ್ಲದು ಅಲಿಖಿತವಾಗಿ ಅನುಷ್ಠಾನವಾಗುತ್ತಿದ್ದುವು. ಚಿಕ್ಕಪುಟ್ಟ ಅಸ್ವಸ್ಥತೆಗೂ ಆಸ್ಪತ್ರೆಗೆ ಓಡುವ ಪ್ರಮೇಯ ಬರುತ್ತಿರಲಿಲ್ಲ. ಆಹಾರದಲ್ಲಿ ಆರೋಗ್ಯ ಕಾಪಾಡುವ ಜ್ಞಾನವಿತ್ತು. ಇದರ ಅನುಷ್ಠಾನ ಮಸುಕಾದಂತೆ ಆಹಾರ ಪದ್ಧತಿಗಳು ಅಜ್ಞಾತವಾದುವು. ರುಚಿಗಳು ಮರೆಯಾದುವು. ಜೀವನ ಶೈಲಿ ಬದಲಾದುವು ಗುಳಿಗೆ-ಸಿರಪ್ಗಳು ಆಹಾರದ ಸ್ಥಾನ ಪಡೆದುವು!
             ಶಿರಸಿಯ ಪರಿಸರ ಪತ್ರಕರ್ತ ಶಿವಾನಂದ ಕಳವೆ ಮಕ್ಕಳ ಶಿಬಿರದಲ್ಲಿ ಕಳೆದ ಕಾಲವನ್ನು ನೆನಪಿಸುತ್ತಿದ್ದಾಗ ಎಳೆಯ ಮನಸ್ಸುಗಳು ಕುತೂಹಲ ಕಣ್ಣಿನಿಂದ, ತೆರೆದ ಕಿವಿಯಿಂದ ಆಲಿಸುತ್ತಿದ್ದುವು.  "ಕಾಫಿ, ಚಹದಲ್ಲಿರುವ ಅಡ್ಡಪರಿಣಾಮಗಳನ್ನು ಮಕ್ಕಳಿಗೆ ತಿಳಿಹೇಳಿದೆವು. ಎಲ್ಲಕ್ಕಿಂತ ಮುಖ್ಯವಾಗಿ ಶಿಬಿರದಲ್ಲಿ ಹದಿನೆಂಟು ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಕಷಾಯದ ರುಚಿಗೆ ಚಿಣ್ಣರು ಮಾರುಹೋದರು. ಕಷಾಯ ಕುಡಿಯಲು ಪೈಪೋಟಿ ಆಗುತ್ತಿತ್ತು. ಕೆಲವು ಚಹ ಪ್ರಿಯ ಮಕ್ಕಳು ಶಿಬಿರ ಮುಗಿಯುವುದರೊಳಗೆ ಕಷಾಯ ಪ್ರಿಯರಾಗಿ ಬದಲಾದರು", ಶಿವಾನಂದ ವಿವರಿಸುತ್ತಾರೆ.
              ಶೈಕ್ಷಣಿಕ ವ್ಯವಸ್ಥೆಯಲ್ಲಿ ನೈಜ ಬದುಕಿಗೆ ದಾರಿ ತೋರುವ ಪಠ್ಯಗಳಿಲ್ಲ. ಪ್ರಕೃತಿ, ಗಾಳಿ, ಮರಗಳನ್ನು ಚಿತ್ರಗಳ ಮೂಲಕ ತೋರಿಸಿ ಮಾಡುವ ಪರಿಸರ ಪಾಠವು ಒಂದಂಕದ ಪ್ರಶ್ನೆಗಳಿಗಷ್ಟೇ ಸೀಮಿತ. ನಗರದಲ್ಲೇ ಬೆಳೆದ ಮಕ್ಕಳಿಗೆ ನೈಜ ಪರಿಸರವನ್ನು ಅನುಭವಿಸಲು ಕಷ್ಟ. ಹಳ್ಳಿ ಮೂಲದ ಕುಟುಂಬದಲ್ಲಿ ಬೆಳೆದ ಮಗುವಿಗೆ ಅಪ್ಪಾಮ್ಮ ಹಳ್ಳಿಯ, ಪರಿಸರದ ಪಾಠ ಹೇಳಿಲ್ಲ. ಹೇಳಬೇಕೆಂದು ಕಂಡಿಲ್ಲ. ಹಾಗಾಗಿ ನೋಡಿ, ಇಂತಹ ಮಕ್ಕಳು ಹಳ್ಳಿಗೆ ಬಂದಾಗ ಬಾಟಲ್ ನೀರನ್ನೇ ಅಪೇಕ್ಷಿಸುತ್ತವೆ, ತಿಂದುಣ್ಣಲು ಡೈನಿಂಗ್ ಟೇಬಲ್ಲೇ ಬೇಕು! ಅಂಗಿಗೆ ಚೂರು ಮಣ್ಣಾದರೂ ಭೂಮಿ-ಆಕಾಶ ಒಂದು ಮಾಡುವಷ್ಟು ರಾದ್ದಾಂತ. ಮಕ್ಕಳು ಪರೀಕ್ಷೆಗಳಿಗೆ ಸಿದ್ಧವಾಗುವ ಯಂತ್ರಗಳಾಗಿದ್ದಾರೆ. ಈ ಧಾವಂತದಲ್ಲಿ ಬಾಲ್ಯ ಕಳೆದುಹೋಗಿರುತ್ತದೆ.
               ಶಿರಸಿ-ಕಳವೆ ಹಳ್ಳಿಯ 'ಕಾನ್ಮನೆ'ಯು ಈಚೆಗೆ ಪರಿಸರದ ನೈಜ ಪಾಠವನ್ನು ಶಿಬಿರದ ಮೂಲಕ ಹೇಳುವ ಯತ್ನ ಮಾಡಿದೆ. ನೂರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಮೂರು ದಿವಸ ಕಾಡಿನಲ್ಲಿ ಓಡಾಡಿದರು. ಮಣ್ಣಲ್ಲಿ ಆಟವಾಡಿದರು. ನೀರಲ್ಲಿ ಈಜಾಡಿದರು. ಮರದ ಇಳಿಬೇರುಗಳಲ್ಲಿ ಜೀಕಿದರು. ಕಾಡು ಹಣ್ಣುಗಳನ್ನು ತಿಂದರು. ಕಷಾಯ ಕುಡಿದರು. ಜೀವವೈವಿಧ್ಯತೆಗೆ ಬೆರಗಾದರು. "ನಗರದಲ್ಲಿ ಬೆಳೆದ ಮನಸ್ಸುಗಳಿಗೆ ಆರಂಭಕ್ಕೆ ಕಷ್ಟವಾಯಿತು. ಶಿಬಿರ ಮುಗಿಯುವ ಹೊತ್ತಿಗೆ ಹೊಸ ವಿಚಾರಗಳನ್ನು ಅನುಭವ ಮಾಡಿಕೊಂಡ ಖುಷಿ ಕಾಡಿತ್ತು. ಹೆತ್ತವರಿಗೂ ಪರಿಸರದ ಅಗತ್ಯವನ್ನು ಶಿಬಿರ ಕಟ್ಟಿಕೊಟ್ಟಿತ್ತು," ಎನ್ನುತ್ತಾರೆ ಶಿವಾನಂದ.
                ವಿದ್ಯಾರ್ಥಿಗಳಿಗೆ ವಿವಿಧ ವೈವಿಧ್ಯ ಹೂರಣಗಳೊಂದಿಗೆ ಬೇಸಿಗೆ ಶಿಬಿರಗಳು ಕನ್ನಾಡಿನಾದ್ಯಂತ ನಡೆಯುತ್ತಿವೆ. ಕಾನ್ಮನೆಯಲ್ಲಿ ಜರುಗಿದ ಶಿಬಿರ ಎಲ್ಲಕ್ಕಿಂತ ಭಿನ್ನ. ಪರಿಸರದ ಸೂಕ್ಷ್ಮಗಳನ್ನು ಥಿಯರಿ ಮೂಲಕ ಮಾತ್ರವಲ್ಲ, ಅದನ್ನು ಪ್ರಾಕ್ಟಿಕಲ್ ಮಾಡುವತ್ತ ದೊಡ್ಡ ಹಜ್ಜೆಯಿರಿಸಿತ್ತು. ಕಳವೆಯಲ್ಲಿ ನೀರಿಂಗಿಸುವ ಮಾದರಿಗಳು ಸಾಕಷ್ಟಿವೆ. ಹಸಿರೆಬ್ಬಿಸಿದ ಯಶೋಗಾಥೆಗಳಿವೆ. ಶಿವಾನಂದರ ಬತ್ತಳಿಕೆಯಲ್ಲಿ ನೂರಾರು ಕಾಡಿನ ಕತೆಗಳಿವೆ. ನೀರಿನ ಗಾಥೆಗಳಿವೆ. ಶಿಬಿರದುದ್ದಕ್ಕೂ ಇಂತಹ ಕತೆಗಳನ್ನು ಕೇಳಿದ, ನೋಡಿದ ಮಕ್ಕಳು ತಾವೇ ಒಂದು ಕತೆಯಾಗುವಷ್ಟು ಬೆಳೆಯುತ್ತಾರೆ! ಕೆರೆಗಳ ಕಲ್ಪನೆ ಇಲ್ಲದ ವಿದ್ಯಾರ್ಥಿಗಳು ಕಣಿವೆ ಕೆರೆಯನ್ನು ನೋಡಿ ದಿಗ್ಭಾಂತಿಯನ್ನೂ ಹೊಂದಿದ್ದರು. ನೀರಿಂಗಿಸುವ ಮಾದರಿಗಳನ್ನು ವೀಕ್ಷಿಸುತ್ತಾ, ಅದರ ಕ್ರಿಯೆಗಳನ್ನು ಆಲಿಸುತ್ತಾ ನೀರಿನ ಮಹತ್ವವನ್ನು ಹತ್ತಿರದಿಂದ ತಿಳಿದುಕೊಂಡರು.
                ಹಣ್ಣುಗಳ ಮರ ಕಂಡರೆ ಸಾಕು, ಮರವೇರಿ ಹಣ್ಣು ಕೊಯ್ದು ಉದರಕ್ಕಿಳಿಸುವುದು ಬಾಲ್ಯ ಸ್ವಭಾವ.  ಅಂಗಿ, ಚಡ್ಡಿಯ ಜೇಬುಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ಶಾಲೆ ತಲಪುವಾಗ ಒಂದು ಅವಧಿ ಕಳೆದುಹೋಗಿ, ಅಧ್ಯಾಪಕರಿಂದ ಬೆತ್ತಸೇವೆ ಮಾಡಿಕೊಂಡ ದಿವಸಗಳಿದ್ದುವಲ್ಲಾ. ಬದಲಾದ ಕಾಲಘಟ್ಟದಲ್ಲಿ ಮರ ಏರಿ ಹಣ್ಣುಗಳನ್ನು ಕೊಯ್ಯುವುದು ಬಿಡಿ, ಮರದ ಪರಿಚಯ ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲ. ಶಿಬಿರದಲ್ಲಿ ಮರವನ್ನು ಏರಲು ಮಕ್ಕಳಿಗೆ ತರಬೇತಿ ನೀಡಿದ್ದರು. ಕಾಡು ಹಣ್ಣುಗಳ ಸವಿಯನ್ನು ತೋರಿಸಲಾಗಿತ್ತು. ಸೇಬು, ದ್ರಾಕ್ಷಿಗೆ ಒಗ್ಗಿಹೋದ ಮನಸ್ಸುಗಳು ಕಾಡುಹಣ್ಣುಗಳನ್ನು ತಿನ್ನಲು ಮುಗಿಬೀಳುವ ದೃಶ್ಯ - ಜ್ಞಾಪಿಸಿಕೊಳ್ಳುತ್ತಾರೆ ಕಳವೆ.
                ಕೆರೆಯ ನೀರು, ಝರಿ, ಹಳ್ಳಗಳನ್ನು ತೋರಿಸಿ ಈಜಲು ಮಕ್ಕಳಿಗೆ ಪ್ರೋತ್ಸಾಹ. ರಾತ್ರಿ ವಿದ್ಯುಚ್ಛಕ್ತಿ ಇದ್ದರೂ ಕ್ಯಾಂಡಲ್ ಬೆಳಕಿನಲ್ಲಿ ಭೋಜನ, ಪರಿಸರ ನಾಟಕಗಳು, ನರ್ಸರಿ ಬ್ಯಾಗ್ಗಳಿಗೆ ಮಣ್ಣು ತುಂಬುವುದು, ಕಸಿ ಕಟ್ಟುವ ಬಗೆ, ಚಿತ್ರ ಸಹಿತ ಕಾಡಿನ ಕತೆಗಳು, ನಿಸರ್ಗ ವಿಸ್ಮಯತೆ, ಸಸ್ಯಗಳನ್ನು ಗುರುತು ಹಿಡಿಯುವ ಕಾರ್ಯಹೂರಣ. ಇರುವೆ ಸಾಲನ್ನು ಅಧ್ಯಯನ ಮಾಡುವ ಶಿಸ್ತಿನ ಪಾಠ, ಮರದ ವಯಸ್ಸನ್ನು ಕಂಡು ಹಿಡಿಯುವ ಬಗೆ, ಕೆಂಪಿರುವ ಗೂಡು ಕಟ್ಟುವ ಜಾಣ್ಮೆ, ಗೆದ್ದಲಿನ ಗೂಡು, ಮುಳ್ಳುಕಂಟಿಯ ಮಹತ್ವ, ವಿವಿಧ ಎಲೆಗಳನ್ನು ತಿನ್ನಿಸಿ ರುಚಿ ಪರಿಚಯ. ತಂಬುಳಿ, ಕಷಾಯ, ಚಟ್ನಿಗಳನ್ನು ತಯಾರಿಸುವ ಅಡುಗೆ ಸೆಶನ್ ಮಕ್ಕಳಿಗೆ ಹೆಚ್ಚು ಆಪ್ತ. ಒಗ್ಗರಣೆಗೆ ಬಳಸುವ ಪರಿಕರಗಳು, ತಯಾರಿ ವಿಧಾನಗಳನ್ನು ಕಾಗದಕ್ಕಿಳಿಸಿಕೊಂಡರು.
              ನೈಸರ್ಗಿಕ ನೀರಿನ ಸಂಪನ್ಮೂಲಗಳನ್ನು ನೋಡಿದ ಚಿಣ್ಣರಲ್ಲಿ ಕಾತರಗಳಿದ್ದುವು. ಇಲ್ಲೆಲ್ಲೂ ಬೋರ್ವೆಲ್ ಇಲ್ಲಾರಿ? ಸೊಳ್ಳೆಗಳೇ ಯಾಕಿಲ್ಲಾರಿ? ವಾಹನಗಳು ಬರೋದೇ ಇಲ್ಲ, ಇಲ್ಲಿ ಹೇಂಗಿರ್ತೀರಿ?.. ಇವೇ ಮೊದಲಾದ ಪ್ರಶ್ನೆಗಳು ಹಳ್ಳಿಯ ಸಂಪರ್ಕವಿರದ ಮಕ್ಕಳಲ್ಲಿತ್ತು. ಮೂರು ದಿವಸ ಪರಿಸರದ ಮಧ್ಯದ ಬದುಕಿನ ನಂತರ ಈ ಪ್ರಶ್ನೆಗಳಿಗೆ ಸ್ವತಃ ಉತ್ತರ ಕಂಡುಕೊಂಡರು. ಬಹುತೇಕ ಮಕ್ಕಳ ಪಾಲಕರೂ ಶಿಬಿರದಲ್ಲಿರುತ್ತಿದ್ದರು. ಅವರಿಗೂ ಪರೋಕ್ಷವಾಗಿ ಪರಿಸರದ ಪಾಠ.
                ಕಾಡನ್ನು ಪ್ರತ್ಯಕ್ಷವಾಗಿ ನೋಡಿಲ್ಲ. ನಡೆದು ಅಭ್ಯಾಸವಿಲ್ಲ. ಆದರೆ ಪರಿಸರವನ್ನು ಕಲಿಯುವ ಕುತೂಹಲವಿದ್ದುವು. ಬೆಳ್ಳಂಬೆಳಿಗ್ಗೆಯಿಂದ ರಾತ್ರಿ ತನಕ ಕಲಿಯುವ ಮಕ್ಕಳು ಆಕಳಿಸಿದ್ದು ತೀರಾ ತೀರಾ ಕಡಿಮೆ. ಬಯಲು ಸೀಮೆಯ ಚಿಣ್ಣರು ತುಂಬಾ ಖುಷಿ ಪಟ್ಟರು. ಕಳವೆಯ ಶ್ರೀಧರ ಭಟ್ಟರ ಮನೆಯಲ್ಲಿನ  ಜಿಂಕೆ ಸಂಸಾರದೊಂದಿಗೆ ಚಿಣ್ಣರ ಗಡಣ ಮಿಳಿತವಾದ ಕ್ಷಣ ಶಿಬಿರದ ಹೈಲೈಟ್. ಚಿತ್ರ, ಟಿವಿಗಳಲ್ಲಿ ಮಾತ್ರ ವೀಕ್ಷಿಸಿದವರಿಗೆ ಜಿಂಕೆಯನ್ನು ಮುಟ್ಟುವ, ಆಟವಾಡುವ ಅವಕಾಶವು ಯಾವ ಶಿಬಿರದಲ್ಲಿ ಸಿಗುತ್ತೆ ಹೇಳಿ?
                "ವಿಜ್ಞಾನವನ್ನು ಬದಿಗಿಟ್ಟು ಪರಿಸರದ ಸಂಗತಿಗಳನ್ನು ಹೇಳುತ್ತೇವೆ. ನಿತ್ಯ ಬದುಕಿನಿಂದ ಮರೆಯಾದ ಸೂಕ್ಷ್ಮ ಅನುಭವ ವೇದ್ಯ ವಿಚಾರಗಳನ್ನು ಪ್ರಸ್ತುತ ಪಡಿಸುತ್ತೇವೆ. ಪರಿಸರದ ಸೂಕ್ಷ್ಮ ಭಾಷೆಗೆ ಮಾತನ್ನು ಕೊಡುವ ಯತ್ನ ಮಾಡುತ್ತೇವೆ. ಪಠ್ಯದಲ್ಲಿ ಸಿಗದ ಅದೆಷ್ಟೋ ಹೊಸ ಸಂಗತಿಗಳನ್ನು ಮಕ್ಕಳು ಕಲಿಯುತ್ತಾರೆ. ವಿಚಾರದ ಮೂಟೆಯನ್ನು ಹೊತ್ತೊಯ್ಯುತ್ತಾರೆ. ಹೆತ್ತವರಿಗೆ ತಾನು ಕಂಡ, ಕಲಿತುದನ್ನು ಮನದಟ್ಟು ಮಾಡುತ್ತಾರೆ. ಇದರಿಂದಾಗಿ ಕೊನೇಪಕ್ಷ ಮಕ್ಕಳೊಳಗೆ ಕಾಡಿನ ಬದುಕೊಂದು ಸುಪ್ತಾವಸ್ಥೆಯಲ್ಲಿ ಜೀವಂತವಾಗಿರುತ್ತದೆ. ಶಿಬಿರಕ್ಕೆ ಬಂದ ಒಂದೊಂದು ವಿದ್ಯಾರ್ಥಿಯೂ ಕಾನ್ಮನೆಯ ರಾಯಭಾರಿಗಳು," ಒಟ್ಟೂ ಶಿಬಿರದ ಫಲಿತಾಂಶವನ್ನು ಶಿವಾನಂದ ಕಟ್ಟಿಕೊಡುತ್ತಾರೆ.
                ಮಕ್ಕಳ ಮನಸ್ಸು ಖಾಲಿಯಾದ ಚೀಲ. ತುಂಬಿದಷ್ಟು ತುಂಬಿಸಿಕೊಳ್ಳುವ ಕುತೂಹಲ. ತುಂಬುವಂತಹ ವಿಚಾರಗಳಲ್ಲಿ ಬದುಕಿನ ಸ್ಪರ್ಶವಿದ್ದರೆ ಶಿಬಿರಗಳು ಸಾರ್ಥಕ. ಶೈಕ್ಷಣಿಕ ಅವಧಿಯಲ್ಲಿ ಪರಿಸರ, ಕೃಷಿ, ಜೀವವೈವಿಧ್ಯ ಕಲಿಕೆಗಳಿಂದ ವಂಚಿತರಾಗುವ ಮಕ್ಕಳಿಗೆ ಕಾನ್ಮನೆ ಪರಿಸರ ಪಾಠದ ಮನೆ. ಶಿವಾನಂದ ಕಳವೆಯವರ ಸಂಪನ್ಮೂಲ ತಂಡ ಮಕ್ಕಳೊಂದಿಗೆ ಮಕ್ಕಳಾಗಿ ಶಿಬಿರವನ್ನು ನಡೆಸಿಕೊಟ್ಟಿತ್ತು.
               ಕಾನ್ಮನೆಗೀಗ ವಾರ್ಶಿಕೋತ್ಸವದ ಸಡಗರ. ಒಂದು ವರುಷದಲ್ಲಿ ಚಟುವಟಿಕೆಯ ಗೂಡಾದ ಕಾನ್ಮನೆಯು ಇನ್ನೂ ಆರ್ಥಿಕ ಸದೃಢತೆಯತ್ತ ಹಜ್ಜೆಯಿರಿಸಬೇಕಷ್ಟೇ. ಸಶಕ್ತವಾಗಿ ತನ್ನ ಕಾಲ ಮೇಲೆ ನಿಲ್ಲುವಂತಾಗಲು ಪ್ರೋತ್ಸಾಹದ ಸಹಕಾರದತ್ತ ನೋಡುತ್ತಿದೆ. ಇದಕ್ಕಾಗಿ ಒಂದು ಹೆಗಲು ಹತ್ತಾಗಬೇಕು, ನೂರಾಗಬೇಕು.

Friday, May 8, 2015

'Chakka Chapathy

 'Chakka Chapathy
 'Chakka Chapathy' was an innovative preparation at Ezilode Jack Festival (Kerala) that was inaugurated yesterday. This was prepared at the site and was offered with a spicy Keralian Tender Jackfruit Curry. Smt Padmini Sivadasan from Wayanad who has innovated this preparation is a Jackfruit Value Addition Trainer with very good experience and knowledge of many new products. Under her guidance Ezilode housewives had prepared many Jackfruit Products. Festival is open today too.

(courtesy  : Shree Padre)

Monday, May 4, 2015

ಈ ಟಿವಿ ನ್ಯೂಸ್ ವಾಹಿನಿಯಲ್ಲಿ 'ಹಸಿರು ಮಾತು' ಬ್ಲಾಗ್ ಪರಿಚಯ : ಕೃತಜ್ಞತೆಗಳು

ಕನ್ನಡದ ಜನಪ್ರಿಯ ವಾಹಿನಿ 'ಈಟಿವಿ ನ್ಯೂಸ್' ನ 'ಸೈಡ್ ವಿಂಗ್' ಕಾರ್ಯಕ್ರಮದಲ್ಲಿ ನನ್ನ 'ಹಸಿರು ಮಾತು' ಬ್ಲಾಗಿನ ಕುರಿತು ಚಿಕ್ಕ ಪರಿಚಯ ಕಾರ್ಯಕ್ರಮವು ಮೇ 3 ಮತ್ತು 5ರಂದು ಪ್ರಸಾರವಾಯಿತು. ಈ ಕಾರ್ಯಕ್ರಮದ ರೂವಾರಿ ವಾಹಿನಿಯ ವಾರ್ತಾ ಮುಖ್ಯಸ್ಥ ಜಿ.ಎನ್.ಮೋಹನ್ ಅವರಿಗೆ ಮತ್ತು ಈ ಟಿವಿ ವಾಹಿನಿಗೆ ಕೃತಜ್ಞತೆಗಳು.

Sunday, May 3, 2015

ಚೊಚ್ಚಲ ಸಂತೆಗೆ ಹಲಸು ಪ್ರಿಯರ ಮಹಾಪೂರ

 ರುಚಿ ನೋಡಿ ತಳಿ ಆಯ್ಕೆಟ ಪ್ರಕ್ರಿಯೆ - ಮುಳಿಯ ವೆಂಕಟಕೃಷ್ಣ ಶರ್ಮ, ಉಮಾನಾಥ, ಗೇಬ್ರಿಯಲ್ ವೇಗಸ್
 ಮೌನೀಶ್ ಮಲ್ಯರು ಸೊಳೆಯ ರುಚಿ ಅನುಭವಿಸುತ್ತಿರುವುದನ್ನು ನೋಡಿ.....
 ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳು
 ಹಲಸಿನ ಕಬಾಬ್
ಹಲಸಿನ ಹಣ್ಣಿನ ಮಂದಸಾಋ (ಸ್ಕ್ವಾಷ್)

                 ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆಯುವ 'ಹಲಸು ಸಂತೆ' ರಾಜ್ಯದಲ್ಲಿ ಖ್ಯಾತಿ. ಕೋಟಿಗೂ ಮಿಕ್ಕಿದ ವ್ಯವಹಾರ. ಎಪ್ರಿಲ್-ಮೇ ತಿಂಗಳಿನಲ್ಲಿ ವಾರಕ್ಕೆರಡು ದಿವಸ ಸಂತೆ ನಡೆಯುತ್ತದೆ. ಹಲಸು ಲಾರಿಯೇರಿ ಸಾಗುವ ಸೊಬಗನ್ನು ನೋಡಿಯೇ ಅನುಭವಿಸಬೇಕು.
                 ಹಲಸು ಋತುವಿನಲ್ಲಿ ಅಲ್ಲಿಲ್ಲಿ ಹಲಸಿಗೆ ಮಾನ ಕೊಡುವ ಯತ್ನಗಳು ನಡೆಯುತ್ತಿವೆ. ಸೊಳೆ ಮಾರಾಟದಿಂದ ಮೌಲ್ಯವರ್ಧನೆ ತನಕ ಹಲಸು ಮಾನ ವರ್ಧಿಸಿಕೊಳ್ಳುತ್ತಿದೆ. ಕೇರಳವಂತೂ ರಾಷ್ಟೀಯ ಮಟ್ಟದ ಸಮ್ಮೇಳನವನ್ನು ನಡೆಸಿದೆ. ರಾಷ್ಟ್ರ ಮಟ್ಟದಲ್ಲಿ ಸಂಪರ್ಕ ಕೊಂಡಿಗಳ ಜಾಲಗಳನ್ನು ಹೆಣೆದಿದೆ. ಉತ್ತರ ಭಾರತಕ್ಕೆ ತರಕಾರಿಯಾಗಿ ಕೇರಳದ ಹಲಸು ಲೋಡ್ಗಟ್ಟಲೆ ಸಾಗುತ್ತಿದೆ. 
                 ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ೨೦೧೫ ಎಪ್ರಿಲ್ 26ರಂದು 'ಹಲಸು ಸಂತೆ' ಜರುಗಿತು. ಹಲಸು ಪ್ರಿಯ ಮೌನೀಶ್ ಮಲ್ಯರ ಸಾರಥ್ಯದ 'ಹಲಸು ಪ್ರೇಮಿ ಕೂಟ'ದ ಆಯೋಜನೆಯಲ್ಲಿ ಸಂತೆ ಸಂಪನ್ನಗೊಂಡಿತ್ತು. ಸಾವಿರಾರು ಮಂದಿಯನ್ನು ಸೆಳೆದಿತ್ತು. ಸ್ಥಳೀಯವಾಗಿ ಹಲಸಿನ ಉತ್ಪನ್ನಗಳಿಗೆ ಮಾರುಕಟ್ಟೆ ರೂಪಿಸುವುದು ಸಂತೆಯ ಆಶಯ.
                   ಈ ಬಾರಿ ಪ್ರಾಕೃತಿಕವಾಗಿ ಹಲಸಿನ ಇಳುವರಿಯ ಋತು ಮುಂದೆ ಹೋಗಿದೆ. ಸುಮಾರಾಗಿ ಮೇ ಕೊನೆಗೆ ಕಾಯಿ ಬಲಿತು ಹಣ್ಣಾಗಬಹುದಷ್ಟೇ. ಮೇ ತಿಂಗಳು ಸಹಜವಾಗಿ ಮಳೆಯ ಸಮಯ. ಆಗ ಸಂತೆಯನ್ನು ಏರ್ಪಡಿಸುವುದು ತ್ರಾಸ. ಮಲ್ಯರು ಪ್ರಾಯೋಗಿಕವಾಗಿ ಮೊದಲೇ ಕಾರ್ಯಕ್ರಮವನ್ನು ನಿಗದಿ ಮಾಡಿದ್ದರು. ಸಂತೆಯಲ್ಲಿ ಹಲಸಿನ ಕಾಯಿ, ಹಣ್ಣುಗಳ ಧಾಂಗುಡಿ ಕಡಿಮೆಯಿತ್ತು. ಅಪೇಕ್ಷಕರ ಪಟ್ಟಿ ದೊಡ್ಡದಿತ್ತು. ಹಲಸಿನ ಹಣ್ಣು ಒಯ್ಯಲೆಂದೇ ಆಗಮಸಿದ ಅಮ್ಮಂದಿನ ಸಂಖ್ಯೆ ಕಡಿಮೆಯಲ್ಲ!
                'ತಳಿ ಆಯ್ಕೆ' ಸಂತೆಯ ಮುಖ್ಯ ಕಲಾಪ. ಕೃಷಿಕರೇ ಮಾನದಂಡಗಳನ್ನು ಗೊತ್ತು ಮಾಡಿ ಹತ್ತು ತಳಿಗಳಲ್ಲಿ ಮೂರನ್ನು ಉತ್ತಮ ಎಂದು ಆಯ್ಕೆ ಮಾಡಿದ್ದರು. ಬಣ್ಣ, ರುಚಿ, ಸ್ವಾದ, ಸೊಳೆಯ ಗಾತ್ರ, ಪರಿಮಳ, ಹಣ್ಣಾಗುವ ಕಾಲ...ಗಳನ್ನು ಪರೀಕ್ಷಿಸಿ ಅಂಕಗಳನ್ನು ನೀಡಿದ್ದರು. ಆಯ್ಕೆಯಾದ ತಳಿಗಳನ್ನು ಕಸಿ ಕಟ್ಟುವುದರ ಮೂಲಕ ಅಭಿವೃದ್ಧಿ ಪಡಿಸುವುದು ಭವಿಷ್ಯದ ಯೋಜನೆ. ಆಯ್ಕೆಗೊಂಡ ತಳಿಗಳು ಈಗಾಗಲೇ ಜನಪ್ರಿಯವಾದವುಗಳು. ಹುಡುಕಾಡಿದರೆ ಸಾಕಷ್ಟು ಉತ್ತಮ ಹಲಸನ್ನು ಆಯ್ಕೆ ಮಾಡಬಹುದು. ಮುಂದಿನ ಸಂತೆಯಲ್ಲಿ ಈ ವಿಚಾರದಲ್ಲಿ ಹೆಚ್ಚು ಗಮನ ಕೊಡುತ್ತೇವೆ, ಎನ್ನುತ್ತಾರೆ ಮಲ್ಯರು.
                ಮಲ್ಯರು ತಮ್ಮ 'ನವರಂಗ್' ಗೃಹದ ಆವರಣದಲ್ಲಿ ಸಂತೆಯನ್ನು ಏರ್ಪಡಿಸಿದ್ದರು. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವುದು ಕನಸು. ಮನೆಯ ಮಹಡಿಯನ್ನೇ ಉತ್ಪಾದನಾ ಕೇಂದ್ರವನ್ನಾಗಿ ಬದಲಿಸಿದ್ದಾರೆ. ಹಲಸಿನ ಹಪ್ಪಳ, ಚಿಪ್ಸ್, ಸಾಟ್, ಹಲ್ವ, ಉಪ್ಪುಸೊಳೆ.. ಹೀಗೆ ಉತ್ಪನ್ನಗಳನ್ನು ಸಿದ್ಧಪಡಿಸಲಿದ್ದಾರೆ. ಪ್ರಾಯೋಗಿಕವಾಗಿ ಉತ್ಪನ್ನಗಳನ್ನು ತಯಾರಿಸಿ, ಆಸಕ್ತರಿಗೆ ರುಚಿ ಹಿಡಿಸಿ ಗೆದ್ದಿದ್ದಾರೆ. ಹಲಸಿನ ರುಚಿ ಗೊತ್ತಿದ್ದ ಗ್ರಾಹಕರು ಇದ್ದಾರೆ. ಹಳ್ಳಿ ಮೂಲದ ಪಟ್ಟಣಿಗರಿಗೆ ಹಲಸಿನ ರುಚಿ ಹೊಸದಲ್ಲ. ಹಾಗಾಗಿ ಅವರಿಗೆ ಸರ್ವ್ ಮಾಡಲು ಬೇಕಾದ ಅಡಿಗಟ್ಟನ್ನು ಹಾಕಿಕೊಂಡಿದ್ದೇನೆ, ಎನ್ನುತ್ತಾರೆ ಮೌನೀಶ್.
               ಜರುಗಿದ ಸಂತೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳಿದ್ದುವು. ಹಲಸಿನ ಹಪ್ಪಳ, ಹಲ್ವ, ಬಾರ್, ವೈನ್, ಹೆಚ್ಚು ದಿನ ತಾಳಿಕೆಯ ಎಳೆ ಗುಜ್ಜೆಯ 'ರೆಡಿ ಟು ಕುಕ್' ಉತ್ಪನ್ನ, ಉಪ್ಪಿನಕಾಯಿ, ಸ್ಕ್ವಾಷ್. ಹೀಗೆ ಒಂದೇ ಎರಡೇ. ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಸರಿತಾ ಹೆಗಡೆ ತಮ್ಮ ತಂಡದೊಂದಿಗೆ ಆಗಮಿಸಿ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ವಿಜಯಕುಮಾರ್ ದಂಪತಿಗಳ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ ವೈನ್ ಮತ್ತು ಹಲಸಿನ ಮಂದಸಾರ(ಸ್ಕ್ವಾಷ್)ಗಳು ಗಮನೀಯ. ಜ್ಯಾಕ್ ಅನಿಲ್ ಮತ್ತು ವಾರಣಾಶಿ ಸಂಶೋಧನಾ ಕೇಂದ್ರದ ವಿವಿಧ ಹಲಸಿನ ತಳಿಗಳ ಕಸಿ ಗಿಡಗಳ ಪ್ರದರ್ಶನ ಮತ್ತು ಮಾರಾಟವಿತ್ತು.
                ಸಂತೆಗೆ ಆಗಮಿಸುವ ಹಲಸು ಪ್ರಿಯರಿಗಾಗಿಯೇ ಮಹಾರಾಷ್ಟ್ರದ ದಾಪೋಲಿಯಿಂದ ತರಿಸಿದ  ಹಲಸಿನ ಹಣ್ಣಿನ ಚಾಕೋಲೇಟ್ ಬಾಯಿ ಸಿಹಿ ಮಾಡಿತು. ಇದು ಕೊಂಕಣ್ ಪ್ರದೇಶದಲ್ಲಿ ಜನಪ್ರಿಯತೆಯ ಮೆಟ್ಟಿಲೇರುತ್ತಿರುವ ಉತ್ಪನ್ನ. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಅಂಗವಾಗಿ ಹಲಸಿನ ಹಲ್ವ, ಪಲ್ಪ್... ಗಳನ್ನು ಸಿದ್ಧಪಡಿಸುವ ಯಂತ್ರದ ಯತ್ನ ಶ್ಲಾಘನೀಯ. ವಿದ್ಯಾರ್ಥಿಗಳಾದ ಮೊಹಮ್ಮದ್ ನಸೀರ್, ಆಶಿಕ್ ಜಿ., ಲಿಯೋನ್ ಕಿಪ್ಟನ್ ಡಿ'ಸೋಜ, ಮಹಮ್ಮದ್ ಝಾಹಿಕ್ ಕೆ.ಎ. ಇವರುಗಳನ್ನು ಅಭಿನಂದಿಸಲಾಯಿತು. ಕಳೆದ ನಾಲ್ಕು ದಶಕಗಳಿಂದ ವೈವಿಧ್ಯಮಯ ಹಲಸಿನ ತಳಿಗಳನ್ನು ನೆಟ್ಟು ಪೋಶಿಸುತ್ತಿರುವ ಕೃಷಿಕ ನರಿಕೊಂಬು ಪುಂಡಳೀಕ ನಾಯಕ್-ರಾಧಾ ನಾಯಕರನ್ನು ಗೌರವಿಸಲಾಗಿತ್ತು.    'ಇದು ಆರಂಭ ಅಷ್ಟೇ. ಹಲಸು, ಚಿಪ್ಸ್, ತಿನ್ನಲು ಹೊಂದುವಂತಹ ತಳಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಅಭಿವೃದ್ಧಿ ಪಡಿಸಿ, ನೆಟ್ಟು ಬೆಳೆಸುವುದು ಆಗಬೇಕಾದ ಕೆಲಸ,' ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್. 
                ಬಂಟ್ವಾಳ ತಾಲೂಕಿನ ಕೇಪು- ಉಬರು 'ಹಲಸು ಸ್ನೇಹಿ ಕೂಟ'ವು ಐದು ವರುಷದ ಹಿಂದೆ ಆರಂಭಿಸಿದ ತಳಿ ಆಯ್ಕೆ ಪ್ರಕ್ರಿಯೆಯು ವಿಸ್ತಾರಗೊಳ್ಳುತ್ತಿದೆ. ಕೂಟವು ಏನಿಲ್ಲವೆಂದರೂ ಇಪ್ಪತ್ತೈದಕ್ಕೂ ಮಿಕ್ಕಿದ ತಳಿಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಿದೆ. ಹಲಸಿನ ತೋಟವನ್ನೇ ಎಬ್ಬಿಸಿದ ಕೃಷಿಕರಿದ್ದಾರೆ. ಅಡುಗೆ ಮನೆಗಳಲ್ಲಿ ಹಲಸಿನ ಖಾದ್ಯಗಳ ಸವಿ ಮತ್ತೆ ಮರಳಿದೆ.
ಹಲಸು ಸ್ನೇಹಿ ಕೂಟವು ತರಕಾರಿ, ಗೆಡ್ಡೆ, ಮಾವು, ಹಲಸು, ಸಿರಿಧಾನ್ಯಗಳ ಕುರಿತು ಒಂದೊಂದು ದಿವಸಗಳ ಮೇಳ, ಕಾರ್ಯಾಗಾರಗಳನ್ನು ಏರ್ಪಡಿಸಿತ್ತು. ನಿರ್ವಿಷ ಆಹಾರದಿಂದ ಮುಕ್ತವಾಗುವ ಚಿಂತನೆಯನ್ನು ಹೊಂದಿದ ಸ್ನೇಹಿ ಕೂಟದ ಆಶಯದ ಮುಂದುವರಿಕೆಯಾಗಿ ಬಂಟ್ವಾಳದಲ್ಲಿ 'ಹಲಸು ಪ್ರೇಮಿ ಕೂಟ' ಉದಯವಾಗಿದೆ.

Saturday, May 2, 2015

ಸೋಂದಾ ಕೃಷಿ ಜಯಂತಿ

ಉತ್ತರ ಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ 'ಕೃಷಿ ಜಯಂತಿ' ಯು ಮೇ 1, 2ರಂದು ಸಂಪನ್ನಗೊಳ್ಳುತ್ತಿದೆ. ಸಾವಿರಾರು ಕೃಷಿಕರು ಭಾಗಿ. ಹತ್ತಾರು ಮಳಿಗೆಗಳು. ಕೃಷಿ ಸಾಧಕರಿಗೆ ಪುರಸ್ಕಾರ. ಉತ್ತಮ ವಾತಾವರಣ. ಗೌಜಿಗಳಿಲ್ಲದ ಅರ್ಥಪೂರ್ಣ ಕಾರ್ಯಕ್ರಮ. ಪ್ರಥಮ ಬಾರಿಗೆ ಸೋಂದಾಗೆ ಭೇಟಿ.

Friday, May 1, 2015

ಸಂಪದ ಸಾಲಿನ 'ಸಂಪಣ್ಣ'


             ಕಳೆದ ವರುಷ ಸುಳ್ಯದ ಕೇಶವ ಕೃಪಾದ ಕಾರ್ಯಕ್ರಮವೊಂದರಲ್ಲಿ ಸಂಪ ವೆಂಕಟೇಶ ಅವರೊಂದಿಗೆ ಮುಖಾಮುಖಿ. ಅದಕ್ಕಿಂತ ಮುಂಚೆ ಫೇಸ್ ಬುಕ್ಕಿನಲ್ಲಿ ಪರಿಚಯ. ಮೊದಲ ನೋಟದಲ್ಲೇ ಆವರಿಸಿ ಬಿಡುವ ಆಪ್ತತ್ವ. ನಂತರದ ದಿನಗಳಲ್ಲಿ ಆಗಾಗ್ಗೆ ದೂರವಾಣಿ ಸಂಭಾಷಣೆ. ಎಪ್ರಿಲ್ 30ರಂದು ಸಾಗರದ ಸನಿಹದ ಅವರ ಮನೆ / ಕಚೇರಿಗೆ ಹೋಗಿದ್ದೆ. ಇವರು ಸಂಪದ ಸಾಲು ಎನ್ನುವ ಪತ್ರಿಕೆಯ ಸಂಪಾದಕ. ಎಲ್ಲಕ್ಕಿಂತಲೂ ಮುಖ್ಯವಾಗಿ ಭಾವ ಜೀವಿ. ಧನಾತ್ಮಕ ಚಿಂತನೆಯ ಜವ್ವನ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ. ರಿಸಲ್ಟ್ ಓರಿಯಂಟೆಡ್ ಕೆಲಸಗಳೆಂದರೆ ಇಷ್ಟ. ಸಮಯ ಕೊಲ್ಲುವ ವಿಚಾರಗಳೆಂದರೆ ಅವರಿಗೆ ಇಷ್ಟವಿಲ್ಲ. ನಿರಂತರ ಓದು. ಹೆಗ್ಗೋಡು ಸನಿಹ ಹತ್ತೆಕ್ರೆ ಕೃಷಿ ಭೂಮಿಯ ಯಜಮಾನ. ತೋಟದ ಬೆಳವಣಿಗೆಯಲ್ಲಿ ಹತ್ತಾರು ಕನಸುಗಳು. ನನಸಿನ ಹೆಜ್ಜೆಯಲ್ಲಿ ಸಾಗುವ ಸಂಪ ಅವರಲ್ಲಿ ಸ್ಪಷ್ಟವಾದ ಮುನ್ನೋಟವಿದೆ. ದೂರದೃಷ್ಟಿಯಿದೆ. ಸಾಗಿದ ದಾರಿಯಲ್ಲಿ ಗುರುತರವಾದ ಹೆಜ್ಜೆ ಗುರುತನ್ನು ಊರಿದ 'ನಮ್ಮ ಸಂಪಣ್ಣ'ನ ಮುಂದೆ ಇನ್ನೂ ಕಾಲವಿದೆ. ಊರಲು ಹೆಜ್ಜೆಯಿದೆ. ಖಂಡಿತಾ ಊರುತ್ತಾರೆ.
             ಅವರೊಂದಿಗೆ ಮಾತನಾಡುತ್ತಿದ್ದಂತೆ ನನ್ನ ವಯಸ್ಸೂ ಹತ್ತು-ಹದಿನೈದು ವರುಷ ಹಿಂದೋಡಿತು. ಅವರ ವಯಸ್ಸಲ್ಲಿ ನಾನು ಏನೂ ಸಾಧಿಸಲಾಗದ ವ್ಯಥೆ ಕಾಡಿತು.

ಎಸ್.ಎನ್.ಪೆಜತ್ತಾಯ ನೆನಪು

ಅನುಭವಿ ಕೃಷಿಕ ಎಸ್.ಎನ್.ಪೆಜತ್ತಾಯರು ಎಪ್ರಿಲ್ 30ರಂದು ವಿಧಿವಶರಾದರು.
ತಮ್ಮ ಹಾಸ್ಯಮಿಶ್ರಿತ ಬರೆಹ, ಮಾತುಗಳಿಂದ ಬಹುಬೇಗನೆ ಆವರಿಸಿ ಬಿಡುವಂತಹ ವ್ಯಕ್ತಿತ್ವ. ತನ್ನ ಜೀವನಾನುಭವ, ಕೃಷಿಯ ಅನುಭವಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸಿದ್ದಾರೆ. ಕೆಲವು ಪುಸ್ತಕ ರೂಪದಲ್ಲಿ ಬಂದಿವೆ. ತಾವು ಸಾಕಿನ ಮುದ್ದಿನ, ನಿಯತ್ತಿನ ನಾಯಿಯ ಕುರಿತೇ ಪುಸ್ತಕ ಬರೆದಿದ್ದರು. ಮನುಷ್ಯರಂತೆ ಪ್ರಾಣಿಗಳಿಗೂ ಮನಸ್ಸು, ಭಾವನೆಗಳಿವೆ ಎಂದು ನಂಬಿದವರು. ಮಿಂಚಂಚೆಗಳಿಗೆ ತಕ್ಷಣ ಉತ್ತರ ಕೊಡುವಂತಹ ಶಿಸ್ತು. ಬ್ಲಾಗ್, ಫೇಸ್ ಬುಕ್ಕಿನಲ್ಲಿ ತಮಗೆ ಇಷ್ಟವಾದ ಪೋಸ್ಟ್ ಗಳಿಗೆ ಕೇವಲ 'ಲೈಕ್' ಕೊಡದೆ, ಪ್ರತ್ಯುತ್ತರವನ್ನು ನೀಡುತ್ತಿದ್ದರು. ಹೆಚ್ಚು ಮಾತುಕತೆ ಬೇಕಾದರೆ ಸ್ವತಃ ಫೋನ್ ಮಾಡುತ್ತಿದ್ದರು. ಅಡಿಕೆ ಪತ್ರಿಕೆಗೆ ಒಂದಷ್ಟು ಲೇಖನಗಳನ್ನು ಬರೆದಿದ್ದರು. ನಾನವರನ್ನು ನೋಡಿಲ್ಲ, ಮುಖತಃ ಮಾತನಾಡಿಲ್ಲ. ಆದರೆ ಫೋನ್, ಮಿಂಚಂಚೆಗಳ ಮೂಲಕ ರಕ್ತಸಂಬಂಧಿಗೂ ಮಿಗಿಲಾಗಿ ಹತ್ತಿರವಾಗಿದ್ದ ಪೆಜತ್ತಾಯ ಮಾಮನನ್ನು ಹೇಗೆ ಮರೆಯಲಿ? ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಹಾರೈಕೆ.