Wednesday, May 13, 2015

ಕಾಡುಮಾವಿನ ಬಿಸಿಯುಸಿರಿಗೆ ಕಾಯಕಲ್ಪ

           "ಕಾಡು ಮಾವಿನ ಹಣ್ಣಿನ ಗೊರಟನ್ನು ಚೀಪಿದಷ್ಟೂ ಜೊಲ್ಲುರಸ ಹೆಚ್ಚು ಉತ್ಪಾದನೆಯಾಗುತ್ತದೆ. ತಿಂದ ಆಹಾರವು ಬೇಗ ರಕ್ತಗತವಾಗುತ್ತದೆ. ಹುಳಿ-ಸಿಹಿ ರುಚಿಯುಳ್ಳ ಹಣ್ಣು ತಿಂದಷ್ಟೂ ರುಚಿವರ್ಧನೆಯಾಗುತ್ತಿರುತ್ತದೆ. ಹಣ್ಣಿನ ಋತುವಿನಲ್ಲಿ ಇದರ ಪಾಕೇತನಕ್ಕೆ ಮಹತ್ವ, ಪಾಣಾಜೆಯ ವೆಂಕಟ್ರಾಮ ದೈತೋಟರು ಕಾಡು ಮಾವಿನ ಗುಣಗಳನ್ನು ಹೇಳುತ್ತಾರೆ, ಕಸಿ ಮಾವಿನಲ್ಲಾದರೂ ಅಡ್ಡ ಪರಿಣಾಮ ಇದ್ದೀತು. ಕಾಡು ಮಾವಿನಲ್ಲಿಲ್ಲ. ಮಕ್ಕಳಿಗೆ ಹಸಿವು ಹೆಚ್ಚಿಸಲು ಕಾಡು ಮಾವಿನ ಹಣ್ಣನ್ನು ತಿನ್ನಿ ಎನ್ನುವ ದಿನಮಾನಗಳಿದ್ದುವು," ನೆನೆಯುತ್ತಾರೆ ವೆಂಕಟ್ರಾಮ ದೈತೋಟ.
            ಸಾಮಾನ್ಯವಾಗಿ ಮಳೆಗಾಲದ ಆರಂಭದ ದಿವಸಗಳಲ್ಲಿ ಕಾಡು ಮಾವು (ಕಾಟುಮಾವು) ಹಣ್ಣಾಗುವ ಸಮಯ. ಸಣ್ಣ ಗಾಳಿ ಬೀಸಿದರೂ ಸಾಕು, ಮಕ್ಕಳ ಗಡಣ ಅಲರ್ಟ್  ಆಗುತ್ತದೆ. ರಾತ್ರಿ ಮಳೆ-ಗಾಳಿ ಬಂದುಬಿಟ್ಟರೆ ಮುಗಿಯಿತು, ಮುಂಜಾನೆ ಮರದಡಿಯಲ್ಲಿ ಸಮ್ಮೇಳನವೇ ನಡೆದುಬಿಡುತ್ತದೆ! ಬಿದ್ದ ಹಣ್ಣನ್ನು ಹೆಕ್ಕಲು ಪೈಪೋಟಿ. ಮಾರ್ಗ, ಹಳ್ಳ, ತೋಡಿನ ಬದಿಗಳಲ್ಲಿದ್ದ ಮರಗಳಿಂದ ಬಿದ್ದ ಹಣ್ಣನ್ನು ಹೆಕ್ಕಲು ಪರವಾನಿಗೆ ಬೇಕಾಗಿಲ್ಲ ಎನ್ನುವ ಅಲಿಖಿತ ನಿಯಮ ಬದುಕಿನಲ್ಲಿತ್ತು.
              ಕಾಡು ಹಣ್ಣಿನಿಂದ ಮಾಡುವ 'ಮಾಂಬಳ'ದ ಸವಿ ಬಲ್ಲವರೇ ಬಲ್ಲರು. ಹಣ್ಣಿನ ರಸವನ್ನು ಹಿಂಡಿ ಅದನ್ನು ಪದರ ಪದರವಾಗಿ ಬಿಸಿಲಿನಲ್ಲಿ ಒಣಗಿಸಿ ಕಾಪಿಡುವ ಮಾಂಬಳ ಆಪದ್ಬಂಧು. ದಿಢೀರ್ ನೆಂಟರು ಬಂದರೆ ಮಾಂಬಳದ ಗೊಜ್ಜನ್ನು ಮಾಡುವ ಅಮ್ಮಂದಿರ ಕೈಯಡುಗೆಗೆ ಐದಾರು ತುತ್ತು ಅನ್ನ ಉದರಕ್ಕಿಳಿಯುತ್ತದೆ. ಮಕ್ಕಳಿಗೆ ಯಾಕೆ, ಹಿರಿಯರೂ ಕೂಡಾ ಚಾಕೋಲೇಟಿನಂತೆ ಮಾಂಬಳವನ್ನು ಚೀಪಲು ಶುರು ಮಾಡಿದರೆ ಸಾಕು, ರುಚಿಯ ಹೊನಲು ಹರಿಯುತ್ತದೆ! ಮಾತಿಗೆ ಸಿಕ್ಕಾಗಲೆಲ್ಲಾ ಮಾಂಬಳದ್ದೇ ಸುದ್ದಿ.
             ವಿವಿಧ ವೈವಿಧ್ಯ ಪರಿಮಳದ ಮಿಡಿಯು ಉಪ್ಪಿನಕಾಯಿಗೆ ಹೇಳಿಮಾಡಿಸಿದ್ದು.  ಉಪ್ಪಿನಕಾಯಿಗಾಗಿಯೇ ಸೀಮಿತವಾದ ಮರಗಳಿದ್ದುವು. ಮರದಿಂದ ಮಿಡಿಯನ್ನು ಇಳಿಸಿ, ಶುಚಿಗೊಳಿಸಿ, ಉಪ್ಪಿನಲ್ಲಿ ಮೀಯಿಸುವ ಜಾಣ್ಮೆ ಹಿರಿಯ ಅಮ್ಮಂದಿರಿಗೆ ಬೆರಳತುದಿಯಲ್ಲಿತ್ತು. ಉಪ್ಪನ್ನು ಹೀರಿದ ಮಿಡಿಗೆ ಸಾಸಿವೆ, ಮೆಣಸು ಯಾವ ಪ್ರಮಾಣದಲ್ಲಿರಬೇಕೆಂಬುದನ್ನು ಅನುಭವ ಕಲಿಸಿಕೊಟ್ಟಿದೆ. ಸಮಾರಂಭಗಳಲ್ಲಿ ಉಪ್ಪಿನಕಾಯಿಯೊಂದು ಮಾತಿಗೆ ವಸ್ತು. ತಂತಮ್ಮ ಅನುಭವ ಗಾಥೆಗಳನ್ನು ಹೇಳಲು ಖುಷಿ. ಇನ್ನೊಬ್ಬರ ಅನುಭವವನ್ನು ಕೇಳಲು ಧಾವಂತ.
              ಭೂತಕಾಲದ ನೆನಪುಗಳು ಯಾವಾಗಲೂ ಸವಿ ತಾನೆ. ಜೀವನಶೈಲಿ ಬದಲಾದಂತೆ ಕಾಡುಮಾವಿನ ಹಣ್ಣುಗಳು ದೂರವಾಯಿತು. ಆಹಾರ ಪದ್ಧತಿ ವ್ಯತ್ಯಾಸವಾದಂತೆ ಮಾವಿನ ಖಾದ್ಯಗಳಿಗೆ ಇಳಿಲೆಕ್ಕ. ನಾಟಾಕ್ಕಾಗಿ ಮರಗಳು ನಾಶವಾದುವು. ರಸ್ತೆಯ ಇಕ್ಕೆಲಗಳಲ್ಲಿ ಆಗಸದೆತ್ತರಕ್ಕೆ ಬೆಳೆದ ಮರಗಳು ಅಭಿವೃದ್ಧಿಗಳಿಗಾಗಿ ನೆಲಕ್ಕೊರಗಿದುವು. ಮಾಂಬಳ, ಉಪ್ಪಿನಕಾಯಿಯನ್ನು ಮಾರುಕಟ್ಟೆಯಿಂದ ಖರೀದಿಸುವುದು ಖುಷಿಯ ಸಂಗತಿಯಾದುವು. ಕಾಡು ಮಾವು ಬದುಕಿಂದ ಮರೆಯಾಯಿತು. ಎಲ್ಲೋ ಬೆಳೆದ ಹೈಬ್ರಿಡ್ ಹಣ್ಣು ಡೈನಿಂಗ್ ಟೇಬಲ್ ಸೇರಿದುವು. ಬಾಲ್ಯದ ಖುಷಿಗಳನ್ನು ಕಸಿದ ಬದುಕಿನ ಮಧ್ಯೆ ಕಾಡು ಮಾವು ಯಾಕೆ, ಎಲ್ಲಾ ಪ್ರಕೃತಿದತ್ತವಾದ ಹಣ್ಣುಗಳ ಸವಿ ಮರೆಯಾದುವು. ಮಗು ಗೊರಟನ್ನು ಚೀಪುತ್ತಿದ್ದಾಗ 'ಶಿಷ್ಟತೆ ಅಲ್ಲ' ಎಂದು ಗದರಿಸುವ ಅಮ್ಮಂದಿರನ್ನು ನೋಡಿದ್ದೇನೆ!
              ಕಾಡುಹಣ್ಣುಗಳನ್ನು ಸವಿದು ಶಾಲಾದಿನಗಳನ್ನು ಪೂರೈಸಿದ ಹಿರಿಯರಷ್ಟೇ ಮಾತಿಗೆ ಸಿಗುತ್ತಾರೆ. ಹಲಸು, ಪಪ್ಪಾಯಿ, ಸೀತಾಫಲ, ಪೇರಳೆ.. ಹಣ್ಣುಗಳ ಸುದ್ದಿ ಮಾತನಾಡಿದರೆ ಕಂದಮ್ಮಗಳು ಮುಖ ಸಿಂಡರಿಸುತ್ತಾರೆ. ಯಾಕೆ ಹೇಳಿ? ಮಕ್ಕಳಿಗೆ ಗೊತ್ತಿಲ್ಲ. ಹಿರಿಯರಾದ ನಾವು ಹೇಳಿಲ್ಲ. ಬಾಲ್ಯದಿಂದಲೇ ರುಚಿಯ ಪರಿಚಯ ಮಾಡಿಲ್ಲ. ಮತ್ತೆ ಮಕ್ಕಳನ್ನು ತೆಗಳಿ ಏನು ಪ್ರಯೋಜನ? ಶೈಕ್ಷಣಿಕ ವ್ಯವಸ್ಥೆಯಲ್ಲಿ ಇಂತಹ ಜೀವನಶೈಲಿಯನ್ನು ಪರಿಚಯಿಸುವ ಮಾಹಿತಿಗಳಿಲ್ಲ, ಬಿಡಿ.
ಆರೋಗ್ಯ ಭಾಗ್ಯವಾಗಲು ಮರೆತುಹೋದ ಜೀವನಶೈಲಿಗಳು ಮತ್ತೆ ಅಡುಗೆ ಮನೆಗೆ ಬರಬೇಕಾಗಿದೆ. ರೆಡಿ ಟು ಈಟ್ ಸಂಸ್ಕೃತಿ ನಗರದಲ್ಲಿ ಅನಿವಾರ್ಯ. ಆದರೆ ಗ್ರಾಮೀಣ ಬದುಕಿನ ಸಂಪರ್ಕವಿದ್ದು, ಎಲ್ಲಾ ಸಂಪನ್ಮೂಲಗಳನ್ನು ಹೊಂದಿದ ಅಡುಗೆ ಮನೆಗಳು ಯಾಕೆ ರೆಡಿ ಟು ಈಟ್ ವ್ಯವಸ್ಥೆಯನ್ನು ನೆಚ್ಚಿಕೊಳ್ಳಬೇಕು? ದೇಹಕ್ಕೆ ಬೇಕಾದ ಒಂದೊಂದು ಪೋಷಕಾಂಶಗಳಿಗೆ ಗುಳಿಗೆ, ಕಷಾಯಗಳನ್ನು ಸೇವಿಸುವ ಬದಲು, ಪಾರಂಪರಿಕವಾದ ಕಾಯಿ, ಹಣ್ಣು, ಎಲೆಗಳ ಸೇವನೆಯಿಂದ ನಾಲ್ಕು ದಿವಸ ಹೆಚ್ಚು ಬದುಕಬಹುದೇನೋ? ಇರಲಿ.
             ಬಂಟ್ವಾಳ ತಾಲೂಕಿನ ಕೇಪು 'ಹಲಸು ಸ್ನೇಹಿ ಕೂಟ'ವು ಈ ಎಲ್ಲಾ ವಿಚಾರಗಳನ್ನು ಸ್ಪರ್ಶಿಸಿದೆ.  ಆಹಾರದ ಮಾದರಿಗಳನ್ನು ರೂಪಿಸುವ ಕಾಯಕವನ್ನು ನಾಲ್ಕೈದು ವರುಷದಿಂದ ಮಾಡುತ್ತಿದೆ. ತರಕಾರಿ, ಗೆಡ್ಡೆ, ಎಲೆ, ಮಾವು, ಹಲಸು, ಸಿರಿಧಾನ್ಯ.. ಕಾರ್ಯಾಗಾರಗಳನ್ನು ನಡೆಸಿದೆ. ಹೊಸ ಹೊಸ ಖಾದ್ಯಗಳನ್ನು ಪರಿಚಯಿಸಿದೆ. ಗಿಡಗಳನ್ನು ಅಭಿವೃದ್ಧಿ ಮಾಡಿದೆ. ಆರೋಗ್ಯ ವರ್ಧನೆಯ ಗಾಢತೆಯನ್ನು ತಿಳಿಹೇಳುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ.
             ಈಗ ಕಾಡು ಮಾವಿಗೆ ಮಾತು ಕೊಡುವ ಸಮಯ. ಮೇ 17 ರವಿವಾರದಂದು ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ದಿನಪೂರ್ತಿ ಕಾರ್ಯಾಾಗಾರ ಸಂಪನ್ನವಾಗಲಿದೆ. ತಳಿಸಂರಕ್ಷಣೆ, ಮೌಲ್ಯವರ್ಧನೆ ಕುರಿತು ಮಾತುಕತೆ ನಡೆಯಲಿದೆ. ಕಾಡು ಮಾವಿನ ವಿವಿಧ ಖಾದ್ಯಗಳನ್ನು ಪರಿಚಯಿಸಲಾಗುತ್ತಿದೆ. ನಶಿಸುತ್ತಿರುವ ಆಯ್ದ ಕಾಡುಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಡು ಮಾವಿನ ಸವಿಯ ಪುಸ್ತಕ ಅನಾವರಣಗೊಳ್ಳಲಿದೆ. ಯಾವುದೇ, ಯಾರದ್ದೇ ಅನುದಾನವಿಲ್ಲದೆ ನಡೆಯುವ ಕಾರ್ಯಾಗಾರದ ವೆಚ್ಚವನ್ನು ಸರಿದೂಗಿಸಲು ಪ್ರತಿನಿಧಿಗಳಿಗೆ ಕನಿಷ್ಠ ಶುಲ್ಕವನ್ನು ನಿಗದಿಪಡಿಸಿದೆ.

0 comments:

Post a Comment