(ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರಿಂದ ಸಮಾರೋಪ ಭಾಷಣ.
ಚಿತ್ರದಲ್ಲಿ ಪಾತನಡ್ಕ ಸುಶೀಲ ಭಟ್, ಯಶೋದಾ ಕಾರ್ಯಾಡು, ಡಾ.ಸರಿತಾ ಹೆಗ್ಡೆ ಇದ್ದಾರೆ)
"ಮಾವು, ಹಲಸು ನಮಗೆ ಉಪೇಕ್ಷಿತ ಕೃಷಿ ಉತ್ಪನ್ನ. ಹೊರಗಿನವರಿಗದು ಅಮೃತ. ಮನೆಗೊಂದು ಕಾಡು ಮಾವು ನೆಡುವ ಪರಿಪಾಠ ಆರಂಭವಾದಾಗ ತಳಿ ಸಂರಕ್ಷಣೆ ಅಜ್ಞಾತವಾಗಿ ನಡೆದುಹೋಗುತ್ತದೆ. ನಮ್ಮ ಪ್ರದೇಶದ ಉತ್ತಮ ಕಾಡು ಮಾವಿನ ತಳಿಗಳ ದಾಖಲೀಕರಣ ಮೊದಲು ಕೃಷಿಕ ಮಟ್ಟದಲ್ಲಿ ಆಗಬೇಕು. ವ್ಯವಸ್ಥಿತವಾಗಿ ಮಾವಿನ ಮರಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿಕ ಪ್ರಜ್ಞೆ ಜಾಗೃತವಾಗಬೇಕು. ಈ ಕುರಿತು ಚಿಂತನೆಗಳು ನಡೆಯಬೇಕು", ಎಂದು ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳಿದರು.
ಅವರು ಮುಳಿಯ ಶಾಲೆಯಲ್ಲಿ ಜರುಗಿದ 'ಕಾಡು ಮಾವಿನ ಮೆಲುಕು' ಕಾರ್ಯಾಗಾರದಲ್ಲಿ ಸಮಾರೋಪ ಭಾಷಣ ಮಾಡುತ್ತಾ, "ಇಂತಹ ಕಾರ್ಯಕ್ರಮಗಳು ತಳಿಪ್ರಜ್ಞೆ ಹುಟ್ಟಿಸುವಲ್ಲಿ ಸಫಲವಾಗುತ್ತದೆ," ಎಂದರು. ಶ್ರೀಮತಿ ಸುಶೀಲಾ ಯಸ್.ಎನ್.ಭಟ್, ಶ್ರೀಮತಿ ಯಶೋದಾ ಕಾರ್ಯಡು ಮತ್ತು ಡಾ.ಸರಿತಾ ಹೆಗ್ಡೆಯವರು ಕಾಡು ಮಾವಿನ ಮೌಲ್ಯವರ್ಧನೆಯ ವಿವಿಧ ಸಾಧ್ಯತೆಯನ್ನು ಸೋದಾಹರಣವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಡು ಮಾವಿನ ಹಣ್ಣು ಮತ್ತು ಮಿಡಿ ವಿಭಾಗದಲ್ಲಿ ಸ್ಪರ್ಧೆಗಳು ಜರುಗಿತ್ತು. ನೂರಾರು ಕೃಷಿಕರು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಕಡಂಬಿಲ ಮಾಧವ, ಅಮ್ಮಂಕಲ್ಲು ಕೇಶವ ಭಟ್, ಪೆರುವಡಿ ರಾಮಚಂದ್ರ ಭಟ್ ಇವರ ಹಿತ್ತಿಲಿನ ಮಾವಿನ ಹಣ್ಣುಗಳು ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಗಳಿಸಿತ್ತು. ಮಿಡಿ ವಿಭಾಗದಲ್ಲಿ ಗಿರೀಶ ತೋಟದ ಮೂಲೆಯವರ ಮಾವಿನ ಮಿಡಿಯು ಪ್ರಥಮ ಸ್ಥಾನಕ್ಕೇರಿದರೆ, ಈಶ್ವರಮಂಗಲದ ಸತ್ಯನಾರಾಯಣ ಭಟ್ ಮತ್ತು ಬೈಂಕ್ರೋಡು ವೆಂಕಟಕೃಷ್ಣ ಭಟ್ ಇವರ ಮರದ ಮಿಡಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುವು. ಸ್ಪರ್ಧಾಾ ವಿಜೇತರಿಗೆ ಮಾವಿನ ಸಸಿಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ರುಚಿಯಾದ ಮಾವಿನ ಅಡುಗೆ ತಯಾರಿಸಿದ ಸೂಪಜ್ಞರಾದ ನಾರಾಯಣ ಭಟ್ ಮತ್ತು ಗೋಪಾಲಕೃಷ್ಣ ಭಟ್ ಬರೆಮನೆ ಇವರನ್ನು ಗೌರವಿಸಲಾಯಿತು. ವಿಟ್ಲದ ವಿಶಾಲ್ ಐಸ್ಕ್ರೀಂನವರು ಸಿದ್ಧಪಡಿಸಿದ ಕಾಡು ಮಾವಿನ ಐಸ್ಕ್ರೀಂ, ಮರಿಕೆಯ ಸುಹಾಸ್ ಎ.ಪಿ. ಸಿದ್ಧಪಡಿಸಿದ ಮಾವಿನ ಜ್ಯೂಸ್ ಮತ್ತು ಕ್ಯಾಂಡಿ, ಹಲವು ಬಗೆಯ ಉಪ್ಪಿನಕಾಯಿಗಳು, ಸವಿತಾ ಎಸ್.ಭಟ್ ಅಡ್ವಾಯಿ ಇವರ ಬಗೆಬಗೆಯ ಖಾದ್ಯಗಳು ಮಾವುಪ್ರಿಯರ ಒಲವು ಗಳಿಸಿತ್ತು.
ಕಡಂಬಿಲ ಕೃಷ್ಣಪ್ರಸಾದರು ಸ್ವಾಗತಿಸಿದರು. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ವಂದಿಸಿದರು. ಶಿರಂಕಲ್ಲು ನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಬೈಂಕ್ರೋಡು ಮಹೇಶ್, ವೆಂಕಟಕೃಷ್ಣ ಅತಿಥಿಗಳನ್ನು ಗೌರವಿಸಿದರು.
0 comments:
Post a Comment