"ಖಾಸಗಿ ಜಮೀನಿನಲ್ಲಿರುವ ಮಾವಿನ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿಲ್ಲ" - ಹೀಗೊಂದು ಆದೇಶಕ್ಕೆ ಸಹಿ ಬಿದ್ದುದೇ ತಡ, ಫಲ ನೀಡುವ ಸಹಸ್ರಾರು ಮಾವಿನ ಮರಗಳು ನೆಲಕ್ಕೊರಗಿದುವು! ನೂರಾರು ಲಾರಿಗಳಲ್ಲಿ ನಾಟಾಗಳು ನಗರಮುಖಿಯಾದುವು. ಲಕ್ಷ ಎಣಿಕೆಯ ಮುಖಗಳ ನೆರಿಗೆ ಸಡಿಲವಾದುವು. ಇದು ಕಾಣದ ಕೈಗಳ ಕರಾಮತ್ತಿನ ತಾಕತ್ತು.
ಸ್ವಂತ ಜಮೀನಿನಲ್ಲಿ ಬೆಳೆಸಿದವರು ಮರವನ್ನು ತಮ್ಮ ಉಪಯೋಗಕ್ಕಾಗಿ ಕಡಿಯಲು ಪರವಾನಿಗೆ ಬೇಕಾಗಿಲ್ಲ ಎನ್ನುವುದಾರೆ ಸರಿ. ಆದರೆ ಖಾಸಗಿ ಜಮೀನಿಗೆ ತಾಗಿಕೊಂಡಿದ್ದ ಅರಣ್ಯ ಭೂಮಿಯಲ್ಲಿರುವ ಮರಗಳು ನಾಶವಾದರೆ ತಡೆಯುವ ಬಗೆ ಹೇಗೆ? ವೈವಿಧ್ಯ ಮಾವಿನ ಮರಗಳು ಮಲೆನಾಡಿನ ಪಾರಂಪರಿಕ ಚಿರನಿಧಿಗಳು. ಆಡಳಿತ ವ್ಯವಸ್ಥೆಯ ಕೃಪಾಶ್ರಯದೊಳಗೆ ಬೀಗುತ್ತಿರುವ ಮಂದಿಗೆ ನಿಧಿಗಳತ್ತಲೇ ಕಣ್ಣು! ದೋಚುವತ್ತ ಕಾಳಜಿ.
ರಬ್ಬರ್, ಕಾಫಿ, ಸಿಲ್ವರ್, ಸುಬಾಬುಲ್, ಚಿಕ್ಕು, ಅಕೇಶಿಯಾ, ಮಾವು... ಇಪ್ಪತ್ತಾರು ಜಾತಿಯ ಗಿಡಮರಗಳನ್ನು ಕಡಿಯುವುದಕ್ಕೆ ಖಾಸಗಿ ಜಮೀನಿನವರು ಪರವಾನಿಗೆ ಪಡೆಯಬೇಕಿಲ್ಲ ಎನ್ನುತ್ತದೆ ಸುತ್ತೋಲೆ. ಅದರೊಳಗೆ ಮಾವು ಕೂಡಾ ಸೇರಿಕೊಂಡಿರುವುದು ಗಮನಿಸಬೇಕಾದ ಅಂಶ. ಪರಿಸರ ಸಂಘಟನೆಗಳ ಧ್ವನಿ ವಿಧಾನಸೌಧದ ಬಾಗಿಲು ತಟ್ಟಿದ ಫಲವಾಗಿ ಮಾವು ಏನೋ ಹೊರಗುಳಿಯಿತು. ಅಷ್ಟು ಹೊತ್ತಿಗೆ ಸಾವಿರಾರು ಮರಗಳು ಟಿಂಬರ್ ಲಾಬಿಗೆ ಬಲಿಯಾದುವು - ರಿಪ್ಪನ್ಪೇಟೆಯ ಕೃಷಿಕ, ಸಾಮಾಜಿಕ ಕಳಕಳಿಯ ಅನಂತಮೂರ್ತಿ ಜವಳಿಯವರು ಮಾವಿನ ನೋವನ್ನು ಹಂಚಿಕೊಂಡರು.
ವಿವಿಧ ಆಶಯಗಳನ್ನು ಮುಂದಿಟ್ಟು ರೂಪಿತವಾಗುವ ಯೋಜನೆಗಳಿಗೆ ಪರಿಸರದ ಆರೋಗ್ಯ ಬೇಕಾಗಿಲ್ಲ. ಹಸಿರು ಸಂಪತ್ತೆಂದರೆ ಅಷ್ಟಕ್ಕಷ್ಟೇ. ಯಾವುದೇ ಆದೇಶಕ್ಕೆ ಶ್ರೀಕಾರ ಬೀಳುವಾಗಲೇ ಲಾಬಿಗಳು ಇಲಾಖೆಯೊಳಗೆ ನುಗ್ಗುತ್ತವೆ. ತಮಗೆ ಬೇಕಾದಂತೆ ಆದೇಶಗಳನ್ನು ತಿರುಚುವ ಸಾಮಥ್ರ್ಯಕ್ಕೆ ಕಾಂಚಾಣ ಸಾಥ್ ಕೊಡುತ್ತದೆ. ಅದಕ್ಕೆ ರಾಜಕೀಯ ಮಗ್ಗುಲಿನ ಬೀಳ್ಗೊಡೆ. ವಿರೋಧಿಸಿದರೆ ಜೀವಭಯ. ವಿರೋಧಿಸದಿದ್ದರೆ ಏದುಸಿರಿನತ್ತ ಹೊರಳುವ ಬದುಕು. ಈ ಚಕ್ರವ್ಯೂಹದೊಳಗೆ ಕಾಣದ ಮುಖಗಳ ರಿಂಗಣ. ಕಾಡುಮಾವಿನ ತಳಿಗಳು ದಶಕದಿಂದಲೇ ವಿನಾಶದ ಸುಳಿವನ್ನು ನೀಡುತ್ತಾ ಬಂದಿವೆ.
ಪರಿಸರದ ಪರವಾಗಿ ದೊಡ್ಡ ದನಿ ಎಬ್ಬಿಸಿದರೆ ಆತ 'ಅಭಿವೃದ್ಧಿ ವಿರೋಧಿ'! ಬಣ್ಣ ಬಣ್ಣದ ರಾಜಕೀಯ ರಾಡಿ ಗಬ್ಬೆಬ್ಬಿಸುತ್ತವೆ. ಬದುಕಿನೊಂದಿಗೆ ಮಿಳಿತವಾದ ಮಾವು, ಹಲಸಿನ ಮರಗಳು ಮತ್ತೆ ಚಿಗುರದಂತೆ ಕಡಿದು ಸಾಗಿಸುವ ಮಂದಿಯ ಬಾಯಿ ರುಚಿಗೆ ಮಾವಿನದ್ದೇ ಉಪ್ಪಿನಕಾಯಿ ಆಗಬೇಕು ತಾನೆ? ವ್ಯವಹಾರ ಜಗತ್ತು ಯಾವಾಗಲೂ ನಿರ್ದಾಕ್ಷಿಣ್ಯ. ಲಾಭದ ಲೆಕ್ಕಾಚಾರದಲ್ಲಿ ಬಾಂಧವ್ಯ, ರಕ್ತಸಂಬಂಧ, ವಿಶ್ವಾಸ, ನಂಬುಗೆಗಳು ಢಾಳು ಢಾಳು. ಅಷ್ಟೊಂದು ಮರಗಳ ಮಾರಣಹೋಮ ನಡೆಯುವ ಸುದ್ದಿ ರಕ್ಷೆಯ ಹೊಣೆ ಹೊತ್ತವರಿಗೆ ಗೊತ್ತಿಲ್ಲ ಅಂತೀರಾ?
ಮಲೆನಾಡಿನಲ್ಲಿ ಮಾವಿನ ಮರಗಳ ಸಮಾಧಿಯ ವಿಷಾದದ ಕರಿನೆರಳು ಮಾಸುವ ಮೊದಲೇ ಇತ್ತ ಕರಾವಳಿಯಲ್ಲಿ ಕಾಡುಮಾವಿನ ತಳಿಗಳನ್ನು ಉಳಿಸುವ, ಬೆಳೆಸುವ ಚಿಂತನೆಗೆ ಶ್ರೀಕಾರ. ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ 'ಕಾಡು ಮಾವಿನ ಮೆಲುಕು' ಎನ್ನುವ ಕಾರ್ಯಾಗಾರ. ಅಭಿವೃದ್ಧಿಯ ತೆಕ್ಕೆಗೆ ಪುಡಿಯಾದ ಸಹಸ್ರಾರು ಮರಗಳ ಕಣ್ಣೀರಿನ ಮರುಕದೊಂದಿಗೆ ಅಳಿದುಳಿದ ತಳಿಗಳಿಗೆ ಮರುಹುಟ್ಟು ಕೊಡುವ ಹಸಿರು ಮನಸ್ಸುಗಳ ಸಂಕಲ್ಪ.
ಬಹುತೇಕ ವೈಯಕ್ತಿಕ ಬಳಕೆಗಾಗಿ ತಳಿಗಳು ಅಭಿವೃದ್ಧಿಗಳಾಗುತ್ತಿವೆ. ಹಿರಿಯರು ನೆಟ್ಟು ಬೆಳೆಸಿದ ಮರಗಳು ಮಗ, ಮೊಮ್ಮಗನ ಕಾಲಕ್ಕಾಗುವಾಗ ಇಳಿಲೆಕ್ಕ ಎಣಿಸುತ್ತದೆ. ಅಂತಹ ಮರಗಳನ್ನು ಆ ಹಿರಿಯರ ಮೇಲಿನ ನೆನಪಿಗಾಗಿ ಅಭಿವೃದ್ಧಿ ಮಾಡುವುದುಂಟು. ಉಪ್ಪಿನಕಾಯಿ, ಹಣ್ಣಿಗಾಗಿ ಆಯ್ದ ತಳಿಗಳನ್ನು ಬೆಳೆಸುವ ಪರಿಪಾಠ ಸಾಮಾನ್ಯ. ಈಗಾಗಲೇ ಫಲ ಕೊಡುವ ಮರಗಳನ್ನು ಜತನದಿಂದ ಕಾಪಾಡುವ ಹಸಿರು ಮನಸ್ಸುಗಳಿಂದಾಗಿ ತಳಿಗಳು ಉಳಿದುಕೊಂಡಿವೆ. ಸರಿ, ಇವೆಲ್ಲಾ ನಮ್ಮ ಸ್ವಾರ್ಥದ ಮುಖಗಳು. ತಳಿಸಂರಕ್ಷಣೆಯ ನಿಜವಾದ ಮುಖ ಯಾವುದು?
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಹೆಚ್ಆರ್)ಯ ಹಣ್ಣಿನ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಎಂ.ಆರ್.ದಿನೇಶ್ ತಳಿಸಂರಕ್ಷಣೆಯ ಅಗತ್ಯ ಮತ್ತು ಅನಿವಾರ್ಯವನ್ನು ಬೊಟ್ಟು ಮಾಡುತ್ತಾರೆ - ಮಾವಿನ ವೈವಿಧ್ಯಗಳು ನಮ್ಮ ದೇಶದ ಸಂಪತ್ತು. ನಾಲ್ಕು ಸಾವಿರಕ್ಕೂ ಮಿಕ್ಕಿ ಮಾವಿನ ವೈವಿಧ್ಯಗಳಿವೆ. ಹೊರ ದೇಶದವರು ನಮ್ಮತ್ತ ನೋಟ ಹರಿಸಿದ್ದಾರೆ. ಈಗಾಗಲೇ ವ್ಯವಸ್ಥಿತವಾಗಿ ಕೆಲವು ತಳಿಗಳನ್ನು ತಮ್ಮದೆಂದು ಹೇಳಿ ಪೇಟೆಂಟ್ ಪಡೆದ ಉದಾಹರಣೆಗಳಿವೆ. ಜಗತ್ತಿನ ಮಾವು ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಹಾಗಾಗಿ ಸ್ಥಳೀಯ ತಳಿಗಳನ್ನು ಉಳಿಸುವ, ಅದನ್ನು ಇತರರು ಕದ್ದೊಯ್ಯದಂತೆ ಮಾಡುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರಲ್ಲಿದೆ.
ಐಐಹೆಚ್ಆರ್ ಸಂಸ್ಥೆಯು ತಳಿ ಸಂರಕ್ಷಣೆಯಲ್ಲಿ ಗುರುತರವಾದ ಕೆಲಸ ಮಾಡಿದೆ. ನಾಲ್ಕುನೂರ ಐವತ್ತಕ್ಕೂ ಮಿಕ್ಕಿ ಮಾವು ತಳಿಗಳನ್ನು ದಾಖಲಿಸಿದೆ. ಅದಕ್ಕೆ ಫಿಂಗರ್ ಪ್ರಿಂಟ್, ಬಾರ್ ಕೋಡ್ ವ್ಯವಸ್ಥೆ ಮಾಡಿದೆ. ಒಂದೊಂದು ತಳಿಯ ಜಾತಕವನ್ನು ಸವಿವರವಾಗಿ ಬರೆದಿಟ್ಟಿದೆ. "ಇದರಿಂದಾಗಿ ತಳಿಗಳು ಕದ್ದು ಹೋಗುವ ಭೀತಿಯಿಲ್ಲ. ಒಂದು ವೇಳೆ ನಮ್ಮದೆಂದು ಬೇರೆ ದೇಶದವರು ಹೇಳಿಕೊಂಡರೆ ಕಾನೂನು ಸಮರ ಮಾಡುವಷ್ಟು ದಾಖಲೆ ನಮ್ಮಲ್ಲಿದೆ. ಹಾಗಾಗಿ ಕೃಷಿಕರು ತಂತಮ್ಮ ಹಿತ್ತಿಲಿನಲ್ಲಿರುವ ವಿಶೇಷ ತಳಿಗಳನ್ನು ತಮ್ಮದೇ ಹೆಸರಿನಲ್ಲಿ ನೋಂದಾಯಿಸಬಹುದು. ಈ ವ್ಯವಸ್ಥೆ ಸರಕಾರಿ ಮಟ್ಟದಲ್ಲಿದೆ ಎನ್ನುತ್ತಾರೆ" ದಿನೇಶ್.
ಪುಣೆಯ ಪರಿಸರ ಶಿಕ್ಷಣ ಕೇಂದ್ರವು ಮಹಾರಾಷ್ಟ್ರ ಭಾಗದ ಪಶ್ಚಿಮ ಘಟ್ಟದ ಅಧ್ಯಯನವನ್ನು ಕೈಗೊಂಡು ಇನ್ನೂರಕ್ಕೂ ಹೆಚ್ಚು ಕಾಡುಮಾವಿನ ತಳಿಗಳನ್ನು ಪತ್ತೆ ಮಾಡಿ ದಾಖಲಿಸಿದೆ. ಇನ್ನೂರು ಪಾರಿಸರಿಕ ಕ್ಲಬ್ಗಳನ್ನು ಕಾರ್ಯಕ್ಕೆ ಬಳಸಿಕೊಂಡಿದೆ. ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಸ್ಥಳೀಯ ಕೃಷಿಕರು, ವಿಜ್ಞಾನಿಗಳ ಸಹಕಾರ ಪಡೆದುಕೊಂಡಿದೆ. ತಳಿಗಳ ವೈಜ್ಞಾನಿಕ ಅಧ್ಯಯನ, ಸ್ಥಳೀಯ ಮಾಹಿತಿ, ಪಾಕೇತನಗಳನ್ನು ಅಭ್ಯಸಿಸಿದೆ. ಕಸಿ ಕಾರ್ಯಾಗಾರಗಳನ್ನು ನಡೆಸಿದೆ. ಪುಣೆಯ ಸನಿಹದ ಪರ್ವತಗಳಲ್ಲಿ ಇಪ್ಪತ್ತೈದಕ್ಕೂ ಅಧಿಕ ವಿವಿಧ ಮಾವಿನ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಮೌಲ್ಯವರ್ಧನೆಯತ್ತ ಹೆಜ್ಜೆಯಿರಿಸಿದ್ದಾರೆ. ಮುಳಿಯ ಮಾವು ಮೇಳದಲ್ಲಿ ಸಂಸ್ಥೆಯ ಅಭಿಜಿತ್ ಕಾಂಬ್ಳೆ, ಬಸವಂತ್ ಝಮಾನೆ ಯಶೋಗಾಥೆಗಳನ್ನು ಹೇಳುತ್ತಿದ್ದಂತೆ, "ಕನಿಷ್ಠ ಒಂದೆರಡು ಗಿಡವಾದರೂ ನಾವು ನೆಟ್ಟು ಬೆಳೆಸಿ ಉಳಿಸದಿದ್ದರೆ ಹೇಗೆ?" ಎಂದರು ಸನಿಹದಲ್ಲಿದ್ದ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್.
ಕನ್ನಾಡಿನ ಸರಕಾರಿ ಸುತ್ತೋಲೆಯು ಸೃಷ್ಟಿಸಿದ ಅವಾಂತರಗಳ ಕತ್ತಲೆಯ ಮಧ್ಯೆ ಹಸಿರು ಮನಸ್ಸಿನ ಮಿಣುಕುಗಳ ಸದ್ದಿಲ್ಲದ ಸಾಧನೆ ಗುಲ್ಲಾಗದು. ಮುಳಿಯ 'ಕಾಡು ಮಾವಿನ ಮೆಲುಕು' ಕಾರ್ಯಾಗಾರದಲ್ಲಿ ತಳಿ ಸಂರಕ್ಷಣೆಗೆ ಒತ್ತು ನೀಡಿದ ಕಲಾಪಗಳು. ಯಾವುದೇ ಫಂಡ್ಗಳ ಹಿಂದೆ ಓಡದೆ ಸಂಪನ್ನವಾದ ಕಾರ್ಯಾಗಾರ. ’ಹಲಸು ಸ್ನೇಹಿ ಕೂ”ದ ಆಯೋಜನೆಯ ಹಿಂದೆ ಐದಾರು ತಿಂಗಳ ಶ್ರಮವಿದೆ. ಸ್ಥಳೀಯ ಹದಿನೈದಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳ ಗುಣವಿಶೇಷಗಳನ್ನು ಗೊತ್ತು ಮಾಡಲಾಗಿತ್ತು. ಅದನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಲಾಗಿತ್ತು.
ಶಿರಸಿಯ ಪತ್ರಕರ್ತ ಶಿವಾನಂದ ಕಳವೆ ಹತ್ತು-ಹದಿನೈದು ವರುಷದ ಹಿಂದೆ ಮಲೆನಾಡಿನಲ್ಲಿ ಕಾಡುಮಾವಿಗೆ ದನಿಯಾಗಿದ್ದರು. ಮಿಡಿಮಾವು ಮೇಳವನ್ನು ನಡೆಸಿದ್ದರು. ಶಿರಸಿಯ ಅರಣ್ಯ ಕಾಲೇಜು ಯೋಜನೆಯೊಂದರ ಮೂಲಕ ಅಪ್ಪೆ ಮಿಡಿಗಳ ವೈಜ್ಞಾನಿಕ ದಾಖಲಾತಿ ಮಾಡಿತ್ತು. ಕೃಷಿಕ ಕಸಿಕೂಟಗಳನ್ನು ರೂಪಿಸಿ ಸಾವಿರಾರು ಗಿಡಗಳನ್ನು ಅಭಿವೃದ್ದಿಪಡಿಸಿ ರೈತರಿಗೆ ಹಂಚಿದ್ದಾರೆ. ಸಾಗರದಲ್ಲೂ ಮಾವಿನ ಮಾತುಕತೆ ನಡೆದಿದೆ. ಹೀಗೆ ಕನ್ನಾಡಿನ ಹಲವೆಡೆ ಮಾವಿನ ನೋವಿಗೆ ದನಿ ಕೊಡುವ ಯತ್ನ ನಡೆಯುತ್ತಲೇ ಬಂದಿರುವುದರಿಂದ ಕಾಡು ಮಾವಿನ ತಳಿಗಳಿಂದು ಉಸಿರಾಡುತ್ತಿವೆ.
ಹಲಸು ಸ್ನೇಹಿ ಕೂಟದ 'ಕಾಡು ಮಾವಿನ ಮೆಲುಕು' ಕಲಾಪವು ಭವಿಷ್ಯ ಬದುಕನ್ನು ಮೆಲುಕು ಹಾಕುವಂತೆ ಮಾಡಿದೆ. ವೈಯಕ್ತಿಕ ಹಿತಾಸಕ್ತಿಯೊಂದಿಗೆ ಸಾಮಾಜಿಕ ಪ್ರಜ್ಞೆಯ ಮಹತ್ತನ್ನು ಬಿಂಬಿಸಿದೆ. ತಳಿಗಳನ್ನು ಸಂರಕ್ಷಿಸುವ ಆಶಯದೊಂದಿಗೆ ಗಿಡಗಳನ್ನು ಒಯ್ದ ನೂರಾರು ಕೃಷಿಕರ ಹಸಿರುಸಿರು ತುಂಬು ಭರವಸೆ ಮೂಡಿಸಿದೆ. ಸರಕಾರಿ ಆಶ್ರಯಗಳಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಜರುಗಿದ ಕಾಡು ಮಾವಿನ ದನಿಗೆ ಕಿವಿಯಾಗಲು ವಿಜ್ಞಾನಿಗಳೂ ಆಗಮಿಸಿದ್ದರು. ಕೃಷಿಕ ಮತ್ತು ವಿಜ್ಞಾನಿ ಒಟ್ಟಾದರೆ ಯಾವ ಶಕ್ತಿಯೂ ಕೂಡಾ ನಮ್ಮ ತಳಿಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದೆ.
(ಈ ಬರೆಹ ನಿನ್ನೆಯ - 28-5-2015 - ಉದಯವಾಣಿಯ ನೆಲದ ನಾಡಿಯಲ್ಲಿ ಪ್ರಕಟಿತ)
0 comments:
Post a Comment