ಪುತ್ತೂರಿನ ಕೃಷಿಕ ಮಣಿಲ ಮಹಾದೇವ ಶಾಸ್ತ್ರಿಯವರು ನೀಡಿದ ಸಿಹಿ ಸ್ವಾದದ ಮಾವಿನ ಹಣ್ಣು ನಿತ್ಯ ಕಾಡಲು ಶುರು ಮಾಡಿತು. ತಿಂದಷ್ಟೂ ಹುಚ್ಚು ಹಿಡಿಸುವ ಸಿಹಿ! ಈ ವರುಷ ಬರೋಬ್ಬರಿ ಇಳುವರಿ. ಐನೂರಕ್ಕೂ ಮಿಕ್ಕಿ! ಕೆಲವು ವರುಷ ಹತ್ತಿಪ್ಪತ್ತು ಹಣ್ಣು ಆದುದೂ ಇದೆ. ಒಳತಿರುಳು ಕೆಂಪು. ಗೊರಟಿಗೆ ಅಂಟದ ನಾರು. ತಿಂದಾಗ ಹಲ್ಲಿನೆಡೆಗೆ ಸಿಗದು. ರಸ ರಹಿತ ಗುಳ. ಕಸಿ ಮಾವಿನೊಂದಿಗೆ ಸೇರಿಸಿ ರಸಾಯನ ಮಾಡಿದರೆ ಸಕ್ಕರೆಯ ಆವಶ್ಯಕತೆ ಬೇಕಾಗದು. ಗುಳವನ್ನು ಕಿವುಚಿ ನೀರಿಗೆ ಸೇರಿಸಿದರೆ ಸಕ್ಕರೆ ರಹಿತ ಜ್ಯೂಸ್ ರೆಡಿ. ಕುಡಿದರೆ ದೇಹಾಯಾಸ ಮಾಯ, ಎನ್ನುತ್ತಾರೆ ಮನೆಯೊಡತಿ ಮಣಿಲ ಸಾವಿತ್ರಿ ಶಾಸ್ತ್ರಿ.
ಹಣ್ಣಿನ ರಸವನ್ನು ಬಿಸಿಲ ಸ್ನಾನದಲ್ಲಿ ಪದರ ಪದರವಾಗಿ ಒಣಗಿಸಿ ಮಾಡುವ 'ಮಾಂಬಳ ಉತ್ಕೃಷ್ಟ. ಕರಾವಳಿಯಲ್ಲಿದು ಜನಪ್ರಿಯ. ಮಾರುಕಟ್ಟೆಯಲ್ಲಿ ಕೇಳಿ ಪಡೆವ ಗ್ರಾಹಕರಿದ್ದಾರೆ. ಮನೆಮಟ್ಟಕ್ಕೆ ತಯಾರಿಸುವ ಅಮ್ಮಂದಿರು ಅಕಾಲದಲ್ಲಿ ಬಳಸಲು ಕಾಪಿಡುತ್ತಾರೆ. ಮಾರಾಟ ಉದ್ದೇಶಕ್ಕಾಗಿ ತಯಾರಿಸುವವರೂ ಇದ್ದಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಏರುದರ. ದಿನಕ್ಕೆ ಒಂದೆರಡು ಹಣ್ಣು ಸಿಕ್ಕರೂ ಸಾಕು, ಊಟಕ್ಕೆ ಬೇರೆ ಖಾದ್ಯ ಮಾಡಬೇಕಾಗಿಲ್ಲ.
ಹಸಿಗೊಜ್ಜು ಇದ್ದರೆ ಎರಡು ತುತ್ತು ಅನ್ನ ಹೆಚ್ಚೇ ಉಣ್ಣಬಹುದಂತೆ. ಇದಕ್ಕೆ 'ಕೆಂಪಣ್ಣು’ ಅಂತ ಸಾವಿತ್ರಿ ಅಮ್ಮ ಕರೆದಿದ್ದಾರೆ. 'ಮಣಿಲ ಕೆಂಪಣ್ಣು' ಅಂತ ಮರು ನಾಮಕಕ್ಕೆ ಮಗ ಮಹಾದೇವ ಶಾಸ್ತ್ರಿಯವರು ಉತ್ಸುಕರಾಗಿದ್ದಾರೆ. ಹಳೆಯ ಮರವಾದ್ದರಿಂದ ಉಳಿಸುವ ಅನಿವಾರ್ಯತೆಯಿದೆ. ಅಪರೂಪದ್ದಾದ ಕಾಡುಮಾವಿನ ಈ ತಳಿಯನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸುವತ್ತ ಆಸಕ್ತರಾಗಿದ್ದಾರೆ.
ಕಾಡು ಮಾವಿನ ಸವಿಗೆ ಮಹಾದೇವ ಶಾಸ್ತ್ರಿಯವರ ಈ ತಳಿ ಒಂದು ಉದಾಹರಣೆಯಷ್ಟೇ. ನಮ್ಮ ಸುತ್ತಮುತ್ತ ನೂರಾರು ತಳಿಗಳು ಬೆಳೆಸದೇ ಬೆಳೆದಂತಹುಗಳು ಇದ್ದುವಲ್ಲಾ. ಅವೆಲ್ಲಾ ಏನಾದುವು? ಮಾರ್ಗದ ಇಕ್ಕೆಲಗಳಲ್ಲಿ ಎತ್ತರಕ್ಕೆ ಬೆಳೆದು ತಂಪನ್ನೂ, ಇಳುವರಿಯನ್ನು ನೀಡುತ್ತಿದ್ದ ಸಾವಿರಾರು ಮರಗಳು ನೆಲಕ್ಕೊರಗಿವೆ. ಗುಡ್ಡಗಳಲ್ಲಿದ್ದ ಮರಗಳು ರಬ್ಬರ್ ಕೃಷಿಯ ಮೋಹಕ್ಕೆ ಕೊಡಲಿಗಾಹುತಿಯಾಗಿವೆ. ಕೃಷಿ ವಿಸ್ತರಣೆಯ ಧಾವಂತದಲ್ಲಿ ಅಪರೂಪದ ತಳಿಗಳು ನಾಶವಾಗಿವೆ. ರುಚಿ ವೈವಿಧ್ಯಗಳನ್ನು ಬದುಕಿನಲ್ಲಿ ಕಳೆದುಕೊಂಡಿರುವ ನಮಗೆ ಇಂತಹ ತಳಿಗಳು ನಾಶವಾದರೂ ಬೇಸರವಾಗುವುದಿಲ್ಲ.
ನಮ್ಮ ನಾಲಿಗೆಯು ಪಾರಂಪರಿಕ ಹಳೆಯ ರುಚಿಗಳನ್ನು ಮರೆತಿದೆ. ಅದಕ್ಕೆ ಮತ್ತೊಮ್ಮೆ ರುಚಿಯನ್ನು ತೋರಿಸುವ ಕೆಲಸ ಸಾಧ್ಯವಾದರೆ ಕಳೆದುಕೊಂಡಿರುವ ತಳಿಗಳನ್ನು ಮರಳಿ ಮನೆ ಜಗಲಿಗೆ ತರಬಹುದು, ಎನ್ನುತ್ತಾರೆ ಕೃಷಿಕ ಮಾಪಲ್ತೋಟ ಸುಬ್ರಾಯ ಭಟ್. ಸುಳ್ಯ ತಾಲೂಕಿನ (ದ.ಕ.) ಮರ್ಕಂಜದ ಈ ಕೃಷಿಕರ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಕಾಡು ಮಾವಿನ ತಳಿಗಳಿವೆ. ಮಾಂಬಳ, ಗೊಜ್ಜು, ಹುಳಿಪದಾರ್ಥಗಳಿಗೆ ಬೇರೆ ಬೇರೆ ಜಾತಿಯ ಕಾಡುಮಾವುಗಳ ಸಂಗ್ರಹ.
ಕಸಿ, ಸಂಕರ ತಳಿಯ ಮಾವಿನಂತೆ ಕಾಡುಮಾವಿಗೆ ನಿಶ್ಚಿತವಾದ ಹೆಸರಿಲ್ಲ. ಗುರುತು ಹಿಡಿಯಲು ಸುಲಭವಾಗುವಂತೆ ಪ್ರಾದೇಶಿಕವಾದ ಹೆಸರು. ಹಣ್ಣಿನ ಗುಣ, ಪರಿಮಳ, ರುಚಿಯನ್ನು ಹೊಂದಿಕೊಂಡು ನಾಮಕರಣ. ಉದಾ: ಸಾಸಿವೆ ಪರಿಮಳದ ಮಾವಿಗೆ 'ಸಾಸಿವೆ ಮಾವು', ಜೀರಿಗೆ ಪರಿಮಳದ್ದಕ್ಕೆ 'ಜೀರಿಗೆ ಮಾವು', ಉದ್ದಕ್ಕೆ ಬೆಳೆದ ಮರದ್ದು 'ಗಳೆ ಮಾವು', ಸಕ್ಕರೆ ಸಿಹಿಯ 'ಸಕ್ಕರೆ ಕುಟ್ಲಿ'....ಹೀಗೆ. ಮಾಪಲ್ತೋಟದವರು ಕಾಡು ಹಣ್ಣಿನ ಗಾಥೆಯನ್ನು ಹೇಳುತ್ತಿದ್ದಾಗ ಬಾಲ್ಯ ನೆನಪಾಯಿತು. ಮಾವಿನ ಋತುವಿನಲ್ಲಿ ಚಿಕ್ಕ ಗಾಳಿ ಬೀಸಿದರೆ ಸಾಕು, ಬಿದ್ದ ಹಣ್ಣನ್ನು ಹೆಕ್ಕಲು ಪಡುತ್ತಿರುವ ಧಾವಂತ. ಅದಕ್ಕಾಗಿ ಜಗಳ, ಮುನಿಸು..!
ಶಿರಸಿಯ ಅರಣ್ಯ ಕಾಲೇಜು ಯೋಜನೆಯೊಂದರ ಮೂಲಕ ಮಲೆನಾಡಿನ ನೂರಾರು ಅಪ್ಪೆಮಿಡಿ ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಈ ಯೋಜನೆಯು ಕಳೆದ ದಶಂಬರಕ್ಕೆ ಅಂತ್ಯವಾದರೂ ಯೋಜನೆಯ ಪ್ರಕ್ರಿಯೆಗಳು ಮುಂದುವರಿಯುತ್ತಿವೆ. ಅಪರೂಪದ್ದಾದ ಮಾವಿನ ತಳಿಗಳನ್ನು ಪತ್ತೆ ಮಾಡಿ ಅವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು ಹೆಚ್ಚುಗಾರಿಕೆ. ಯೋಜನೆಯ ಮುಖ್ಯಸ್ಥ ಡಾ. ವಾಸುದೇವ್ ಹೇಳುವಂತೆ, "ಆಗಿರುವ ಕೆಲಸ ಶೇ. 10 ಮಾತ್ರ. ಇನ್ನೂ ಸಾಕಷ್ಟು ಕೆಲಸಗಳಿವೆ. ನಮ್ಮ ಯೋಜನೆಯಿಂದಾಗಿ ಸಾವಿರಾರು ರೈತರು ಸ್ವಪ್ರೇರಿತರಾಗಿ ಮಾವಿನ ತಳಿಗಳನ್ನು ಹುಡುಕಿ ನಮ್ಮ ಗಮನಕ್ಕೆ ತರುತ್ತಿದ್ದಾರೆ. ಕೃಷಿಕರಿಗೂ ತಳಿಗಳನ್ನು ಉಳಿಸಬೇಕೆನ್ನುವ ಜಾಗೃತಿ ಮೂಡುತ್ತಿದೆ. ಅಪ್ಪೆ ತಳಿಯ ತೋಟಗಳನ್ನು ಹೊಂದುವ ಬಯಕೆ ಕಾಡುತ್ತಿದೆ. ಚಿಕ್ಕ ಪ್ರಮಾಣದಲ್ಲಿ ತಳಿ ಬ್ಯಾಂಕ್ ಹೊಂದುವ ಉಮೇದು ಹೆಚ್ಚಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆಯಿದೆ."
ದಕ್ಷಿಣ ಕನ್ನಡ ಜಿಲ್ಲೆಯ ಕೇಪು-ಉಬರು ಹಲಸು ಸ್ನೇಹಿ ಕೂಟವು ಮೂರು ವರುಷದ ಹಿಂದೆ ಮಾವಿನ ಮೇಳವೊಂದನ್ನು ನಡೆಸಿತ್ತು. ತಳಿ ಆಯ್ಕೆ, ಅಭಿವೃದ್ಧಿಗೆ ಒತ್ತುಕೊಟ್ಟ ಮೇಳವು ಕೃಷಿಕರಲ್ಲಿ ಜಾಗೃತಿ ಮೂಡಿಸಿತ್ತು. ಈಗ ಮತ್ತೆ ಮೇ 17ರಂದು ಮುಳಿಯ ಶಾಲೆಯಲ್ಲಿ ಕಾರ್ಯಾಗಾರವೊಂದನ್ನು ಏರ್ಪಡಿಸಿದೆ. ಈ ಬಾರಿ ಕಾಡುಮಾವಿಗೆ ಮಾತು ಕೊಡುವ ಯತ್ನ. ಮೌಲ್ಯವರ್ಧಿತ ಉತ್ಪನ್ನಗಳ ಸಾಧ್ಯತೆಯ ಮಾತುಕತೆ. ಈಗಾಗಲೇ ತಳಿ ಸಂರಕ್ಷಣೆ ಮಾಡಿದ, ಮಾಡುತ್ತಿರುವವರ ಯಶೋಗಾಥೆಗೆ ಕಿವಿಯಾಗುವವರು ನೂರಾರು ಮಂದಿ.
ಈ ಭಾಗದ ಅಪರೂಪದ ಕಾಡುಮಾವನ್ನು ಪತ್ತೆ ಮಾಡುವ ಕೆಲಸ ಆರಂಭವಾಗಿದೆ. ಸುಮಾರು ಹದಿನೈದು ತಳಿಗಳನ್ನು ಗುರುತು ಮಾಡಲಾಗಿದೆ. ಅವನ್ನು ಕಸಿ ಕಟ್ಟಿ ಅಭಿವೃದ್ಧಿ ಪಡಿಸಲಾಗಿದೆ. ಮೇಳದಂದು ಅವೆಲ್ಲಾ ಮಾರಾಟಕ್ಕೆ ಲಭ್ಯವಾಗಲಿದೆ. ಒಂದು ಕಾಲಘಟ್ಟದಲ್ಲಿ ಇವೆಲ್ಲಾ ಹಿರಿಯರಿಂದ ನೆಟ್ಟು ಬೆಳೆಸಿ ಅಭಿವೃದ್ಧಿಯಾಗಿರುವಂತಾದ್ದು. ಬುದ್ಧಿಪೂರ್ವಕವಾಗಿ ಅವನ್ನೆಲ್ಲಾ ನಾಶ ಮಾಡಿದ್ದೇವೆ. ದೂರವಾಗುತ್ತಿರುವ ತಳಿಗಳಿಗೆ ಪುನರ್ಜೀವ ಕೊಡುವ ಯತ್ನವಾಗಿ 'ಕಾಡುಮಾವಿನ ಮೆಲುಕು' ಎನ್ನುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ, ಆಶಯವನ್ನು ಹೇಳುತ್ತಾರೆ ಹಲಸು ಸ್ನೇಹಿ ಕೂಟದ ವಿ.ಕೆ.ಶರ್ಮ. (9480200832)
ಕಾಡು ಮಾವಿಗೆ ನೋವು ಕೊಟ್ಟಿದ್ದೇವೆ. ನೋವು ಶಮನಿಸುವ ಕೆಲಸಕ್ಕೆ ಮಾವು ಪ್ರೀತಿಯ ಮನಸ್ಸುಗಳು ಎಚ್ಚರವಾಗಿವೆ. ಕಾಡು ಮಾವು ಕಾರ್ಯಾಾಗಾರಕ್ಕೆ ಬರಲು ನೀವು ಉತ್ಸುಕರೇ?

0 comments:
Post a Comment